ವಿಮಾನಯಾನ ಟಿಕೆಟ್ ಮರುಪಾವತಿ
ವಿಮಾನಯಾನ ಟಿಕೆಟ್ ಮರುಪಾವತಿ  
ಸುದ್ದಿಗಳು

ಲಾಕ್‌ಡೌನ್ ಸಮಯದಲ್ಲಿ ವಿಮಾನಯಾನ ರದ್ದು: ಟಿಕೆಟ್ ಮರುಪಾವತಿ ವಿಧಾನ ಕುರಿತು ಸ್ಪಷ್ಟನೆ ನೀಡಿದ ಡಿಜಿಸಿಎ

Bar & Bench

ಕೋವಿಡ್- 19 ಸಾಂಕ್ರಾಮಿಕದಿಂದಾಗಿ ರದ್ದುಗೊಂಡ ವಿಮಾನಯಾನದ ಟಿಕೆಟ್ ಮರುಪಾವತಿ ಮಾಡುವ ವಿಚಾರ ಕುರಿತಂತೆ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಸುಪ್ರೀಂಕೋರ್ಟಿಗೆ ಅಫಿಡವಿಟ್ ಸಲ್ಲಿಸಿದೆ.

ಟಿಕೆಟ್ ಮರುಪಾವತಿಯ ಕೆಲ ಸಂಗತಿಗಳ ಕುರಿತಂತೆ ಈ ಹಿಂದೆ ಸುಪ್ರೀಂಕೋರ್ಟ್, ಕೇಂದ್ರ ಸರ್ಕಾರದ ಸ್ಪಷ್ಟನೆ ಬಯಸಿತ್ತು. ಈ ಹಿನ್ನೆಲೆಯಲ್ಲಿ ‘ಟ್ರಾವೆಲ್ ಏಜೆಂಟರ ಮೂಲಕ ಅಥವಾ ನೇರವಾಗಿ ವಿಮಾನಯಾನ ಸಂಸ್ಥೆಗಳ ಮೂಲಕ ದೇಶೀಯ ವಿಮಾನಗಳಿಗಾಗಿ ಕಾಯ್ದಿರಿಸಿದ ಎಲ್ಲಾ ಟಿಕೆಟ್‌ಗಳಿಗೆ ಮರುಪಾವತಿ ಮಾಡಲಾಗುವುದು’ ಎಂದು ಡಿಜಿಸಿಎ ಅಫಿಡವಿಟ್ಟಿನಲ್ಲಿ ತಿಳಿಸಿದೆ.

ಅಲ್ಲದೆ ಅಂತರರಾಷ್ಟ್ರೀಯ ಪ್ರಯಾಣಕ್ಕೆ ಸಂಬಂಧಿಸಿದಂತೆ, ಭಾರತದಿಂದ ಕಾಯ್ದಿರಿಸಿದ ಎಲ್ಲಾ ಟಿಕೆಟ್ ಗಳಿಗೆ ಪ್ರಯಾಣಿಕರು ಮರುಪಾವತಿ ಪಡೆಯಲು ಅರ್ಹರಾಗಿರುತ್ತಾರೆ.

ಬುಕ್ಕಿಂಗ್ ಅವಧಿಗೆ ಸಂಬಂಧಿಸಿದಂತೆ ಅನೇಕರು ಸ್ಪಷ್ಟನೆ ಕೇಳಿದ್ದು ಇದು ನಿರ್ಣಾಯಕ ಅಂಶವಾಗಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಹಿಂದೆ ನಿಗದಿಗೊಳಿಸಿದಂತೆ ರಾಷ್ಟ್ರವ್ಯಾಪಿಯಲ್ಲಿ ಜಾರಿಯಾದ ಮೊದಲ ಲಾಕ್‌ಡೌನ್ ಹಂತದಲ್ಲಿ ರದ್ದುಗೊಳಿಸಿದ ವಿಮಾನಗಳಿಗೆ ಸಂಬಂಧಿಸಿದಂತೆ ಮರುಪಾವತಿ ಮಾನ್ಯವಾಗಿರುತ್ತದೆ ಎಂದು ತಿಳಿಸಲಾಗಿದೆ.

ಇದರ ನಡುವೆ ಸಮಸ್ಯೆ ಇತ್ಯರ್ಥಗೊಳಿಸಲು ಡಿಜಿಸಿಎ ಪ್ರಯಾಣಿಕರನ್ನು ಮೂರು ವರ್ಗಗಳಾಗಿ ವಿಂಗಡಿಸಿದೆ:

  • ಲಾಕ್‌ಡೌನ್‌ಗೆ ಮುಂಚಿತವಾಗಿ ಮೇ 24ರವರೆಗೂ ಬುಕಿಂಗ್ ಮಾಡಿದವರಿಗೆ, ಮರುಪಾವತಿಯುನ್ನು ಕ್ರೆಡಿಟ್ ಶೆಲ್ ಯೋಜನೆ (ಪ್ರಯಾಣಿಕರಿಗೆ ಹಣದ ಬದಲಿಗೆ ಮತ್ತೆ ಬುಕ್ಕಿಂಗ್ ಅವಕಾಶ ಕಲ್ಪಿಸಲು ನೀಡುವ ಸೌಲಭ್ಯ) ಮತ್ತು ಅದರಡಿಯ ಪ್ರೋತ್ಸಾಹಕ ಕ್ರಮಗಳ ಮೂಲಕ ಕಲ್ಪಿಸಲಾಗುತ್ತದೆ.

  • ಲಾಕ್‌ಡೌನ್ ಸಮಯದಲ್ಲಿ ಪ್ರಯಾಣಿಸಲು ಮಾಡಿದ ಬುಕಿಂಗ್‌ಗಾಗಿ, ವಿಮಾನಯಾನ ಸಂಸ್ಥೆಗಳು ತಕ್ಷಣವೇ ಮರುಪಾವತಿ ಮಾಡಬೇಕಾಗುತ್ತದೆ "ಅಂತಹ ಟಿಕೆಟ್‌ಗಳನ್ನು ಏರ್‌ಲೈನ್ಸ್‌ ಗಳು ಕಾಯ್ದಿರಿಸಲು ಅವಕಾಶವಿಲ್ಲದೆ ಇದ್ದುದರಿಂದ" ಹೀಗೆ ಮಾಡಬೇಕಾಗುತ್ತದೆ.

  • ಮೇ 24 ರ ನಂತರದ ದಿನಾಂಕಗಳಲ್ಲಿ ಪ್ರಯಾಣಿಸಲು ಮಾಡಿದ ಬುಕಿಂಗ್‌ಗಾಗಿ, ಮರುಪಾವತಿ ಮಾಡುವುದು ನಾಗರಿಕ ವಿಮಾನಯಾನ ಅಗತ್ಯತೆಗಳ (ಸಿಎಆರ್) ವ್ಯಾಪ್ತಿಗೆ ಒಳಪಟ್ಟಿರುತ್ತದೆ.

ಮೇ 25 ರಿಂದ ದೇಶೀಯ ವಿಮಾನ ಸಂಚಾರ ಆರಂಭವಾದ ಹಿನ್ನೆಲೆಯಲ್ಲಿ ಪ್ರಯಾಣಿಕರನ್ನು ವಿಂಗಡಿಸಲು ಮೇ 24ನೇ ದಿನವನ್ನು ಮಾನದಂಡವಾಗಿ ಪರಿಗಣಿಸಲಾಗಿದೆ ಎಂದು ಅಫಿಡವಿಟ್ ತಿಳಿಸಿದೆ.

ಟೂರ್ ಆಪರೇಟರ್‌ಗಳು ಮತ್ತು ಟ್ರಾವೆಲ್ ಏಜೆಂಟ್‌ಗಳಿಗಾಗಿ ಈ ಬಗೆಯ ಸ್ಪಷ್ಟನೆ ನೀಡಲಾಗಿದೆ:

"ಟೂರ್ ಆಪರೇಟರುಗಳು ತಮ್ಮ ಗ್ರಾಹಕರಿಗೆ ಟಿಕೆಟ್ ಖರೀದಿಸಲು ವಿಮಾನಯಾನ ಸಂಸ್ಥೆಗೆ ಈಗಾಗಲೇ ಹಣ ಪಾವತಿಸಿದ್ದರೆ, ಗ್ರಾಹಕರು ಆ ಹಣವನ್ನು ಏಜೆಂಟರುಗಳಿಗೆ ಇನ್ನೂ ಪಾವತಿಸಬೇಕಿರುತ್ತದೆ ಆಗ ಟಿಕೆಟ್ ರದ್ದು ಆಧರಿಸಿ ಆ ಹಣವನ್ನು ಕ್ರೆಡಿಟ್ ಶೆಲ್ ಆಗಿ ಬದಲಿಸಲಾಗುವುದು. ಇದರಿಂದ ಟಿಕೆಟ್ ಪ್ರಯಾಣಿಕರ ಹೆಸರಿನಲ್ಲಿಯೇ ಉಳಿಯಲಿದೆ. ಒಂದು ವೇಳೆ ಪ್ರಯಾಣಿಕರು ಕ್ರೆಡಿಟ್ ಶೆಲ್ ಉಪಯೋಗಿಸಿದ್ದರೆ ಅಂತಹವರು ಹಣವನ್ನು ಏಜೆಂಟರಿಗೆ ನೀಡುತ್ತಾರೆ ವಿನಾ ವಿಮಾನಯಾನ ಸಂಸ್ಥೆಗಲ್ಲ. ಆದರೂ ಪ್ರಯಾಣಿಕರು ಕ್ರೆಡಿಟ್ ಶೆಲ್ ಅನ್ನು 20 ಮಾರ್ಚ್ 2021ರ ಮಾರ್ಚ್ 20ರವರೆಗೆ ಬಳಸದಿದ್ದರೆ, ಪ್ರಸ್ತಾವಿತ ಸೂತ್ರೀಕರಣದ ಪ್ರಕಾರ ವಿಮಾನಯಾನ ಸಂಸ್ಥೆ ಅದನ್ನು ಮರುಪಾವತಿ ಮಾಡಬೇಕಾಗುತ್ತದೆ. ಮತ್ತು ವಿಮಾನಯಾನ ಸಂಸ್ಥೆಗೆ ಟಿಕೆಟ್ ಮೊತ್ತ ಪಾವತಿಸಿದ್ದ ಏಜೆಂಟರ ಖಾತೆಗೆ ಆ ಹಣ ಮರಳುತ್ತದೆ".

ಬುಕಿಂಗ್ ಮಾಡಿದ ಮತ್ತು ಪಾವತಿಸಿದವರ ಖಾತೆಗಳಿಗೆ ಎಲ್ಲಾ ಮರುಪಾವತಿ ಹಣವನ್ನು ಜಮಾ ಮಾಡಲಾಗುತ್ತದೆ. ಕ್ರೆಡಿಟ್ ಶೆಲ್ ವಿಚಾರದಲ್ಲಿ ಪ್ರಯಾಣಿಕರ ಹೆಸರಿನಲ್ಲಿಯೇ ಟಿಕೆಟ್ ಉಳಿಯಲಿದ್ದು ಅದನ್ನು ಮರುಪಾವತಿ ಮಾಡಬೇಕಾದ ಸಂದರ್ಭದಲ್ಲಿ ಬುಕಿಂಗ್ ಮಾಡಿದ ಆಪರೇಟರ್ ಅಥವಾ ಏಜೆಂಟರ ಖಾತೆಗೆ ಹಣ ಪಾವತಿಸಲಾಗುತ್ತದೆ.

ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಆರ್ ಸುಭಾಷ್ ರೆಡ್ಡಿ ಮತ್ತು ಎಂ ಆರ್ ಶಾ ಅವರ ನೇತೃತ್ವದ ಪೀಠ ಬುಧವಾರ ಪ್ರಕರಣದ ವಿಚಾರಣೆ ಕೈಗೆತ್ತಿಕೊಳ್ಳಲಿದೆ.