Subramanian Swamy, Supreme Court and Ram Setu
Subramanian Swamy, Supreme Court and Ram Setu 
ಸುದ್ದಿಗಳು

ಎಂಟು ವರ್ಷ ಸಂದರೂ ಏಕೆ ವಿಳಂಬ? ರಾಮಸೇತು ಅರ್ಜಿ ಮುಂದೂಡಿಕೆ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ಸ್ವಾಮಿ ಆಕ್ಷೇಪ

Bar & Bench

ರಾಮಸೇತುವಿಗೆ ರಾಷ್ಟ್ರೀಯ ಸ್ಮಾರಕ ಸ್ಥಾನಮಾನ ನೀಡುವಂತೆ ಕೋರಿ ತಾನು ಸಲ್ಲಿಸಿದ್ದ ಅರ್ಜಿಯನ್ನು ಮುಂದೂಡುವಂತೆ ಕೇಂದ್ರ ಸರ್ಕಾರ ಮಾಡಿದ ಮನವಿಗೆ ಬಿಜೆಪಿ ನಾಯಕ ಹಿರಿಯ ವಕೀಲ ಸುಬ್ರಮಣಿಯನ್‌ ಸ್ವಾಮಿ ಗುರುವಾರ ಆಕ್ಷೇಪ ವ್ಯಕ್ತಪಡಿಸಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರಗತಿ ಇಲ್ಲದೆ ಹಲವು ವರ್ಷಗಳು ಕಳೆದಿವೆ. ಕೇಂದ್ರ ತನ್ನ ಪ್ರಶ್ನೆಗೆ ಹೌದು ಅಥವಾ ಇಲ್ಲ ಎಂದು ಪ್ರತಿಕ್ರಿಯಿಸಿದರೆ ಸಾಕು ಎಂದರು. “ಎಂಟು ವರ್ಷಗಳು ಕಳೆದಿವೆ  ತಡಮಾಡಲು ಏನಿದೆ? ರಾಷ್ಟ್ರೀಯ ಪರಂಪರೆಯ ಸ್ಥಾನಮಾನ ನೀಡಬಹುದೇ ಅಥವಾ ಇಲ್ಲವೇ ಎಂಬ ವಿಚಾರವಷ್ಟೇ ಇದೆ” ಎಂದು ಅವರು ಹೇಳಿದರು. ಅರ್ಜಿಗೆ ಪ್ರತಿಕ್ರಿಯೆ ಸಲ್ಲಿಸಲು ಕೇಂದ್ರ ಸರ್ಕಾರ ಇನ್ನೂ ಎರಡು ವಾರಗಳ ಕಾಲಾವಕಾಶ ಬೇಕು ಎಂದಾಗ ಅವರು ಈ ವಾದ ಮಂಡಿಸಿದರು.

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಹಾಗೂ ಜೆ ಬಿ ಪರ್ದಿವಾಲಾ ಅವರಿದ್ದ ಪೀಠದಲ್ಲಿ ವಿಚಾರಣೆ ಪ್ರಾರಂಭವಾದಾಗ, ಅಕ್ಟೋಬರ್ 13ರಂದು ತನ್ನ ಪ್ರತಿಕ್ರಿಯೆ ಸಲ್ಲಿಸಲು ನ್ಯಾಯಾಲಯ  ಕೇಂದ್ರಕ್ಕೆ ಸೂಚಿಸಿತ್ತು ಎಂದು ಸ್ವಾಮಿ ಅವರು ಗಮನಸೆಳೆದರು.

ʼಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಬರಲು ಸಾಧ್ಯವಾಗುತ್ತಿಲ್ಲ ಎಂದು ಪತ್ರ ರವಾನಿಸಲಾಗಿದೆ. ಆದರೆ ಮುಂದಿನ ವಿಚಾರಣೆಯೊಳಗೆ ಉತ್ತರ ಸಲ್ಲಿಸುವಂತೆ  ಅಕ್ಟೋಬರ್ 13ರಂದು ನ್ಯಾಯಾಲಯ ಆದೇಶಿಸಿತ್ತುʼ  ಎಂದು ಸ್ವಾಮಿ ಹೇಳಿದರು.

ಈ ಹಂತದಲ್ಲಿ ಕೇಂದ್ರ ಸರ್ಕಾರದ ಪರ ವಕೀಲರು ಪ್ರತಿಕ್ರಿಯೆ ಸಲ್ಲಿಸಲು ಇನ್ನೂ ಎರಡು ವಾರಗಳ ಕಾಲಾವಕಾಶ ಕೋರಿದರು. ʼಪ್ರತ್ಯುತ್ತರ ಸಿದ್ಧವಾಗಿದೆ. ನಾವು ಸಚಿವಾಲಯದಿಂದ ಅನುಮೋದನೆ ಪಡೆಯಬೇಕಾಗಿದೆ' ಎಂದು ವಿನಂತಿಸಿದರು.

ಇದಕ್ಕೆ ಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದರಾದರೂ ನ್ಯಾಯಾಲಯ ಕೇಂದ್ರ ಸರ್ಕಾರಕ್ಕೆ ಅನುಮತಿ ನೀಡಿತು. ಕೇಂದ್ರ ಸರ್ಕಾರಕ್ಕೆ ಪ್ರತಿಕ್ರಿಯೆ ಸಲ್ಲಿಸಲು ನಾಲ್ಕು ವಾರಗಳ ಕಾಲಾವಕಾಶ ನೀಡಲಾಗಿದೆ. ಅದಕ್ಕೆ ಪ್ರತ್ಯುತ್ತರ ಸಲ್ಲಿಸಲು ಎರಡು ವಾರಗಳ ಅವಕಾಶ ನೀಡಲಾಗಿದೆ ಎಂದು ಪೀಠ ತಿಳಿಸಿತು.