ದೆಹಲಿಯ ಕೆಂಪು ಕೋಟೆ ಸಮೀಪ ನಡೆದ ಕಾರ್ ಬಾಂಬ್ ಸ್ಫೋಟ ಪ್ರಕರಣದ ಸಹ ಆರೋಪಿಯನ್ನು ದೆಹಲಿ ನ್ಯಾಯಾಲದೆದುರು ಹಾಜರುಪಡಿಸಲು ಸಾಧ್ಯವಾಗುವಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ವಶಕ್ಕೆ ನೀಡಿ ಶ್ರೀನಗರ ನ್ಯಾಯಾಲಯ ಆದೇಶಿಸಿದೆ.
ಕೆಲ ದಿನಗಳ ಹಿಂದೆ ದೆಹಲಿಯ ಕೆಂಪು ಕೋಟೆ ಬಳಿ ಕಾರ್ ಬಾಂಬ್ ಸ್ಫೋಟಗೊಂಡು 15 ಜನ ಸಾವನ್ನಪ್ಪಿದ್ದರು. ಹಲವರು ಗಾಯಗೊಂಡಿದ್ದರು.
ಜಸೀರ್ ಬಿಲಾಲ್ ವಾನಿ ಅಲಿಯಾಸ್ ಡ್ಯಾನಿಶ್ ಘಟನೆಯ ಪ್ರಮುಖ ಸಂಚುಕೋರನಾಗಿದ್ದ ಡಾ. ಉಮರ್ ನಬಿಯ ಪ್ರಮುಖ ಸಹಚರ. ಡ್ರೋನ್‌ಗಳನ್ನು ಅಗತ್ಯಕ್ಕೆ ತಕ್ಕಂತೆ ಮಾರ್ಪಾಡು ಮಾಡುವುದು, ರಾಕೆಟ್‌ಗಳ ಬಳಕೆ ಸೇರಿದಂತೆ ದಾಳಿಕೋರನಿಗೆ ವಾನಿ ತಾಂತ್ರಿಕ ಸಹಾಯ ಒದಗಿಸಿದ್ದ ಎಂದು ಸೋಮವಾರ ಬಿಡುಗಡೆ ಮಾಡಿದ್ದ ಪ್ರಕಟಣೆಯಲ್ಲಿ ಎನ್ಐಎ ತಿಳಿಸಿತ್ತು.
ವಾನಿಯನ್ನು ಬಂಧಿಸಿದ ಬಳಿಕ ವಿಶೇಷ ನ್ಯಾಯಾಧೀಶ ಮಂಜೀತ್ ರಾಯ್ ಅವರೆದುರು ಹಾಜರುಪಡಿಸಲಾಗಿತ್ತು. ಆರೋಪಿಯನ್ನು ದೆಹಲಿ ನ್ಯಾಯಾಲಯಕ್ಕೆ ಒಪ್ಪಿಸುವಂತೆ ಕೋರಿ ಅರ್ಜಿ ಸಲ್ಲಿಸಲಾಗಿತ್ತು.
ಬಿಎನ್‌ಎಸ್ ಸೆಕ್ಷನ್ 103(1), 109(1), 61(2), ಯುಎಪಿಎ ಕಾಯಿದೆಯ ಸೆಕ್ಷನ್‌ಗಳು 16 ಮತ್ತು 18, ಸ್ಫೋಟಕ ಪದಾರ್ಥ ಕಾಯಿದೆಯ ಸೆಕ್ಷನ್‌ಗಳು 3 ಮತ್ತು 4 ಅಡಿ ವಾನಿ ವಿರುದ್ಧ ಆರೋಪ ಮಾಡಲಾಗಿದೆ. ಕೃತ್ಯ ಘೋರ ಮತ್ತು ಗಂಭೀರ ಸ್ವರೂಪದ್ದಾಗಿದ್ದು ದೇಶದ ಭದ್ರತೆ, ಸಾರ್ವಭೌಮತೆ ಮತ್ತು ಸಮಗ್ರತೆಗೆ ಧಕ್ಕೆ ತರುವಂತಿದೆ ಎಂದು ನ್ಯಾಯಾಲಯ ತಿಳಿಸಿದೆ.
ಆರೋಪಿಯನ್ನು ದೆಹಲಿ ವಿಶೇಷ ನ್ಯಾಯಾಲಯದೆದುರು ಹಾಜರುಪಡಿಸಬೇಕಿದೆ. ಆದರೆ ತಾನೇ ಆರೋಪಿಯನ್ನು ದೆಹಲಿಗೆ ಹಾಜರಿಪಡಿಸುವುದು ಪ್ರಾಯೋಗಿಕವಾಗಿ ಸಾಧ್ಯವಿಲ್ಲ. ಆದ್ದರಿಂದ ಆತನನ್ನು ವರ್ಗಾಯಿಸಲು ಅವಕಾಶ ನೀಡುವುದು ಅಗತ್ಯ. ಆತನನ್ನು ದೆಹಲಿಯ ಎನ್‌ಐಎ ನ್ಯಾಯಾಲಯದೆದುರು ಹಾಜರುಪಡಿಸಬೇಕು ಎಂದು ಅದು ಆದೇಶಿಸಿದೆ.
ನವೆಂಬರ್ 19ರವರೆಗೆ (ನಾಳೆ) ಎನ್‌ಐಎ ವಾನಿಯನ್ನು ವಶಕ್ಕೆ ಪಡೆಯಬಹುದಾಗಿದ್ದು ನಂತರ ದೆಹಲಿಯ ವಿಶೇಷ ನ್ಯಾಯಾಲಯಕ್ಕೆ ಒಪ್ಪಿಸಬೇಕು ಎಂದು ನ್ಯಾಯಾಲಯ ತಿಳಿಸಿದೆ.
ಬಾಂಬ್ ಸ್ಫೋಟದ ಹಿಂದಿನ ಪಿತೂರಿ ಬಯಲು ಮಾಡಲು ಬೇರೆ ಬೇರೆ ಆಯಾಮಗಳಿಂದ ತನಿಖೆ ನಡೆಸುವಂತೆಯೂ ಅದು ಎನ್‌ಐಆಗೆ ನಿರ್ದೇಶಿಸಿದೆ.