Supreme Court 
ಸುದ್ದಿಗಳು

ಗಲ್ಲು ಶಿಕ್ಷೆ ಪ್ರಶ್ನಿಸಿ ಕೆಂಪು ಕೋಟೆ ದಾಳಿಕೋರನ ಅರ್ಜಿ: ದೆಹಲಿ ಸರ್ಕಾರದ ಪ್ರತಿಕ್ರಿಯೆ ಕೇಳಿದ ಸುಪ್ರೀಂ ಕೋರ್ಟ್‌

ಮುಕ್ತ ನ್ಯಾಯಾಲಯದಲ್ಲಿ ಕ್ಯುರೆಟಿವ್‌ ಅರ್ಜಿಯ ವಿಚಾರಣೆ ನಡೆಸಿದ ಪೀಠ ದೆಹಲಿ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.

Bar & Bench

2000ರಲ್ಲಿ ದೆಹಲಿಯ ಕೆಂಪುಕೋಟೆ ಮೇಲೆ ದಾಳಿ ನಡೆಸಿ ಭಾರತೀಯ ಸೇನೆಯ ರಾಜಪುತಾನ ರೈಫಲ್ಸ್‌ನ 7ನೇ ಘಟಕದ ಮೂವರು ಯೋಧರನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಗೆ ಮರಣದಂಡನೆ ವಿಧಿಸಿರುವುದನ್ನು ಪ್ರಶ್ನಿಸಿ ಲಷ್ಕರ್‌-ಇ-ತಯ್ಯಬಾ ಉಗ್ರ ಹಾಗೂ ಪಾಕಿಸ್ತಾನಿ ಪ್ರಜೆ ಮೊಹಮ್ಮದ್ ಆರಿಫ್ ಸಲ್ಲಿಸಿದ್ದ ಕ್ಯುರೇಟಿವ್‌ ಅರ್ಜಿ ಸಂಬಂಧ ಸುಪ್ರೀಂ ಕೋರ್ಟ್‌ ಗುರುವಾರ ದೆಹಲಿ ಸರ್ಕಾರದ ಪ್ರತಿಕ್ರಿಯೆ ಕೇಳಿದೆ [ಮೊಹಮ್ಮದ್ ಆರಿಫ್ @ ಅಶ್ಫಾಕ್ ಮತತು ದೆಹಲಿ ಸರ್ಕಾರ ನಡುವಣ ಪ್ರಕರಣ].

ಮುಕ್ತ ನ್ಯಾಯಾಲಯದಲ್ಲಿ ಕ್ಯುರೆಟಿವ್ ಅರ್ಜಿಯ ವಿಚಾರಣೆ ನಡೆಸಿದ ಸಿಜೆಐ ಸೂರ್ಯಕಾಂತ್ ಹಾಗೂ ನ್ಯಾಯಮೂರ್ತಿಗಳಾದ ವಿಕ್ರಂ ನಾಥ್ ಮತ್ತು ಜೆ ಕೆ ಮಹೇಶ್ವರಿ ಅವರನ್ನೊಳಗೊಂಡ ಪೀಠ ದೆಹಲಿ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.

2000ನೇ ಇಸವಿಯ ಡಿಸೆಂಬರ್ 22ರ ರಾತ್ರಿ ಕೆಂಪು ಕೋಟೆಯಲ್ಲಿ ಕರ್ತವ್ಯ ನಿರತರಾಗಿದ್ದ ರಜಪುತಾನಾ ರೈಫಲ್ಸ್‌ನ ಮೂವರು ಯೋಧರನ್ನು ಉಗ್ರರು ಹತ್ಯೆಗೈದಿದ್ದರು. ಉಗ್ರರು ಹಿಂಬಾಗದ ಗೋಡೆ ಹತ್ತಿ ಪರಾರಿಯಾಗಿದ್ದರು.

ನಂತರ ಸೆರೆ ಸಿಕ್ಕಿದ್ದ ಆರಿಫ್ ವಿರುದ್ಧ ಭಾರತೀಯ ದಂಡ ಸಂಹಿತೆ, ಶಸ್ತ್ರಾಸ್ತ್ರ ಕಾಯಿದೆ, ವಿದೇಶಿಗರ ಕಾಯಿದೆ ಹಾಗೂ ಸ್ಫೋಟಕ ಪದಾರ್ಥಗಳ ಕಾಯಿದೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. 2005ರ ಅಕ್ಟೋಬರ್ 31ರಂದು ದೆಹಲಿ ಸೆಷನ್ಸ್ ನ್ಯಾಯಾಲಯವು ಆರಿಫ್‌ಗೆ ಮರಣದಂಡನೆ ವಿಧಿಸಿತು. ತೀರ್ಪನ್ನು 2007ರಲ್ಲಿ ದೆಹಲಿ ಹೈಕೋರ್ಟ್ ಮತ್ತು 2011ರಲ್ಲಿ ಸುಪ್ರೀಂ ಕೋರ್ಟ್ ಎತ್ತಿಹಿಡಿದಿದ್ದವು.

ಆರಿಫ್ ನಂತರ ಸಲ್ಲಿಸಿದ್ದ ಮರುಪರಿಶೀಲನಾ ಹಾಗೂ ಕ್ಯುರೆಟಿವ್ ಅರ್ಜಿಗಳನ್ನು ನ್ಯಾಯಾಲಯಗಳು ತಿರಸ್ಕರಿಸಿದ್ದವು. 2014ರಲ್ಲಿ ಸುಪ್ರೀಂ ಕೋರ್ಟ್ ಸಂವಿಧಾನಿಕ ಪೀಠ ಮರಣದಂಡನೆ ದೃಢೀಕರಣಕ್ಕೆ ಸಂಬಂಧಿಸಿದ ಎಲ್ಲಾ ಪ್ರಕರಣಗಳನ್ನು ತ್ರಿಸದಸ್ಯ ಪೀಠವೇ ವಿಚಾರಣೆ ನಡೆಸಬೇಕು ಎಂದು ತೀರ್ಪು ನೀಡಿತ್ತು.

ಈ ಹಿನ್ನೆಲೆಯಲ್ಲಿ ಆರಿಫ್ ಮತ್ತೊಮ್ಮೆ ರಿವ್ಯೂ ಅರ್ಜಿ ಸಲ್ಲಿಸಿದ್ದ. ಆದರೆ 2022ರ ನವೆಂಬರ್‌ನಲ್ಲಿ ಅಂದಿನ ಮುಖ್ಯ ನ್ಯಾಯಮೂರ್ತಿ ಯು ಯು ಲಲಿತ್ ನೇತೃತ್ವದ ತ್ರಿಸದಸ್ಯ ಪೀಠ ಆ ಅರ್ಜಿಯನ್ನೂ ತಿರಸ್ಕರಿಸಿ ಮರಣದಂಡನೆ ಎತ್ತಿಹಿಡಿದಿತ್ತು. ತೀರ್ಪನ್ನು ಪ್ರಶ್ನಿಸಿ ಆರಿಫ್‌ ಮತ್ತೊಮ್ಮೆ ಕ್ಯುರೇಟಿವ್‌ ಅರ್ಜಿ ಸಲ್ಲಿಸಿದ್ದಾನೆ.