Prajwal Revanna and HD Revanna 
ಸುದ್ದಿಗಳು

ಅತ್ಯಾಚಾರ ಪ್ರಕರಣ: ರೇವಣ್ಣ ವಿರುದ್ಧ ಒಂದು, ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧ ಮೂರು ಆರೋಪ ಪಟ್ಟಿ ಸಲ್ಲಿಕೆ

ಎಸ್‌ಐಟಿ ಬರೋಬ್ಬರಿ 2,144 ಪುಟಗಳ ಆರೋಪ ಪಟ್ಟಿಯನ್ನು ಬೆಂಗಳೂರಿನ ಜನಪ್ರತಿನಿಧಿಗಳ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯಕ್ಕೆ ಶುಕ್ರವಾರ ಸಲ್ಲಿಸಿದೆ. ಆರೋಪ ಪಟ್ಟಿಯಲ್ಲಿ 150 ಸಾಕ್ಷಿಗಳನ್ನು ಉಲ್ಲೇಖಿಸಲಾಗಿದೆ.

Siddesh M S

ಹಾಸನ ಜಿಲ್ಲೆಯ ಹೊಳೆನರಸೀಪುರ ಠಾಣೆಯಲ್ಲಿ ಜೆಡಿಎಸ್‌ ಶಾಸಕ ಎಚ್‌ ಡಿ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಮತ್ತು ಅವರ ಪುತ್ರ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ದಳವು (ಎಸ್‌ಐಟಿ) ಬರೋಬ್ಬರಿ 2,144 ಪುಟಗಳ ಆರೋಪ ಪಟ್ಟಿಯನ್ನು ಬೆಂಗಳೂರಿನ ಜನಪ್ರತಿನಿಧಿಗಳ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯಕ್ಕೆ ಶುಕ್ರವಾರ ಸಲ್ಲಿಸಿದೆ. ಆರೋಪ ಪಟ್ಟಿಯಲ್ಲಿ 150 ಸಾಕ್ಷಿಗಳನ್ನು ಉಲ್ಲೇಖಿಸಲಾಗಿದೆ.

ಎಸ್‌ಐಟಿಯ ತನಿಖಾಧಿಕಾರಿ ಬಿ ಸುಮಾರಾಣಿ ಅವರು ಜನಪ್ರತಿನಿಧಿಗಳ ವಿಶೇಷ ಮ್ಯಾಜಿಸ್ಟ್ರೇಟ್‌ ಕೆ ಎನ್‌ ಶಿವಕುಮಾರ್‌ ಅವರಿಗೆ ಆರೋಪ ಪಟ್ಟಿ ಸಲ್ಲಿಕೆ ಮಾಡಿದ್ದಾರೆ. ಪ್ರಜ್ವಲ್‌ ವಿರುದ್ಧ ಸಂತ್ರಸ್ತೆ, ಆಕೆಯ ಪುತ್ರಿ ಹಾಗೂ ಮೂವರು ಸಾಕ್ಷಿಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪಕ್ಕೆ ಪ್ರತ್ಯೇಕ ಆರೋಪ ಪಟ್ಟಿಗಳನ್ನು ಸಲ್ಲಿಕೆ ಮಾಡಿರುವುದು ಮಹತ್ವದ ಬೆಳವಣಿಗೆಯಾಗಿದೆ.

ಮನೆಕೆಲಸದಾಕೆ ನೀಡಿರುವ ದೂರಿನ ಅನ್ವಯ ಆಕೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ರೇವಣ್ಣ ವಿರುದ್ಧ 354 ಮತ್ತು 354 (ಎ) ಅಡಿಯ ಅಪರಾಧಗಳ ಕುರಿತು ಆರೋಪ ಪಟ್ಟಿ ಸಲ್ಲಿಕೆ ಮಾಡಲಾಗಿದೆ.

ಇನ್ನು ಮನೆಕೆಲಸದಾಕೆಯ ಮೇಲೆ ಅತ್ಯಾಚಾರ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ಪ್ರಜ್ವಲ್‌ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 376, 376(2)(ಕೆ), 354, 354(ಎ), 354(ಬಿ), 354 (ಡಿ), 506, 509 ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್‌ 66(ಈ) ಅಡಿ ಅಪರಾಧಗಳಿಗೆ ಆರೋಪ ಪಟ್ಟಿ ಸಲ್ಲಿಕೆ ಮಾಡಲಾಗಿದೆ.

ಅಲ್ಲದೆ ದೂರುದಾರೆಯಾಗಿರುವ ಮನೆಕೆಲಸದಾಕೆ/ಸಂತ್ರಸ್ತೆಯ ಪುತ್ರಿಯು ಒಂದು ದಿನ ತನ್ನ ತಾಯಿಯ ತವರು ಮನೆಗೆ ಬಂದಿದ್ದರು. ಈ ಸಂದರ್ಭದಲ್ಲಿ ಸಂತ್ರಸ್ತೆಯ ಮೊಬೈಲ್‌ಗೆ ಫೋನ್‌ ಮಾಡಿದ್ದು, ಅದನ್ನು ಸಂತ್ರಸ್ತೆಯ ಪುತ್ರಿ ಸ್ವೀಕರಿಸಿದ್ದರು. ಈ ಸಂದರ್ಭದಲ್ಲಿ ಪ್ರಜ್ವಲ್‌ ಆಕೆಗೆ ಬೆದರಿಕೆಯೊಡ್ಡಿ ಆಕೆಯ ನಗ್ನ ವಿಡಿಯೋವನ್ನು ರೆಕಾರ್ಡ್‌ ಮಾಡಿಕೊಂಡಿದ್ದರು. ಆನಂತರ ಅವುಗಳನ್ನು ಕಿಡಿಗೇಡಿಗಳು ವೈರಲ್‌ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಆಕೆಯ ದೂರನ್ನು ಆಧರಿಸಿ ಪ್ರಜ್ವಲ್‌ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 354(ಎ), 354(ಬಿ), 354(ಡಿ), 506, 509 ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್‌ 66(ಇ) ಅಡಿ ಅಪರಾಧಕ್ಕಾಗಿ ಆರೋಪ ಪಟ್ಟಿ ಸಲ್ಲಿಕೆ ಮಾಡಲಾಗಿದೆ.

ಇನ್ನು, ಇದೇ ಪ್ರಕರಣದಲ್ಲಿನ 4, 52 ಮತ್ತು 59ನೇ ಸಾಕ್ಷಿಗಳಿಗೆ ಬೆದರಿಕೆ ಹಾಕಿ, ತನ್ನ ಮೊಬೈಲ್‌ನಲ್ಲಿ ಅಕ್ರಮ ಕೃತ್ಯವನ್ನು ಸೆರೆ ಹಿಡಿದಿದ್ದರು. ಈ ಕೃತ್ಯವು ಹಾಸನ ಕ್ಷೇತ್ರದಾದ್ಯಂತ ಹರಡುತ್ತಿದ್ದಂತೆ ಪ್ರಜ್ವಲ್‌ ವಿದೇಶಕ್ಕೆ ಪಲಾಯಾನಗೈದಿದ್ದರು. ಮೊಬೈಲ್‌ ನಾಶಪಡಿಸಿದ್ದಾರೆ. ಹಿಂದೆಯೂ 2ನೇ ಆರೋಪಿಯು ತನ್ನ ಫೋನ್‌ಗಳಲ್ಲಿನ ವಿದ್ಯುನ್ಮಾನ ಸಾಕ್ಷಿಯನ್ನು ನಾಶಪಡಿಸಿರುವುದು ದೃಢಪಟ್ಟಿದೆ ಎಂದು ಎಸ್‌ಐಟಿ ಹೇಳಿದ್ದು, ಇದಕ್ಕಾಗಿ ಐಪಿಸಿ ಸೆಕ್ಷನ್‌ಗಳಾದ 201, 376, 376(2)(ಕೆ), 354, 354(ಎ), 354(ಬಿ), 354(ಡಿ), 506, 509 ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್‌ 66(ಈ)ಅಡಿ ಅಪರಾಧಕಕ್ಕಾಗಿ ಆರೋಪ ಪಟ್ಟಿ ಸಲ್ಲಿಸಲಾಗಿದೆ.

ಇವಲ್ಲದೆ ಇನ್ನೂ, ಮೂರು ಪ್ರಕರಣಗಳಲ್ಲಿ ಪ್ರಜ್ವಲ್‌ ವಿರುದ್ಧ ಆರೋಪ ಪಟ್ಟಿ ಸಲ್ಲಿಕೆ ಮಾಡಲು ಬಾಕಿ ಇದೆ. ಸಂತ್ರಸ್ತೆಯೊಬ್ಬರನ್ನು ಅಪಹರಣ ಮಾಡಲು ಸಹಕರಿಸಿದ ಆರೋಪದ ಮೇಲೆ ರೇವಣ್ಣ ವಿರುದ್ಧ ಮೈಸೂರಿನ ಕೆ ಆರ್‌ ನಗರ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿಯೂ ಎಸ್‌ಐಟಿಯು ವಿಶೇಷ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದೆ.