Shah Rukh Khan and Deepika Padukone  x.com, facebook
ಸುದ್ದಿಗಳು

ಶಾರುಖ್, ದೀಪಿಕಾ ವಿರುದ್ಧದ ವಂಚನೆ ಪ್ರಕರಣಕ್ಕೆ ರಾಜಸ್ಥಾನ ಹೈಕೋರ್ಟ್ ತಡೆ

ದೋಷಪೂರಿತ ಕಾರನ್ನು ಮಾರಾಟ ಮಾಡಿದ್ದಕ್ಕಾಗಿ ಬಾಲಿವುಡ್ ನಟರಾದ ಈ ಇಬ್ಬರು ಮತ್ತು ಹುಂಡೈ ಇಂಡಿಯಾ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

Bar & Bench

ದೋಷಪೂರಿತ ಹುಂಡೈ ಕಾರಿನ ಮಾರಾಟಕ್ಕೆ ಸಂಬಂಧಿಸಿದಂತೆ ಬಾಲಿವುಡ್‌ನ ಕಲಾವಿದರಾದ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ವಿರುದ್ಧದ ವಂಚನೆ ಪ್ರಕರಣದ ತನಿಖೆಗೆ ರಾಜಸ್ಥಾನ ಹೈಕೋರ್ಟ್ ಇತ್ತೀಚೆಗೆ ತಡೆ ನೀಡಿದೆ.

ಹುಂಡೈ ಮೋಟಾರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನ್ಸೂ ಕಿಮ್ ಮತ್ತು ತರುಣ್ ಗಾರ್ಗ್‌ ವಿರುದ್ಧದ ತನಿಖೆಯನ್ನು ಸಹ ತಡೆಹಿಡಿಯಲಾಗಿದೆ ಎಂದು  ನ್ಯಾಯಮೂರ್ತಿ  ಸುದೇಶ್ ಬನ್ಸಾಲ್ ಹೇಳಿದರು.

ಜೂನ್ 2022 ರಲ್ಲಿ ಅಧಿಕೃತ ಡೀಲರ್‌ಶಿಪ್‌ನಿಂದ ಹುಂಡೈ ಅಲ್ಕಜಾರ್ ಕಾರನ್ನು ಖರೀದಿಸಿದ ಭರತ್‌ಪುರ ನಿವಾಸಿಯೊಬ್ಬರು ದೂರು ನೀಡಿದ್ದರು. ಸರಿಸುಮಾರು 67,000 ಕಿಲೋಮೀಟರ್ ಚಾಲನೆ ಮಾಡಿದ ನಂತರ, ತಮ್ಮ ಕಾರಿನಲ್ಲಿ ಪದೇ ಪದೇ ತಾಂತ್ರಿಕ ಮತ್ತು ತಯಾರಿಕಾ ಸಮಸ್ಯೆಗಳು ಕಂಡುಬಂದವು ಎಂದು ಅವರು ದೂರಿದ್ದರು.

ಬದಲಿ ಅಥವಾ ಮರುಪಾವತಿಗಾಗಿ ಮಾಡಿದ ವಿನಂತಿಗಳಿಗೆ ಕಂಪನಿ ಸರಿಯಾಗಿ ಪ್ರತಿಕ್ರಿಯಿಸದೆ ಇದ್ದುದರಿಂದ ಅವರು ಕ್ರಿಮಿನಲ್ ದೂರು ದಾಖಲಿಸಿದರು. ನಂತರ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ವಂಚನೆ ಮತ್ತು ಕ್ರಿಮಿನಲ್ ಪಿತೂರಿಯ ಅಪರಾಧಗಳಿಗೆ ಸಂಬಂಧಿಸಿದಂತೆ ಎಫ್‌ಐಆರ್  ದಾಖಲಿಸಲು ಆದೇಶಿಸಿತ್ತು.

ದೂರಿನಲ್ಲಿ ಹೇಳಲಾದ ಯಾವುದೇ ಸಂಜ್ಞೇಯ ಅಪರಾಧ ನಡೆಯದೆ ಇರುವುದರಿಂದ ಕ್ರಿಮಿನಲ್‌ ಪ್ರಕರಣದಲ್ಲಿ ತಮ್ಮನ್ನು ಹೆಸರಿಸಿರುವುದು ಮನಸೋಇಚ್ಛೆಯಿಂದ ಮತ್ತು ದುರುದ್ದೇಶದಿಂದ ಕೂಡಿರುವಂಥದ್ದು ಎಂದು ಖಾನ್, ಪಡುಕೋಣೆ, ಕಿಮ್ ಹಾಗೂ ಗಾರ್ಗ್ ಅವರು ವಾದಿಸಿದರು.

ವಾಹನ ಮಾರಾಟ ಅಥವಾ ದುರಸ್ತಿ ಇಲ್ಲವೇ ಉತ್ಪಾದನಾ ದೋಷಗಳಿಗೂ ತಮಗೂ ಯಾವುದೇ ಸಂಬಂಧ ಇಲ್ಲ ತಾವು ಗ್ರಾಹಕರ ದೂರುಗಳನ್ನು ಪರಿಗಣಿಸುವವರಲ್ಲ ಎಂದು ಅವರ ಪರ ವಕೀಲರು ವಾದಿಸಿದರು.

ವಾದ ಆಲಿಸಿದ, ಹೈಕೋರ್ಟ್ ಪೊಲೀಸರು ಮತ್ತು ದೂರುದಾರರಿಗೆ ನೋಟಿಸ್ ಜಾರಿ ಮಾಡಿ, ಎಫ್‌ಐಆರ್‌ ತನಿಖೆಗೆ ತಡೆ ನೀಡಿತು.

ವ್ಯಾಜ್ಯ ಪರಿಹರಿಸಿಕೊಳ್ಳಲು ಕಕ್ಷಿದಾರರು ಮಧ್ಯಸ್ಥಿಕೆಗೆ ಮುಂದಾಗಬಹುದು ಎಂದ ನ್ಯಾಯಾಲಯ ಆ ಸಾಧ್ಯತೆಯನ್ನು ಪರಿಗಣಿಸುವಂತೆ ಹುಂಡೈ ಅಧಿಕಾರಿಗಳಿಗೆ ಸಲಹೆ ನೀಡಿತು.  

ಅರ್ಜಿದಾರರ ಪರ ಹಿರಿಯ ವಕೀಲರಾದ ಕಪಿಲ್ ಸಿಬಲ್ , ವಿಆರ್ ಬಾಜ್ವಾ ಹಾಗೂ  ಮಾಧವ್ ಮಿತ್ರಾ ಅವರು ವಕೀಲರಾದ ಅಪರಾಜಿತಾ ಜಾನ್ವಾಲ್, ಆದಿತ್ಯ ಶರ್ಮಾ, ಜಯ ಮಿತ್ರ, ಸಂಜಯ್ ಕುಮಾರ್, ಅಭಿಷೇಕ್ ಕೆಆರ್ ಸಿಂಗ್, ಸೌರಭ್ ಕುಮಾರ್, ವೇದಾಂಶಿ ಜಲನ್ ಮತ್ತು ಸವಿತಾ ನಥಾವತ್ ವಾದ ಮಂಡಿಸಿದರು. ರಾಜಸ್ಥಾನ ಸರ್ಕಾರವನ್ನು ಪಬ್ಲಿಕ್ ಪ್ರಾಸಿಕ್ಯೂಟರ್ ವಿವೇಕ್ ಚೌಧರಿ ಪ್ರತಿನಿಧಿಸಿದ್ದರು.

[ಆದೇಶದ ಪ್ರತಿ]

Shah_Rukh_Khan_v_State_of_Rajasthan_and_Anr.pdf
Preview