ನ್ಯಾಯಾಂಗ ನಿಂದನೆ ಕ್ರಮ ಎಂಬುದು ಟೀಕೆ ಹತ್ತಿಕ್ಕಲು ನ್ಯಾಯಾಧೀಶರು ಬಳಸುವ ಖಡ್ಗವಲ್ಲ: ಸುಪ್ರೀಂ ಕೋರ್ಟ್‌

ನ್ಯಾಯಾಧೀಶರು 'ನಾಯಿ ಮಾಫಿಯಾ'ದ ಭಾಗವಾಗಿದ್ದಾರೆ ಎಂದು ಹೇಳಿದ್ದ ಮಹಿಳೆಯೊಬ್ಬರಿಗೆ ಬಾಂಬೆ ಹೈಕೋರ್ಟ್ ವಿಧಿಸಿದ್ದ ಒಂದು ವಾರ ಅವಧಿಯ ಜೈಲು ಶಿಕ್ಷೆಯನ್ನು ಪೀಠ ರದ್ದುಗೊಳಿಸಿದೆ.
Supreme Court
Supreme Court
Published on

ನ್ಯಾಯಾಂಗ ನಿಂದನೆಗೆ ಶಿಕ್ಷೆ ವಿಧಿಸುವ ಅಧಿಕಾರ ಇರುವುದು ನ್ಯಾಯಾಧೀಶರನ್ನು ಟೀಕೆಗಳಿಂದ ರಕ್ಷಿಸಲು ಅಲ್ಲ ಬದಲಿಗೆ ನ್ಯಾಯಾಂಗದ ಘನತೆಯನ್ನು ಎತ್ತಿ ಹಿಡಿಯಲು ಎಂದು ಸುಪ್ರೀಂ ಕೋರ್ಟ್‌ ಬುಧವಾರ ಹೇಳಿದೆ [ವಿನೀತಾ ಶ್ರೀನಂದನ್ ಮತ್ತುಬಾಂಬೆ ಹೈಕೋರ್ಟ್‌ ನಡುವಣ ಪ್ರಕರಣ]

ಅಂತೆಯೇ ನ್ಯಾಯಾಧೀಶರು 'ನಾಯಿ ಮಾಫಿಯಾ'ದ ಭಾಗವಾಗಿದ್ದಾರೆ ಎಂದು ಹೇಳಿದ್ದ ಮಹಿಳೆಯೊಬ್ಬರಿಗೆ ಬಾಂಬೆ ಹೈಕೋರ್ಟ್ ವಿಧಿಸಿದ್ದ ಒಂದು ವಾರ ಅವಧಿಯ ಜೈಲು ಶಿಕ್ಷೆಯನ್ನು ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠ ರದ್ದುಗೊಳಿಸಿದೆ.

Also Read
ನ್ಯಾಯಮೂರ್ತಿಗಳು ನಾಯಿ ಮಾಫಿಯಾದ ಭಾಗ ಎಂದ ಮಹಿಳೆ: ಒಂದು ವಾರ ಜೈಲು ಶಿಕ್ಷೆ ವಿಧಿಸಿದ ಬಾಂಬೆ ಹೈಕೋರ್ಟ್

ಅಪರಾಧಿ ನೈಜವಾಗಿ ಪಶ್ಚಾತ್ತಾಪ ವ್ಯಕ್ತಪಡಿಸಿದಾಗ ನ್ಯಾಯಾಲಯಗಳು ಕರುಣೆಯಿಂದ ಶಿಕ್ಷೆಯ ಬಗ್ಗೆ ಮೆದುವಾಗಿ ನಡೆದುಕೊಳ್ಳಬೇಕು. ಕರುಣೆ ನ್ಯಾಯಾಂಗ ಆತ್ಮಸಾಕ್ಷಿಯ ಅವಿಭಾಜ್ಯ ಅಂಗವಾಗಿರಬೇಕು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ನ್ಯಾಯಾಲಯದ ಎದುರು ನಿಂತಿರುವ ವ್ಯಕ್ತಿ ತನ್ನ ಕೃತ್ಯಕ್ಕಾಗಿ ನೈಜ ಪಶ್ಚಾತ್ತಾಪ ವ್ಯಕ್ತಪಡಿಸಿದ ಸಂದರ್ಭದಲ್ಲಿ ಶಿಕ್ಷಿಸುವ ಅಧಿಕಾರ ಸಹಜವಾಗಿಯೇ ಕ್ಷಮಿಸುವ ಅಧಿಕಾರವನ್ನೂ ಒಳಗೊಂಡಿರುತ್ತದೆ. ನ್ಯಾಯಾಂಗ ನಿಂದನೆ ವಿರುದ್ಧ ಕ್ರಮ ಕೈಗೊಳ್ಳಲು ಇರುವ ಅಧಿಕಾರ ನ್ಯಾಯಾಧೀಶರ ವೈಯಕ್ತಿಕ ಗುರಾಣಿಯಲ್ಲ, ವಿಮರ್ಶೆಯನ್ನು ಮಣಿಸಲು ಬಳಸುವ ಕತ್ತಿಯೂ ಅಲ್ಲ,” ಎಂದು ಪೀಠ ಹೇಳಿದೆ.

ಬೀದಿ ನಾಯಿಗಳ ನಿರ್ವಹಣೆಗೆ ಸಂಬಂಧಿಸಿದ ಪ್ರಾಣಿ ಜನನ ನಿಯಂತ್ರಣ ನಿಯಮಾವಳಿ, 2023ರ ನಿಯಮಾವಳಿ ಪ್ರಶ್ನಿಸಿ ನವಿ ಮುಂಬೈನ ವಸತಿ ಸಂಘವಾದ ಸೀವುಡ್ಸ್ ಎಸ್ಟೇಟ್ಸ್ ಲಿಮಿಟೆಡ್  ಅರ್ಜಿ ಸಲ್ಲಿಸಿತ್ತು. ಸಂಘದ ವಸತಿ ಸಮುಚ್ಛಯದಲ್ಲಿ ವಾಸಿಸುತ್ತಿರುವ ಲೀಲಾ ವರ್ಮಾ ವಸತಿ ಸಂಘದ ಕ್ರಮಗಳು ತಮ್ಮ ಮೂಲಭೂತ ಹಕ್ಕುಗಳ ಮೇಲೆ ಪರಿಣಾಮ ಬೀರುತ್ತಿವೆ ಎಂದು ತಿಳಿಸಿ ಪ್ರಕರಣದಲ್ಲಿ ಭಾಗಿಯಾಗಲು ಕೇಳಿಕೊಂಡಿದ್ದರು. ತಮ್ಮ ಕೋರಿಕೆಗೆ ಪೂರಕವಾದ ದಾಖಲೆಯಾಗಿ, ಆ ಸಮಯದಲ್ಲಿ ಸಂಘದ ಸಾಂಸ್ಕೃತಿಕ ನಿರ್ದೇಶಕಿಯಾಗಿದ್ದ ವಿನೀತಾ ಶ್ರೀನಂದನ್  ನೀಡಿದ್ದ ಸುತ್ತೋಲೆಯನ್ನು ಅವರು ಸಲ್ಲಿಸಿದ್ದರು.

ಸುತ್ತೋಲೆಯನ್ನು ವಸತಿ ಸಂಕೀರ್ಣದಲ್ಲಿ ವಾಸಿಸುವ 1,500 ಕುಟುಂಬಗಳಿಗೆ ಹಂಚಲಾಗಿತ್ತು. ದೇಶದ ನಗರ ಪ್ರದೇಶಗಳು 'ನಾಯಿಗೆ ಆಹಾರ ಹಾಕುವವರ ಮಾಫಿಯಾ'ಗೆ ಗುರಿಯಾಗಿವೆ. ಈ ಮಾಫಿಯಾದಲ್ಲಿ ಸಹಾನುಭೂತಿ ಹೊಂದಿರುವ ನ್ಯಾಯಮೂರ್ತಿಗಳು ಸಹ ಇದ್ದಾರೆ. ನ್ಯಾಯಮೂರ್ತಿಗಳು ಶ್ವಾನದಾಳಿಯ ಪುರಾವೆ ನಿರ್ಲಕ್ಷಿಸುತ್ತಿದ್ದು ನಿವಾಸಿಗಳ ದೂರುಗಳನ್ನು ವಜಾಗೊಳಿಸುತ್ತಿದ್ದಾರೆ ಎಂದು ತಿಳಿಸಲಾಗಿತ್ತು.

 ಇದರ ನಂತರ, ನ್ಯಾಯಾಲಯವು ವಿನೀತಾ ಶ್ರೀನಂದನ್ ಮತ್ತು ಸೀವುಡ್ಸ್ ಎಸ್ಟೇಟ್ಸ್‌ಗೆ ನ್ಯಾಯಾಂಗ ನಿಂದನೆಗೆ ಸಂಬಂಧಿಸಿದಂತೆ ಶೋಕಾಸ್‌ ನೋಟಿಸ್‌ ನೀಡಿತ್ತು. ಸುತ್ತೋಲೆಗೂ ತನಗೂ ಸಂಬಂಧವಿಲ್ಲ ಎಂದು ಸೀವುಡ್ಸ್‌ ಎಸ್ಟೇಟ್ಸ್‌ ಕಂಪೆನಿ ತಿಳಿಸಿತ್ತು. ಕ್ಷಮೆ ಯಾಚಿಸಿದ್ದ ಅದು ಮುಖ್ಯಸ್ಥೆಯ ಮಾತುಗಳು ಅಜಾಗರೂಕವಾದವು ಎಂದು ತಿಳಿಸಿತ್ತು. ಅದನ್ನು ಮನ್ನಿಸಿದ್ದ ನ್ಯಾಯಾಲಯ ಅದರ ವಿರುದ್ಧ ಕ್ರಮ ಕೈಗೊಳ್ಳುವುದನ್ನು ಬಿಟ್ಟಿತ್ತು.

ಆದರೆ, ವಿನೀತಾ ಅವರು ಸಲ್ಲಿಸಿದ್ದ ಕ್ಷಮೆಯಾಚನೆ ಅಫಿಡವಿಟ್‌ ಒಪ್ಪದ ನ್ಯಾಯಾಲಯ ಇದೊಂದು ಕಣ್ಣೊರೆಸುವ ತಂತ್ರ, ಕ್ಷಮಿಸಿ ಎನ್ನುವ ವಾಡಿಕೆಯ ಮಂತ್ರ ಎಂದಿತು. ಅಂತೆಯೇ ಒಂದು ವಾರ ಸಾದಾ ಜೈಲು ಶಿಕ್ಷೆ ಮತ್ತು ₹2,000 ದಂಡ ವಿಧಿಸಿತ್ತು. ಶಿಕ್ಷೆ ರದ್ದುಗೊಳಿಸುವಂತೆ ಕೋರಿ ವಿನಿತಾ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು.

Also Read
ಮಗುವಿನ ಮೇಲೆ ದಾಳಿ: ಆಕ್ರಮಣಕಾರಿ ನಾಯಿ ತಳಿ ನಿಷೇಧ ಕುರಿತು ಕೇಂದ್ರ, ದೆಹಲಿ ಸರ್ಕಾರದ ಪ್ರತಿಕ್ರಿಯೆ ಕೇಳಿದ ಹೈಕೋರ್ಟ್

ವಾದ ಆಲಿಸಿದ ಸುಪ್ರೀಂ ಕೋರ್ಟ್‌ ವಿನಿತಾ ಅವರ ಸುತ್ತೋಲೆ ಕ್ರಿಮಿನಲ್‌ ನ್ಯಾಯಾಂಗ ನಿಂದನೆಯ ಅಂಶಗಳಿಗೆ ಅನುಗುಣವಾಗಿದೆ ಎಂಬುದನ್ನು ಒಪ್ಪಿಕೊಂಡರೂ ತಕ್ಷಣವೇ ಅವರು ಪಶ್ಚಾತ್ತಾಪ ವ್ಯಕ್ತಪಡಿಸಿರುವುದರಿಂದ ಅವರ ಕ್ಷಮೆಯಾಚನೆಯನ್ನು ಹೈಕೋರ್ಟ್‌ ತಿರಸ್ಕರಿಸುವ ಮೂಲಕ ಎಡವಿದೆ ಎಂದು ಅಭಿಪ್ರಾಯಪಟ್ಟಿದೆ.

ನ್ಯಾಯಾಂಗ ನಿಂದನೆ ಕಾಯಿದೆಯ ಸೆಕ್ಷನ್‌ 12ರ ಪ್ರಕಾರ ಕ್ಷಮೆಯಾಚನೆ ನೈಜತೆಯಿಂದ ಕೂಡಿದ್ದರೆ ಅದನ್ನು ತಿರಸ್ಕರಿಸಬಾರದು. ನ್ಯಾಯಾಂಗ ಘನತೆ ಮತ್ತು ಮನುಷ್ಯ ಸಹಜ ತಪ್ಪುಗಳ ನಡುವಿನ ಸಮತೋಲನವನ್ನು ಕಾಯಿದೆಯೇ ಸರಿದೂಗಿಸಿದೆ ಎಂದು ಅದು ಹೇಳಿದೆ.

 ನ್ಯಾಯಾಂಗ ನಿಂದನೆ ಅಧಿಕಾರವನ್ನು ನ್ಯಾಯಾಲಯಗಳು ಸಂಯಮದಿಂದ ಮತ್ತು ಕರುಣೆಯಿಂದ ಬಳಸಬೇಕು ಎಂದು ಅದು ತಿಳಿಸಿತು. ಅಂತೆಯೇ ಬಾಂಬೆ ಹೈಕೋರ್ಟ್‌ ಏಪ್ರಿಲ್ 2025ರಲ್ಲಿ ನೀಡಿದ್ದ ತೀರ್ಪನ್ನು ರದ್ದುಗೊಳಿಸಿತು.

Kannada Bar & Bench
kannada.barandbench.com