Rani Kapur, Priya Kapur, Sunjay Kapur and Karisma Kapur instagram
ಸುದ್ದಿಗಳು

ಫೋರ್ಜರಿ ಆರೋಪ: ಇದೀಗ ದಿ.ಸಂಜಯ್‌ ಕಪೂರ್‌ ವಿರುದ್ಧವೂ ಆರೋಪ; ದೆಹಲಿ ಹೈಕೋರ್ಟ್‌ಗೆ ರಾಣಿ ಕಪೂರ್‌ ಅರ್ಜಿ

ಸಂಜಯ್ ಕಪೂರ್ ಅವರ ಮರಣದ ನಂತರ ಪ್ರಿಯಾ ಕಪೂರ್ ಅವರು ತನಗೆ ತಿಳಿಸದೆಯೇ ಸೋನಾ ಗ್ರೂಪ್‌ನ ಪ್ರಮುಖ ಕಂಪನಿಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ತರಾತುರಿಯಲ್ಲಿ ಮುಂದಾಗಿದ್ದಾರೆ ಎಂದು ಆರೋಪಿಸಿರುವ ರಾಣಿ ಕಪೂರ್‌.

Bar & Bench

ಉದ್ಯಮಿ ದಿವಂಗತ ಸಂಜಯ್ ಕಪೂರ್ ಅವರ ₹30,000 ಕೋಟಿ ಮೌಲ್ಯದ ಆಸ್ತಿ ವ್ಯಾಜ್ಯ ಇದೀಗ ಮತ್ತೊಂದು ತಿರುವು ಪಡೆದುಕೊಂಡಿದ್ದು ಕಪೂರ್‌ ಕುಟುಂಬಕ್ಕೆ ಸೇರಿದ ಆರ್‌ಕೆ ಫ್ಯಾಮಿಲಿ ಟ್ರಸ್ಟ್‌ ರದ್ದುಗೊಳಿಸುವಂತೆ ಕೋರಿ ಸಂಜಯ್‌ ಅವರ ತಾಯಿ ದೆಹಲಿ ಹೈಕೋರ್ಟ್‌ನಲ್ಲಿ ಮೊಕದ್ದಮೆ ಹೂಡಿದ್ದಾರೆ.

ಈ ಟ್ರಸ್ಟ್, ಆಟೋಮೋಟಿವ್ ಬಿಡಿಭಾಗ ತಯಾರಕ ಸೋನಾ ಕಾಮ್‌ಸ್ಟಾರ್‌ನಲ್ಲಿ ಪಾಲು ಹೊಂದಿದೆ. ಟ್ರಸ್ಟ್‌ನ ನಿಖರ ಮೌಲ್ಯ ತಿಳಿದಿಲ್ಲವಾದರೂ, ಅದು ಹಲವು ಸಾವಿರ ಕೋಟಿ ರೂಪಾಯಿಗಳಷ್ಟಿದೆ ಎಂದು ಅಂದಾಜಿಸಲಾಗಿದೆ.

ಸಂಜಯ್ ಕಪೂರ್ ಅವರ ಆಸ್ತಿ ಸ್ವಾಧೀನಕ್ಕೆ ಸಂಬಂಧಿಸಿದ ಮತ್ತೊಂದು ವ್ಯಾಜ್ಯ ಈಗಾಗಲೇ ದೆಹಲಿ ಹೈಕೋರ್ಟ್‌ನಲ್ಲಿ ಬಾಕಿ ಇದೆ.

ಟ್ರಸ್ಟ್‌ಅನ್ನು ಮೋಸದಿಂದ ರಚಿಸಲಾಗಿದ್ದು, ಸೋನಾ ಗ್ರೂಪ್ ಕಂಪನಿಗಳ ಮೇಲಿನ ನಿಯಂತ್ರಣ ಸೇರಿ ತಮ್ಮ ಸಂಪೂರ್ಣ ಆಸ್ತಿಯನ್ನು ಕಸಿದುಕೊಳ್ಳಲು ಅದನ್ನು ಬಳಸಲಾಗಿದೆ. ಸಂಜಯ್ ಕಪೂರ್ ಅವರ ಪತ್ನಿ ಪ್ರಿಯಾ ಕಪೂರ್‌ ಸಂಚಿನ ಮುಖ್ಯ ಸೂತ್ರಧಾರಿ ಎಂದು 80 ವರ್ಷದ ರಾಣಿ ಕಪೂರ್ ಅವರು ದೂರಿದ್ದಾರೆ.

ಸಂಜಯ್ ಕಪೂರ್ ಅವರ ಮರಣದ ನಂತರ ಪ್ರಿಯಾ ಕಪೂರ್ ಅವರು ತನಗೆ ತಿಳಿಸದೆಯೇ ಸೋನಾ ಗ್ರೂಪ್‌ನ ಪ್ರಮುಖ ಕಂಪನಿಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ತರಾತುರಿಯಲ್ಲಿ ಮುಂದಾಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ತಾನು 2017ರಲ್ಲಿ ಪಾರ್ಶ್ವವಾಯುವಿಗೆ ತುತ್ತಾದ ಬಳಿಕ ತನ್ನ ದೈಹಿಕ ಅವಲಂಬನೆ ಮತ್ತು ವಿಶ್ವಾಸವನ್ನೇ ದುರುಪಯೋಗಪಡಿಸಿಕೊಂಡು ಈಗ ನಿಧನರಾಗಿರುವ ಪುತ್ರ ಸಂಜಯ್‌ ಕಪೂರ್‌ ಮತ್ತು ಅವರ ಮೂರನೇ ಪತ್ನಿ ಪ್ರಿಯಾ ಕಪೂರ್‌ ಕುಟಿಲ ಯೋಜನೆ ರೂಪಿಸಿದ್ದರು. ತಮ್ಮ ಮಾಹಿತಿಯುಕ್ತ ಸಮ್ಮತಿ ಇಲ್ಲದೆ ತಮ್ಮ  ಎಲ್ಲಾ ಆಸ್ತಿಗಳನ್ನು ಆರ್‌ಕೆ ಫ್ಯಾಮಿಲಿ ಟ್ರಸ್ಟ್‌ಗೆ ವರ್ಗಾಯಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಆಡಳಿತಾತ್ಮಕ ಅನುಕೂಲತೆಯ ಕಾರಣ ನೀಡಿ ಖಾಲಿ ಕಾಗದಗಳು ಸೇರಿದಂತೆ ಅನೇಕ ದಾಖಲೆಗಳಿಗೆ ಮತ್ತೆ ಮತ್ತೆ ಸಹಿ ಹಾಕುವಂತೆ ತಮ್ಮ ಮೇಲೆ ಒತ್ತಡ ಹೇರಲಾಗುತ್ತಿತ್ತು ಎಂದು ಅವರು ಹೇಳಿದ್ದಾರೆ.

ಪ್ರಕರಣದಲ್ಲಿ ರಾಣಿ ಅವರು ಒಟ್ಟು 23 ಸಂಸ್ಥೆಗಳನ್ನು ಪ್ರತಿವಾದಿಗಳನ್ನಾಗಿ ಮಾಡಿದ್ದಾರೆ ಪ್ರಿಯಾ ಕಪೂರ್ ಅಲ್ಲದೆ ತನ್ನ ಏಳು ಮೊಮ್ಮಕ್ಕಳನ್ನೂ ಪ್ರತಿವಾದಿಗಳನ್ನಾಗಿಸಿದ್ದಾರೆ. ಇದರಲ್ಲಿ ಬಾಲಿವುಡ್‌ ನಟಿ ಕರಿಷ್ಮಾ ಕಪೂರ್‌ ಅವರ ಇಬ್ಬರು ಮಕ್ಕಳೂ ಸೇರಿದ್ದಾರೆ.

ವಿಧಿ ಪಾರ್ಟ್ನರ್ಸ್ ಎಂಬ ಕಾನೂನು ಸಂಸ್ಥೆಯ ಮೂಲಕ ಈ ಮೊಕದ್ದಮೆ ಹೂಡಲಾಗಿದೆ .