

ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಹಾಗೂ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತಿತರರ ವಿರುದ್ಧದ ಅಕ್ರಮ ಹಣ ವರ್ಗಾವಣೆ ದೂರು ವಜಾಗೊಳಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಜಾರಿ ನಿರ್ದೇಶನಾಲಯ ಸಲ್ಲಿಸಿದ್ದ ಅರ್ಜಿಗೆ ಸಂಬಂದಿಸಿದಂತೆ ದೆಹಲಿ ಹೈಕೋರ್ಟ್ ಸೋನಿಯಾ ಗಾಂಧಿ, ರಾಹುಲ್ ಹಾಗೂ ಇನ್ನಿತರರಿಗೆ ಸೋಮವಾರ ನೋಟಿಸ್ ನೀಡಿದೆ.
ಜಾರಿ ನಿರ್ದೇಶನಾಲಯದ ವಾದ ಆಲಿಸಿದ ನ್ಯಾಯಮೂರ್ತಿ ರವೀಂದರ್ ದುಡೇಜಾ ಅವರು ಗಾಂಧಿ ಕುಟುಂಬದಿಂದ ಪ್ರತಿಕ್ರಿಯೆ ಕೋರಿದರು.
ವಿಚಾರಣಾ ನ್ಯಾಯಾಲಯದ ತೀರ್ಪು ಜಾರಿಯಾದರೆ, ಹಣ ಅಕ್ರಮ ವರ್ಗಾವಣೆ ಕಾಯಿದೆ (ಪಿಎಂಎಲ್‌ಎ) ಅರ್ಥಹೀನವಾಗುತ್ತದೆ ಎಂದು ಜಾರಿ ನಿರ್ದೇಶನಾಲಯದ ಪರ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದರು.
ಪ್ರಕರಣಕ್ಕೆ ಅಂತಿಮ ತೀರ್ಪು ನೀಡುವ ಅಗತ್ಯವಿದೆ. ಪಿಎಂಎಲ್‌ಎಯಲ್ಲಿ ಎಫ್‌ಐಆರ್ ದಾಖಲಿಸುವುದು ಕಡ್ಡಾಯವಲ್ಲ. ಆರೋಪ ಇರಬೇಕು, ಕೃತ್ಯ ಅಪರಾಧಿಕವಾಗಿರಬೇಕು, ಕೃತ್ಯ ಪಿಎಂಎಲ್‌ಎ ವ್ಯಾಪ್ತಿಗೆ ಬರುವಂತಿರಬೇಕು ಎಂದಷ್ಟೇ ಕಾಯಿದೆ ಹೇಳುತ್ತದೆ. ವಿಚಾರಣಾ ನ್ಯಾಯಾಲಯ ಕಾನೂನು ಅರ್ಥೈಸಿರುವಾಗ ಎಡವಿದೆ. ತೀರ್ಪು ಹಾಗೆಯೇ ಉಳಿದರೆ ಇ ಡಿಗೆ ಅಕ್ರಮ ಹಣ ವರ್ಗಾವಣೆ ಪ್ರಕರಣಗಳನ್ನು ಮುಂದುವರೆಸುವುದು ಅಸಾಧ್ಯವಾಗುತ್ತದೆ. ತೀರ್ಪು ಪಿಎಂಎಲ್‌ಎ ಕಾಯಿದೆಯ ಉದ್ದೇಶವನ್ನೇ ಹಾಳು ಮಾಡುತ್ತದೆ. ಹಾಗಾಗಿ ತೀರ್ಪನ್ನು ರದ್ದುಗೊಳಿಸಬೇಕು ಎಂದು ಮನವಿ ಮಾಡಿದರು.
ಮುಖ್ಯ ಅರ್ಜಿ ಹಾಗೂ ತಡೆಯಾಜ್ಞೆ ಅರ್ಜಿಗೆ ಸಂಬಂಧಿಸಿದಂತೆ ನೋಟಿಸ್ ನೀಡಿದ ನ್ಯಾಯಾಲಯ , ವಿಚಾರಣೆಯನ್ನು ಮಾರ್ಚ್ 12, 2026ಕ್ಕೆ ಮುಂದೂಡಿತು. ಗಾಂಧಿ ಕುಟುಂಬದ ಪರವಾಗಿ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿದರು.
ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಒಡೆತನ ಹೊಂದಿದ್ದ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್‌ಗೆ (ಎಜೆಎಲ್) ಕಾಂಗ್ರೆಸ್ ಪಕ್ಷ ₹ 90 ಕೋಟಿಯಷ್ಟು ಸಾಲ ನೀಡಿತ್ತು. ಯಂಗ್ ಇಂಡಿಯಾ ಸಂಸ್ಥೆ ಕಾಂಗ್ರೆಸ್‌ಗೆ ಕೇವಲ ₹ 50 ಲಕ್ಷ ಹಣ ನೀಡಿ ಎಜೆಎಲ್ ಕಾಂಗ್ರೆಸ್‌ಗೆ ನೀಡಬೇಕಿದ್ದ ₹ 90 ಕೋಟಿಯಷ್ಟು ಹಣ ಹಿಂಪಡೆಯಬೇಕಾದ ಹಕ್ಕನ್ನು ತನ್ನದಾಗಿಸಿಕೊಂಡಿತ್ತು ಎಂಬುದು ಹಗರಣದ ಸಾರ. ಈಕ್ವಿಟಿ ವಹಿವಾಟಿನಲ್ಲಿ ₹2,000 ಕೋಟಿಗೂ ಅಧಿಕ ಆಸ್ತಿ ಅವ್ಯವಹಾರ ನಡೆದಿದೆ ಎಂಬ ಆರೋಪವೂ ಕೇಳಿಬಂದಿತ್ತು.
ಸೋನಿಯಾ, ರಾಹುಲ್ ಗಾಂಧಿ ಮಾತ್ರವಲ್ಲದೆ ಮೋತಿಲಾಲ್ ವೋರಾ, ಆಸ್ಕರ್ ಫರ್ನಾಂಡಿಸ್, ಸುಮನ್ ದುಬೆ, ಸ್ಯಾಮ್ ಪಿತ್ರೋಡಾ ಮತ್ತು ಗಾಂಧಿ ಕುಟುಂಬದ ನಿಯಂತ್ರಣದಲ್ಲಿರುವ - ಯಂಗ್ ಇಂಡಿಯನ್ ಲಿಮಿಟೆಡ್ ವಿರುದ್ಧ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಖಾಸಗಿ ದೂರು ದಾಖಲಿಸಿ ವಂಚನೆ, ಕ್ರಿಮಿನಲ್ ಪಿತೂರಿ, ಕ್ರಿಮಿನಲ್ ನಂಬಿಕೆ ದ್ರೋಹ ಹಾಗೂ ಆಸ್ತಿ ದುರುಪಯೋಗದ ಆರೋಪ ಮಾಡಿದ್ದರು.
ಡಿಸೆಂಬರ್ 16ರಂದು ಪ್ರಕರಣ ಆಲಿಸಿದ್ದ ರೌಸ್ ಅವೆನ್ಯೂ ನ್ಯಾಯಾಲಯ ಸಂಕೀರ್ಣದಲ್ಲಿರುವ ಭ್ರಷ್ಟಾಚಾರ ನಿಗ್ರಹ ಕಾಯಿದೆಯಡಿ ರೂಪುಗೊಂಡಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ವಿಶಾಲ್ ಗೋಗ್ನೆ ಅವರು ಖಾಸಗಿ ದೂರನ್ನಾಧರಿಸಿ ಪ್ರಕರಣ ದಾಖಲಾಗಿದ್ದು ಎಫ್ಐಆರ್ ಇಲ್ಲದೇ ಇರುವುದರಿಂದ ಪಿಎಂಎಲ್‌ಎ ಕಾಯಿದೆಯಡಿಇ ಡಿ ಸಲ್ಲಿಸಿರುವ ದೂರು ವಿಚಾರಣೆಗೆ ಅರ್ಹವಲ್ಲ ಎಂದಿದ್ದರು. ಇದನ್ನು ಪ್ರಶ್ನಿಸಿ ಇ ಡಿ ದೆಹಲಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು.