ಕಳೆದ ವಿಧಾನಸಭಾ ಚುನಾವಣೆಯಲ್ಲಿ ಧಾರವಾಡ ಕ್ಷೇತ್ರದಿಂದ ಆಯ್ಕೆಯಾಗಿದ್ದು, ಜನರ ಅಹವಾಲು ಆಲಿಸುವ ಸಂಬಂಧ ಕ್ಷೇತ್ರಕ್ಕೆ ಭೇಟಿ ನೀಡಲು ಧಾರವಾಡ ಪ್ರವೇಶಕ್ಕೆ ವಿಧಿಸಿರುವ ನಿರ್ಬಂಧ ಷರತ್ತನ್ನು ಸಡಿಲ ಮಾಡುವಂತೆ ಕೋರಿ ಕಾಂಗ್ರೆಸ್ ಮುಖಂಡ ಹಾಗೂ ಶಾಸಕ ವಿನಯ್ ಕುಲಕರ್ಣಿ ಸಲ್ಲಿಸಿದ್ದ ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಬುಧವಾರ ವಜಾ ಮಾಡಿದೆ.
ಬಿಜೆಪಿ ಮುಖಂಡ ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ 15ನೇ ಆರೋಪಿಯಾಗಿರುವ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಅವರಿಗೆ ಧಾರವಾಡ ಪ್ರವೇಶ ನಿರ್ಬಂಧ ವಿಧಿಸಿರುವ ಜಾಮೀನು ಷರತ್ತನ್ನು ಸಡಿಲಿಕೆ ಮಾಡುವ ಸಂಬಂಧ ಅವರು ಒಂದಿಲ್ಲೊಂದು ಆಧಾರದ ಮೇಲೆ ನ್ಯಾಯಾಲಯದ ಮೇಟ್ಟಿಲೇರುತ್ತಿದ್ದಾರೆ. ಆದರೆ, ಸುಪ್ರೀಂ ಕೋರ್ಟ್ ವಿಧಿಸಿರುವ ಷರತ್ತನ್ನು ಈ ನ್ಯಾಯಾಲಯ ಸಡಿಲಿಸಲಾಗದು ಎಂದು ನ್ಯಾಯಾಧೀಶರಾದ ಬಿ ಜಯಂತಕುಮಾರ್ ಅವರು ಆದೇಶದಲ್ಲಿ ಹೇಳಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಧಾರವಾಡ ಕ್ಷೇತ್ರದಿಂದ ಚುನಾವಣೆಯಲ್ಲಿ ಟಿಕೆಟ್ ಪಡೆಯುವುದಕ್ಕೂ ಮುನ್ನ ವಿನಯ ಕುಲಕರ್ಣಿ ಅವರು ನ್ಯಾಯಾಲಯದ ಅನುಮತಿ ಕೋರಿಲ್ಲ. ಟಿಕೆಟ್ ಸಿಕ್ಕ ಬಳಿಕ ಪ್ರಚಾರಕ್ಕಾಗಿ 50 ದಿನ ಧಾರವಾಡ ಪ್ರವೇಶಕ್ಕೆ ನಿರ್ಬಂಧ ವಿಧಿಸಿರುವ ಜಾಮೀನು ಷರತ್ತಿನಲ್ಲಿ ಸಡಿಲಿಕೆ ಮಾಡಬೇಕು ಎಂದು ಕೋರಿದ್ದಾರೆ. ಈ ಅರ್ಜಿಯನ್ನೂ ಪುರಸ್ಕರಿಸಿರಲಿಲ್ಲ ಎಂದು ನ್ಯಾಯಾಲಯ ಆದೇಶದಲ್ಲಿ ವಿವರಿಸಿದೆ.
ಖುಲಾಸೆಗೆ ಸಂಬಂಧಿಸಿದಂತೆ ಹಾಗೂ ಜಾಮೀನು ಷರತ್ತು ಸಡಿಲಿಕೆ ಮಾಡುವಂತೆ ಕೋರಿ ವಿನಯ್ ಕುಲಕರ್ಣಿ ಅವರು ಅರ್ಜಿ ಸಲ್ಲಿಸುತ್ತಿರುವುದರಿಂದ ಈ ನ್ಯಾಯಾಲಯಕ್ಕೆ ಇಂದಿಗೂ ಆರೋಪ ನಿಗದಿ ಮಾಡಲಾಗುತ್ತಿಲ್ಲ ಎಂದು ನ್ಯಾಯಾಲಯ ಆದೇಶದಲ್ಲಿ ಬೇಸರ ವ್ಯಕ್ತಪಡಿಸಿದೆ.
ವಿನಯ್ ಕುಲಕರ್ಣಿ ಅವರಿಗೆ ಧಾರವಾಡ ಪ್ರವೇಶಕ್ಕೆ ನಿರ್ಬಂಧ ವಿಧಿಸಿರುವ ಮೂರನೇ ಷರತ್ತನ್ನು ಪ್ರಾಸಿಕ್ಯೂಷನ್ ಅದರಲ್ಲೂ ಸಾಕ್ಷಿಗಳ ಹಿತಾಸಕ್ತಿ ಕಾಯಲು ಹಾಗೂ ಸಾಕ್ಷಿಗಳ ಹೇಳಿಕೆಯನ್ನು ಈ ನ್ಯಾಯಾಲಯವು ದಾಖಲಿಸಿಕೊಳ್ಳುವವರೆಗೆ ಹಾಕಲಾಗಿದೆ. ಸಾಕ್ಷಿಗಳು ಧಾರವಾಡದಲ್ಲೇ ನೆಲೆಸಿದ್ದು, ಮೂರನೇ ಷರತ್ತನ್ನು ಸಡಿಲಿಸಿದರೆ ಧಾರವಾಡದಲ್ಲಿ ಕುಲಕರ್ಣಿ ಅವರ ಓಡಾಟವನ್ನು ನಿಯಂತ್ರಿಸಲು ಬೇರೆ ಯಾವುದೇ ಷರತ್ತು ಇಲ್ಲ ಎಂದು ನ್ಯಾಯಾಲಯವು ಆದೇಶದಲ್ಲಿ ವಿವರಿಸಿದೆ.
ಕುಲಕರ್ಣಿ ಮತ್ತು ಇತರರ ವಿರುದ್ಧ ಸಾಕ್ಷಿಗಳಿಗೆ ಬೆದರಿಕೆ ಹಾಕಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣವು ಧಾರವಾಡದ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದೆ. ಸಾಕ್ಷಿಯ ಭಾಗವಾಗಿ ಸಂಗ್ರಹಿಸಿರುವ ವಸ್ತುಗಳು ಮತ್ತು ಸಾಕ್ಷಿಗಳು ಕಟಕಟೆಗೆ ಬಂದು ನಿಂತಿಲ್ಲ. ಹೀಗಾಗಿ, ಈ ಹಂತದಲ್ಲಿ ಧಾರವಾಡ ಪ್ರವೇಶಕ್ಕೆ ವಿಧಿಸಿರುವ ನಿರ್ಬಂಧ ಸಡಲಿಕೆ ಮಾಡುವಂತೆ ಕೋರಿ ಕುಲಕರ್ಣಿ ಸಲ್ಲಿಸಿರುವ ಅರ್ಜಿಯನ್ನು ತಿರಸ್ಕರಿಸಿದೇ ಬೇರೆ ದಾರಿಯಿಲ್ಲ ಎಂದು ನ್ಯಾಯಾಲಯವು ಆದೇಶದಲ್ಲಿ ವಿವರಿಸಿದೆ.
ಸರ್ಕಾರದ ವಿಶೇಷ ಅಭಿಯೋಜಕರಾದ ಗಂಗಾಧರ ಶೆಟ್ಟಿ ಅವರು “ಸರ್ವೋಚ್ಚ ನ್ಯಾಯಾಲಯವು ಕುಲಕರ್ಣಿಗೆ ಧಾರವಾಡ ಪ್ರವೇಶಕ್ಕೆ ವಿಧಿಸಿರುವ ನಿರ್ಬಂಧ ಷರತ್ತನ್ನು ಸಡಲಿಕೆ ಮಾಡಿಲ್ಲ. ಈ ನ್ಯಾಯಾಲಯಕ್ಕೂ ಮೂರನೇ ಷರತ್ತು ಸಡಲಿಕೆ ಮಾಡುವ ಅಧಿಕಾರವನ್ನು ಸುಪ್ರೀಂ ಕೋರ್ಟ್ ನೀಡಿಲ್ಲ. ಹೀಗಾಗಿ, ಮೂರನೇ ಷರತ್ತನ್ನು ಸಡಿಲಿಕೆ ಮಾಡುವ ಅಧಿಕಾರ ಈ ನ್ಯಾಯಾಲಯಕ್ಕೆ ಇಲ್ಲ. ಪ್ರಕರಣದ 16ನೇ ಆರೋಪಿಗೆ ಧಾರವಾಡ ಪ್ರವೇಶ ನಿರ್ಬಂಧವನ್ನು ಈ ನ್ಯಾಯಾಲಯ ವಿಧಿಸಿದೆ. 8, 9, 10, 11, 12, 13 ಮತ್ತು 14ನೇ ಆರೋಪಿಗಳಿಗೆ ಇಂಥದ್ದೇ ಷರತ್ತು ವಿಧಿಸಲಾಗಿದೆ. ಅವರಾರೂ ಆ ಷರತ್ತು ಸಡಿಲಿಕೆ ಕೋರಿ ಅರ್ಜಿ ಸಲ್ಲಿಸಿಲ್ಲ. ಆದರೆ, ಕುಲಕರ್ಣಿ ಮಾತ್ರ ಪದೇಪದೇ ಮೂರನೇ ಷರತ್ತು ಸಡಲಿಕೆ ಕೋರಿ ಅರ್ಜಿ ಸಲ್ಲಿಸುತ್ತಿದ್ದಾರೆ. ಇದಕ್ಕೆ ಅನುಮತಿಸಿದರೆ ಅವರು ಸಾಕ್ಷಿಗಳಿಗೆ ಬೆದರಿಕೆ ಹಾಕುವ ಸಾಧ್ಯತೆ ಇದೆ” ಎಂದು ವಾದಿಸಿದ್ದರು.
ಅರ್ಜಿದಾರರ ಪರ ವಕೀಲೆ ಕೆ ಅಭಿನಯ ಅವರು “ವಿನಯ್ ಕುಲಕರ್ಣಿ ಅವರ ಶಾಸಕರಾಗಿ ಆಯ್ಕೆಯಾಗಿದ್ದು, ಅಭಿವೃದ್ಧಿ ಕಾರ್ಯಗಳನ್ನು ನಡೆಸುವ ಕರ್ತವ್ಯ ಮತ್ತು ಜವಾಬ್ದಾರಿ ಹೊಂದಿದ್ದಾರೆ. ಅಲ್ಲದೇ, ಜನರ ಸಮಸ್ಯೆಗಳಿಗೆ ಅವರು ಧ್ವನಿಯಾಗಬೇಕಿದೆ. ಈ ನಡುವೆ, ವಿಶೇಷ ನ್ಯಾಯಾಲಯಕ್ಕೆ ಮೂರನೇ ಷರತ್ತನ್ನು ಸಡಿಲಿಕೆ ಮಾಡುವ ಅಧಿಕಾರವಿದೆ. ಕುಲಕರ್ಣಿ ಅವರು ಪ್ರಾಸಿಕ್ಯೂಷನ್ ಸಾಕ್ಷಿಗಳಿಗೆ ಬೆದರಿಕೆ ಹಾಕಬಹುದು ಎಂಬ ಆತಂಕವನ್ನು ಪ್ರಾಸಿಕ್ಯೂಷನ್ ವ್ಯಕ್ತಪಡಿಸಿದೆ. ಇಲ್ಲಿ, ಸಾಕ್ಷಿಗಳಿಗೆ ರಕ್ಷಣೆ ನೀಡುವುದು ಪ್ರಾಸಿಕ್ಯೂಷನ್ ಕೆಲಸವಾಗಿದೆ. ಇದೊಂದೇ ಆಧಾರವನ್ನು ಮುಂದಿಟ್ಟುಕೊಂಡು ಕುಲಕರ್ಣಿ ಅವರ ಅರ್ಜಿಯನ್ನು ವಜಾ ಮಾಡಲಾಗದು ಎಂದು ವಾದಿಸಿದ್ದರು.
ಈಚೆಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮೇಯರ್-ಉಪಮೇಯರ್ ಆಯ್ಕೆ ಚುನಾವಣೆಯಲ್ಲಿ ಮತದಾನ ಮಾಡಲು ಧಾರವಾಡಕ್ಕೆ ಭೇಟಿ ನೀಡಲು ಅವಕಾಶ ಮಾಡಿಕೊಡುವಂತೆ ಕೋರಿದ್ದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿತ್ತು. ಇದಕ್ಕೂ ಮುನ್ನ, ತನ್ನ ಡೈರಿ ಫಾರ್ಮ್ ನಿರ್ವಹಿಸಲು ಮತ್ತು ಚುನಾವಣೆಯಲ್ಲಿ ಸ್ಪರ್ಧಿಸಲು ಅನುಮತಿ ಕೋರಿ ಏಪ್ರಿಲ್ 5ರಂದು ಸಲ್ಲಿಸಿದ್ದ ಅರ್ಜಿಯನ್ನೂ ನ್ಯಾಯಾಲಯ ವಜಾ ಮಾಡಿತ್ತು. ಕಳೆದ ವರ್ಷದ ನವೆಂಬರ್‌ನಲ್ಲಿ ಕುಲಕರ್ಣಿ ಅವರಿಗೆ ಅನಾರೋಗ್ಯದಿಂದ ಬಳಲುತ್ತಿದ್ದ ಅವರ ಸಂಬಂಧಿ ವಿಜಯಲಕ್ಷ್ಮಿ ಪಾಟೀಲ್ ಅವರನ್ನು ಸುಚಿರಾಯು ಆಸ್ಪತ್ರೆಯಲ್ಲಿ ನೋಡಲು ಕೇವಲ ಮೂರು ತಾಸುಗಳಿಗೆ ಅವಕಾಶ ಸೀಮಿತಗೊಳಿಸಿತ್ತು. ಕುಲಕರ್ಣಿ ಅವರು ಮೂರು ದಿನ ಅಲ್ಲಿರಲು ಅವಕಾಶಕೊಡಬೇಕು ಎಂದು ವಿನಂತಿಸಿದ್ದರು. ಇದನ್ನು ನ್ಯಾಯಾಲಯ ಪುರಸ್ಕರಿಸಿರಲಿಲ್ಲ. ನ್ಯಾಯಾಲಯದ ವ್ಯಾಪ್ತಿ ಬಿಟ್ಟು ಹೊರಹೋಗುವಂತಿಲ್ಲ ಎಂಬ ಐದನೇ ಷರತ್ತಿನಲ್ಲಿ ಭಾಗಶಃ ಬದಲಾವಣೆ ಮಾಡಿ ನ್ಯಾಯಾಲಯವು 2021ರ ಡಿಸೆಂಬರ್‌ನಲ್ಲಿ ಆದೇಶಿಸಿದ್ದನ್ನು ಇಲ್ಲಿ ನೆನೆಯಬಹುದಾಗಿದೆ.