Prajwal Revanna & Karnataka HC 
ಸುದ್ದಿಗಳು

[ಅತ್ಯಾಚಾರ ಪ್ರಕರಣ] ಸಂತ್ರಸ್ತರಿಗೆ ಬೆದರಿಕೆ, ವಿಚಾರಣೆ ವಿಳಂಬಕ್ಕೆ ಪ್ರಜ್ವಲ್‌ ಕುಟುಂಬ ಕಾರಣ: ಎಸ್‌ಐಟಿ ವಾದ

ವಿಚಾರಣಾಧೀನ ನ್ಯಾಯಾಲಯದಲ್ಲಿ ವಿಚಾರಣೆಯನ್ನು ವಿಳಂಬಗೊಳಿಸಲು ಎಲ್ಲಾ ರೀತಿಯ ಕುಟಿಲ ಯತ್ನಗಳನ್ನು ಮಾಡುವುದಲ್ಲದೇ, ನ್ಯಾಯಾಧೀಶರನ್ನು ವಿಚಾರಣೆಯಿಂದ ಹಿಂದೆ ಸರಿಯುವಂತೆ ಮಾಡುವ ಪ್ರಯತ್ನಗಳನ್ನೂ ರೇವಣ್ಣ ಕುಟುಂಬ ಮಾಡಿದ್ದಾರೆ ಎಂದು ಎಸ್‌ಪಿಪಿ ವಾದ.

Bar & Bench

ಮನೆಕೆಲಸದಾಕೆಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಸಂತ್ರಸ್ತೆಗೆ ಬೆದರಿಕೆ, ವಿಚಾರಣಾಧೀನ ನ್ಯಾಯಾಲಯದಲ್ಲಿ ವಿಚಾರಣೆ ವಿಳಂಬಗೊಳಿಸಿರುವುದನ್ನು ಗಂಭೀರವಾಗಿ ಪರಿಗಣಿಸುವ ಮೂಲಕ ಆರೋಪಿಯಾಗಿರುವ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣಗೆ ಜಾಮೀನು ನಿರಾಕರಿಸಬೇಕು ಎಂದು ರಾಜ್ಯ ಸರ್ಕಾರವು ಬುಧವಾರ ಪ್ರಬಲವಾಗಿ ವಾದಿಸಿತು.

ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ಪ್ರಜ್ವಲ್‌ ಎರಡನೇ ಬಾರಿಗೆ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣ ಕುಮಾರ್‌ ಅವರ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.

ವಿಶೇಷ ತನಿಖಾ ದಳ ಪ್ರತಿನಿಧಿಸಿರುವ ವಿಶೇಷ ಸರ್ಕಾರಿ ಅಭಿಯೋಜಕ ಪ್ರೊ. ರವಿವರ್ಮ ಕುಮಾರ್‌ ಅವರು “ವಿಚಾರಣಾಧೀನ ನ್ಯಾಯಾಲಯದಲ್ಲಿ ವಿಚಾರಣೆಯನ್ನು ವಿಳಂಬಗೊಳಿಸಲು ಎಲ್ಲಾ ರೀತಿಯ ಕುಟಿಲ ಯತ್ನಗಳನ್ನು ಮಾಡುವುದಲ್ಲದೇ, ವಿಚಾರಣಾಧೀನ ನ್ಯಾಯಾಲಯದ ನ್ಯಾಯಾಧೀಶರನ್ನು ವಿಚಾರಣೆಯಿಂದ ಹಿಂದೆ ಸರಿಯುವಂತೆ ಮಾಡುವ ಪ್ರಯತ್ನಗಳನ್ನೂ ರೇವಣ್ಣ ಕುಟುಂಬ ಮತ್ತು ಪ್ರಜ್ವಲ್‌ ವಕೀಲರು ಮಾಡಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸುವ ಮೂಲಕ ನ್ಯಾಯಾಲಯವು ವಿಚಾರಣಾ ನ್ಯಾಯಾಧೀಶರನ್ನು ರಕ್ಷಿಸಬೇಕು” ಎಂದು ಮನವಿ ಮಾಡಿದರು.

ಮುಂದುವರಿದು, “ಹಾಲಿ ಪ್ರಕರಣದಲ್ಲಿ ಇಬ್ಬರು (ತಾಯಿ-ಮಗಳು) ಸಂತ್ರಸ್ತರಿದ್ದು, ಅವರನ್ನು ಎಲ್ಲಾ ರೀತಿಯಲು ಬೆದರಿಸುವ ಕೆಲಸ ಮಾಡಲಾಗಿದ್ದು, ಹಲ್ಲೆಯನ್ನೂ ಮಾಡಲಾಗಿದೆ. ಪ್ರಕರಣದ ಪ್ರಧಾನ ಸಂತ್ರಸ್ತೆಯನ್ನು ಅಪಹರಿಸಿರುವ ಪ್ರಕರಣದಲ್ಲಿ ವಿಚಾರಣೆ ಬಹುತೇಕ ಪೂರ್ಣಗೊಂಡಿದೆ. ಈ ಪ್ರಕರಣದಲ್ಲಿ ಪ್ರಜ್ವಲ್‌ ಕುಟುಂಬ ಭಾಗಿಯಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆ ದೇಶ ತೊರೆಯುವ ಮೂಲಕ ವಿಚಾರಣೆ ವಿಳಂಬಕ್ಕೆ ಪ್ರಜ್ವಲ್‌ ಕಾರಣರಾಗಿದ್ದರು. ಅವರ ವಿರುದ್ಧ ಲುಕ್‌ಔಟ್‌ ಸುತ್ತೋಲೆ ಹೊರಡಿಸಲಾಗಿತ್ತು. 32 ದಿನಗಳ ಬಳಿಕ ಅವರು ವಿದೇಶದಿಂದ ಭಾರತಕ್ಕೆ ಬಂದಿದ್ದರು” ಎಂದು ನ್ಯಾಯಾಲಯಕ್ಕೆ ನೆನಪಿಸಿದರು.

“ವಿಚಾರಣೆಯನ್ನು ವಿಳಂಬಗೊಳಿಸುವ ಉದ್ದೇಶದಿಂದ ವಿಚಾರಣಾಧೀನ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ಆರಂಭವಾಗುವುದಕ್ಕೂ ಮುನ್ನ ಪ್ರಜ್ವಲ್‌ ವಕೀಲರು ರಿಟೈರ್‌ ಆಗಿದ್ದರು. ಈಗ ಮತ್ತೆ ವಿಚಾರಣೆಯಲ್ಲಿ ಭಾಗಿಯಾಗಲು ಬಂದಿದ್ದಾರೆ. ಒಟ್ಟಾರೆ ಪ್ರಕರಣದಲ್ಲಿನ ಪರಿಸ್ಥಿತಿ ಯಾವುದೇ ರೀತಿಯಲ್ಲೂ ಬದಲಾವಣೆಯಾಗದೇ ಇರುವುದರಿಂದ ಪ್ರಜ್ವಲ್‌ಗೆ ಜಾಮೀನು ನೀಡಬಾರದು” ಎಂದು ವಿರೋಧಿಸಿದರು.