Calcutta High Court and Ram Navami violence 
ಸುದ್ದಿಗಳು

ರಾಮನವಮಿ ಹಿಂಸಾಚಾರ ಮೇಲ್ನೋಟಕ್ಕೆ ಪೂರ್ವ ನಿಯೋಜಿತ: ಎನ್ಐಎ ತನಿಖೆ ಕುರಿತಂತೆ ಆದೇಶ ಕಾಯ್ದಿರಿಸಿದ ಕಲ್ಕತ್ತಾ ಹೈಕೋರ್ಟ್

ಪಶ್ಚಿಮ ಬಂಗಾಳದಲ್ಲಿ ವಿಶೇಷವಾಗಿ ಧಾರ್ಮಿಕ ಕಾರ್ಯಕ್ರಮಗಳ ವೇಳೆ ಹಿಂಸಾಚಾರ ಸಾಮಾನ್ಯ ಎಂದು ನ್ಯಾಯಾಲಯ ಹೇಳಿದೆ.

Bar & Bench

ಹೌರಾ ಮತ್ತು ದಲ್ಖೋಲಾ ಜಿಲ್ಲೆಗಳಲ್ಲಿ ರಾಮನವಮಿ ಆಚರಣೆಯ ವೇಳೆ ಭುಗಿಲೆದ್ದ ಹಿಂಸಾಚಾರ ಪೂರ್ವ ನಿಯೋಜಿತ ಕೃತ್ಯವಾಗಿದ್ದು, ಇದಕ್ಕೆ ಗುಪ್ತಚರ ವೈಫಲ್ಯವೂ ಕಾರಣವಾಗಿದೆ ಎಂದು ಕಲ್ಕತ್ತಾ ಹೈಕೋರ್ಟ್‌ ಸೋಮವಾರ ಹೇಳಿದೆ [ಸುವೆಂದು ಅಧಿಕಾರಿ ಮತ್ತು ಪಶ್ಚಿಮ ಬಂಗಾಳ ಸರ್ಕಾರ ನಡುವಣ ಪ್ರಕರಣ].

ಹಿಂಸಾಚಾರದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ವರ್ಗಾಯಿಸುವಂತೆ ಕೋರಿ ವಿರೋಧ ಪಕ್ಷದ ನಾಯಕ (ಎಲ್‌ಒಪಿ) ಸುವೇಂದು ಅಧಿಕಾರಿ ಅವರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಟಿ ಎಸ್ ಶಿವಜ್ಞಾನಂ, ನ್ಯಾಯಮೂರ್ತಿ ಹಿರಣ್ಮಯ್ ಭಟ್ಟಾಚಾರ್ಯ ಅವರಿದ್ದ ವಿಭಾಗೀಯ ಪೀಠವು ಆದೇಶ ಕಾಯ್ದಿರಿಸಿದೆ.

ವಿಚಾರಣೆ ವೇಳೆ, "ಬಾಹ್ಯ ಶಕ್ತಿಗಳಿಂದ ಉಂಟಾಗಬಹುದಾದ ಅಪಾಯ ಅಥವಾ ಒಳನುಸುಳುವಿಕೆ ತಡೆಯಲು ಅಂತರ್ಜಾಲವನ್ನು ಸಾಮಾನ್ಯವಾಗಿ ತಡೆಹಿಡಿಯಲಾಗುತ್ತದೆ. ಆದರೆ ಧಾರ್ಮಿಕ ಮೆರವಣಿಗೆ ವೇಳೆ ಅಂತರ್ಜಾಲವನ್ನು ಏಕೆ ಸ್ಥಗಿತಗೊಳಿಸುತ್ತಾರೆ ಎಂಬುದು ಅರ್ಥವಾಗುತ್ತಿಲ್ಲ. ಜನ ನಡೆದುಕೊಂಡು ಹೋಗುವಾಗ ವಾಗ್ವಾದ ಉಂಟಾಗುವುದು, ಮುಂತಾದವುಗಳಿಂದ ಹಿಂಸಾಚಾರ ಸಂಭವಿಸಿದರೆ ಅದು ಹಠಾತ್‌ ಹಿಂಸಾಚಾರ ಎನಿಸಿಕೊಳ್ಳುತ್ತದೆ. ಆದರೆ ಸರ್ಕಾರದ ವರದಿಗಳು ಮೇಲ್ನೋಟಕ್ಕೆ ಹೇಳುವಂತೆ ಇವೆಲ್ಲವೂ ಪೂರ್ವ ಯೋಜಿತ ಕೃತ್ಯಗಳಾಗಿವೆ. ಕಟ್ಟಡಗಳ ಮೇಲಿನಿಂದ ಕಲ್ಲುಗಳನ್ನು ಎಸೆಯಲಾಗಿದೆ ಎಂಬ ಆರೋಪಗಳಿವೆ. ನಿಸ್ಸಂಶಯವಾಗಿ 10 ರಿಂದ 15 ನಿಮಿಷಗಳ ಒಳಗೆ ಯಾರಿಂದಲೂ ಕಲ್ಲುಗಳನ್ನು ಕಟ್ಟಡಗಳ ಮೇಲಕ್ಕೆ ಕೊಂಡೊಯ್ಯಲು ಆಗುವುದಿಲ್ಲ" ಎಂದು ಹಂಗಾಮಿ ಮುಖ್ಯ ನ್ಯಾಯಮೂರ್ತಿಗಳು ಹೇಳಿದರು.

ಸಮಸ್ಯೆ ಎರಡು ಸ್ತರಗಳನ್ನು ಉಳ್ಳದ್ದಾಗಿದೆ. ಮೊದಲನೆಯದಾಗಿ ಎರಡು ಗುಂಪುಗಳ ನಡುವೆ ಘರ್ಷಣೆ ಏರ್ಪಟ್ಟಿದೆ. ಎರಡನೆಯದಾಗಿ ಈ ಎರಡು ಗುಂಪುಗಳ ಘರ್ಷಣೆಯ ಲಾಭವನ್ನು ಮೂರನೇ ಗುಂಪು ಪಡೆಯುತ್ತಿದೆ. ಇದನ್ನು ತನಿಖೆ ಮಾಡಬೇಕಾಗಿದೆ. ಕೇಂದ್ರೀಯ ಸಂಸ್ಥೆ (ಎನ್‌ಐಎ) ಈ ಅಂಶವನ್ನು ಉತ್ತಮವಾಗಿ ತನಿಖೆ ಮಾಡುತ್ತದೆ ಎಂದು ನಾವು ನಂಬುತ್ತೇವೆ. ನಾವು ಈ ಬಾಹ್ಯ ಶಕ್ತಿಯನ್ನು ಗುರುತಿಸಬೇಕಿದೆ. ಯಾರೋ ಬೆಂಕಿ ಹಚ್ಚಿರಬಹುದು, ಗಲಭೆಗಳಿಗೆ ಕಾರಣವಾಗಿರಬಹುದು ಹೀಗಾಗಿ ಆ ಮೂಲವನ್ನು ಗುರುತಿಸಲು ಕೇಂದ್ರೀಯ ಸಂಸ್ಥೆಯಲ್ಲದೆ ನಿಮಗೆ ಸಾಧ್ಯವಾಗದು" ಎಂದು ನ್ಯಾಯಾಲಯ ನುಡಿಯಿತು.

ಪಶ್ಚಿಮ ಬಂಗಾಳದಲ್ಲಿ ವಿಶೇಷವಾಗಿ ಧಾರ್ಮಿಕ ಕಾರ್ಯಕ್ರಮಗಳ ವೇಳೆ ಹಿಂಸಾಚಾರ ಸಾಮಾನ್ಯ ಎಂದು ಪೀಠ ಇದೇ ಸಂದರ್ಭದಲ್ಲಿ ಹೇಳಿತು. ಇದರೊಂದಿಗೆ ಎನ್‌ಐಎ ತನಿಖೆ ಕೋರಿದ್ದ ಆದೇಶವನ್ನು ನ್ಯಾಯಾಲಯ ಕಾಯ್ದಿರಿಸಿತು.