Ramesh Jarkiholi and Karnataka HC 
ಸುದ್ದಿಗಳು

[ಜಾರಕಿಹೊಳಿ ಸಿ ಡಿ ಹಗರಣ] ಸಂತ್ರಸ್ತೆ ತಂದೆ ಸಲ್ಲಿಸಿದ್ದ ಹೇಬಿಯಸ್‌ ಕಾರ್ಪಸ್‌ ಮನವಿ ವಿಲೇವಾರಿ ಮಾಡಿದ ಹೈಕೋರ್ಟ್‌

ಗುರುತುಪತ್ತೆ ಇಲ್ಲದ ಸ್ಥಳದಲ್ಲಿ ತಮ್ಮ ಪುತ್ರಿಯನ್ನು ಕಾನೂನುಬಾಹಿರವಾಗಿ ಇರಿಸಲಾಗಿದೆ ಎಂಬ ಆತಂಕ ವ್ಯಕ್ತಪಡಿಸಿ ಸಂತ್ರಸ್ತೆಯ ತಂದೆ ಹೈಕೋರ್ಟ್‌ನಲ್ಲಿ ಹೇಬಿಯಸ್‌ ಕಾರ್ಪಸ್‌ ಮನವಿ ಸಲ್ಲಿಸಿದ್ದರು.

Bar & Bench

ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಲೈಂಗಿಕ ಸಿ ಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಯ ತಂದೆ ಸಲ್ಲಿಸಿದ್ದ ಹೇಬಿಯಸ್‌ ಕಾರ್ಪಸ್‌ ಮನವಿ ಕುರಿತು ಯಾವುದೇ ಆದೇಶ ಹೊರಡಿಸಲು ನಿರಾಕರಿಸಿರುವ ಕರ್ನಾಟಕ ಹೈಕೋರ್ಟ್‌, ಸಂತ್ರಸ್ತೆಯು ಪ್ರೌಢೆಯಾಗಿರುವುದರಿಂದ ಸ್ವಂತ ತೀರ್ಮಾನ ಮಾಡುವಷ್ಟು ಸಮರ್ಥವಾಗಿದ್ದಾರೆ ಎಂದಿದೆ.

ಗುರುತುಪತ್ತೆ ಇಲ್ಲದ ಸ್ಥಳದಲ್ಲಿ ತಮ್ಮ ಪುತ್ರಿಯನ್ನು ಕಾನೂನುಬಾಹಿರವಾಗಿ ಇರಿಸಲಾಗಿದೆ. ಇದರಲ್ಲಿ ಎರಡನೇ ಪ್ರತಿವಾದಿಯಾದ ವಿಶೇಷ ತನಿಖಾ ದಳದ (ಎಸ್‌ಐಟಿ) ಪಾತ್ರದ ಬಗ್ಗೆ ಶಂಕೆ ವ್ಯಕ್ತಪಡಿಸಲು ಕಾರಣಗಳಿವೆ ಎಂದು ಸಂತ್ರಸ್ತೆಯ ತಂದೆ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಸಂತ್ರಸ್ತೆಯ ಜೊತೆ ಚರ್ಚಿಸಿದ ಬಳಿಕ ನ್ಯಾಯಮೂರ್ತಿಗಳಾದ ಕೃಷ್ಣ ಎಸ್‌ ದೀಕ್ಷಿತ್‌ ಮತ್ತು ಪ್ರದೀಪ್‌ ಸಿಂಗ್‌ ಯೆರೂರು ಅವರಿದ್ದ ವಿಭಾಗೀಯ ಪೀಠವು ಅರ್ಜಿಯಲ್ಲಿ ಉಲ್ಲೇಖಿಸಿರುವಂತೆ ಸಂತ್ರಸ್ತೆಯನ್ನು ಬಲವಂತಾಗಿ ಒತ್ತೆ ಇಟ್ಟುಕೊಳ್ಳಲಾಗಿದೆ ಎಂಬ ವಿಚಾರದಲ್ಲಿ ಸತ್ಯವಿಲ್ಲ ಎಂದಿದೆ.

“ಸಂತ್ರಸ್ತೆಯನ್ನು ಬಲವಂತವಾಗಿ ಒತ್ತೆ ಇಟ್ಟುಕೊಳ್ಳಲಾಗಿದ ಎಂಬ ಅರ್ಜಿಯಲ್ಲಿರುವ ವಿಚಾರವು ಸತ್ಯಕ್ಕೆ ದೂರವಾಗಿದೆ. ಅರ್ಜಿದಾರರ ಪುತ್ರಿ ಸ್ವಯಂಪ್ರೇರಿತವಾಗಿ ಅಜ್ಞಾತವಾಗಿರಲು ಬಯಸಿದ್ದಾರೆ ಎಂಬ ಪ್ರತಿವಾದಿಗಳ ವಾದ ಸರಿಯಾಗಿದೆ” ಎಂದು ನ್ಯಾಯಾಲಯ ಹೇಳಿದೆ.

ಪ್ರಕರಣವು ಇತ್ಯರ್ಥವಾಗುವವರೆಗೆ ತನ್ನ ಪೋಷಕರೂ ಸೇರಿದಂತೆ ಯಾರೊಂದಿಗೂ ಮಾತನಾಡುವುದಿಲ್ಲ ಎಂದು ಸಂತ್ರಸ್ತೆ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. “ಸಂತ್ರಸ್ತೆಯು ಎಂಜಿನಿಯರಿಂಗ್‌ ಪದವೀಧರೆಯಾಗಿದ್ದು, ವಯಸ್ಸಿನಿಂದ ಆಕೆ ಪ್ರೌಢೆಯಾಗಿದ್ದಾರೆ. ಆಕೆ ಪ್ರಪಂಚದ ಜ್ಞಾನ ಹೊಂದಿದ್ದು, ಎಲ್ಲಿ ಮತ್ತು ಯಾರ ಜೊತೆ ನೆಲೆಸಬೇಕು ಮತ್ತು ಮಾತಾಡಬೇಕು ಎಂಬುದನ್ನು ನಿರ್ಧರಿಸಲು ಸಮರ್ಥರಾಗಿದ್ದಾರೆ” ಎಂದು ಪೀಠವು ಆದೇಶದಲ್ಲಿ ತಿಳಿಸಿದೆ.

ಎಸ್‌ಐಟಿ ಪ್ರತಿನಿಧಿಸಿದ್ದ ವಕೀಲರಾದ ಕಿರಣ್‌ ಜವಳಿ ಮತ್ತು ಪಿ ಪ್ರಸನ್ನ ಕುಮಾರ್‌ ಅವರು ತಮ್ಮ ಕಕ್ಷಿದಾರರ ವಿರುದ್ಧ ಆಧಾರರಹಿತವಾಗಿ ಆರೋಪ ಮಾಡಲಾಗಿದ್ದು, ಅದರ ಸಮರ್ಥನೆಗೆ ಯಾವುದೇ ದಾಖಲೆಗಳಿಲ್ಲ ಎಂದಿದೆ. ಮೇ 29ರಂದು ಎಸ್‌ಐಟಿ ಅಧಿಕಾರಿಗಳು ಸಂತ್ರಸ್ತೆ ನೆಲೆಸಿರುವ ಸ್ಥಳಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದು, ಆಕೆ ಸ್ವಇಚ್ಛೆಯಿಂದ ಅಲ್ಲಿ ನೆಲೆಸಿದ್ದಾರೆ. ಯಾರೊಂದಿಗೂ ಮಾತನಾಡುವ ಇರಾದೆ ಹೊಂದಿಲ್ಲ ಎಂಬ ವಿಚಾರ ಮೇಲ್ನೋಟಕ್ಕೆ ತಿಳಿದು ಬಂದಿದೆ ಎಂದರು.

ತಮ್ಮ ಪುತ್ರಿಯ ರಕ್ಷಣೆಯ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದ ಅರ್ಜಿದಾರರು ಎಸ್‌ಐಟಿ ವಾದವನ್ನು ಬಲವಾಗಿ ಅಲ್ಲಗಳೆದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ಸಂತ್ರಸ್ತೆ ನೆಲೆಸಿರುವ ಸ್ಥಳಕ್ಕೆ ತಕ್ಷಣವೇ ತೆರಳಿ ಆಕೆಯಿಂದ ವಾಟ್ಸಾಪ್‌ ಕರೆ ಮಾಡಿಸುವಂತೆ ರಿಜಿಸ್ಟ್ರಾರ್‌ ಜನರಲ್‌ಗೆ ಸೂಚಿಸಿತು. ನ್ಯಾಯಾಲಯದ ಸೂಚನೆಯಂತೆ ಸಂತ್ರಸ್ತೆಯ ಸ್ಥಳಕ್ಕೆ ತೆರಳಿದ್ದ ರಿಜಿಸ್ಟ್ರಾರ್‌ ಜನರಲ್‌ ಟಿ ಜಿ ಶಿವಶಂಕರೇ ಗೌಡ ಮತ್ತು ಜಂಟಿ ರಿಜಿಸ್ಟ್ರಾರ್‌ ಕೆ ಎಸ್‌ ವರಲಕ್ಷ್ಮಿ ಅವರು ಸಂತ್ರಸ್ತೆ ಜೊತೆ ಮಾತನಾಡಿ, ವಿಡಿಯೊ ಕಾನ್ಫರೆನ್ಸ್‌ ಮೂಲಕ ಪೀಠಕ್ಕೆ ಆಕೆಯನ್ನು ಮುಖಾಮುಖಿಯಾಗಿಸಿದ್ದರು. ಅಂತಿಮವಾಗಿ ಪೀಠವು ಹೇಬಿಯಸ್‌ ಕಾರ್ಪಸ್‌ ಮನವಿಯನ್ನು ವಿಲೇವಾರಿ ಮಾಡಿ ಆದೇಶ ಹೊರಡಿಸಿತು.