Supreme Court and NLAT 
ಸುದ್ದಿಗಳು

ಯಾವುದೇ ನಿಟ್ಟಿನಿಂದ ನೋಡಿದರೂ ಎನ್‌ಎಲ್‌ಎಟಿಯನ್ನು ಯಶಸ್ವಿ ಎನ್ನಲಾಗದು: ಸುಪ್ರೀಂ ಕೋರ್ಟ್‌ನಲ್ಲಿ ಪ್ರತ್ಯುತ್ತರ ಮನವಿ

ಮತ್ತೊಂದೆಡೆ, ಎನ್‌ಎಲ್‌ಎಸ್‌ಐಯು ಕಾರ್ಯಕಾರಿ ಸಮಿತಿ ನೇತೃತ್ವ ವಹಿಸಿರುವ ಸುಪ್ರೀಂ ಕೋರ್ಟ್ ನ್ಯಾ. ಯು ಯು ಲಲಿತ್ ಒಪ್ಪಿಗೆ ಅನುಸಾರ ಎನ್‌ಎಲ್‌ಎಟಿ ನಡೆಸಲಾಗಿದೆ ಎಂದು ವಿವಿ ಉಪಕುಲಪತಿ ಪ್ರೊ. ಸುಧೀರ್ ಕೃಷ್ಣಸ್ವಾಮಿ ಮನವಿಯಲ್ಲಿ ವಿವರಿಸಿದ್ದಾರೆ

Bar & Bench

ರಾಷ್ಟ್ರೀಯ ಕಾನೂನು ಪ್ರವೃತ್ತಿ ಪರೀಕ್ಷೆ (ಎನ್ಎಲ್‌ಎಟಿ) ನಡೆದ ಬೆನ್ನಿಗೆ ಸುಪ್ರೀಂ ಕೋರ್ಟ್‌ನಲ್ಲಿ ಪ್ರತ್ಯುತ್ತರ ಮನವಿ ಸಲ್ಲಿಸಲಾಗಿದ್ದು, ಪರೀಕ್ಷೆಯನ್ನು ವಜಾಗೊಳಿಸಿ ಸಾಮಾನ್ಯ ಕಾನೂನು ಪ್ರವೇಶಾತಿ ಪರೀಕ್ಷೆ (ಸಿಎಲ್‌ಎಟಿ) ಅಂಕಗಳನ್ನು ಆಧರಿಸಿ ಬೆಂಗಳೂರಿನ ಭಾರತೀಯ ವಿಶ್ವವಿದ್ಯಾಲಯದ ರಾಷ್ಟ್ರೀಯ ಕಾನೂನು ಶಾಲೆಗೆ (ಎನ್ಎಲ್‌ಎಸ್‌ಐಯು) ಪ್ರವೇಶ ಕಲ್ಪಿಸಬೇಕು ಎಂದು ಮನವಿ ಮಾಡಲಾಗಿದೆ.

ಎನ್‌ಎಲ್‌ಎಟಿ ಪ್ರಶ್ನಿಸಿ ಎನ್‌ಎಲ್‌ಎಸ್‌ಐಯು ವಿಶ್ರಾಂತ ಉಪಕುಲಪತಿ ಪ್ರೊ. ವೆಂಕಟರಾವ್ ಮತ್ತು ವಿದ್ಯಾರ್ಥಿಗಳ ಪೋಷಕರು ಅರ್ಜಿ ಸಲ್ಲಿಸಿದ್ದು, ಈಗ ಅದಕ್ಕೆ ಪ್ರತ್ಯುತ್ತರವನ್ನೂ (ರಿಜಾಯಿಂಡರ್) ದಾಖಲಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಎಲ್‌ಎಸ್‌ ಒಕ್ಕೂಟವೂ ತನ್ನ ಕಾರ್ಯದರ್ಶಿ ಮತ್ತು ಎನ್‌ಎಎಲ್‌ಎಸ್‌ಎಆರ್‌ ಉಪಕುಲಪತಿ ಪ್ರೊ. ಫೈಜಾನ್ ಮುಸ್ತಾಫಾ ಅವರ ಮೂಲಕ ಅರ್ಜಿದಾರರಿಗೆ ಬೆಂಬಲ ವ್ಯಕ್ತಪಡಿಸಿ ಪ್ರತಿ ಅಫಿಡವಿಟ್ ಸಲ್ಲಿಸಲಾಗಿದೆ. ಎನ್‌ಎಲ್‌ಎಸ್‌ಐಯು ತನ್ನ ರಿಜಿಸ್ಟ್ರಾರ್ ಪ್ರೊ. ಸರಸು ಎಸ್ತರ್ ಥಾಮಸ್‌ ಮತ್ತು ಉಪ ಕುಲಪತಿ ಪ್ರೊ. ಸುಧೀರ್ ಕೃಷ್ಣ ಸ್ವಾಮಿ ಅವರ ಮೂಲಕ ಪ್ರತಿ ಅಫಿಡವಿಟ್ ದಾಖಲಿಸಿದೆ.

ಎನ್‌ಎಲ್‌ಎಟಿ ನಡೆಸುವಲ್ಲಿ ಎನ್‌ಎಲ್‌ಎಸ್‌ಐಯು ದಯನೀಯವಾಗಿ ವಿಫಲವಾಗಿದ್ದು, ಅಪಾರ ಅಭ್ಯರ್ಥಿ ಸಮೂಹಕ್ಕೆ ಯಾತನೆ ನೀಡಿದೆ. ಪರೀಕ್ಷೆ ಮತ್ತು ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮಾಯವಾಗಿದ್ದು, ಇದನ್ನು ಯಾವುದೇ ನಿಟ್ಟಿನಿಂದ ನೋಡಿದರೂ ಯಶಸ್ವಿ ಎನ್ನಲಾಗದು ಎಂದು ಪ್ರತ್ಯುತ್ತರ ಮನವಿಯಲ್ಲಿ ವಿವರಿಸಲಾಗಿದೆ.

ಬೇಜವಾಬ್ದಾರಿಯುತ ನಡೆ ಅನುಸರಿಸುವ ಮೂಲಕ ಸಾಮೂಹಿಕ ನಿರ್ಧಾರಗಳಿಗೆ ಪ್ರಾಶಸ್ತ್ಯ ನೀಡದೇ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯವನ್ನು ಅತಂತ್ರಕ್ಕೆ ನೂಕಿ ಎನ್‌ಎಲ್‌ಎಸ್‌ಐಯು ಪರೀಕ್ಷೆ ನಡೆಸಿದೆ. ಎನ್‌ಎಲ್‌ಎಟಿ ನಡೆಸುವುದು ಅಸಾಧ್ಯ ಎಂಬುದು ತಿಳಿದಿದ್ದರೂ ಪರೀಕ್ಷೆ ನಡೆಸಿರುವ ಎನ್‌ಎಲ್‌ಎಸ್‌ಐಯು ನಡೆಯು ದುರುದ್ದೇಶದಿಂದ ಕೂಡಿದೆ ಎಂಬುದು ಇದರಿಂದ ತಿಳಿಯುತ್ತದೆ ಎಂದು ಎನ್‌ಎಲ್‌ಎಸ್‌ ಒಕ್ಕೂಟದ ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಒಕ್ಕೂಟದ ನೇತೃತ್ವದಲ್ಲಿ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳಿಗೆ ಪ್ರವೇಶ ಕಲ್ಪಿಸುವ ಸುಪ್ರೀಂ ಕೋರ್ಟ್ ಪ್ರಯತ್ನ ಮತ್ತು ಆದೇಶಗಳನ್ನು ಪ್ರತ್ಯೇಕವಾಗಿ ಎನ್‌ಎಲ್‌ಎಟಿ ನಡೆಸುವ ಮೂಲಕ ಸೋಲಿಸಲಾಗಿದೆ ಎಂದು ಒಕ್ಕೂಟ ಹೇಳಿದೆ.

ಪರೀಕ್ಷೆ ನಡೆಸುವ ತನ್ನ ನಿಲುವನ್ನು ಸಮರ್ಥಿಸಿಕೊಂಡಿರುವ ಎನ್‌ಎಲ್‌ಎಸ್‌ಐಯು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಲಾಗಿರುವ ಮನವಿಯ ನಿರ್ವಹಣೆಯನ್ನು ಪ್ರಶ್ನಿಸಿದ್ದು, ದುಬಾರಿ ದಂಡ ವಿಧಿಸುವ ಮೂಲಕ ರಿಟ್ ಅರ್ಜಿಯನ್ನು ವಜಾಗೊಳಿಸುವಂತೆ ಮನವಿ ಮಾಡಿದೆ.

ಎನ್‌ಎಲ್‌ಯು ಒಕ್ಕೂಟದ ಪ್ರತಿ-ಅಫಿಡವಿಟ್‌ನಲ್ಲಿನ ಕಲಹ ಕಾರಣಗಳು

  • ಸೆಪ್ಟೆಂಬರ್ 12ರಂದು ಎನ್‌ಎಲ್‌ಎಸ್‌ಐಯು ನಡೆಸಿದ ಎನ್‌ಎಲ್‌ಎಟಿಯು ಹಲವು ಪ್ರಶ್ನೆಗಳಿಗೆ ಎಡೆಮಾಡಿಕೊಟ್ಟಿದ್ದು, ಎನ್‌ಎಲ್‌ಎಟಿ ಸಮಗ್ರತೆಯ ಮೇಲೆ ಪ್ರಶ್ನೆ ಹೇಳುವಂತೆ ಮಾಡಿದೆ. ಇದು ವಿದ್ಯಾರ್ಥಿಗಳ ಸಮಾನತೆ ಅಥವಾ ಅವಕಾಶದ ಹಕ್ಕೂ ಸೇರಿದಂತೆ ಹಲವನ್ನು ಉಲ್ಲಂಘಿಸಿದೆ.

  • ಪರೀಕ್ಷೆಗೆ ಅಗತ್ಯವಾದಷ್ಟು ಪ್ರಚಾರ ದೊರೆತಿಲ್ಲ: ಅಗತ್ಯವಾದಷ್ಟು ಮಟ್ಟಿಗೆ ಎನ್‌ಎಲ್‌ಎಸ್‌ಐಯು ಪರೀಕ್ಷೆ ನಡೆಸುವುದಕ್ಕೆ ಪ್ರಚಾರ ನೀಡಿಲ್ಲ. ಪತ್ರಿಕೆಗಳಲ್ಲಿ ಅಗತ್ಯವಾದಷ್ಟು ಜಾಹೀರಾತು ನೀಡಿಲ್ಲ. ಈ ಮೂಲಕ ಸಿಎಲ್‌ಎಟಿಗೆ ನೋಂದಾಯಿಸಿಕೊಂಡಿದ್ದ ವಿದ್ಯಾರ್ಥಿಗಳನ್ನು ಸಂಪರ್ಕಿಸುವ ಯತ್ನ ಮಾಡಲಾಗಿಲ್ಲ. ಸುಮಾರು 40 ಸಾವಿರ ವಿದ್ಯಾರ್ಥಿಗಳನ್ನು ಎನ್‌ಎಲ್‌ಎಸ್‌ಐಯು ನಲ್ಲಿ ಸೀಟು ಪಡೆಯುವ ಹಕ್ಕಿನಿಂದ ವಂಚಿತಗೊಳಿಸಲಾಗಿದೆ. ವಿಶೇಷವಾಗಿ ತಳಸಮುದಾಯದ ವಿದ್ಯಾರ್ಥಿಗಳನ್ನು ಅವಕಾಶದಿಂದ ವಂಚಿತಗೊಳಿಸಲಾಗಿದೆ.

  • ಪರೀಕ್ಷಾ ಕೇಂದ್ರಗಳ ಸಂಪರ್ಕದ ಕೊರತೆ: ಟೆಸ್ಟ್ ಪ್ಯಾನ್ ಎಂಬ ಏಜೆನ್ಸಿಗೆ ಪರೀಕ್ಷಾ ಕೇಂದ್ರದ ಗುತ್ತಿಗೆ ನೀಡುವ ಮೂಲಕ ಪರೀಕ್ಷೆ ನಡೆಸಿತ್ತು. ಈಶಾನ್ಯ ಭಾರತ, ಪಶ್ಚಿಮ ಬಂಗಾಳ ಮತ್ತು ದೇಶದ ಇತರೆ ಭಾಗಗಳಲ್ಲಿ ಯಾವುದೇ ಕೇಂದ್ರ ತೆರಯಲಾಗಿರಲಿಲ್ಲ.

  • ತಾಂತ್ರಿಕ ದೋಷಗಳಿಂದ ಪರೀಕ್ಷೆ ನಡೆಸುವಲ್ಲಿ ವಿಫಲ: ಎನ್‌ಎಲ್ಎಟಿ ಸಂದರ್ಭದಲ್ಲಿ ಸಾಫ್ಟ್ ವೇರ್ ಕೈಕೊಟ್ಟಿದೆ ಎಂದು ಹಲವು ವರದಿಗಳು ಬಂದಿವೆ. ತಮ್ಮದಲ್ಲದ ಸಮಸ್ಯೆಗಳಿಗೆ ಅಭ್ಯರ್ಥಿಗಳು ಪರೀಕ್ಷೆ ಬರೆಯುವುದರಿಂದ ವಂಚಿತರಾಗಿದ್ದಾರೆ. ನ್ಯಾಯಾಲಯದ ಅನುಮತಿ ಪಡೆಯದೇ ಮರು ಪರೀಕ್ಷೆ ನಡೆಸಲಾಗಿದೆ. ಪರೀಕ್ಷೆಗೆ ಬಳಸಲಾದ ತಂತ್ರಜ್ಞಾನವು ಸಮಾಧಾನಕರವಾಗಿರಲಿಲ್ಲ.

  • ಸಾಮೂಹಿಕ ನಕಲಿನ ಆತಂಕ: ಪರೀಕ್ಷೆ ನಡೆಸಲು ಎನ್‌ಎಲ್‌ಎಸ್‌ಐಯು ನಿಯೋಜಿಸಿದ್ದ ಸಾಫ್ಟ್ ವೇರ್ ಹಲವು ದೋಷಗಳನ್ನು ಹೊಂದಿತ್ತು.

  • ಮರುಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ

  • ಪರೀಕ್ಷೆ ನಡೆಸಲು ವಿಭಿನ್ನವಾದ ಸ್ವರೂಪ, ಸ್ಥಳ ಮತ್ತು ಸಮಯವನ್ನು ಅನುಸರಿಸಲಾಗಿದೆ.

ಅರ್ಜಿದಾರರ ಪ್ರತ್ಯುತ್ತರ ಮನವಿಯಲ್ಲಿ ಎತ್ತಲಾದ ಕಲಹ ಕಾರಣಗಳು

  • ಎನ್‌ಎಲ್‌ಎಟಿ ನಡೆಸುವ ಎನ್‌ಎಲ್‌ಎಸ್‌ಐಯು ನಿರ್ಧಾರವು ಪರ್ಯಾಯ ಕ್ರಮವಾಗಿದ್ದು, ಅದಕ್ಕೆ ಕಾನೂನಿನ ಮಾನ್ಯತೆ ಇಲ್ಲ

  • ಎನ್‌ಎಲ್‌ಎಟಿ ಬರೆಯಲು ಅಗತ್ಯವಾದ ಮರು ತಾಂತ್ರಿಕ ಅವಶ್ಯಕತೆಗಳನ್ನು ಪೂರೈಸಲು ಸಾವಿರಾರು ಮಂದಿಗೆ ಸಾಧ್ಯವಾಗಿಲ್ಲ ಎಂಬುದು ವ್ಯಾಪಕವಾಗಿ ವರದಿಯಾಗಿದೆ.

  • ವ್ಯಾಪಕ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಎನ್‌ಎಲ್‌ಎಸ್‌ಐಯು ಪ್ರವೇಶ ಕ್ರಮಗಳನ್ನು ಕೈಗೊಂಡಿದ್ದು ಅದು ಕಣ್ಣೊರೆಸುವ ಯತ್ನವಾಗಿದೆ.

  • 35 ನಗರದ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿದ್ದು, ಬಹುತೇಕವಾಗಿ ಅವು ರಾಜಧಾನಿ ಕೇಂದ್ರಗಳಾಗಿವೆ. ಒದು ಅಸಮಂಜಸ ಮತ್ತು ಅಸಮಾನತೆಯ ಕ್ರಮ.

  • ಕ್ರಮಬದ್ಧವಾದ ಅಧಿಸೂಚನೆ ಪ್ರಕಟಿಸುವ ಬದಲಿಗೆ ಎನ್‌ಎಲ್‌ಎಸ್‌ಐಯು ರಹಸ್ಯವಾಗಿ ಆಗಾಗ್ಗೆ ಉತ್ತರಿಸಲಾದ ಪ್ರಶ್ನೆಗಳನ್ನು ವೆಬ್‌ ಸೈಟಿನಲ್ಲಿ ಪ್ರಕಟಿಸುವ ಮೂಲಕ ತನ್ನ ನಿಲುವು ಬದಲಿಸಿದೆ. ಯಾವುದೇ ತೆರನಾದ ಪತ್ರಿಕಾ ಪ್ರಚಾರ ನೀಡಿಲ್ಲ. ಇದಕ್ಕೆ ಬದಲಾಗಿ, ಸೀಮಿತ ವ್ಯಾಪ್ತಿ ಹೊಂದಿರುವ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹರಿಯಬಿಡಲಾಗಿದೆ.

  • ಎನ್‌ಎಲ್‌ಎಟಿ ಅಣಕು ಪರೀಕ್ಷೆಯು ಸಮಸ್ಯಾತ್ಮಕವಾಗಿದ್ದು, ದೋಷಗಳಿಂದ ಕೂಡಿದೆ. ಇದರಿಂದ ಅಭ್ಯರ್ಥಿಗಳಿಗೆ ಸಾಕಷ್ಟು ಸಮಸ್ಯೆಯಾಗಿದೆ ಎಂದು ವರದಿಯಾಗಿದೆ. ನಕಲು ಮಾಡಲು ಹಲವು ಸಾಧ್ಯತೆಗಳಿದ್ದವು ಎಂದು ಮಾಧ್ಯಮ ಪೋರ್ಟಲ್ ಗಳು ವರದಿ ಮಾಡಿವೆ.

  • ಸೆಪ್ಟೆಂಬರ್ 12ರಂದು ನಡೆದ ಎನ್‌ಎಲ್‌ಎಟಿಯಲ್ಲಿ ತಾವು ಎದುರಿಸಿದ ಹಲವು ತಾಂತ್ರಿಕ ಸಮಸ್ಯೆಗಳನ್ನು ಅಭ್ಯರ್ಥಿಗಳು ಬಹಿರಂಗಪಡಿಸಿದ್ದಾರೆ. ಅಭ್ಯರ್ಥಿಗಳ ಸಮಸ್ಯೆಗಳಿಗೆ ಕಾನೂನು ವಿಚಾರಗಳಿಗೆ ಸಂಬಂಧಿಸಿದ ಸುದ್ದಿ ಪೋರ್ಟಲ್‌ಗಳು ವರದಿ ಮಾಡಿದ್ದು, ಇದರಲ್ಲಿ ಅಭ್ಯರ್ಥಿಗಳ ನೇರವಾಗಿ ಸಮಸ್ಯೆಗಳನ್ನು ದಾಖಲಿಸುವ ವ್ಯವಸ್ಥೆ ಮಾಡಿದ್ದವು.

  • ಮರು ಪರೀಕ್ಷೆ ನಡೆಸಿದ ಸಂದರ್ಭದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂದು ವರದಿಯಾಗಿದೆ. ಇದು ಎನ್‌ಎಲ್‌ಎಸ್ಐಯುನ ಪ್ರೊಟೋಕೋಲ್ ಸಮಗ್ರತೆ ಮತ್ತು ಎನ್‌ಎಲ್‌ಎಸ್‌ಐಯು ಪರೀಕ್ಷೆಯ ಸಮಗ್ರತೆ ಪ್ರಶ್ನೆ ಹುಟ್ಟುಹಾಕಿದೆ.

  • ಒಕ್ಕೂಟ ಹಿಂದೆ ನಡೆಸಿದ್ದ ಯಾವುದೇ ಪ್ರವೇಶ ಪರೀಕ್ಷೆಗಳಲ್ಲಿ ಇಷ್ಟು ವ್ಯಾಪಕವಾಗಿ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರ ವರದಿಯಾಗಿರಲಿಲ್ಲ.

  • ಎನ್‌ಎಲ್‌ಎಟಿ ವಿಫಲತೆಯಲ್ಲಿ ಎನ್ಎಲ್‌ಎಸ್‌ಐಯು ಉಪ ಕುಲಪತಿ ಪ್ರೊ. ಸುಧೀರ್ ಕೃಷ್ಣಸ್ವಾಮಿ ಅವರು ಸಹಭಾಗಿಯಷ್ಟೇ ಅಲ್ಲ “ತಪ್ಪಿಸಬಹುದಾದ ಒಟ್ಟಾರೆ ಅವ್ಯವಸ್ಥೆಯ ಶಿಲ್ಪಿಯು ಅವರೇ”.

ಎನ್‌ಎಲ್‌ಎಸ್‌ಐಯು ಮತ್ತು ಉಪ ಕುಲಪತಿ ಪ್ರೊ. ಸುಧೀರ್ ಕೃಷ್ಣಸ್ವಾಮಿ ಅವರ ಕಲಹ ಕಾರಣಗಳು

  • ರಿಟ್ ಅರ್ಜಿ ನಿರ್ವಹಿಸಲು ಅರ್ಜಿದಾರರಿಗೆ ಶಾಸನಬದ್ಧ ಮಾನ್ಯತೆ ಇಲ್ಲ

  • ಶೂನ್ಯ ವರ್ಷವನ್ನು ತಪ್ಪಿಸಲು ಎನ್‌ಎಲ್‌ಎಟಿ ನಡೆಸುವುದು ಇದ್ದ ಏಕೈಕ ಮಾರ್ಗ ಎಂದು ಎನ್‌ಎಲ್‌ಎಟಿ ನಡೆಸುವ ನಿರ್ಧಾರ ಸಮರ್ಥನೆ. ಇದರಿಂದ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳು ಎನ್‌ಎಲ್‌ಎಸ್‌ಐಯು ಪ್ರವೇಶಾತಿಯಿಂದ ವಿಮುಖರಾಗುತ್ತಿದ್ದರು.

  • ಎನ್‌ಎಲ್‌ಎಸ್‌ಐಯುನ ಪ್ರಧಾನ ಕಾರ್ಯಕಾರಿ ವಿಭಾಗದ ಕಾರ್ಯಕಾರಿ ಸಮಿತಿಯು ತನ್ನದೇ ಆದ ಪ್ರತ್ಯೇಕ ಪ್ರವೇಶ ಪರೀಕ್ಷೆ ನಡೆಸಲು ಅನುಮತಿ ನೀಡಿತ್ತು.

  • ಕಾರ್ಯಕಾರಿ ಸಮಿತಿಯ ಅವಿರೋಧ ನಿರ್ಧಾರದ ಆಧಾರದಲ್ಲಿ ಎನ್‌ಎಲ್‌ಎಟಿ ನಡೆಸಲಾಗಿದೆ.

  • ಒಕ್ಕೂಟವು ಸಿಎಲ್‌ಎಟಿ ನಡೆಸದೇ ಇದ್ದಾಗ ರಾಷ್ಟ್ರೀಯ ಕಾನೂನು ಶಾಲೆಗಳು ಪ್ರತ್ಯೇಕ ಪ್ರವೇಶ ಪರೀಕ್ಷೆ ನಡೆಸದಂತೆ ಒಕ್ಕೂಟದ ಬೈಲಾ ಮತ್ತು ವಿಧಿ-ವಿಧಾನಗಳು ನಿರ್ಬಂಧ ವಿಧಿಸುವುದಿಲ್ಲ.

  • ಒಂದೊಮ್ಮೆ ಬೈಲಾದ ಪ್ರಕಾರ ಪರೀಕ್ಷೆ ನಡೆಸುವಂತಿಲ್ಲ ಎಂದುಕೊಂಡರೂ ಇದು ಒಕ್ಕೂಟದ ಸದಸ್ಯರ ನಡುವಿನ ವಿವಾದವೇ ವಿನಾ ಅದನ್ನು ರಿಟ್ ಮನವಿಯಲ್ಲಿ ಪ್ರಶ್ನಿಸುವಂತಿಲ್ಲ.

  • ಪರಿಷ್ಕೃತ ಶೈಕ್ಷಣಿಕ ಕ್ಯಾಲೆಂಡರ್ ಪ್ರಕಾರ ಪ್ರವೇಶಾತಿ ಪ್ರಕ್ರಿಯೆ ಪೂರ್ಣಗೊಳಿಸಲು ಎನ್‌ಎಲ್‌ಎಟಿ ಪರೀಕ್ಷೆಯ ಫಲಿತಾಂಶವನ್ನು ನ್ಯಾಯ ಮತ್ತು ನೀತಿಯ ಆಧಾರದಲ್ಲಿ ಪ್ರಕಟಿಸಲು ಎನ್ಎಲ್‌ಎಸ್‌ಐಯು ತೀರ್ಮಾನಿಸಿದೆ.

ಎನ್‌ಎಲ್‌ಎಸ್‌ಐಯು ಉಪ ಕುಲಪತಿ ಪ್ರೊ. ಸುಧೀರ್ ಕೃಷ್ಣಸ್ವಾಮಿ ಅವರ ಪರವಾಗಿ ಮತ್ತೊಂದು ಪ್ರತಿಕ್ರಿಯಾತ್ಮಕ ಮನವಿ ಸಲ್ಲಿಸಲಾಗಿದ್ದು, ಹೀಗೆ ಹೇಳಲಾಗಿದೆ:

  • ಸದರಿ ಪ್ರಕರಣದಲ್ಲಿ ಎನ್‌ಎಲ್‌ಎಸ್‌ಐಯು ಉಪಕುಲಪತಿ ಸರಿಯಾದ ಅಥವಾ ಅಗತ್ಯವಾದ ಪ್ರತಿವಾದಿಯಲ್ಲ. ಅರ್ಜಿಯಲ್ಲಿ ಪ್ರೊ. ಸುಧೀರ್ ಕೃಷ್ಣಸ್ವಾಮಿ ಅವರ ವಿರುದ್ಧ ಆಧಾರರಹಿತವಾದ ಅಸ್ಪಷ್ಟ ಆರೋಪ ಮಾಡಲಾಗುತ್ತಿದೆ.

  • ಎನ್‌ಎಲ್‌ಯು ಒಕ್ಕೂಟದ ಖಜಾಂಚಿ-ಕಾರ್ಯದರ್ಶಿಯಾಗಿ ಪ್ರೊ. ಕೃಷ್ಣಸ್ವಾಮಿ ಅವರು ಒಕ್ಕೂಟದ ಹಿತದೃಷ್ಟಿಯಿಂದ ಕರ್ತವ್ಯ ನಿರ್ವಹಿಸಿದ್ದು, ಸಿಎಲ್‌ಎಟಿ 2020 ನಡೆಸುವುದಕ್ಕೆ ಸಂಬಂಧಿಸಿದಂತೆ ಹಲವು ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ.

  • ಪ್ರೊ. ಕೃಷ್ಣಸ್ವಾಮಿ ಅವರು ಎನ್‌ಎಲ್‌ಎಸ್‌ಐಯು ಉಪಕುಲಪತಿಯಾಗಿ ಮತ್ತು ಒಕ್ಕೂಟದ ಖಜಾಂಜಿ-ಕಾರ್ಯದರ್ಶಿಯಾಗಿ ಉಭಯ ಸಂಸ್ಥೆಗಳಿಗೆ ಅನುಕೂಲವಾಗುವಂತೆ ಕರ್ತವ್ಯ ನಿರ್ವಹಿಸಿದ್ದು, ತಮ್ಮ ಮೇಲೆ ಹಿತಾಸಕ್ತಿಯ ಸಂಘರ್ಷದ ಆರೋಪ ಮಾಡಿರುವುದಕ್ಕೆ ಯಾವುದೇ ತೆರನಾದ ಕಾನೂನಿನ ಮಾನ್ಯತೆ ಇಲ್ಲ. ಇದರಿಂದ ಯಾವುದೇ ವೈಯಕ್ತಿಕ ಲಾಭ ಮಾಡಿಕೊಂಡಿಲ್ಲ. ತನ್ನ ಪಾತ್ರವನ್ನು ಪ್ರತ್ಯೇಕಿಸಿಕೊಂಡು ವೃತ್ತಿಪರತೆಯ ಅತ್ಯುನ್ನತ ನಡತೆಗೆ ಅನುಗುಣವಾಗಿ ನಡೆದುಕೊಳ್ಳಲು ಸಾಕಷ್ಟು ಪ್ರಯತ್ನಪಟ್ಟಿರುವುದಾಗಿ ಪ್ರೊ. ಕೃಷ್ಣಸ್ವಾಮಿ ಹೇಳಿದ್ದಾರೆ.

  • ಸಿಎಲ್‌ಎಟಿಯನ್ನು ಸೆಪ್ಟೆಂಬರ್ 28ಕ್ಕೆ ಮುಂದೂಡುವ ನಿರ್ಧಾರವನ್ನು ಪ್ರೊ. ಕೃಷ್ಣಸ್ವಾಮಿ ಅವರ ಒಪ್ಪಿಗೆ ಪಡೆದು ತೀರ್ಮಾನಿಸಿಲ್ಲ. ಈ ಸಂಬಂಧ ಮಾಡಲಾದ ಆರೋಪವನ್ನು ನಿರಾಕರಿಸಲಾಗುತ್ತಿದೆ. ಒಕ್ಕೂಟದ ಈ ನಿರ್ಧಾರವನ್ನು ಕೃಷ್ಣಸ್ವಾಮಿಯವರು ಗಟ್ಟಿ ಧ್ವನಿಯಲ್ಲಿ ವಿರೋಧಿಸಿದ್ದಾರೆ.

  • ಎನ್‌ಎಲ್‌ಎಸ್‌ಐಯು ಕಾರ್ಯಕಾರಿ ಸಮಿತಿಯ ನೇತೃತ್ವ ವಹಿಸಿರುವ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾದ ಯು ಯು ಲಲಿತ್ ಅವರ ಒಪ್ಪಿಗೆ ಅನುಸಾರ ಎನ್‌ಎಲ್‌ಎಟಿ ನಡೆಸಲಾಗುತ್ತಿದೆ.

  • ಸಿಎಲ್‌ಎಟಿ 2020 ನಡೆಸುವ ಎನ್‌ಎಲ್‌ ಯು ಒಕ್ಕೂಟದ ತೀರ್ಮಾನಕ್ಕೆ ಬದ್ಧವಾಗಿರುವುದಾಗಿ ಹೇಳಿದರೂ ಒಕ್ಕೂಟವು ತದ್ವಿರುದ್ಧವಾಗಿ ವರ್ತಿಸಿದೆ.