ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿಗೆ ಸೂಕ್ತ ಭದ್ರತೆ ಒದಗಿಸಲಾಗಿದೆ: ದೆಹಲಿ ಹೈಕೋರ್ಟ್‌ಗೆ ಕೇಂದ್ರದ ವಿವರಣೆ

ತಮ್ಮ ಖಾಸಗಿ ನಿವಾಸದಲ್ಲಿ ಭದ್ರತೆ ಒದಗಿಸಲು ಯಾವುದೇ ಯತ್ನ ಮಾಡಿಲ್ಲ ಎಂದು ಆರೋಪಿಸಿ ಝಡ್ ಕೆಟಗರಿ ರಕ್ಷಣೆಗೆ ಅರ್ಹರಾಗಿರುವ ಸ್ವಾಮಿ ನ್ಯಾಯಾಲಯದ ಮೆಟ್ಟಿಲೇರಿದ್ದರು.
Subramanian Swamy, Delhi High Court
Subramanian Swamy, Delhi High Court
Published on

ರಾಜ್ಯಸಭೆಯ ಮಾಜಿ ಸದಸ್ಯ, ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಅವರ ಭದ್ರತೆ ಮತ್ತು ಸುರಕ್ಷತೆಗಾಗಿ ಸಮರ್ಪಕ ವ್ಯವಸ್ಥೆ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಗುರುವಾರ ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ.

ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಸಂಜಯ್ ಜೈನ್ ಅವರು ಆ ನಿಟ್ಟಿನಲ್ಲಿ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ಮುಂದೆ ಹೇಳಿಕೆ ಸಲ್ಲಿಸಿದರು.

ಇದೇ ವೇಳೆ, ಶನಿವಾರದ ಹೊತ್ತಿಗೆ ಸರ್ಕಾರಿ ವಸತಿ ಗೃಹವನ್ನು ಸರ್ಕಾರಕ್ಕೆ ಮರಳಿಸಲಾಗುವುದು   ಎಂದು ಸ್ವಾಮಿ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.

Also Read
ಬಿಜೆಪಿ ಧುರೀಣ ಸುಬ್ರಮಣಿಯನ್ ಸ್ವಾಮಿ ನಿವಾಸಕ್ಕೆ ಭದ್ರತೆ ಒದಗಿಸಲು ವಿಫಲವಾದ ಕೇಂದ್ರ: ದೆಹಲಿ ಹೈಕೋರ್ಟ್ ಅಸಮಾಧಾನ

ಹೀಗಾಗಿ, ತಮ್ಮ ಖಾಸಗಿ ನಿವಾಸದಲ್ಲಿ ಭದ್ರತೆ ನೀಡುತ್ತಿಲ್ಲ ಎಂದು ಸ್ವಾಮಿ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಇತ್ಯರ್ಥಪಡಿಸಿತು.

ಝಡ್ ಕೆಟಗರಿ ಭದ್ರತೆಗೆ ಅರ್ಹರಾದ ಸ್ವಾಮಿ ಅವರಿಗೆ 2016ರ ಜನವರಿಯಲ್ಲಿ 5 ವರ್ಷಗಳ ಕಾಲ ದೆಹಲಿಯ ಸರ್ಕಾರಿ ಬಂಗಲೆಯನ್ನು ಕೇಂದ್ರ ಸರ್ಕಾರ ಮಂಜೂರು ಮಾಡಿತ್ತು. ರಾಜ್ಯಸಭೆ ಸದಸ್ಯರಾಗಿ ಅವರ ಅಧಿಕಾರಾವಧಿ ಕೊನೆಗೊಂಡ ಬಳಿಕ ಬಂಗಲೆ ಖಾಲಿ ಮಾಡುವಂತೆ ಕೇಳಿಕೊಳ್ಳಲಾಗಿತ್ತು. ಐದು ವರ್ಷಗಳವರೆಗೆ ಸರ್ಕಾರ ಬಂಗಲೆ ಒದಗಿಸಿದ್ದನ್ನು ಗಮನಿಸಿದ್ದ ದೆಹಲಿ ಹೈಕೋರ್ಟ್‌ ಬಂಗಲೆ ಮರು ಹಂಚಿಕೆ ಕೋರಿದ್ದ ಸ್ವಾಮಿ ಅವರ ಅರ್ಜಿಯನ್ನು ತಿರಸ್ಕರಿಸಿತ್ತು.

ಸರ್ಕಾರಕ್ಕೆ ತಮ್ಮ ಬಂಗಲೆ ಹಸ್ತಾಂತರಿಸುವಂತೆ ಸ್ವಾಮಿ ಅವರಿಗೆ ಹೈಕೋರ್ಟ್ ನಿರ್ದೇಶಿಸಿದಾಗ, ತಾವಿರುವ ಖಾಸಗಿ ನಿವಾಸದಲ್ಲಿ ಭದ್ರತೆ ಒದಗಿಸುವುದಾಗಿ ಕೇಂದ್ರ  ಭರವಸೆ ನೀಡಿತ್ತಾದರೂ ಯಾವುದೇ ಭದ್ರತೆ ಒದಗಿಸಲಿಲ್ಲ. ಭದ್ರತೆಗಾಗಿ ಅಗತ್ಯವಿರುವ ಮೂಲಸೌಕರ್ಯ ಒದಗಿಸಲು ತಮ್ಮ ಖಾಸಗಿ ನಿವಾಸಕ್ಕೆ ಯಾರೂ ಭೇಟಿ ನೀಡಿಲ್ಲ ಎಂದು ಅವರು ಆರೋಪಿಸಿ ಪ್ರಸ್ತುತ ಅರ್ಜಿ ಸಲ್ಲಿಸಿದ್ದರು.   

Kannada Bar & Bench
kannada.barandbench.com