ಬಿಜೆಪಿಯ ನಾಯಕ, ಶಾಸಕ ರಮೇಶ್ ಜಾರಕಿಹೊಳಿ ಅವರ ಸಿ ಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಳ ಸಾರಾಂಶ ಮತ್ತು ಆಕ್ಷೇಪಣೆ ಸಲ್ಲಿಸುವಂತೆ ಪಕ್ಷಕಾರರಿಗೆ ಕರ್ನಾಟಕ ಹೈಕೋರ್ಟ್ ಶುಕ್ರವಾರ ಆದೇಶಿಸಿದೆ.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿ ಡಿ ಪ್ರಕರಣದ ತನಿಖೆಗೆಂದು ನೇಮಕ ಮಾಡಿದ್ದ ಎಸ್‌ಐಟಿ ರಚನೆಯ ಸಿಂಧುತ್ವ ಪ್ರಶ್ನಿಸಿ ಹಾಗೂ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಜಾರಕಿಹೊಳಿ ದಾಖಲಿಸಿರುವ ಬ್ಲ್ಯಾಕ್‌ಮೇಲ್ ಪ್ರಕರಣದ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ಸಂತ್ರಸ್ತೆ ಹಾಗೂ ಆರೋಪಿಗಳು ಎನ್ನಲಾದ ಎಸ್ ಶ್ರವಣ್ ಕುಮಾರ್ ಹಾಗೂ ಬಿ ಎಂ ನರೇಶ್ ಪ್ರತ್ಯೇಕವಾಗಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.
ಸಂತ್ರಸ್ತೆಯ ಪರವಾಗಿ ಹಾಜರಾಗಿದ್ದ ವಕೀಲ ಮಯಾಂಕ್ ಜೈನ್ ಅವರು “ದಾಖಲೆಗಳ ಭಾಷಾಂತರ ಮತ್ತು ಲಿಖಿತ ವಾದಾಂಶವನ್ನು ಸಲ್ಲಿಸುವಂತೆ ಕಳೆದ ಬಾರಿ ನ್ಯಾಯಾಲಯ ಆದೇಶಿಸಿತ್ತು. ಅದನ್ನು ಪಾಲಿಸಲಾಗಿಲ್ಲ. ಇದನ್ನು ಎಲ್ಲ ಪಕ್ಷಕಾರರು ಸಲ್ಲಿಸಿಲ್ಲ” ಎಂದು ಪೀಠದ ಗಮನಸೆಳೆದರು.
ಇದನ್ನು ಆಲಿಸಿದ ಪೀಠವು “ಮುಂದಿನ ವಿಚಾರಣೆಯ ವೇಳೆಗೆ ಆಕ್ಷೇಪಣೆ, ವಿಚಾರಣೆಗಳ ಸಾರಾಂಶ, ಲಿಸ್ಟ್ ಆಫ್ ಅಥಾರಿಟಿಯನ್ನು ಎಲ್ಲಾ ಪಕ್ಷಕಾರರು ಸಲ್ಲಿಸಬೇಕು” ಎಂದು ಆದೇಶಿಸಿ, ವಿಚಾರಣೆಯನ್ನು ಆಗಸ್ಟ್ 16ಕ್ಕೆ ಮುಂದೂಡಿತು.
ಅಮಿಕಸ್ ಕ್ಯೂರಿಯಾಗಿರುವ ಹಿರಿಯ ವಕೀಲ ಸಂದೇಶ್ ಚೌಟ, ರಮೇಶ್ ಜಾರಕಿಹೊಳಿ ಪರ ವಕೀಲ ಸಂದೀಪ್ ಪಾಟೀಲ್, ವಕೀಲ ಜಿ ಆರ್ ಮೋಹನ್ ವಿಚಾರಣೆಯಲ್ಲಿ ಭಾಗಿಯಾಗಿದ್ದರು.
ಪ್ರಕರಣದ ಹಿನ್ನೆಲೆ: ಯುವತಿಯೊಬ್ಬಳ ಜೊತೆ ರಮೇಶ್ ಜಾರಕಿಹೊಳಿ ಇದ್ದರು ಎನ್ನಲಾದ ವಿಡಿಯೊ ತುಣುಕುಗಳನ್ನು ಒಳಗೊಂಡ ಸಿಡಿಯನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಲಾಗಿತ್ತು. ಇದು ಸಂಚಲನ ಸೃಷ್ಟಿಸುತ್ತಿದ್ದಂತೆ ತನ್ನನ್ನು ಪ್ರಕರಣದಲ್ಲಿ ಸಿಲುಕಿಸಲಾಗುತ್ತಿದೆ ಎಂದು ಆರೋಪಿಸಿ ರಮೇಶ ಜಾರಕಿಹೊಳಿ ಅವರು ಅನಾಮಿಕರ ವಿರುದ್ಧ ಬೆಂಗಳೂರಿನ ಸದಾಶಿವನಗರ ಠಾಣೆಯಲ್ಲಿ ಬ್ಲ್ಯಾಕ್‌ಮೇಲ್ ಆರೋಪದ ಮೇಲೆ ದೂರು ದಾಖಲಿಸಿದ್ದರು. ಇದನ್ನು ಆಧರಿಸಿ ಅಂದಿನ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರವು ಎಸ್‌ಐಟಿ ರಚಿಸಿತ್ತು. ಮತ್ತೊಂದೆಡೆ ಎಸ್‌ಐಟಿ ಸಿಂಧುತ್ವ ನಿರ್ಧಾರವಾಗುವವರೆಗೆ ಯಾವುದೇ ತೆರನಾದ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಅನುಮತಿಸಬಾರದು ಎಂದು ಸಂತ್ರಸ್ತೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಇದಲ್ಲದೆ ಎಸ್ ಶ್ರವಣ್ ಕುಮಾರ್ ಮತ್ತು ಬಿ ಎಂ ನರೇಶ್ ಎಂಬವರು ತಮ್ಮ ವಿರುದ್ಧದ ಬ್ಲ್ಯಾಕ್‌ಮೇಲ್ ಪ್ರಕರಣ ರದ್ದುಪಡಿಸುವಂತೆ ಕೋರಿ ಅರ್ಜಿ ದಾಖಲಿಸಿದ್ದರು.