ಹಿಂದೂ ಕಾಯಿದೆಯಡಿ ದತ್ತಕ ಮಾನ್ಯವಾಗಿರುವುದು ಸಾಬೀತಾಗಿರುವಾಗ, ದತ್ತುಪತ್ರ ನೋಂದಾಯಿಸಿಲ್ಲ ಎಂಬ ಕಾರಣಕ್ಕೆ ದತ್ತು ಮಕ್ಕಳಿಗೆ ರೈಲ್ವೆ ನೀತಿಯಡಿ ಅನುಂಕಪ ಆಧಾರಿತ ಉದ್ಯೋಗ ನಿರಾಕರಿಸುವಂತಿಲ್ಲ ಎಂದು ಒಡಿಶಾ ಹೈಕೋರ್ಟ್ ಹೇಳಿದೆ [ಭಾರತ ಒಕ್ಕೂಟ ಮತ್ತಿತರರು ಹಾಗೂ ಕೆ ಮನೋಜ್ ಪಾತ್ರಾ ಇನ್ನಿತರರ ನಡುವಣ ಪ್ರಕರಣ].
ಮೃತ ರೈಲ್ವೆ ಉದ್ಯೋಗಿಯ ದತ್ತು ಪುತ್ರ ಕೆ. ಮನೋಜ್ ಪಾತ್ರಾರಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡುವುದನ್ನು ಪರಿಗಣಿಸಬೇಕೆಂದು ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ (ಸಿಎಟಿ- ಕ್ಯಾಟ್) ನೀಡಿದ್ದ ಆದೇಶ ಪ್ರಶ್ನಿಸಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಈ ತೀರ್ಪು ನೀಡಲಾಗಿದೆ.
ಆ ಮೂಲಕ ಕೇಂದ್ರ ಸರ್ಕಾರ ಮತ್ತು ಆಗ್ನೇಯ ರೈಲ್ವೆ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಕೃಷ್ಣ ಎಸ್ ದೀಕ್ಷಿತ್ ಮತ್ತು ಸಿಬೋ ಶಂಕರ್ ಮಿಶ್ರಾ ಅವರನ್ನೊಳಗೊಂಡ ವಿಭಾಗೀಯ ಪೀಠ ವಜಾಗೊಳಿಸಿದೆ.
ದತ್ತಕವು ಮಾನ್ಯವಾಗಲು ದತ್ತುಪತ್ರದ ನೋಂದಣಿ ಅವಶ್ಯಕ ಎಂದು 1908ರ ನೋಂದಣಿ ಕಾಯಿದಯೆ ಸೆಕ್ಷನ್ 17(1) ಅಥವಾ 1956ರ ಹಿಂದು ದತ್ತಕ ಮತ್ತು ಪಾಲನಾ ಕಾಯಿದೆಯ ಯಾವುದೇ ಸೆಕ್ಷನ್ ಹೇಳುವುದಿಲ್ಲ ಎಂದು ಅದು ಸ್ಪಷ್ಟಪಡಿಸಿದೆ.
“ಮುಲ್ಲಾ ಅವರ ಹಿಂದು ಕಾಯಿದೆ ಕೃತಿಯಲ್ಲಿ ವಿವರಿಸಿದಂತೆ ಮಾನ್ಯ ದತ್ತಕಕ್ಕೆ ಅಗತ್ಯವಿರುವ ಎಲ್ಲಾ ಅಂಶಗಳು ಪೂರ್ಣಗೊಂಡ ಕೂಡಲೇ ದತ್ತಕ ಜಾರಿಗೆ ಬರಲಿದೆ; ನೋಂದಣಿಯಾಗಿದ್ದರೂ ಇಲ್ಲದಿದ್ದರೂ ಅದು ಮಾನ್ಯವಾಗಿರುತ್ತದೆ” ಎಂದು ನ್ಯಾಯಾಲಯ ಹೇಳಿದೆ.
1956ರ ಕಾಯಿದೆಯ ಸೆಕ್ಷನ್ 16ರ ಪ್ರಕಾರ ಸರಿಯಾಗಿ ಜಾರಿಗೆ ತಂದ ದತ್ತುಪತ್ರಕ್ಕೆ ಸಿಂಧುತ್ವದ ಮಾನ್ಯತೆ ಈ ಮೊದಲೇ ಇದ್ದು ಎಂಬುದನ್ನು ಸೂಚಿಸಿದ ಅದು ದತ್ತುಪತ್ರದ ನೋಂದಣಿ ಐಚ್ಛಿಕವಾಗಿದೆ, ಬದಲಿಗೆ ಕಡ್ಡಾಯವಲ್ಲ ಎಂದಿದೆ.
ಪ್ರಸ್ತುತ ಪ್ರಕರಣಕ್ಕೆ ಸಿವಿಲ್ ನ್ಯಾಯಾಲಯ 2021ರಲ್ಲಿ ನೀಡಿದ್ದ ಆದೇಶ ಪಾತ್ರ ಅವರ ದತ್ತಕ 2003ರಲ್ಲೇ ಕಾನೂನುಬದ್ಧವಾಗಿ ನಡೆದಿತ್ತು ಎಂದು ದೃಢಪಡಿಸಿದ್ದರಿಂದ, ಉದ್ಯೋಗಿಯ ಮರಣಕ್ಕೂ ಮುಂಚೆಯೇ ದತ್ತಕ ಪೂರ್ಣಗೊಂಡಿದೆ ಎಂದು ಹೈಕೋರ್ಟ್ ಹೇಳಿದೆ. ದತ್ತು ತಂದೆ ನಿಧನರಾದ ಬಳಿಕ ದತ್ತುಪತ್ರ ನೋಂದಾಯಿಸಲ್ಪಟ್ಟಿರುವುದರಿಂದ ಸೆಕ್ಷನ್ 16ರ ಪೂರ್ವಾನುಮಾನ ಅನ್ವಯವಾಗದಿದ್ದರೂ, ಅದರಿಂದ ದತ್ತಕದ ಮೂಲ ಮಾನ್ಯತೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಅಂತಿಮವಾಗಿ ಪಾತ್ರಾ ಅವರಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡುವುದನ್ನು ಪರಿಗಣಿಸಬೇಕು ಎಂಬ ಸಿಎಟಿ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ.