High Court of Karnataka
High Court of Karnataka 
ಸುದ್ದಿಗಳು

ವೇಶ್ಯಾವಾಟಿಕೆಗೆ ಬಳಕೆಯಾಗುತ್ತಿದ್ದ ಹೋಟೆಲ್‌: ತಪ್ಪು ಮಾಡದ ಸ್ವಾಗತಕಾರನಿಗೆ ಜಾಮೀನು ಮಂಜೂರು ಮಾಡಿದ ಹೈಕೋರ್ಟ್‌

Bar & Bench

ವೇಶ್ಯಾವಾಟಿಕೆಗೆ ಬಳಸಿಕೊಳ್ಳುತ್ತಿದ್ದ ಹೋಟೆಲ್‌ವೊಂದರಲ್ಲಿ ಸ್ವಾಗತಕಾರರಾಗಿದ್ದ ವ್ಯಕ್ತಿಗೆ ಕರ್ನಾಟಕ ಹೈಕೋರ್ಟ್ ಈಚೆಗೆ ಜಾಮೀನು ಮಂಜೂರು ಮಾಡಿದೆ.

ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಪ್ರಕಾಶ್ ಶರ್ಮಾ ಜಾಮೀನು ಕೋರಿ ಸಲ್ಲಿಸಿದ್ದ ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಚ್ ಪಿ ಸಂದೇಶ್ ಅವರಿದ್ದ ಏಕಸದಸ್ಯ ಪೀಠವು ನಡೆಸಿತು.

ಅರ್ಜಿದಾರರು ಹೋಟೆಲ್‌ನಲ್ಲಿ ಸ್ವಾಗತಕಾರರಾಗಿ ಕೆಲಸ ಮಾಡುತ್ತಿದ್ದರು. ದಾಳಿ ವೇಳೆ ಸ್ಥಳದಲ್ಲಿದ್ದರು ಎಂಬ ಆರೋಪ ಹೊರತುಪಡಿಸಿ, ವೇಶ್ಯಾವಾಟಿಕೆಯಲ್ಲಿ ತೊಡಗಿಸಿಕೊಂಡಿದ್ದ ಯಾವುದೇ ನಿರ್ದಿಷ್ಟ ಆರೋಪ ಅವರ ಮೇಲಿಲ್ಲ ಎಂದು ನ್ಯಾಯಾಲಯ ಜಾಮೀನು ನೀಡಿದೆ.

ಎರಡು ಲಕ್ಷ ರೂಪಾಯಿ ಮೊತ್ತದ ವೈಯಕ್ತಿಕ ಬಾಂಡ್, ಅಷ್ಟೇ ಮೊತ್ತಕ್ಕೆ ಇಬ್ಬರ ಭದ್ರತೆ ಒದಗಿಸಬೇಕು. ಸಾಕ್ಷ್ಯ ನಾಶಕ್ಕೆ ಯತ್ನಿಸಬಾರದು. ವಿಚಾರಣಾ ನ್ಯಾಯಾಲಯದ ವಿಚಾರಣೆಗೆ ತಪ್ಪದೇ ಹಾಜರಾಗಬೇಕು. ವಿಚಾರಣಾ ನ್ಯಾಯಾಲಯದ ಅನುಮತಿ ಪಡೆಯದೇ ಅದರ ವ್ಯಾಪ್ತಿ ಬಿಟ್ಟು ತೆರಳಬಾರದು ಎಂದು ಆರೋಪಿಗೆ ನ್ಯಾಯಾಲಯವು ಷರತ್ತು ವಿಧಿಸಿದೆ.

ಅರ್ಜಿದಾರರ ಪರ ವಕೀಲರು “ಪ್ರಕಾಶ್‌ ಶರ್ಮಾ ಹೋಟೆಲ್‌ನಲ್ಲಿ ಸ್ವಾಗತಕಾರರಾಗಿದ್ದರು. ಪ್ರಕರಣಕ್ಕೂ ಅವರಿಗೂ ಯಾವುದೇ ಸಂಬಂಧವಿಲ್ಲ. ಎರಡನೇ ಆರೋಪಿಯು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದು, ದೂರವಾಣಿ ಮೂಲಕ ಗಿರಾಕಿಗಳನ್ನು ಸಂಪರ್ಕಿಸಿ ಹೋಟೆಲ್‌ಗೆ ಕರೆತರುತ್ತಿದ್ದರು. ಪ್ರಕರಣದಲ್ಲಿ ಅರ್ಜಿದಾರನ ಪಾತ್ರ ಇರುವ ಬಗ್ಗೆ ಸಂತ್ರಸ್ತರು ಯಾವುದೇ ಹೇಳಿಕೆ ನೀಡಿಲ್ಲ. ದಾಳಿ ನಡೆದಾಗ ಹೋಟೆಲ್‌ನಲ್ಲಿ ಇದ್ದರು ಎಂಬ ಕಾರಣಕ್ಕೆ ಪೊಲೀಸರು ಅರ್ಜಿದಾರರನ್ನು ವಶಕ್ಕೆ ಪಡೆದಿದ್ದಾರೆ. ಹೀಗಾಗಿ, ಅವರು ಜಾಮೀನಿಗೆ ಅರ್ಹರು” ಎಂದು ವಾದಿಸಿದ್ದರು.

ಪ್ರಕರಣದ ಹಿನ್ನೆಲೆ: ಪ್ರಕಾಶ್ ಶರ್ಮಾ ಅವರು ಮಾರತ್ ಹಳ್ಳಿಯ ಹೋಟೆಲ್‌ವೊಂದರಲ್ಲಿ ಸ್ವಾಗತಕಾರರಾಗಿ ಕೆಲಸ ಮಾಡುತ್ತಿದ್ದರು. ಹೆಚ್ಚಿನ ವೇತನದ ಉದ್ಯೋಗ ಕೊಡಿಸುವುದಾಗಿ ಮಹಿಳೆಯರಿಬ್ಬರನ್ನು ಹೋಟೆಲ್‌ಗೆ ಕರೆ ತಂದಿದ್ದ ಆರೋಪ ಎದುರಿಸುತ್ತಿರುವ ಅರ್ಜಿದಾರ ಮತ್ತು ಪ್ರಕರಣದ ಎರಡನೇ ಆರೋಪಿಯು ಅವರನ್ನು ವೇಶ್ಯವಾಟಿಕೆಗೆ ತಳ್ಳಿದ್ದರು. ಈ ಕುರಿತು ಮಾಹಿತಿ ಪಡೆದಿದ್ದ ಮಾರತ್ ಹಳ್ಳಿ ಠಾಣಾ ಪೊಲೀಸರು ಹೋಟೆಲ್ ಮೇಲೆ ದಾಳಿ ನಡೆಸಿ, ಪ್ರಕಾಶ್ ಶರ್ಮಾ ಮತ್ತು ಎರಡನೇ ಆರೋಪಿಯನ್ನು ವಶಕ್ಕೆ ಪಡೆದಿದ್ದರು. ನಂತರ ಅವರ ವಿರುದ್ಧ ಮಾನವ ಕಳ್ಳಸಾಗಣೆ (ನಿಯಂತ್ರಣ) ಕಾಯಿದೆ ಮತ್ತು ಭಾರತೀಯ ದಂಡ ಸಂಹಿತೆ ವಿವಿಧ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಿದ್ದರು. ವಿಚಾರಣಾಧೀನ ನ್ಯಾಯಾಲಯವು ಅರ್ಜಿದಾರರನ್ನು ನ್ಯಾಯಾಂಗ ಬಂಧನಕ್ಕೆ ನೀಡಿತ್ತು.