Karnataka HC, Bengaluru Police Commissioner Kamala Pant and IPS officer M N Anucheth
Karnataka HC, Bengaluru Police Commissioner Kamala Pant and IPS officer M N Anucheth 
ಸುದ್ದಿಗಳು

[ಜಾರಕಿಹೊಳಿ ಪ್ರಕರಣ] ತನಿಖೆ ರದ್ಧತಿಗೆ ಹೈಕೋರ್ಟ್‌ ಕದತಟ್ಟಿದ ಐಪಿಎಸ್‌ ಅಧಿಕಾರಿಗಳಾದ ಕಮಲ್‌ ಪಂತ್‌, ಅನುಚೇತ್‌

Bar & Bench

ಸಿ ಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಹೋರಾಟಗಾರ ದಿನೇಶ್‌ ಕಲ್ಲಹಳ್ಳಿ ನೀಡಿದ್ದ ದೂರನ್ನು ಆಧರಿಸಿ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ವಿರುದ್ಧ ಪ್ರಕರಣ ದಾಖಲಿಸದ ಬೆಂಗಳೂರು ಪೊಲೀಸ್‌ ಆಯುಕ್ತ ಕಮಲ್‌ ಪಂತ್‌, ಕೇಂದ್ರ ವಲಯದ ಉಪ ಪೊಲೀಸ್‌ ಆಯುಕ್ತ (ಡಿಸಿಪಿ) ಎಂ ಎನ್‌ ಅನುಚೇತ್‌ ಮತ್ತು ಕಬ್ಬನ್‌ ಪಾರ್ಕ್‌ ಠಾಣೆಯ ಇನ್‌ಸ್ಪೆಕ್ಟರ್‌ ಡಿ ಮಾರುತಿ ಅವರ ವಿರುದ್ಧ 8ನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ (ಎಸಿಎಂಎಂ) ನ್ಯಾಯಾಲಯವು ಮಂಗಳವಾರ ತನಿಖೆಗೆ ಆದೇಶಿಸಿರುವುದನ್ನು ಕರ್ನಾಟಕ ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ.

ಪೊಲೀಸ್‌ ಆಯುಕ್ತ ಕಮಲ್‌ ಪಂತ್‌, ಡಿಸಿಪಿ ಅನುಚೇತ್‌ ಮತ್ತು ಇನ್‌ಸ್ಪೆಕ್ಟರ್‌ ಮಾರುತಿ ಅವರು ಸಲ್ಲಿಸಿರುವ ರಿಟ್‌ ಮನವಿಯ ವಿಚಾರಣೆಯು ನ್ಯಾಯಮೂರ್ತಿ ಶ್ರೀನಿವಾಸ್‌ ಹರೀಶ್‌ ಕುಮಾರ್‌ ಅವರ ನೇತೃತ್ವದ ಏಕಸದಸ್ಯ ಪೀಠದ ಮುಂದೆ ಇಂದು ವಿಚಾರಣೆಗೆ ನಿಗದಿಯಾಗಿದೆ.

ಸಿ ಡಿ ಪ್ರಕರಣವು ಮಾಧ್ಯಮದಲ್ಲಿ ಸದ್ದು ಮಾಡುತ್ತಲೇ ಮೊದಲಿಗೆ ದಿನೇಶ್‌ ಕಲ್ಲಹಳ್ಳಿ ನೀಡಿದ್ದ ದೂರನ್ನು ಆಧರಿಸಿ ಅಧಿಕಾರಿಗಳು ದೂರು ದಾಖಲಿಸಿರಲಿಲ್ಲ ಎಂದು ಜನಾಧಿಕಾರ ಸಂಘರ್ಷ ಸಮಿತಿಯ ಆದರ್ಶ್‌ ಐಯ್ಯರ್‌ ಎಂಬವರು ಕಮಲ್‌ ಪಂತ್‌, ಅನುಚೇತ್‌ ಮತ್ತು ಮಾರುತಿ ಅವರು ಖಾಸಗಿ ದೂರು ದಾಖಲಿಸಿದ್ದರು. ಈ ಕುರಿತು ವಿಚಾರಣೆ ನಡೆಸಿದ್ದ 8ನೇ ಎಸಿಎಂಎಂ ನ್ಯಾಯಾಲಯವು ಸಿಆರ್‌ಪಿಸಿ ಸೆಕ್ಷನ್‌ 156ರ ಅಡಿ ಪ್ರತಿವಾದಿಗಳಾದ ಪಂತ್‌, ಅನುಚೇತ್‌ ಮತ್ತು ಮಾರುತಿ ಅವರ ವಿರುದ್ಧ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಿ, ಮುಂದಿನ ವರ್ಷದ ಫೆಬ್ರವರಿ 1ರೊಳಗೆ ವರದಿ ನೀಡುವಂತೆ ಕಬ್ಬನ್‌ ಪಾರ್ಕ್‌ ಪೊಲೀಸರಿಗೆ ಮಂಗಳವಾರ ಆದೇಶಿಸಿತ್ತು.

ಇದಕ್ಕೂ ಮುನ್ನ, ಜಾರಕಿಹೊಳಿ ಕೋರಿಕೆಯನ್ನು ಆಧರಿಸಿ ಅಂದಿನ ಗೃಹ ಸಚಿವ ಹಾಗೂ ಹಾಲಿ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಅವರ ಸೂಚನೆಯಂತೆ ಕಮಲ್‌ ಪಂತ್‌ ಅವರು ವಿಶೇಷ ತನಿಖಾ ದಳ (ಎಸ್‌ಐಟಿ) ರಚಿಸಿದ್ದಾರೆ. ಇದರ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿರುವ ಮನವಿಗಳ ವಿಚಾರಣೆಯನ್ನು ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ನೇತೃತ್ವದ ವಿಭಾಗೀಯ ಪೀಠ ನಡೆಸುತ್ತಿದೆ. ಇಲ್ಲಿ ಜಾರಕಿಹೊಳಿ ಮತ್ತು ಸಂತ್ರಸ್ತೆ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಾಖಲಿಸಿರುವ ದೂರುಗಳ ಕುರಿತು ತನಿಖೆ ನಡೆಸಲು ರಚಿಸಲಾಗಿರುವ ಎಸ್‌ಐಟಿ ವರದಿ ಸಲ್ಲಿಸಲು ಅವಕಾಶ ಮಾಡಿಕೊಡಬೇಕು ಎಂದು ರಾಜ್ಯ ಸರ್ಕಾರ ನ್ಯಾಯಾಲಯವನ್ನು ಕೋರುತ್ತಲೇ ಇದೆ. ಆದರೆ, ಎಸ್‌ಐಟಿ ರಚನೆಯೇ ಕಾನೂನುಬಾಹಿರವಾಗಿದೆ. ಹೀಗಾಗಿ, ಎಸ್‌ಐಟಿ ವಜಾ ಮಾಡಿ ನ್ಯಾಯಾಲಯದ ನಿಗಾದಲ್ಲಿ ಎಸ್‌ಐಟಿ ರಚಿಸಿ ತನಿಖೆಗೆ ಆದೇಶಿಸಬೇಕು ಎಂದು ಸಂತ್ರಸ್ತ ಯುವತಿ ವಾದಿಸಿದ್ದಾರೆ.