ಸುದ್ದಿಗಳು

ಮಗುವಿನ ದತ್ತು ಸಾಬೀತಿಗೆ ನೋಂದಾಯಿತ ದತ್ತಕ ಪತ್ರ ಸಾಕು, ತೀರ್ಪು ಅಗತ್ಯವಿಲ್ಲ: ಗುಜರಾತ್ ಹೈಕೋರ್ಟ್

ದತ್ತು ಸ್ವೀಕಾರ ಕಾನೂನುಬದ್ಧವಾಗಿದೆಯೇ ಮತ್ತು ಸರಿಯಾದ ಕಾರ್ಯವಿಧಾನ ಪಾಲಿಸಲಾಗಿದೆಯೇ ಎಂಬುದನ್ನು ಸಿವಿಲ್ ನ್ಯಾಯಾಲಯ ಮಾತ್ರ ನಿರ್ಧರಿಸಬಹುದು ಎಂದಿದ್ದ ಬಾಂಬೆ ಹೈಕೋರ್ಟ್ ತೀರ್ಪನ್ನು ಏಕಸದಸ್ಯ ಪೀಠ ಒಪ್ಪಲಿಲ್ಲ.

Bar & Bench

ಮಗು ದತ್ತು ಪಡೆದಿರುವುದನ್ನು ಸಾಬೀತುಪಡಿಸಲು ನೋಂದಾಯಿತ ದತ್ತಕ ಪತ್ರ ಸಾಕು. ಸಿವಿಲ್‌ ನ್ಯಾಯಾಲಯದ ತೀರ್ಪು ಅಗತ್ಯವಿಲ್ಲ ಎಂದು ಗುಜರಾತ್‌ ಹೈಕೋರ್ಟ್‌ ಇತ್ತೀಚೆಗೆ ಹೇಳಿದೆ [ಖೋಜೆಮಾ ಸೈಫುದಿನ್ ದೋಡಿಯಾ ಹಾಗೂ ಜನನ ಮರಣ ನೋಂದಣಾಧಿಕಾರಿ ನಡುವಣ ಪ್ರಕರಣ].

ದತ್ತು ಸ್ವೀಕಾರ ಕಾನೂನುಬದ್ಧವಾಗಿದೆಯೇ ಮತ್ತು ಸರಿಯಾದ ಕಾರ್ಯವಿಧಾನ ಪಾಲಿಸಲಾಗಿದೆಯೇ ಎಂಬುದನ್ನು ಸಿವಿಲ್‌ ನ್ಯಾಯಾಲಯ ಮಾತ್ರ ನಿರ್ಧರಿಸಬಹುದು ಎಂದಿದ್ದ ಬಾಂಬೆ ಹೈಕೋರ್ಟ್‌ ತೀರ್ಪನ್ನು ನ್ಯಾ. ಬಿರೇನ್‌ ವೈಷ್ಣವ್‌ ಅವರಿದ್ದ ಏಕಸದಸ್ಯ ಪೀಠ ಒಪ್ಪಲಿಲ್ಲ.  ಬಾಂಬೆ ಹೈಕೋರ್ಟ್‌ ತೀರ್ಪಿನಲ್ಲಿ ಮಗುವಿನ ಜನನ ಪ್ರಮಾಣಪತ್ರದಿಂದ ಜೈವಿಕ ತಂದೆಯ ಹೆಸರನ್ನು ತೆಗೆದುಹಾಕುವುದು ತೀವ್ರ ಸಮಸ್ಯೆ ಸೃಷ್ಟಿಸುತ್ತದೆ ಎಂದು ತಿಳಿಸಲಾಗಿತ್ತು.

“ಈ ನ್ಯಾಯಾಲಯದ ಅಭಿಪ್ರಾಯದಂತೆ ಹಾಗೆ ಮಾಡಲು ನಿರಾಕರಿಸುವುದು ಮತ್ತು ದತ್ತು ಪಡೆದ ಮಗುವಿನ ಜನನ ಪ್ರಮಾಣಪತ್ರ ಸರಿಪಡಿಸದೇ ಇರುವುದು ವಿವಿಧ ಸಾರ್ವಜನಿಕ ಅಥವಾ ಇನ್ನಿತರ ಪ್ರಾಧಿಕಾರಗಳೊಂದಿಗೆ ನಡೆಸುವ ದಿನನಿತ್ಯದ ವ್ಯವಹಾರಗಳಿಗೆ ಪ್ರಾಯೋಗಿಕ ತೊಂದರೆ ಉಂಟು ಮಾಡುತ್ತದೆ. ಜನನ ಮತ್ತು ಮರಣಗಳ ನೋಂದಣಿ ಕಾಯಿದೆಯ ಸೆ. 15ರ ಪ್ರಕಾರ ಅಧಿಕಾರವನ್ನು ಪಕ್ಷಗಳ ಪರ ಚಲಾಯಿಸದಿದ್ದರೆ ಅವರು ತೀವ್ರ ತೊಂದರೆ ಎದುರಿಸಬೇಕಾಗುತ್ತದೆ” ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟರು.

ತನ್ನ ಮಗುವಿನ ಮಧ್ಯದ ಮತ್ತು ಕೊನೆಯ ಹೆಸರನ್ನು ಬದಲಿಸಲು ಮಹಳೆಯೊಬ್ಬರು ಸಲ್ಲಿಸಿದ್ದ ಮನವಿಯ ವಿಚಾರಣೆ ವೇಳೆ ನ್ಯಾಯಾಲಯ ಈ ವಿಚಾರ ತಿಳಿಸಿತು.

ಮೊದಲ ಮದುವೆಯ ಫಲವಾಗಿ ಮಗುವನ್ನು ಪಡೆದಿದ್ದ ಮಹಿಳೆ ನಂತರ ಮೊದಲ ಪತಿಗೆ ವಿಚ್ಛೇದನ ನೀಡಿ ಬೇರೊಬ್ಬ ವ್ಯಕ್ತಿಯನ್ನು ವಿವಾಹವಾಗಿದ್ದರು. ಎರಡನೇ ಮದುವೆ ನಂತರ ಆಕೆಯೇ ತನ್ನ ಮಗುವಿನ ಪೋಷಣೆ  ಮಾಡುತ್ತಿದ್ದುದರಿಂದ ಆಕೆಯ ಎರಡನೇ ಪತಿ ಮತ್ತು ಆಕೆ ಅದೇ  ಮಗುವನ್ನು ದತ್ತು ಪಡೆದಿದ್ದರು. ಬಳಿಕ ಮಗುವಿನ ಜನನ ಪ್ರಮಾಣಪತ್ರದಲ್ಲಿದ್ದ ಜೈವಿಕ ತಂದೆಯ ಹೆಸರಿನ ಬದಲಿಗೆ ಎರಡನೇ ಪತಿಯ ಹೆಸರನ್ನು ಸೇರಿಸಲು ಮುಂದಾಗಿದ್ದರು.

ಆದರೆ ದಂಪತಿ, ದತ್ತು ಪತ್ರವನ್ನು ಮಾತ್ರ ಸಲ್ಲಿಸಿದ್ದು ಅದರ ಬಗ್ಗೆ ನ್ಯಾಯಾಲಯ ನೀಡಿದ್ದ ತೀರ್ಪಿನ ಪ್ರತಿಯನ್ನು ಸಲ್ಲಿಸಿಲ್ಲ ಎಂಬ ಕಾರಣಕ್ಕೆ ಅಧಿಕಾರಿಗಳು ದಂಪತಿಯ ಅರ್ಜಿಯನ್ನು ತಿರಸ್ಕರಿಸಿದ್ದರು.

ಹಿಂದೂ ದತ್ತಕ ಮತ್ತು ಜೀವನಾಂಶ ಕಾಯಿದೆ- 1956ರ ಸೆಕ್ಷನ್ 16ರ ಪ್ರಕಾರ, ಯಾವುದೇ ದತ್ತು ಪತ್ರವನ್ನು ನೋಂದಾಯಿಸಿದಾಗ, ದತ್ತು ಸ್ವೀಕಾರಕ್ಕೆ ಸಂಬಂಧಿಸಿದ ದಾಖಲೆಗಳ ಕುರಿತಂತೆ ಪೂರ್ವಸೂಚನೆಯೊಂದಿದ್ದು ಅದನ್ನು ನಿರಾಕರಿಸದೇ ಅದು ದತ್ತು ಕಾಯಿದೆಯ ನಿಬಂಧನೆಗಳಿಗೆ ಅನುಗುಣವಾಗಿದೆ ಎಂದು ಭಾವಿಸತಕ್ಕದ್ದು ಎಂಬುದಾಗಿ ಗುಜರಾತ್‌ ಹೈಕೋರ್ಟ್‌ನ ಮತ್ತೊಂದು ಏಕಸದಸ್ಯ ಪೀಠ ತ್ನ ಆದೇಶದಲ್ಲಿ ದಾಖಲಿಸಿರುವುದಾಗಿ ನ್ಯಾ. ವೈಷ್ಣವ್‌ ವಿವರಿಸಿದ್ದಾರೆ.

ಆದರೆ ನ್ಯಾ. ವೈಷ್ಣವ್‌ ಅವರೆದುರು ವಾದ ಮಂಡಿಸಿದ ಅಧಿಕಾರಿಗಳು ಕಾಯಿದೆಯ ಸೆಕ್ಷನ್ 16ರ ಪ್ರಕಾರ ಪೂರ್ವಸೂಚನೆಯನ್ನು ಸಕ್ಷಮ ನ್ಯಾಯಾಲಯದೆದುರು ಇಡಬೇಕೆ ವಿನಾ ನೋಂದಣಾಧಿಕಾರಿ ಎದುರು ಅಲ್ಲ ಎಂದು ಬಾಂಬೆ ಹೈಕೋರ್ಟ್‌ ಅಭಿಪ್ರಾಯಪಟ್ಟಿರುವುದಾಗಿ ತಿಳಿಸಿದ್ದರು.

ಇದನ್ನು ಒಪ್ಪದ ಗುಜರಾತ್‌ ಹೈಕೋರ್ಟ್‌ “ದಾಖಲೆಗಳು ಕಾನೂನುಬದ್ಧವಾಗಿವೆ ಎಂಬುದನ್ನು ನ್ಯಾಯಾಲಯ ಮಾತ್ರವೇ ಪರಿಗಣಿಸಬೇಕು ಎಂಬ (ಬಾಂಬೆ ಹೈಕೋರ್ಟ್‌) ವಿಭಾಗೀಯ ಪೀಠದ ಅವಲೋಕನಗಳು ಸರಿಯಲ್ಲ . ನೋಂದಣಿ ಒಪ್ಪಂದದಲ್ಲಿ ತೊಡಗಿರುವ ಪಕ್ಷಕಾರರು ಮಗುವನ್ನು ದತ್ತು ತೆಗೆದುಕೊಳ್ಳಲು ಸಮ್ಮತಿ ಸೂಚಿಸಿದ್ದಾರೆ.  ದತ್ತು ತೆಗೆದುಕೊಳ್ಳುವ ವಿಧಿ- ವಿಧಾನಕ್ಕೆ ಸಂಬಂಧಿಸಿದಂತೆ ಜೈವಿಕ ತಂದೆಯಿಂದ ಯಾವ ಆಕ್ಷೇಪಣೆಗಳೂ ಬಂದಿಲ್ಲದೇ ಇರುವುದರಿಂದ ಪೂರ್ವಸೂಚನೆಯನ್ನು ನಿರಾಕರಿಸಬಹುದಾದರೂ ಅದಕ್ಕೆ ತಡೆ ಅಥವಾ ವಿವಾದ ಉಂಟು ಮಾಡುವ ಕೆಲಸ ನಡೆದಿಲ್ಲ ಎಂಬುದನ್ನು ಪರಿಗಣಿಸಿ ನೋಂದಣಾಧಿಕಾರಿ ಮುಂದೆ ದತ್ತು ಪತ್ರವನ್ನು ಸಲ್ಲಿಸಿರುವಾಗ ನ್ಯಾಯಾಲಯದ ತೀರ್ಪಿನ ಪ್ರತಿಯನ್ನು ಸಲ್ಲಿಸುವಂತೆ ಪಕ್ಷಕಾರರನ್ನು ಹಿಂದಕ್ಕೆ ಕಳಿಸುವಂತಹ ತಿದ್ದುಪಡಿ ಮಾಡಲು ರಿಜಿಸ್ಟ್ರಾರ್‌ಗೆ ಅಧಿಕಾರವಿಲ್ಲ” ಎಂದಿದೆ.  ಈ ಹಿನ್ನೆಲೆಯಲ್ಲಿ ಅಧಿಕಾರಿಗಳ ಆದೇಶ ರದ್ದುಗೊಳಿಸಿದ ಪೀಠ ಅರ್ಜಿದಾರರು ಬಯಸಿದಂತೆ ಬದಲಾವಣೆಗಳನ್ನು ಮಾಡಬೇಕು ಎಂದು ನೋಂದಣಾಧಿಕಾರಿಗೆ ಆದೇಶಿಸಿದೆ.