Nagpur Bench
Nagpur Bench 
ಸುದ್ದಿಗಳು

ಅತ್ಯಾಚಾರ ಎಂಬುದು ಕಾನೂನು ಪದ; ವೈದ್ಯಾಧಿಕಾರಿ ಮಾಡುವ ರೋಗ ನಿರ್ಣಯವಲ್ಲ: ಬಾಂಬೆ ಹೈಕೋರ್ಟ್

Bar & Bench

ಅತ್ಯಾಚಾರ ಕಾನೂನು ಪದವಾಗಿದ್ದು ಅದು ವೈದ್ಯಕೀಯ ಅಧಿಕಾರಿ ಮಾಡುವ ರೋಗ ನಿರ್ಣಯವಲ್ಲ ಎಂದು ಇತ್ತೀಚೆಗೆ ಅಪ್ರಾಪ್ತ ಸಂಬಂಧಿಯ ಮೇಲೆ ಅತ್ಯಾಚಾರ ಎಸಗಿದ ವ್ಯಕ್ತಿಯ ಶಿಕ್ಷೆ ಎತ್ತಿಹಿಡಿಯುವ ಸಂದರ್ಭವೊಂದರಲ್ಲಿ, ಬಾಂಬೆ ಹೈಕೋರ್ಟ್‌ನ ನಾಗಪುರ ಪೀಠ ಹೇಳಿದೆ [ಅತುಲ್ ಕೇಶವ್ ಅಲಿಯಾಸ್‌ ಕಿರಣ್ ಮಾಲೇಕರ್ ಮತ್ತು ಮಹಾರಾಷ್ಟ್ರ ಸರ್ಕಾರ ನಡುವಣ ಪ್ರಕರಣ].

ತನ್ನನ್ನು ತಪ್ಪಿತಸ್ಥ ಎಂದು ಘೋಷಿಸಿ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದನ್ನು ಪ್ರಶ್ನಿಸಿ ಅಪರಾಧಿಯೊಬ್ಬರು ಮೇಲ್ಮನವಿ ಸಲ್ಲಿಸಿದ್ದರು. ವೈದ್ಯಕೀಯ ವರದಿಯು  'ಲೈಂಗಿಕ ದೌರ್ಜನ್ಯ'ವನ್ನು ತಳ್ಳಿಹಾಕಲು ಸಾಧ್ಯವಿಲ್ಲ ಎಂದು ಮಾತ್ರ ಹೇಳುತ್ತದೆ ಬದಲಿಗೆ ಅದು ಅತ್ಯಾಚಾರವೇ ಅಥವಾ ಅಲ್ಲವೇ ಎಂಬುದನ್ನು ನೇರವಾಗಿ ಹೇಳುವುದಿಲ್ಲ ಎಂದು ಮನವಿಯಲ್ಲಿ ವಾದಿಸಲಾಗಿತ್ತು.

ತಮ್ಮ ತೀರ್ಪಿನಲ್ಲಿ ನ್ಯಾಯಮೂರ್ತಿ ಅನಿಲ್ ಕಿಲೋರ್ “ಅತ್ಯಾಚಾರ ಅಪರಾಧವಾಗಿದ್ದು ಅದು ವೈದ್ಯಕೀಯ ಸ್ಥಿತಿಯಲ್ಲ ಎಂಬುದು ಸುಪ್ರೀಂ ಕೋರ್ಟ್‌ ಅವಲೋಕನಗಳಿಂದ ಸ್ಪಷ್ಟವಾಗಿದೆ. ಅತ್ಯಾಚಾರ ಎಂಬುದು ಕಾನೂನು ಪದವಾಗಿದ್ದು, ಅದು ಸಂತ್ರಸ್ತೆಗೆ ಚಿಕಿತ್ಸೆ ನೀಡುವ ವೈದ್ಯಕೀಯ ಅಧಿಕಾರಿ ಮಾಡುವ ರೋಗ ನಿರ್ಣಯವಲ್ಲ. ಅತ್ಯಾಚಾರ ಸಂಭವಿಸಿದೆಯೇ ಅಥವಾ ಇಲ್ಲವೇ ಎಂಬುದರ ಕುರಿತಂತೆ ಇತ್ತೀಚೆಗೆ ಲೈಂಗಿಕ ಚಟುವಟಿಕೆ ನಡೆದಿರುವುದಕ್ಕೆ ಪುರಾವೆಗಳಿವೆಯೇ ಎಂಬುದಷ್ಟೇ ವೈದ್ಯಕೀಯ ಅಧಿಕಾರಿ ನೀಡಬಹುದಾದ ಏಕೈಕ ಹೇಳಿಕೆಯಾಗಿದೆ” ಎಂದು ವಿವರಿಸಿದ್ದಾರೆ.  

ವೈದ್ಯಕೀಯ ಸಾಕ್ಷಿಗಳು ನೀಡಿದ ಹೇಳಿಕೆಗಳು ಮತ್ತು ದಾಖಲೆಯಲ್ಲಿ ಲಭ್ಯವಿರುವ ವೈದ್ಯಕೀಯ ಪುರಾವೆಗಳು ಲೈಂಗಿಕ ಚಟುವಟಿಕೆ ನಡೆದಿರುವುದನ್ನು ಸಾಕಷ್ಟು ಸಾಬೀತುಪಡಿಸುತ್ತವೆ ಎಂದು ನ್ಯಾಯಮೂರ್ತಿಗಳು ಹೇಳಿದರು.

ಪ್ರಾಸಿಕ್ಯೂಷನ್‌ ಪ್ರಕಾರ ನಾಲ್ಕು ವರ್ಷ ಎಳೆಯ ಸಂತ್ರಸ್ತೆಯ ಮೇಲೆ ಆಕೆಯ ಚಿಕ್ಕಪ್ಪ ಅತ್ಯಾಚಾರ ಎಸಗಿದ್ದ ತನ್ನ ಖಾಸಗಿ ಭಾಗಗಳಲ್ಲಿ ಆದ ಗಾಯಗಳನ್ನು ತನ್ನ ತಾಯಿಗೆ ವಿವರಿಸಿದ ಬಳಿಕ ಘಟನೆ ಬೆಳಕಿಗೆ ಬಂದಿತ್ತು. ಆಕೆ ಅಳಲು ಆರಂಭಿಸಿದಾಗ ಘೋರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದ.