ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ವಿಜಯ್ ಬಾಬುಗೆ ಕೇರಳ ಹೈಕೋರ್ಟ್ ಇತ್ತೀಚೆಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿರುವುದನ್ನು ಪ್ರಶ್ನಿಸಿ ಪ್ರಕರಣದ ಸಂತ್ರಸ್ತೆ, ನವನಟಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಬಾಬು ವಿರುದ್ಧ ದಾಖಲಾಗಿದ್ದ ಅತ್ಯಾಚಾರ ಪ್ರಕರಣದಲ್ಲಿ ಕೇರಳ ಹೈಕೋರ್ಟ್ ಜೂನ್ 22ರಂದು ನಿರೀಕ್ಷಣಾ ಜಾಮೀನು ನೀಡಿತ್ತು. ತಲೆಮರೆಸಿಕೊಂಡಿದ್ದ ಬಾಬು ದುಬೈನಿಂದ ಫೇಸ್‌ಬುಕ್ ಲೈವ್ ಮೂಕ ಅತ್ಯಾಚಾರದ ಆರೋಪವನ್ನು ತಳ್ಳಿ ಹಾಕಿದ್ದರು. ನಂತರ ಅವರು ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ನಿರೀಕ್ಷಣಾ ಜಾಮೀನು ನೀಡುವುದರಿಂದ ತಲೆಮರೆಸಿಕೊಂಡಿರುವ ಆರೋಪಿ ಹೊರಬಂದು ತನಿಖೆಗೆ ನೆರವು ನೀಡುತ್ತಾನೆ ಎಂಬ ನೆಲೆಯಲ್ಲಿ ನಿರೀಕ್ಷಣಾ ಜಾಮೀನು ನೀಡಬಹುದೇ ಎಂಬ ಪ್ರಮುಖ ವಿಷಯವನ್ನು ಈ ಪ್ರಕರಣ ಹುಟ್ಟುಹಾಕುತ್ತದೆ ಎಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಮನವಿಯಲ್ಲಿ ತಿಳಿಸಲಾಗಿದೆ.
ನಟನೆಗೆ ಅವಕಾಶ ನೀಡುವ ನೆಪದಲ್ಲಿ ತನ್ನನ್ನು ಬಾಬು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ನವನಟಿಯೊಬ್ಬರು ಬಾಬು ವಿರುದ್ಧ ಮೀ ಟೂ ಆರೋಪ ಮಾಡಿದ್ದರು. ಇದನ್ನು ಆಧರಿಸಿ ಬಾಬು ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಎರ್ನಾಕುಲಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ಬಳಿಕ ಬಾಬು ತಲೆಮರೆಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಅವರ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ ಮಾಡಿದ್ದರು. ತದನಂತರ ಫೇಸ್‌ಬುಕ್ ಲೈವ್ ಮೂಲಕ ಬಾಬು ಆರೋಪಗಳನ್ನು ನಿರಾಕರಿಸಿದ್ದರು.