Rapido and Bombay High Court 
ಸುದ್ದಿಗಳು

ಮಹಾರಾಷ್ಟ್ರದಲ್ಲಿ ಜ. 20ರವರೆಗೆ ಬೈಕ್‌ ಟ್ಯಾಕ್ಸಿ ಸೇವೆ ನಿಲ್ಲಿಸಿದ ರ‍್ಯಾಪಿಡೊ; ನ್ಯಾಯಾಲಯದ ಸೂಚನೆ ಮೇರೆಗೆ ಕ್ರಮ

ರ‍್ಯಾಪಿಡೊ ಕಂಪೆನಿಯು ಸೇವೆಗಳನ್ನು ಅಮಾನತುಗೊಳಿಸದಿದ್ದರೆ ಶಾಶ್ವತವಾಗಿ ಪರವಾನಗಿ ಪಡೆಯದಂತೆ ನಿರ್ಬಂಧ ವಿಧಿಸುವುದರ ಜೊತೆಗೆ ಭಾರಿ ದಂಡ ವಿಧಿಸುವುದಾಗಿ ನ್ಯಾಯಾಲಯ ಎಚ್ಚರಿಸಿತ್ತು.

Bar & Bench

ಮಹಾರಾಷ್ಟ್ರದಲ್ಲಿ ಜನವರಿ 20ರವರೆಗೆ ತನ್ನ ಎಲ್ಲಾ ಸೇವೆಗಳನ್ನು ಅಮಾನತು ಮಾಡಲಾಗುವುದು ಎಂದು ರ‍್ಯಾಪಿಡೊ ಬೈಕ್‌ ಟ್ಯಾಕ್ಸಿ ಕಂಪೆನಿಯು ಬಾಂಬೆ ಹೈಕೋರ್ಟ್‌ಗೆ ಶುಕ್ರವಾರ ತಿಳಿಸಿದೆ. ಇಂದು ಮಧ್ಯಾಹ್ನ 1 ಗಂಟೆಯಿಂದ ಜನವರಿ 20ರವರೆಗೆ ರಾಜ್ಯದೊಳಗಿನ ತನ್ನ ಆ್ಯಪ್ ಆಧರಿತ ಸೇವೆಯನ್ನು ಅಮಾನತುಗೊಳಿಸಲಾಗುವುದು ಎಂದು ಅದು ಹೇಳಿದೆ.

ದ್ವಿಚಕ್ರ ಟ್ಯಾಕ್ಸಿ ಅಗ್ರಿಗೇಟರ್‌ ಪರವಾನಗಿ ನೀಡಲು ಮಹಾರಾಷ್ಟ್ರ ಸರ್ಕಾರ ನಿರಾಕರಿಸಿದ್ದನ್ನು ಪ್ರಶ್ನಿಸಿ ರ‍್ಯಾಪಿಡೊ ಬೈಕ್‌ ಟ್ಯಾಕ್ಸಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಜಿ ಎಸ್‌ ಪಾಟೀಲ್‌ ಮತ್ತು ಎಸ್‌ ಜಿ ಡಿಗೆ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯನ್ನು ಅಮಾನತುಗೊಳಿಸದಿದ್ದರೆ ಶಾಶ್ವತವಾಗಿ ಪರವನಾಗಿ ಪಡೆಯದಂತೆ ಕಂಪೆನಿಯನ್ನು ನಿಷೇಧಿಸುವಂತೆ ನ್ಯಾಯಾಲಯ ನಿರ್ದೇಶನ ನೀಡಲಿದೆ ಎಂದು ಪೀಠ ಹೇಳಿದ ಹಿನ್ನೆಲೆಯಲ್ಲಿ ತಕ್ಷಣ ಸೇವೆ ನಿಲ್ಲಿಸುವುದಾಗಿ ಕಂಪೆನಿಯು ಪೀಠಕ್ಕೆ ಭರವಸೆ ನೀಡಿತು.

“ಮಾರ್ಗಸೂಚಿಗಳು ಜಾರಿಯಲ್ಲಿವೆ ಎಂದು ನೀವು ಅಂದುಕೊಂಡಿದ್ದು, ಪರವಾನಗಿ ಪಡೆಯದೇ ಸೇವೆ ನೀಡಬಹುದು ಎಂದು ತಿಳಿದುಕೊಂಡಿದ್ದೀರಿ. ಬೇರೆ ರೀತಿಯಲ್ಲಿ ಹೇಳುವುದಾದರೆ ನ್ಯಾಯಮೂರ್ತಿಗಳೇ 226ನೇ ವಿಧಿಯಡಿ ನಮ್ಮ ಕಾನೂನುಬಾಹಿರತೆಯನ್ನು ರಕ್ಷಿಸಿ ಎಂದು ಕೇಳುತ್ತಿದ್ದೀರಿ. ನಾವು ಹಾಗೆ ಮಾಡುವುದಿಲ್ಲ. (ಅಡ್ವೊಕೇಟ್‌ ಜನರಲ್‌) ಡಾ. ಸರಾಫ್‌ ಅವ ಇಡೀ ತಂಡ ಇಲ್ಲಿದೆ. ಗಿಡುಗದ ರೀತಿಯಲ್ಲಿ ಅವರು ನಿಮ್ಮ ಮೇಲೆ ನಿಗಾ ಇಟ್ಟಿದ್ದಾರೆ. ನೀವು ಒಂದೇ ಒಂದು ತಪ್ಪು ಮಾಡಿದರೂ ಸಾಕು ನಾವು ನಿಮ್ಮ ಅರ್ಜಿಯನ್ನು ನಾವು ವಜಾ ಮಾಡುತ್ತೇವೆ. ಶಾಶ್ವತವಾಗಿ ನೀವು ಪರವನಾಗಿ ಪಡೆಯದಂತೆ ನಿಮ್ಮನ್ನು ನಿರ್ಬಂಧಿಸುತ್ತೇವೆ ಮತ್ತು ದಂಡ ವಿಧಿಸಿ ಅರ್ಜಿ ವಜಾ ಮಾಡುತ್ತೇವೆ” ಎಂದು ಪೀಠ ಕಟುವಾಗಿ ನುಡಿಯಿತು.

ರ‍್ಯಾಪಿಡೊ ಪರ ವಕೀಲರು “ಜನವರಿ 20ರವರೆಗೆ ಎಲ್ಲಾ ರೀತಿಯ ಸೇವೆಗಳನ್ನು ಅಮಾನತು ಮಾಡಲಾಗುವುದು. ಮಹಾರಾಷ್ಟ್ರದಾದ್ಯಂತ ಬೈಕ್‌ ಕಾಯ್ದಿರಿಸಲು ಬಳಸುತ್ತಿದ್ದ ಅಪ್ಲಿಕೇಶನ್‌ ನಿರ್ಬಂಧಿಸುವ ಮೂಲಕ ಯಾವುದೇ ವಾಹನ ಕಾಯ್ದಿರಿಸದಂತೆ ತಡೆಯೊಡ್ಡಲಾಗುವುದು” ಎಂದರು.

ಮಹಾರಾಷ್ಟ್ರದಲ್ಲಿ ಬೈಕ್‌ ಟ್ಯಾಕ್ಸಿಗೆ ಪರವಾನಗಿ ನೀಡಲು ಯಾವುದೇ ವ್ಯವಸ್ಥೆ ಇಲ್ಲ ಎಂಬುದನ್ನು ತಿಳಿದು ನ್ಯಾಯಾಲಯವು ಮೇಲಿನ ಅಭಿಪ್ರಾಯ ವ್ಯಕ್ತಪಡಿಸಿದೆ.

ಬ್ಯಾಕ್‌ ಟ್ಯಾಕ್ಸಿಗೆ ಪರವನಾಗಿ ನೀಡಲು ಮಹಾರಾಷ್ಟ್ರದಲ್ಲಿ ಯಾವುದೇ ನೀತಿ ರೂಪಿಸಲಾಗಿಲ್ಲ. ಬೈಕ್ ಸೇವೆಗೆ ದರ ವಿಧಿಸುವ ವಿಧಾನವನ್ನೂ ರೂಪಿಸಲಾಗಿಲ್ಲ ಎಂದು ರ‍್ಯಾಪಿಡೊ ಮನವಿಯನ್ನು 2022ರ ಡಿಸೆಂಬರ್‌ 29ರಂದು ಸರ್ಕಾರವು ತಿರಸ್ಕರಿಸಿತ್ತು.

ಇಂದಿನ ವಿಚಾರಣೆಯ ಸಂದರ್ಭದಲ್ಲಿ ಪರವನಾಗಿ ಕೋರಿ ಯಾವೆಲ್ಲಾ ಕಂಪೆನಿಗಳು ಸರ್ಕಾರಕ್ಕೆ ಅರ್ಜಿ ಸಲ್ಲಿಸಿವೆ ಎಂಬ ಪಟ್ಟಿಯನ್ನು ಸರಾಫ್‌ ಅವರು ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಯಾವುದೇ ಪರವನಾಗಿ ಪಡೆಯದೇ ರ‍್ಯಾಪಿಡೊ ಟ್ಯಾಕ್ಸಿ ಮತ್ತು ಆಟೊರಿಕ್ಷಾ ಸೇವೆ ನೀಡುತ್ತಿದೆ ಎಂದು ಆಕ್ಷೇಪಿಸಿದರು. ಇದರಿಂದ ಆಕ್ರೋಶಗೊಂಡ ಪೀಠವು ಪ್ರತಿಕೂಲ ಕ್ರಮದ ಎಚ್ಚರಿಕೆ ನೀಡಿತು.