ಶಾರುಖ್ ಮನೆ ನವೀಕರಣ ವೇಳೆ ಸಿಆರ್‌ಜಡ್‌ ನಿಯಮಾವಳಿ ಉಲ್ಲಂಘನೆ: ಸಾಕ್ಷ್ಯ ಒದಗಿಸುವಂತೆ ಹೋರಾಟಗಾರನಿಗೆ ಎನ್‌ಜಿಟಿ ತಾಕೀತು

ಖಾನ್ ಅವರ ಆರು ಅಂತಸ್ತಿನ ಬಂಗಲೆ ಮನ್ನತ್‌ಗೆ ಇನ್ನೂ ಎರಡು ಮಹಡಿ ನಿರ್ಮಿಸುವುದಕ್ಕೆ ಸಿಆರ್‌ಜಡ್‌ ನಿಯಮದಡಿ ಅನುಮತಿಸಿರುವುದರ ಕಾನೂನುಬದ್ಧತೆಯನ್ನು ಮುಂಬೈ ಮೂಲದ ಹೋರಾಟಗಾರ ಪ್ರಶ್ನಿಸಿದ್ದಾರೆ.
ಶಾರುಖ್ ಮನೆ ನವೀಕರಣ ವೇಳೆ ಸಿಆರ್‌ಜಡ್‌ ನಿಯಮಾವಳಿ ಉಲ್ಲಂಘನೆ: ಸಾಕ್ಷ್ಯ ಒದಗಿಸುವಂತೆ ಹೋರಾಟಗಾರನಿಗೆ ಎನ್‌ಜಿಟಿ ತಾಕೀತು
Published on

ಬಾಲಿವುಡ್‌ ನಟ ಶಾರುಖ್ ಖಾನ್ ಅವರ ಬಾಂದ್ರಾದಲ್ಲಿರುವ ಮನ್ನತ್ ನಿವಾಸದ ನವೀಕರಣಕ್ಕಾಗಿ ಕರಾವಳಿ ನಿಯಂತ್ರಣ ವಲಯದ (ಸಿಆರ್‌ಜಡ್) ಅನುಮತಿ ಪಡೆಯುವಲ್ಲಿ ನಟ ಅಥವಾ ಮಹಾರಾಷ್ಟ್ರ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರ (ಎಂಸಿಜಡ್ಎಂಎ) ಎಸಗಿದೆ ಎನ್ನಲಾದ ಲೋಪಗಳ ಬಗ್ಗೆ ಪುರಾವೆ ಒದಗಿಸುವಂತೆ ಸಾಮಾಜಿಕ ಕಾರ್ಯಕರ್ತ ಸಂತೋಷ್ ದೌಂಡ್ಕರ್ ಅವರಿಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ತಾಕೀತು ಮಾಡಿದೆ [ಸಂತೋಷ್ ದೌಂಡ್ಕರ್ ಮತ್ತು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಕಾರ್ಯದರ್ಶಿ ಇನ್ನಿತರರ ನಡುವಣ ಪ್ರಕರಣ].

ನಾಲ್ಕು ವಾರಗಳೊಳಗೆ ಸಾಕ್ಷ್ಯ ಒದಗಿಸದೆ ಇದ್ದರೆ ದೌಂಡ್ಕರ್‌ ಸಲ್ಲಿಸಿರುವ ಮೇಲ್ಮನವಿ ವಜಾಗೊಳಿಸಲಾಗುವುದು ಎಂದು ಎನ್‌ಜಿಟಿ ಪಶ್ಚಿಮ ವಲಯ ಪೀಠವು ತನ್ನ ಆದೇಶದಲ್ಲಿ ತಿಳಿಸಿದೆ.

Also Read
ದಿಕ್ಕು ತಪ್ಪಿಸುವ ಪಾನ್ ಮಸಾಲಾ ಜಾಹೀರಾತು: ಶಾರುಖ್, ಅಜಯ್ ದೇವಗನ್, ಟೈಗರ್ ಶ್ರಾಫ್‌ಗೆ ಗ್ರಾಹಕ ನ್ಯಾಯಾಲಯ ನೋಟಿಸ್

ಯೋಜನಾ ಪ್ರತಿಪಾದಕರು ಇಲ್ಲವೇ ಎಂಸಿಜಡ್‌ಎಂಎ ನಿಯಮಾವಳಿ ಉಲ್ಲಂಘಿಸಿದ್ದರೆ ಮೇಲ್ಮನವಿದಾರರು ಅದಕ್ಕೆ ಸಂಬಂಧಿಸಿದ ಪುರಾವೆಗಳನ್ನು ನಾಲ್ಕು ವಾರಗಳೊಳಗೆ ಸಲ್ಲಿಸಬೇಕು. ಇಲ್ಲದಿದ್ದರೆ ನ್ಯಾಯಮಂಡಳಿಯ ಆದೇಶ ಪಾಲಿಸದ ಹಿನ್ನೆಲೆಯಲ್ಲಿ ಪ್ರಸ್ತುತ ಮೇಲ್ಮನವಿಯನ್ನು ಆರಂಭದ ಹಂತದಲ್ಲಿಯೇ ವಜಾಗೊಳಿಸುವುದನ್ನು ಬಿಟ್ಟು ಬೇರೆ ದಾರಿ ನಮಗೆ ಉಳಿಯುವುದಿಲ್ಲ ಎಂದು ನ್ಯಾಯಾಂಗ ಸದಸ್ಯ ದಿನೇಶ್ ಕುಮಾರ್ ಸಿಂಗ್ ಮತ್ತು ತಜ್ಞ ಸದಸ್ಯ ವಿಜಯ್ ಕುಲಕರ್ಣಿ ಅವರಿದ್ದ ಸಮಿತಿ ಹೇಳಿದೆ.

ಅಸ್ತಿತ್ವದಲ್ಲಿರುವ ಆರು ಅಂತಸ್ತಿನ ಭವನಕ್ಕೆ ಎರಡು ಹೆಚ್ಚುವರಿ ಮಹಡಿಗಳನ್ನು ಸೇರಿಸುವ ಖಾನ್ ಅವರ ಯೋಜನೆಗೆ ನೀಡಲಾದ ಸಿಆರ್‌ಝಡ್ ಅನುಮತಿಯ ಕಾನೂನುಬದ್ಧತೆಯನ್ನು ದೌಂಡ್ಕರ್ ಅವರ ಮೇಲ್ಮನವಿ ಪ್ರಶ್ನಿಸಿತ್ತು.

ದೂರಿನ ಪ್ರಮುಖಾಂಶಗಳು

  • ಖಾನ್ ಅವರ ಕ್ರಮಗಳು ಸಿಆರ್‌ಝಡ್ ಉಲ್ಲಂಘನೆಗಳ ಇತಿಹಾಸದ ಭಾಗವಾಗಿದೆ. ಈ ಹಿಂದಿನ ಉಲ್ಲಂಘನೆಗಳನ್ನು ಸರಿಪಡಿಸಿಕೊಳ್ಳದೆ ಇರುವಾಗ ಹೊಸ ಸಿಆರ್‌ಜಡ್‌ ಅನುಮತಿ ನೀಡುವಂತಿಲ್ಲ.

  • ಸಿಆರ್‌ಝಡ್‌ ನಿಯಮದಂತೆ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದಿಂದ ಕಡ್ಡಾಯ ಪೂರ್ವ ಪರಿಸರ ಅನುಮತಿ ಪಡೆಯದೆ ಖಾನ್ ಕಲಾ ಗ್ಯಾಲರಿ ಸೇರಿದಂತೆ ಎರಡು ಪಾರಂಪರಿಕ ಕಟ್ಟಡಗಳನ್ನು ಕೆಡವಿದ್ದಾರೆ.

  • ನಟ ಎಂಸಿಜಡ್‌ಎಂಎಯಿಂದ ಕಡ್ಡಾಯ ಅನುಮತಿ ಪಡೆಯದೆ ನೆಲ + 6 ಅಂತಸ್ತಿನ ಕಟ್ಟಡ ನಿರ್ಮಿಸಿದ್ದಾರೆ.

  • ನೆಲಮಾಳಿಗೆ ನೆಲಮಟ್ಟದಿಂದ ಸುಮಾರು ಆರು ಮೀಟರ್ ಕೆಳಗೆ ಇದ್ದು ಸಣ್ಣ ಖನಿಜಗಳು ಮತ್ತು ಅಂತರ್ಜಲವನ್ನು ನೆಲಮಾಳಿಗೆ ನಿರ್ಮಿಸುವುದಕ್ಕಾಗಿ ತೆಗೆದುಹಾಕಲಾಗಿದೆ. ಇವೆರಡೂ CRZ ನಿಯಮಗಳ ಅಡಿಯಲ್ಲಿ ನಿಷೇಧಿತ ಚಟುವಟಿಕೆಗಳಾಗಿವೆ.

  • ಖಾನ್ ಸಾಮೂಹಿಕ ವಸತಿಗಾಗಿ ಹನ್ನೆರಡು ಒಂದು ಬೆಡ್‌ರೂಮ್-ಹಾಲ್-ಕಿಚನ್ ಫ್ಲಾಟ್‌ಗಳನ್ನು ನಿರ್ಮಿಸಿ ನಂತರ ಅವುಗಳನ್ನು ಐಷಾರಾಮಿ ಏಕ-ಕುಟುಂಬದ ನಿವಾಸವಾಗಿ ವಿಲೀನಗೊಳಿಸುವ ಮೂಲಕ ವಂಚಿಸಿದ್ದಾರೆ. ಇದು 1976 ರ ನಗರ ಭೂಮಿ (ಸೀಲಿಂಗ್ ಮತ್ತು ನಿಯಂತ್ರಣ) ಕಾಯಿದೆಯ ಉಲ್ಲಂಘನೆ.

ಆದರೆ ದೌಂಡ್ಕರ್‌ ಆರೋಪಿಸಿರುವ ಉಲ್ಲಂಘನೆಗಳು 2000 ಮತ್ತು 2006 ರ ನಡುವೆ ನಡೆದಿದ್ದು ಆಕ್ಷೇಪಿತ ಸಿರ್‌ಜಡ್‌ ಅನುಮತಿ ಜನವರಿ 2025ರಲ್ಲಿ ನೀಡಲಾಗಿದೆ ಎಂದು ನ್ಯಾಯಮಂಡಳಿ ತಿಳಿಸಿದೆ.

ಸಿಆರ್‌ಜಡ್‌ ಅನುಮತಿ ಪ್ರಶ್ನಿಸಲು ಇರುವ ಕಾರಣಗಳು ಸಂಪೂರ್ಣವಾಗಿ ಮನವರಿಕೆಯಾಗುವುದಿಲ್ಲ ಎಂದಿರುವ ಅದು ಜನವರಿ 3, 2025 ರಂದು ನೀಡಲಾದ ಸಿಆರ್‌ಜಡ್‌ ಅನುಮತಿ 2019ರ ಸಿಆರ್‌ಜಡ್‌ ಅಧಿಸೂಚನೆಯಲ್ಲಿ ವಿವರಿಸಿರುವ ಮಾರ್ಗಸೂಚಿಗಳನ್ನು ಪಾಲಿಸಬೇಕೆಂದು ಹೇಳುತ್ತಿರುವುದು ಕಂಡುಬಂದಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ತರುವಾಯ ನಾಲ್ಕು ವಾರದೊಳಗೆ ಸಾಕ್ಷ್ಯ ಒದಗಿಸುವಂತೆ ದೌಂಡ್ಕರ್‌ ಅವರಿಗೆ ಸೂಚಿಸಿದ ಪೀಠ ವಿಫಲವಾದಲ್ಲಿ ಮೇಲ್ಮನವಿ ವಜಾಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿತು. ಏಪ್ರಿಲ್ 23ರಂದು ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದೆ.

[ಆದೇಶದ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]

Attachment
PDF
Santosh_Daundkar_v_The_secretary__MoEF_CC___Ors (1)
Preview
Kannada Bar & Bench
kannada.barandbench.com