ಚರ್ಮದಿಂದ ಚರ್ಮ ಸ್ಪರ್ಶಿಸಿದ್ದರೆ ಮಾತ್ರ ಲೈಂಗಿಕ ದೌರ್ಜನ್ಯ ಎಂಬ ವಿವಾದಾತ್ಮಕ ತೀರ್ಪು ನೀಡಿ ಕಳೆದ ವರ್ಷ ಸುದ್ದಿಯಲ್ಲಿದ್ದ ಬಾಂಬೆ ಹೈಕೋರ್ಟ್ ನಾಗಪುರ ಪೀಠದ ಹೆಚ್ಚುವರಿ ನ್ಯಾಯಮೂರ್ತಿ ಪುಷ್ಪ ಗನೇದಿವಾಲಾ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಕುತೂಹಲಕರ ಸಂಗತಿಯೆಂದರೆ ಅಂತಹದ್ದೊಂದು ಚರ್ಚಾಸ್ಪದ ತೀರ್ಪು ಹೊರಬಿದ್ದ ವಾರವೇ ಅವರು ಇನ್ನೆರಡು ವಿವಾದಾತ್ಮಕ ತೀರ್ಪುಗಳ ಮೂಲಕವೂ ಸುದ್ದಿಯಲ್ಲಿದ್ದರು.
ಜನವರಿ 14, 2021 ರಂದು ನೀಡಲಾದ ತೀರ್ಪಿನಲ್ಲಿ, ಅತ್ಯಾಚಾರ ಎಸಗಿದ್ದಕ್ಕೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್ ವಾದವನ್ನು ಬೆಂಬಲಿಸುವ ಅಂಶಗಳಿಲ್ಲ ಎಂದ ಅವರು ಆರೋಪಿ ವಿರುದ್ಧದ ಆದೇಶವನ್ನು ರದ್ದುಗೊಳಿಸಿದ್ದರು. (ಜಗೇಶ್ವರ್ ವಾಸುದೇವ್ ಕಾವ್ಲೆ ಮತ್ತು ಮಹಾರಾಷ್ಟ್ರ ಸರ್ಕಾರ ನಡುವಣ ಪ್ರಕರಣ).
ಅದರ ಮರುದಿನ ಅಂದರೆ ಜನವರಿ 15, 2021 ರಂದು ನೀಡಿದ ಪ್ರತ್ಯೇಕ ತೀರ್ಪೊಂದರಲ್ಲಿ ಅಪ್ರಾಪ್ತೆಯ ಕೈಹಿಡಿದಿರುವುದು ಅಥವಾ ನಿರ್ದಿಷ್ಟ ಸಮಯದಲ್ಲಿ ಆರೋಪಿಯು ಪ್ಯಾಂಟ್ ಜಿಪ್ ತೆರೆದುಕೊಂಡಿರುವುದು ಪೋಕ್ಸೊ ಕಾಯಿದೆ ಸೆಕ್ಷನ್ 7ರ ಅಡಿ ಲೈಂಗಿಕ ದೌರ್ಜನ್ಯ ಎನಿಸಿಕೊಳ್ಳುವುದಿಲ್ಲ ಎಂದಿದ್ದರು (ಲಿಬ್ನುಸ್ ಮತ್ತು ಮಹಾರಾಷ್ಟ್ರ ಸರ್ಕಾರ ನಡುವಣ ಪ್ರಕರಣ).
ಮೂರನೇ ತೀರ್ಪು ದೇಶಾದ್ಯಂತ ಕೋಲಾಹಲ ಸೃಷ್ಟಿಸಿದ ʼಆರೋಪಿಯ ಚರ್ಮ ಸಂತ್ರಸ್ತೆಯ ಚರ್ಮವನ್ನು ಸ್ಪರ್ಶಿಸಿದ್ದರೆ ಮಾತ್ರ ಲೈಂಗಿಕ ದೌರ್ಜನ್ಯ ʼ ಎಂಬುದಾಗಿತ್ತು. ತೀರ್ಪು ಬಂದದ್ದು ಜ. 19ರಂದು. “ಅಪ್ರಾಪ್ತೆಯ ಸ್ತನವನ್ನು ಬಟ್ಟೆ ತೆಗೆಯದೆ ಸ್ಪರ್ಶಿಸಿದರೆ ಅದು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯಿದೆಯ ಸೆಕ್ಷನ್ 7 ರ ಅಡಿಯಲ್ಲಿ ʼಲೈಂಗಿಕ ದೌರ್ಜನ್ಯʼ ಆಗುವುದಿಲ್ಲ ಎಂದು ಅವರು ಆದೇಶದಲ್ಲಿ ತಿಳಿಸಿದ್ದರು.
ಆದರೆ ಈ ವಿವಾದಾತ್ಮಕ ತೀರ್ಪನ್ನು ರದ್ದುಗೊಳಿಸಿದ್ದ ಸುಪ್ರೀಂಕೋರ್ಟ್ ಪೊಕ್ಸೊ ಕಾಯಿದೆಯಡಿ 'ಲೈಂಗಿಕ ಆಕ್ರಮಣ'ದ ಅಪರಾಧ ನಿರ್ಧರಿಸುವ ಪ್ರಮುಖ ಅಂಶ ಲೈಂಗಿಕ ಉದ್ದೇಶವೇ ವಿನಾ ಚರ್ಮದಿಂದ ಚರ್ಮಕ್ಕೆ ಸಂಪರ್ಕ ಹೊಂದುವುದಲ್ಲ ಎಂದಿತ್ತು.
ಒಂದು ವರ್ಷ ಕಾಲ ಹೆಚ್ಚುವರಿ ನ್ಯಾಯಮೂರ್ತಿಯಾಗಿಯೇ ಪುಷ್ಪಾ ಮುಂದುವರೆದಿದ್ದರು. ಇದೇ ವೇಳೆ ಅವರ ಹೆಸರನ್ನು ಖಾಯಂ ನ್ಯಾಯಮೂರ್ತಿ ಹುದ್ದೆಗೆ ಕೊಲಿಜಿಯಂ ಶಿಫಾರಸು ಮಾಡಲಿಲ್ಲ. ಮಾತ್ರವಲ್ಲ, ಹೆಚ್ಚುವರಿ ನ್ಯಾಯಮೂರ್ತಿಯಾಗಿ ಮುಂದುವರೆಯುವಂತೆಯೂ ಸೂಚಿಸಲಿಲ್ಲ. ಹೀಗಾಗಿ ಫೆ. 12ಕ್ಕೆ ತಮ್ಮ ಅಧಿಕಾರಾವಧಿ ಮುಗಿಯುವ ಒಂದು ದಿನ ಮೊದಲು ನ್ಯಾ. ಪುಷ್ಪಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮೂಲಗಳ ಪ್ರಕಾರ, ಅವರು ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ನಲ್ಲಿ ವಕೀಲರಾಗಿ ಮಧ್ಯಸ್ಥಿಕೆ ಮತ್ತು ವ್ಯಾಜ್ಯ ಪ್ರಕರಣಗಳನ್ನು ನಿರ್ವಹಿಸಲು ಚಿಂತಿಸುತ್ತಿದ್ದಾರೆ.