ಸುದ್ದಿಗಳು

ಪರಿಶಿಷ್ಟ ಜಾತಿಗಳು, ಆದಿವಾಸಿ ಸಮುದಾಯಗಳನ್ನು ಈ ಸಮಾಜ ಒಳಗೊಂಡಿದೆಯೇ ಎನ್ನುವ ಚರ್ಚೆ ಬಹುಮುಖ್ಯ: ನ್ಯಾ. ಕೆ ಚಂದ್ರು

ಸರ್ಕಾರದ ಆಕ್ರೋಶದಿಂದ ಜನರನ್ನು ಪಾರು ಮಾಡುವುದು ಹೇಗೆ, ಪೊಲೀಸ್‌ ದೌರ್ಜನ್ಯದಿಂದ ಜನಸಾಮಾನ್ಯರನ್ನು ರಕ್ಷಿಸುವುದು ಹೇಗೆ ಎಂಬುದು ಇಂದು ಮುಖ್ಯವಾಗಬೇಕಿದೆ ಎಂದು ಅಭಿಪ್ರಾಯಪಟ್ಟ ನ್ಯಾ. ಕೆ ಚಂದ್ರು.

Ramesh DK

ಪರಿಶಿಷ್ಟ ಜಾತಿಗಳು, ಆದಿವಾಸಿ ಸಮುದಾಯಗಳಿಗೆ ಈ ದೇಶದಲ್ಲಿ ಬದುಕುವ ಹಕ್ಕಿದೆಯೇ, ಅವರನ್ನು ಸಮಾಜ ಒಳಗೊಂಡಿದೆಯೇ ಅಥವಾ ಹೊರಗಿಟ್ಟಿದೆಯೇ ಎಂಬುದು ಇಂದು ಚರ್ಚೆಗೊಳಪಡಬೇಕಾದ ಬಹುಮುಖ್ಯ ಸಂಗತಿ ಎಂದು ಮದ್ರಾಸ್‌ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಕೆ ಚಂದ್ರು ಅವರು ಶನಿವಾರ ಅಭಿಪ್ರಾಯಪಟ್ಟರು.

ಅಂತರಾಷ್ಟ್ರೀಯ ಮಾನವಹಕ್ಕುಗಳ ದಿನಾಚರಣೆಯ ಹಿನ್ನೆಲೆಯಲ್ಲಿ ಜನ ಪ್ರಕಾಶನ ಬೆಂಗಳೂರು, ಎಐಎಲ್‌ಯು ಕರ್ನಾಟಕ, ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ ವಾದ), ರಾಜ್ಯ ದಲಿತ ಹಕ್ಕುಗಳ ಸಮಿತಿ ನಗರದಲ್ಲಿ ಆಯೋಜಿಸಿದ್ದ ನ್ಯಾ. ಎಚ್ ಎನ್‌ ನಾಗಮೋಹನ್‌ ದಾಸ್‌ ಅವರ ʼಮಾನವ ಹಕ್ಕುಗಳುʼ ಕೃತಿ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಪುಸ್ತಕವನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

ಕ್ರಿಮಿನಲ್‌ ಬುಡಕಟ್ಟುಗಳು ಎಂದು ಕೆಲ ಸಮುದಾಯಗಳನ್ನು ಗುರುತಿಸುವ ವಸಾಹತುಶಾಹಿ ಪರಂಪರೆ ಸ್ವಾತಂತ್ರ್ಯ ದೊರೆತ ಬಳಿಕವೂ ಮುಂದುವರೆಯಿತು ಎಂದು ಅವರು ವಿಷಾದಿಸಿದರು. ದೇಶದುದ್ದಗಲಕ್ಕೂ ಸಂಚಲನ ಹುಟ್ಟಿಸಿದ ʼಜೈ ಭೀಮ್‌ʼ ಸಿನಿಮಾಗೆ ಸ್ಪೂರ್ತಿಯಾಗಿರುವ ನ್ಯಾ. ಕೆ ಚಂದ್ರು ಅವರು ಆ ಚಲನಚಿತ್ರದ ಉದಾಹರಣೆಯೊಂದಿಗೇ ಮಾತು ಆರಂಭಿಸಿದರು. “ಅಪರಾಧದ ವಿರುದ್ಧ ಸೆಣಸಲು ಬ್ರಿಟಿಷರು ಪೊಲೀಸ್‌ ವ್ಯವಸ್ಥೆ ಜಾರಿಗೆ ತರಲಿಲ್ಲ ಬದಲಿಗೆ ಶಾಂತಿ ಸುವ್ಯವಸ್ಥೆ ಕಾಪಾಡಲು ಪೊಲೀಸರನ್ನು ನೇಮಿಸಿದರು. ಅಪರಾಧ ಹತ್ತಿಕ್ಕಲು ʼಕ್ರಿಮಿನಲ್‌ ಬುಡಕಟ್ಟು ಕಾಯಿದೆʼಯನ್ನು ರೂಪಿಸಲಾಯಿತು. ಬುಡಕಟ್ಟು ಸಮುದಾಯದಲ್ಲಿದ್ದವರನ್ನು ಕ್ರಿಮಿನಲ್‌ಗಳು ಎಂದು ಪರಿಗಣಿಸಿ ಅವರ ವಿವರಗಳನ್ನು ಮೊದಲೇ ಸಂಗ್ರಹಿಸಿಟ್ಟುಕೊಳ್ಳುತ್ತಿದ್ದರು. ಅಪರಾಧ ನಡೆದ ದಿನ ಶರಣಾಗುವಂತೆ ಈ ಸಮುದಾಯಗಳ ಸದಸ್ಯರಿಗೆ ಸೂಚಿಸಲಾಗುತ್ತಿತ್ತು. ಶರಣಾಗದೇ ಇರುವವರನ್ನು ಕ್ರಿಮಿನಲ್‌ಗಳು ಎಂದು ಪರಿಗಣಿಸಲಾಗುತ್ತಿತ್ತು. ಯಾವುದೇ ಪುರಾವೆ ದಾಖಲೆಗಳಿಲ್ಲದೆ ಈ ರೀತಿ ಘೋಷಿಸಲಾಗುತ್ತಿತ್ತು” ಎಂದರು.

ಕಾಂಗ್ರೆಸ್‌ ಮತ್ತು ಕಮ್ಯುನಿಸ್ಟ್‌ ಪಕ್ಷಗಳು ಈ ಕಾಯಿದೆ ವಿರುದ್ಧ ಹೋರಾಟ ನಡೆಸಿದವು. ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಮೇಲೆ ಈ ಕಾಯಿದೆಯನ್ನು ಹಿಂಪಡೆಯಿತು. ಆ ಬುಡಕಟ್ಟು ಸಮುದಾಯಗಳನ್ನು ʼಡಿನೋಟಿಫೈಡ್‌ ಟ್ರೈಬ್ಸ್‌ʼ ಎಂದು ಕರೆಯಲಾಯಿತು, ಆದರೆ ಚಿತ್ರದಲ್ಲಿ ತೋರಿಸಿರುವಂತೆ ತೊಂಬತ್ತರ ದಶಕದಲ್ಲಿ ಕೂಡ ಬುಡಕಟ್ಟುಗಳನ್ನು ಅಪರಾಧದ ನೆಲೆಯಿಂದ ನೋಡುವ ಪರಂಪರೆ ಮುಂದುವರೆಯಿತು ಎಂದು ಅವರು ಹೇಳಿದರು.

“ವಕೀಲರಾಗಿ, ನ್ಯಾಯಾಧೀಶರಾಗಿ ಮಾನವ ಹಕ್ಕುಗಳ ಅನೇಕ ಪ್ರಕರಣಗಳ ವಿಚಾರಣೆ ನಡೆಸಿರುತ್ತೇವೆ. ಅನೇಕ ಬಾರಿ ಯಶಸ್ಸು, ಕೆಲ ಬಾರಿ ಅಪಯಶಸ್ಸು ಕಂಡು ಮಾನವ ಹಕ್ಕುಗಳ ಪ್ರಕರಣ ನಿಭಾಯಿಸುವಲ್ಲಿ ಅನುಭವ ಪಡೆದಿರುತ್ತೇವೆ. ಆದರೆ ʼಜೈ ಭೀಮ್‌ʼ ಭಾಷೆ, ಗಡಿಗಳ ಎಲ್ಲೆ ಮೀರಿ ಜನರನ್ನು ತಲುಪಿತು. ನನ್ನನ್ನು ಈಗ ʼಜೈ ಭೀಮ್‌ ಚಂದ್ರುʼ ಎಂದು ಕರೆಯುತ್ತಾರೆ. ಅಂಬೇಡ್ಕರ್‌ ಅವರನ್ನು ಸ್ವಾಗತಿಸಲು ಕರೆಯಲಾಗುತ್ತಿದ್ದ ʼಜೈ ಭೀಮ್‌ʼ ಘೋಷಣೆ ಈಗ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನಕ್ಕೆ ಮಾತ್ರ ಸೀಮಿತವಾಗದೇ ಭಾರತದ ಎಲ್ಲರೂ ʼಜೈ ಭೀಮ್ʼ ಎನ್ನುತ್ತಿದ್ದಾರೆ. ಬೇರೊಂದು ಶೀರ್ಷಿಕೆ ನೀಡಲು ಯತ್ನಿಸಿದ ಸಿನಿಮಾದ ನಿರ್ದೇಶಕರು ʼಜೈ ಭೀಮ್‌ʼ ಎಂದು ಹೆಸರಿಟ್ಟಿದ್ದರಿಂದ ಅದು ಭಾರೀ ಯಶಸ್ಸು ಕಂಡಿತು. ನಟನೆ, ಕಥೆ, ಚಿತ್ರಕತೆ, ಕೋರ್ಟ್‌ ಡೈಲಾಗ್‌ಗಳಿಗಿಂತಲೂ ಹೆಚ್ಚಾಗಿ ʼಜೈ ಭೀಮ್‌ʼ ಎಂಬ ಎರಡೇ ಪದ ಎಲ್ಲೆಡೆಯೂ ಪಸರಿಸುತ್ತಿದೆ” ಎಂದು ತಿಳಿಸಿದರು.

“ದೇಶದಲ್ಲಿ ನೂರಾರು ಮಾನವ ಹಕ್ಕು ವೇದಿಕೆಗಳಿವೆ. ಆಯೋಗಗಳು ರಚನೆಯಾಗಿವೆ. ಆದರೂ ಅನೇಕ ಲಾಕಪ್‌ ಡೆತ್‌, ಎನ್‌ಕೌಂಟರ್‌ ಡೆತ್‌, ಲಾಕಪ್‌ ಹಿಂಸೆ, ಇತ್ಯಾದಿಗಳು ಘಟಿಸುತ್ತಲೇ ಇವೆ. ಜಸ್ಟೀಸ್‌ ಕೃಷ್ಣ ಅಯ್ಯರ್‌ ಅವರು ʼಬೇಲ್‌ ಈಸ್‌ ಎ ರೂಲ್‌ ಜೈಲ್‌ ಈಸ್‌ ಆನ್‌ ಎಕ್ಸೆಪ್ಷನ್‌ʼ (ಜಾಮೀನು ನಿಯಮಬದ್ಧ, ಜೈಲು ಅದಕ್ಕೆ ಅಪವಾದ ಮಾತ್ರ) ಎಂದಿದ್ದರು. ಆದರೆ ಇಂದು ಅನೇಕ ನ್ಯಾಯಾಧೀಶರು ʼಜೈಲ್‌ ಈಸ್‌ ಎ ರೂಲ್‌ ಬೇಲ್‌ ಈಸ್‌ ಆನ್‌ ಎಕ್ಸೆಪ್ಷನ್‌ʼ (ಜೈಲು ನಿಯಮಬದ್ಧ, ಜಾಮೀನು ಎನ್ನುವುದು ಅದಕ್ಕೆ ಅಪವಾದ ಮಾತ್ರ) ಎಂದು ಕಾಣುತ್ತಿದ್ದಾರೆ. ಸಂವಿಧಾನ ರಚನೆಯಾಗಿ ಎಪ್ಪತ್ತೊಂದು ವರ್ಷವೇ ಕಳೆದಿವೆ. ದೇಶದ ಸಾಮಾನ್ಯ ನಾಗರಿಕನ ಪರಿಸ್ಥಿತಿಯನ್ನು ನ್ಯಾಯಾಧೀಶರು ಅರ್ಥಮಾಡಿಕೊಳ್ಳಬೇಕಿದೆ. ಜಸ್ಟೀಸ್‌ ನಾಗಮೋಹನ್‌ ದಾಸ್‌ ಅವರು ಬರೆದಿರುವ ಕೃತಿಯನ್ನು ಎಲ್ಲಾ ಹೈಕೋರ್ಟ್‌ ಮತ್ತು ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಗಳಿಗೆ ತಲುಪಿಸಬೇಕು ಎಂದು ನಾನು ಮನವಿ ಮಾಡುತ್ತೇನೆ. ತಾವೆಷ್ಟು ಕಷ್ಟ ಪಡುತ್ತಿದ್ದೇವೆ ಎಂಬುದನ್ನು ಜನಸಾಮಾನ್ಯರು ಈ ಪುಸ್ತಕದ ಮೂಲಕ ತಿಳಿದುಕೊಳ್ಳುವುದಕ್ಕಿಂತಲೂ ಸರ್ಕಾರದ ಆಕ್ರೋಶದಿಂದ ಜನರನ್ನು ಪಾರು ಮಾಡುವುದು ಹೇಗೆ, ಪೊಲೀಸ್‌ ದೌರ್ಜನ್ಯದಿಂದ ಜನಸಾಮಾನ್ಯರನ್ನು ರಕ್ಷಿಸುವುದು ಹೇಗೆ ಎಂಬುದು ಮುಖ್ಯವಾಗಬೇಕಿದೆ” ಎಂದರು.

“ಸಿನಿಮಾದಲ್ಲಿ ಅಂಬೇಡ್ಕರ್‌ ಅವರನ್ನು ಎಷ್ಟರ ಮಟ್ಟಿಗೆ ಬಿಂಬಿಸಲಾಗಿದೆ, ಮಾರ್ಕ್ಸ್‌ವಾದವನ್ನು ಎಷ್ಟರ ಮಟ್ಟಿಗೆ ತೋರಿಸಲಾಗಿದೆ ಎಂಬುದು ಮುಖ್ಯವಲ್ಲ. ಬದಲಿಗೆ ಪರಿಶಿಷ್ಟ ಜಾತಿಗಳು, ಆದಿವಾಸಿ ಸಮುದಾಯಗಳಿಗೆ ಈ ದೇಶದಲ್ಲಿ ಬದುಕುವ ಹಕ್ಕಿದೆಯೇ ಅವರನ್ನು ಸಮಾಜ ಒಳಗೊಂಡಿದೆಯೇ ಅಥವಾ ಹೊರಗಿಟ್ಟಿದೆಯೇ ಎಂಬುದು ಬಹುಮುಖ್ಯ ಸಂಗತಿ” ಎಂದರು.

“ಒಮ್ಮೆ ಮಹಾತ್ಮ ಗಾಂಧಿಯವರು ಭಾರತ ಹಳ್ಳಿಗಳ ದೇಶ ಎಂದಾಗ ಅಂಬೇಡ್ಕರ್‌ ಅವರು ಯಾವ ಹಳ್ಳಿಯ ಬಗ್ಗೆ ಹೇಳುತ್ತಿದ್ದೀರಿ ಬಾಪೂಜಿ? ಭಾರತದ ಪ್ರತಿಯೊಂದು ಸ್ಥಳದಲ್ಲಿಯೂ ಎರಡು ಹಳ್ಳಿಗಳಿವೆ. ಪಟ್ಟಭದ್ರ ಹಿತಾಸಕ್ತಿಗಳಿಗೊಂದು ಹಳ್ಳಿಯಿದೆ. ಪರಿಶಿಷ್ಟ ಜಾತಿಗಳಿಗೊಂದು ಹಳ್ಳಿಯಿದೆ ಎಂದು ಅವರು ತಿಳಿಸಿದಾಗ ಮಹಾತ್ಮ ಗಾಂಧಿ ಮೌನವಾದರು” ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕೃತಿಯ ಲೇಖಕರಾದ ಕರ್ನಾಟಕ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್‌ ಎನ್‌ ನಾಗಮೋಹನ್‌ ದಾಸ್‌, ಮಾಜಿ ಸಚಿವೆ ಹಾಗೂ ಸಾಹಿತಿ ಬಿ ಟಿ ಲಲಿತಾ ನಾಯಕ್‌, ಅಖಿಲ ಭಾರತ ವಕೀಲರ ಸಂಘದ ರಾಜ್ಯ ಸಮಿತಿ ಅಧ್ಯಕ್ಷ ಎಸ್‌ ಶಂಕರಪ್ಪ, ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ವಾದ) ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್‌, ದಲಿತ ಹಕ್ಕುಗಳ ಸಮಿತಿ ರಾಜ್ಯ ಸಂಚಾಲಕ ಗೋಪಾಲಕೃಷ್ಣ ಹರಳಹಳ್ಳಿ ಮತ್ತಿತರರು ಉಪಸ್ಥಿತರಿದ್ದರು.