ಸುದ್ದಿಗಳು

ರಾಜ್ಯಸಭೆ ಚುನಾವಣೆ: ಮತ ಚಲಾಯಿಸಲು ಒಂದು ದಿನದ ಜಾಮೀನು ಕೋರಿ ನ್ಯಾಯಾಲಯದ ಮೊರೆಹೋದ ಅನಿಲ್ ದೇಶಮುಖ್, ನವಾಬ್ ಮಲಿಕ್

ಜೂನ್ 10ರಂದು ರಾಜ್ಯಸಭಾ ಚುನಾವಣೆಗೆ ಮತದಾನ ನಡೆಯುವುದರಿಂದ ಪಿಎಂಎಲ್ಎ ವಿಶೇಷ ನ್ಯಾಯಾಧೀಶ ಆರ್ ಎನ್ ರೋಕಡೆ ಜೂನ್ 8ರಂದು ಎರಡೂ ಅರ್ಜಿಗಳನ್ನು ಒಟ್ಟಿಗೆ ಆಲಿಸಲಿದ್ದಾರೆ.

Bar & Bench

ಜೂನ್ 10ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಯಲ್ಲಿ ಮತ ಚಲಾಯಿಸಲು ಒಂದು ದಿನದ ಮಟ್ಟಿಗೆ ಜಾಮೀನು ಕೋರಿ ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಮತ್ತು ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಮುಂಬೈ ನ್ಯಾಯಾಲಯದ ಮೊರೆ ಹೋಗಿದ್ದಾರೆ.

ಈ ತಿಂಗಳ 10ರಂದು ರಾಜ್ಯಸಭಾ ಚುನಾವಣೆಗೆ ಮತದಾನ ನಡೆಯುವುದರಿಂದ ಪಿಎಂಎಲ್‌ಎ ವಿಶೇಷ ನ್ಯಾಯಾಧೀಶ ಆರ್‌ ಎನ್‌ ರೋಕಡೆ ಜೂನ್‌ 8ರಂದು ಎರಡೂ ಅರ್ಜಿಗಳನ್ನು ಒಟ್ಟಿಗೆ ಆಲಿಸಲಿದ್ದಾರೆ.

ಭೂಗತ ಪಾತಕಿ ದಾವೂದ್ ಇಬ್ರಾಹಿಂನನ್ನು ಒಳಗೊಂಡಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಭಾಗಿಯಾದ ಆರೋಪದ ಮೇಲೆ ಮಲಿಕ್ ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ. ರೂ 100 ಕೋಟಿ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್‌ ದೇಶಮುಖ್‌ ಕೂಡ ನ್ಯಾಯಾಂಗ ಬಂಧನದಲ್ಲಿದ್ದಾರೆ.

ರಾಜ್ಯಸಭೆ ಚುನಾವಣೆಗೆ ಶಾಸಕಾಂಗ ಸಭೆಯ ಚುನಾಯಿತ ಸದಸ್ಯರು ಮಾತ್ರ ಮತ ಚಲಾಯಿಸಬಹುದಾಗಿದ್ದು ವಿಧಾನಭವನದ ಒಳಗೆ ಮತದಾನ ನಡೆಯಲಿದೆ. ತಾವು ಶಾಸಕರಾಗಿದ್ದು ಮತದಾನ ಮಾಡಬೇಕಿರುವುದರಿಂದ ತಮಗೆ ಒಂದು ದಿನದ ಜಾಮೀನು ನೀಡುವಂತೆ ಎರಡೂ ಅರ್ಜಿಗಳು ಕೋರಿವೆ.

ಆಸ್ಪತ್ರೆಯಲ್ಲಿರುವ ತಮ್ಮನ್ನು ಮತದಾನ ನಡೆಯುವ ಸ್ಥಳಕ್ಕೆ ಆಂಬುಲೆನ್ಸ್‌ನಲ್ಲಿ ಕರೆದೊಯ್ಯಲು ಅನುಮತಿ ನೀಡಬೇಕು. ಇದಕ್ಕೆ ಸಂಬಂಧಿಸಿದ ವೈದ್ಯಕೀಯ ಮತ್ತು ಪೊಲೀಸ್‌ ಬೆಂಗವಾಲು ವೆಚ್ಚವನ್ನು ಭರಿಸುವುದಾಗಿ ನವಾಬ್‌ ಮಲಿಕ್‌ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಮತ್ತೊಂದೆಡೆ ಅನಿಲ್‌ ದೇಶಮುಖ್‌ ಅವರು ಸಲ್ಲಿಸಿರುವ ಅರ್ಜಿಯಲ್ಲಿ “ವಿಧಾನ ಭವನದ ಆವರಣದಲ್ಲಿ ಕೇವಲ 288 ಶಾಸಕರು ಮತದಾನ ಮಾಡುವುದರಿಂದ ಪೊಲೀಸ್ ಬೆಂಗಾವಲು ಲಭ್ಯತೆ ಸಮಸ್ಯೆಯಾಗದು. ಪೊಲೀಸ್‌ ಬೆಂಗಾವಲಿಗೆ ಸಂಬಂಧಿಸಿದ ವೆಚ್ಚ ಭರಿಸಲಾಗುವುದು” ಎಂದು ತಿಳಿಸಲಾಗಿದೆ.