ಕೇವಲ ಮದುವೆಯಾಗಲು ನಿರಾಕರಿಸಿದ್ದು ಭಾರತೀಯ ದಂಡ ಸಂಹಿತೆಯಡಿ (ಐಪಿಸಿ) ಆತ್ಮಹತ್ಯೆ ಪ್ರಚೋದನೆಯ ಅಪರಾಧವಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ [ಕಮರುದ್ದೀನ್ ದಸ್ತಗೀರ್ ಸನದಿ ಮತ್ತು ಕರ್ನಾಟಕ ಸರ್ಕಾರ ನಡುವಣ ಪ್ರಕರಣ]
ಯುವತಿಯನ್ನು ಮದುವೆಯಾಗಲು ನಿರಾಕರಿಸಿದ್ದಕ್ಕೆ ಸಂಬಂಧಿಸಿದಂತೆ ವಂಚನೆ ಮತ್ತು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ 2007ರಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಬೆಳಗಾವಿ ಜಿಲ್ಲೆಯ ಆರೋಪಿ ಕಮರುದ್ದೀನ್ ದಸ್ತಗೀರ್ ಸನದಿ ಅವರನ್ನು ಖುಲಾಸೆಗೊಳಿಸಿ ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡಿದೆ.
ಮೇಲ್ಮನವಿದಾರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂಬುದನ್ನು ಸಾಬೀತುಪಡಿಸುವಂತಹ ನೇರ ಪುರಾವೆಗಳು ಇಲ್ಲ ಎಂದು ನ್ಯಾಯಮೂರ್ತಿಗಳಾದ ಪಂಕಜ್ ಮಿತ್ತಲ್ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠ ತಿಳಿಸಿತು.
ಮೃತಳು ತನ್ನನ್ನು ವಿವಾಹವಾಗುವಂತೆ ಕೇಳಿದಾಗ ಆರೋಪಿ ಅದನ್ನು ನಿರಾಕರಿಸಿದ್ದಾರೆ. ಇದು ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಸಕ್ರಿಯ ಕ್ರಿಯೆಯಲ್ಲ. ಇಬ್ಬರ ನಡುವೆ ಪ್ರೀತಿ ಇತ್ತು ಎಂದು ಭಾವಿಸಿದರೂ ಸಂಬಂಧ ಮುರಿದು ಬಿದ್ದ ಮಾತ್ರಕ್ಕೆ ಆರೋಪಿ ಆಕೆಯ ಆತ್ಮಹತ್ಯೆಗೆನೀಡಿದ ಪ್ರಚೋದನೆಯಾಗುವುದಿಲ್ಲ. ಆಕೆಯನ್ನು ಆತ್ಮಹತ್ಯೆ ಮಾಡಿಕೊಳ್ಳುವಂತೆ ಆರೋಪಿ- ಅಪೀಲುದಾರ ಯಾವುದೇ ರೀತಿಯ ಪ್ರಚೋದನೆ ನೀಡಿಲ್ಲ. ಬದಲಿಗೆ ಮದುವೆಯಾಗುವಂತೆ ಮನವೊಲಿಸಲು ಮೊದಲೇ ನಿರ್ಧರಿಸಿ ಮೃತಳೇ ತನ್ನ ಹಳ್ಳಿಯಿಂದ ಕರ್ನಾಟಕದ ಕಾಕತಿಗೆ (ಆರೋಪಿ ನೆಲೆಸಿದ್ದ ಸ್ಥಳ) ಹೋಗುವಾಗ ವಿಷ ತಂದಿದ್ದಳು. ಮನವೊಲಿಕೆ ಯಶಸ್ವಿಯಾಗದೆ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಹೀಗಾಗಿ ಆರೋಪಿ ಅಪೀಲುದಾರ ಆಕೆಯನ್ನು ಮದುವೆಯಾಗಲು ನಿರಾಕರಿಸಿದ್ದ ಎಂಬುದು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣವಾಗುವುದಿಲ್ಲ ಎಂದು ನ್ಯಾಯಾಲಯ ವಿವರಿಸಿದೆ.
ಐಪಿಸಿ ಸೆಕ್ಷನ್ 417 (ವಂಚನೆಗೆ ಶಿಕ್ಷೆ) ಮತ್ತು 306ರ (ಆತ್ಮಹತ್ಯೆಗೆ ಪ್ರಚೋದನೆ) ಅಡಿಯಲ್ಲಿ ತನ್ನ ವಿರುದ್ಧ ಪ್ರಕರಣ ದಾಖಲಿಸಿರುವುದನ್ನು ಮೇಲ್ಮನವಿದಾರ ಕರ್ನಾಟಕ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದ.
ತನ್ನನ್ನು 13 ವರ್ಷ ವಯಸ್ಸಿನಿಂದಲೂ ಪ್ರೀತಿಸುತ್ತಿದ್ದ 21 ವರ್ಷದ ಯುವತಿಯನ್ನು ಮದುವೆಯಾಗುವುದಾಗಿ ಆರೋಪಿ ಮೋಸ ಮಾಡಿದ್ದ. ಹೀಗಾಗಿ ಆಕೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಳು ಎಂದು ಪ್ರಾಸಿಕ್ಯೂಷನ್ ವಾದಿಸಿತ್ತು.
ಆರಂಭದಲ್ಲಿ, ವಿಚಾರಣಾ ನ್ಯಾಯಾಲಯ ಮೇಲ್ಮನವಿದಾರರನ್ನು ಎಲ್ಲಾ ಆರೋಪಗಳಿಂದ ಖುಲಾಸೆಗೊಳಿಸಿತ್ತು. ಲೈಂಗಿಕ ಸಂಬಂಧ, ಪ್ರಚೋದನೆ ಅಥವಾ ಆತ್ಮಹತ್ಯೆಗೆ ಪ್ರೇರೇಪಿಸುವ ಉದ್ದೇಶದ ಯಾವುದೇ ಪುರಾವೆಗಳಿಲ್ಲ ಎಂದು ಆಗ ಅದು ಹೇಳಿತ್ತು.
ಆದರೆ ಖುಲಾಸೆ ಪ್ರಶ್ನಿಸಿ ಕರ್ನಾಟಕ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು. ವಿಚಾರಣೆ ನಡೆಸಿದ ಹೈಕೋರ್ಟ್ ಆತ ದೋಷಿ ಎಂದು ತೀರ್ಪು ನೀಡಿತ್ತು. ವಂಚನೆಗಾಗಿ ಒಂದು ವರ್ಷ ಮತ್ತು ಆತ್ಮಹತ್ಯೆಗೆ ಪ್ರಚೋದನೆಗಾಗಿ ನಾಲ್ಕು ವರ್ಷಗಳ ಶಿಕ್ಷೆ ವಿಧಿಸಲಾಗಿತ್ತು. ಇದನ್ನು ಪ್ರಶ್ನಿಸಿ ಆರೋಪಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ವಿಚಾರಣೆ ವೇಳೆ ಸರ್ವೋಚ್ಚ ನ್ಯಾಯಾಲಯ, ಮದುವೆಯಾಗುವ ನೆಪದಲ್ಲಿ ಆಕೆ ಮತ್ತು ಆತನ ನಡುವೆ ದೈಹಿಕ ಸಂಬಂಧ ಬೆಳೆದಿದ್ದಾಗಲೀ ಅಥವಾ ಲೈಂಗಿಕ ಸಂಭೋಗ ನಡೆದಿತ್ತು ಎಂಬುದನ್ನಾಗಲೀ ಮೃತಳ ಮರಣೋತ್ತರ ಪರೀಕ್ಷಾ ವರದಿ ಹೇಳುವುದಿಲ್ಲ ಎಂಬುದಾಗಿ ತಿಳಿಸಿತು.
ಅಲ್ಲದೆ ತಾನು ವಿಷ ಸೇವಿಸಲು ಅಥವಾ ಆತ್ಮಹತ್ಯೆ ಮಾಡಿಕೊಳ್ಳಲು ಮೇಲ್ಮನವಿದಾರ ಪ್ರೇರೇಪಿಸಿದ್ದ ಎಂದು ಮೃತ ಯುವತಿ ಆರೋಪಿಸಿಲ್ಲ. ಯಾವುದೇ ಪುರಾವೆಗಳೂ ಅಂತಹ ಹೇಳಿಕೆಯನ್ನು ಬೆಂಬಲಿಸುವುದಿಲ್ಲ ಎಂದು ನ್ಯಾಯಾಲಯ ಹೇಳಿತು. ಹೀಗಾಗಿ ಮೇಲ್ಮನವಿದಾರನ ಶಿಕ್ಷೆ ರದ್ದುಗೊಳಿಸಿ ಆತನನ್ನು ಖುಲಾಸೆಗೊಳಿಸಿತು.
ಅರ್ಜಿದಾರರ ಪರವಾಗಿ ವಕೀಲ ಶಿರೀಶ ಕೆ ದೇಶಪಾಂಡೆ ವಾದ ಮಂಡಿಸಿದ್ದರು. ವಕೀಲ ಡಿ ಎಲ್ ಚಿದಾನಂದ ಅವರು ಕರ್ನಾಟಕ ಸರ್ಕಾರವನ್ನು ಪ್ರತಿನಿಧಿಸಿದ್ದರು.