ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಸಿ ಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ಕಾಲಾವಕಾಶ ನೀಡಿದರೂ ಲಿಖಿತ ವಾದ ಮತ್ತು ವಿಚಾರಣೆಗಳ ಸಾರಾಂಶ (ಸಿನಾಪ್ಸಿಸ್) ಸಲ್ಲಿಸದ ರಾಜ್ಯ ಸರ್ಕಾರ ಮತ್ತು ವಿಶೇಷ ತನಿಖಾ ದಳದ ನಡೆಯ ಬಗ್ಗೆ ಕರ್ನಾಟಕ ಹೈಕೋರ್ಟ್ ಸೋಮವಾರ ಮೌಖಿಕವಾಗಿ ಅಸಮಾಧಾನ ವ್ಯಕ್ತಪಡಿಸಿತು.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿ ಡಿ ಪ್ರಕರಣದ ತನಿಖೆಗೆ ಎಸ್‌ಐಟಿ ರಚನೆಯ ಸಿಂಧುತ್ವ ಪ್ರಶ್ನಿಸಿ ಹಾಗೂ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಜಾರಕಿಹೊಳಿ ದಾಖಲಿಸಿರುವ ಬ್ಲ್ಯಾಕ್‌ಮೇಲ್ ಪ್ರಕರಣದ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ಸಂತ್ರಸ್ತೆ ಹಾಗೂ ಆರೋಪಿಗಳು ಎನ್ನಲಾದ ಎಸ್ ಶ್ರವಣ್ ಕುಮಾರ್ ಹಾಗೂ ಬಿ ಎಂ ನರೇಶ್ ಪ್ರತ್ಯೇಕವಾಗಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್ ಸುನಿಲ್ ದತ್ ಯಾದವ್ ಅವರ ನೇತೃತ್ವದ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.
ವಿಚಾರಣೆ ಆರಂಭವಾಗುತ್ತಿದ್ದಂತೆ ಸಂತ್ರಸ್ತೆ ಪರ ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಅವರು ನ್ಯಾಯಾಲಯದ ಹಿಂದಿನ ಆದೇಶ ಕುರಿತು ಪೀಠಕ್ಕೆ ವಿವರಿಸಿದರು.
ಆಗ ನ್ಯಾಯಮೂರ್ತಿಗಳು “ರಾಜ್ಯ ಸರ್ಕಾರ ಮತ್ತು ಎಸ್‌ಐಟಿ ಏಕೆ ಲಿಖಿತ ವಾದ ಸಲ್ಲಿಸಿಲ್ಲ? ಲಿಖಿತ ವಾದ ಸಲ್ಲಿಸದಿದ್ದರೆ ನಾನು ವಾದ-ಪ್ರತಿವಾದಕ್ಕೆ ಅವಕಾಶ ಮಾಡಿಕೊಡಲಾಗದು. ಲಿಖಿತ ವಾದ ಸಲ್ಲಿಸಲು ಇನ್ನೂ ತಡ ಮಾಡುವುದು ಸಲ್ಲ. ಈಗಾಗಲೇ ಸಾಕಷ್ಟು ಕಾಲಾವಕಾಶ ನೀಡಲಾಗಿದೆ. ಈ ಬಾರಿ ಇನ್ನೊಂದು ಅವಕಾಶ ನೀಡುತ್ತಿದ್ದು, ಹತ್ತು ದಿನಗಳ ಒಳಗಾಗಿ ಲಿಖಿತ ವಾದ ಸಲ್ಲಿಸಬೇಕು. ಮುಂಚಿತವಾಗಿ ಲಿಖಿತ ವಾದ ಸಲ್ಲಿಸಿದರೆ ವಾದ ಸರಣಿಗೆ ತೆಗೆದುಕೊಳ್ಳುವ ಸಮಯವನ್ನು ಕಡಿತಗೊಳಿಸಬಹುದು” ಎಂದು ಮೌಖಿಕವಾಗಿ ಹೇಳಿದರು.
ಅಂತಿಮವಾಗಿ ಪೀಠವು, “ಕಳೆದ ವಿಚಾರಣೆಯಲ್ಲಿ ಪಕ್ಷಕಾರರಿಗೆ ಹಿಂದಿನ ವಿಚಾರಣೆಗಳ ಸಾರಾಂಶ ಮತ್ತು ಲಿಖಿತ ವಾದ ಸಲ್ಲಿಸಲು ಆದೇಶಿಸಲಾಗಿತ್ತು. ಅರ್ಜಿದಾರರ ಪರ ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಅವರು ತಮ್ಮ ವಾದ ಸಲ್ಲಿಸಿದ್ದಾರೆ. ಎಸ್‌ಐಟಿ ಮತ್ತು ರಾಜ್ಯ ಸರ್ಕಾರವು ಹಿಂದಿನ ವಿಚಾರಣೆಯ ಸಾರಾಂಶ ಮತ್ತು ಲಿಖಿತ ವಾದ ಸಲ್ಲಿಸಬೇಕು. ಯಾವೆಲ್ಲಾ ದಿನಾಂಕದಂದು ವಿಚಾರಣೆ ನಡೆದಿದೆ, ಅಂದು ಏನೆಲ್ಲಾ ಆಗಿದೆ. ಕಾನೂನು ಅಂಶಗಳನ್ನು ಒಳಗೊಂಡ ವಾದದ ಸಾರಾಂಶ. ನ್ಯಾಯಾಲಯ ಪರಿಗಣಿಸಬೇಕಾದ ವಿಚಾರಗಳನ್ನು ಯಾರು ಸಲ್ಲಿಸಿಲ್ಲವೋ ಅವರು ಸಲ್ಲಿಸಬೇಕು. ಇದನ್ನು ಅರ್ಜಿದಾರರ ಜೊತೆ ಮುಂಚಿತವಾಗಿ ಹಂಚಿಕೊಳ್ಳಬೇಕು. ದಸರಾ ಬಳಿಕ, ಅಕ್ಟೋಬರ್ ಮೂರನೇ ವಾರದಲ್ಲಿ ವಿಚಾರಣೆ ನಡೆಸಲಾಗುವುದು” ಎಂದು ಪೀಠವು ಆದೇಶದಲ್ಲಿ ದಾಖಲಿಸಿತು.