ಜಾರಕಿಹೊಳಿ ಸಿ ಡಿ ಪ್ರಕರಣ: ಎಸ್‌ಐಟಿ ಮುಖ್ಯಸ್ಥರ ಸಹಿ ಇರದ ಸ್ಥಿತಿಗತಿ ವರದಿಯನ್ನು ಪುರಸ್ಕರಿಸದ ಹೈಕೋರ್ಟ್

ಎಸ್‌ಐಟಿ ಮುಖ್ಯಸ್ಥರು ವೈದ್ಯಕೀಯ ರಜೆಯಲ್ಲಿರುವುದಾಗಿ ನ್ಯಾಯಾಲಯಕ್ಕೆ ಮಾಹಿತಿ ನೀಡಿದ ಎಜಿ ಪ್ರಭುಲಿಂಗ ನಾವದಗಿ.
RamesH Jarakiholi
RamesH Jarakiholi

ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಅವರ ಲೈಂಗಿಕ ಸಿ ಡಿ ಪ್ರಕರಣವನ್ನು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ವಹಿಸಬೇಕು ಎಂದು ಕೋರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ (ಪಿಐಎಲ್‌) ಮನವಿಯ ವಿಚಾರಣೆಯನ್ನು ಸೋಮವಾರ ನಡೆಸಿದ ಕರ್ನಾಟಕ ಹೈಕೋರ್ಟ್‌ ಪ್ರಕರಣವನ್ನು ಜೂನ್‌ ೧೮ಕ್ಕೆ ಮುಂದೂಡಿದೆ.

ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಮತ್ತು ನ್ಯಾಯಮೂರ್ತಿ ಸೂರಜ್‌ ಗೋಂವಿದರಾಜ್‌ ಅವರಿದ್ದ ವಿಭಾಗೀಯ ಪೀಠವು ನ್ಯಾಯಾಲಯಕ್ಕೆ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದ ಸ್ಥಿತಿಗತಿ ವರದಿಯಲ್ಲಿ ವಿಶೇಷ ತನಿಖಾ ದಳ (ಎಸ್‌ಐಟಿ) ಮುಖ್ಯಸ್ಥ ಸೌಮೇಂಧು ಮುಖರ್ಜಿ ಅವರ ಸಹಿ ಇಲ್ಲ. ಹೀಗಾಗಿ, ಎಸ್‌ಐಟಿ ಮುಖ್ಯಸ್ಥರು ಅಥವಾ ಉಸ್ತುವಾರಿ ಅಧಿಕಾರಿಯ ಸಹಿ ಒಳಗೊಂಡ ವರದಿಯನ್ನು ಜೂನ್‌ 17ರಂದು ರಿಜಿಸ್ಟ್ರಾರ್‌ ಜನರಲ್‌ ಅವರಿಗೆ ಸಲ್ಲಿಸುವಂತೆ ಆದೇಶಿಸಿತು.

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ ಅವರು “ಎಸ್‌ಐಟಿ ಮುಖ್ಯಸ್ಥರು ವೈದ್ಯಕೀಯ ರಜೆಯಲ್ಲಿದ್ದು, ಅವರ ಬದಲಿಗೆ ಅಪರಾಧ ವಿಭಾಗದ ಜಂಟಿ ಆಯುಕ್ತರು ವರದಿಗೆ ಸಹಿ ಮಾಡಲಿದ್ದಾರೆ” ಎಂದರು. ಇದಕ್ಕೆ ಒಪ್ಪದ ಪೀಠವು ಅಂಥ ಸನ್ನಿವೇಶದಲ್ಲಿ ಉಸ್ತುವಾರಿ ನೇಮಕಕ್ಕೆ ಸಂಬಂಧಪಟ್ಟಂತೆ ಅಗತ್ಯ ಆದೇಶ ಹೊರಡಿಸಬೇಕು. ಬಳಿಕ ಉಸ್ತುವಾರಿ ಅಧಿಕಾರಿ ಸಹಿ ಮಾಡಿದ ಸ್ಥಿತಿಗತಿ ವರದಿ ಸಲ್ಲಿಸಬಹುದು ಎಂದಿತು.

ರಮೇಶ್‌ ಜಾರಕಿಹೊಳಿ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಸಿ ವಿ ನಾಗೇಶ್‌ ಅವರು ಪಿಐಎಲ್‌ಗೆ ವಿರೋಧ ವ್ಯಕ್ತಪಡಿಸಿದ್ದು, ಅರ್ಜಿ ನಿರ್ವಹಣೆಗೆ ಅರ್ಹವಲ್ಲ ಎಂದು ವಾದಿಸಿದರು. ಆಗ ಪೀಠವು ಪಿಐಎಲ್‌ಗೆ ಸಂಬಂಧಿಸಿದಂತೆ ನಿಮಗೆ ಯಾವುದೇ ತೆರನಾದ ತಕಾರುಗಳಿದ್ದರೆ ಜೂನ್‌ 17ರಂದು ಲಿಖಿತ ಆಕ್ಷೇಪಣೆ ಸಲ್ಲಿಸಬಹುದು ಎಂದಿತು.

ಇದಕ್ಕೂ ಮುನ್ನ ಪಿಐಎಲ್‌ ಸಲ್ಲಿಸಿದ್ದ ವಕೀಲರಾದ ಜಿ ಆರ್‌ ಮೋಹನ್‌ ಅವರು “ಎಸ್‌ಐಟಿ ಮುಖ್ಯಸ್ಥರಾದ ಸೌಮೇಂಧು ಮುಖರ್ಜಿ ಅವರು ಸ್ಥಿತಿಗತಿ ವರದಿಗೆ ಸಹಿ ಮಾಡಿದ್ದಾರೆಯೇ ಎಂಬುದನ್ನು ಪರಿಶೀಲಿಸುವಂತೆ ಪೀಠಕ್ಕೆ ಮನವಿ ಮಾಡಿದರು. ಇದಕ್ಕೆ ಸಮ್ಮತಿಸಿ ವರದಿ ಪರಿಶೀಲಿಸಿದ ಪೀಠಕ್ಕೆ ಮುಖರ್ಜಿ ಅವರು ಸಹಿ ಮಾಡಿಲ್ಲ ಎಂಬುದು ಗಮನಕ್ಕೆ ಬಂದಿತ್ತು. ಹೀಗಾಗಿ ಅವರ ಅಥವಾ ಉಸ್ತುವಾರಿ ಅಧಿಕಾರಿ ಸಹಿಮಾಡಿದ ವರದಿ ಸಲ್ಲಿಸಬೇಕು” ಎಂದು ನಿರ್ದೇಶಿಸಿತು.

Also Read
ಜಾರಕಿಹೊಳಿ ಬ್ಲ್ಯಾಕ್‌ ಮೇಲ್‌ ಪ್ರಕರಣ: ನರೇಶ್‌, ಶ್ರವಣ್‌ ನಿರೀಕ್ಷಣಾ ಜಾಮೀನು ಅರ್ಜಿ ಬುಧವಾರಕ್ಕೆ ಮುಂದೂಡಿಕೆ

ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಯುವತಿಯ ಪೋಷಕರು ಆರ್‌ ಟಿ ನಗರದ ಪೊಲೀಸ್‌ ಠಾಣೆಯಲ್ಲಿ ನೀಡಿರುವ ಅಪಹರಣ ದೂರಿಗೆ ಸಂಬಂಧಿಸಿಂತೆ ಬಿ ವರದಿ ಸಲ್ಲಿಸಲಾಗಿದೆ ಎನ್ನುವ ಮಾಹಿತಿ ಇದೆ. ಉಳಿದಂತೆ ಕಬ್ಬನ್‌ ಪಾರ್ಕ್‌ ಠಾಣೆಯಲ್ಲಿ ಸಂತ್ರಸ್ತ ಯುವತಿ ದಾಖಲಿಸಿರುವ ಅತ್ಯಾಚಾರ ಪ್ರಕರಣ ಮತ್ತು ಸದಾಶಿವನಗರ ಪೊಲೀಸ್‌ ಠಾಣೆಯಲ್ಲಿ ಆರೋಪಿ ರಮೇಶ್‌ ಜಾರಕಿಹೊಳಿ ಬೆಂಬಲಿಗ ಸಲ್ಲಿಸಿರುವ ಬ್ಲ್ಯಾಕ್‌ಮೇಲ್‌ ದೂರಿಗೆ ಸಂಬಂಧಿಸಿದ ಪ್ರಕರಣದ ತನಿಖೆ ನಡೆಯುತ್ತಿದೆ.

ಈ ಮಧ್ಯೆ, ಬ್ಲ್ಯಾಕ್‌ಮೇಲ್‌ ಪ್ರಕರಣದಲ್ಲಿ ಪೊಲೀಸರಿಂದ ತಲೆಮರೆಸಿಕೊಂಡಿರುವ ಆರೋಪ ಎದುರಿಸುತ್ತಿರುವ ನರೇಶ್‌ ಗೌಡ ಮತ್ತು ವಿಡಿಯೋ ಎಡಿಟರ್‌ ಆರ್‌ ಶ್ರವಣ್‌ ಕುಮಾರ್‌ ಅವರು ಬೆಂಗಳೂರಿನ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಮನವಿ ಸಲ್ಲಿಸಿದ್ದು, ಅದರ ವಿಚಾರಣೆಯು ಬುಧವಾರಕ್ಕೆ ಮುಂದೂಡಲ್ಪಟ್ಟಿದೆ. ಆಕ್ಷೇಪಣೆ ಸಲ್ಲಿಸುವಂತೆ ಪ್ರಾಸಿಕ್ಯೂಷನ್‌ಗೆ ನ್ಯಾಯಮೂರ್ತಿ ಲಕ್ಷ್ಮಿನಾರಾಯಣ್‌ ಭಟ್‌ ಅವರು ತರಾಟೆಗೆ ತೆಗೆದುಕೊಂಡ ಬೆಳವಣಿಗೆಯೂ ಸೋಮವಾರ ವಿಚಾರಣೆಯ ಸಂದರ್ಭದಲ್ಲಿ ನಡೆದಿದೆ.

Related Stories

No stories found.
Kannada Bar & Bench
kannada.barandbench.com