ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಸೀಟುಗಳನ್ನು ಮೀಸಲಿಡುವ ಸಂವಿಧಾನದ (128ನೇ ತಿದ್ದುಪಡಿ) ಮಸೂದೆಗೆ ಗುರುವಾರ ರಾಜ್ಯಸಭೆಯಲ್ಲಿ ಒಪ್ಪಿಗೆ ದೊರೆತಿದೆ.
ಮೇಲ್ಮನೆಯಲ್ಲಿ 214 ಸದಸ್ಯರು ಮತದಾನದ ಮೂಲಕ ಒಪ್ಪಿಗೆ ಸೂಚಿಸುವುದಕ್ಕೂ ಮುನ್ನ ಹತ್ತು ಗಂಟೆಗಳ ಕಾಲ ವಿಸ್ತೃತ ಚರ್ಚೆ ನಡೆಯಿತು. ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಮಂಗಳವಾರ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದ್ದರು.
ಲೋಕಸಭೆಯಲ್ಲಿ ಎಂಟು ತಾಸು ಚರ್ಚೆಯ ಬಳಿಕ 452:2 ಬಹುಮತದೊಂದಿಗೆ ಬುಧವಾರ ಮಸೂದೆಗೆ ಒಪ್ಪಿಗೆ ದೊರೆತಿತ್ತು. ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿ ಮತ್ತು ಇಮ್ತಿಯಾಜ್ ಜಲೀಲ್ ಅವರು ಮಸೂದೆಗೆ ವಿರೋಧ ವ್ಯಕ್ತಪಡಿಸಿದರು.
ಮೇಲ್ಜಾತಿ ಮಹಿಳೆಯರಿಗೆ ಅನುಕೂಲ ಕಲ್ಪಿಸಲು ಮಸೂದೆ ರೂಪಿಸಲಾಗಿದ್ದು, ಪರಿಶಿಷ್ಟ ಜಾತಿ ಮತ್ತು ಪಂಗಡದ ಮಹಿಳೆಯರಿಗೆ ಮೀಸಲಾತಿ ಕಲ್ಪಿಸಿರುವಂತೆ ಹಿಂದುಳಿದ ವರ್ಗ ಮತ್ತು ಮುಸ್ಲಿಮ್ ಮಹಿಳೆಯರಿಗೆ ಏಕೆ ಮೀಸಲಾತಿ ಕಲ್ಪಿಸಲಾಗಿಲ್ಲ ಎಂದು ಆಕ್ಷೇಪಿಸಿದ್ದರು.