ಧಾರವಾಡ ಪ್ರವೇಶ ನಿರ್ಬಂಧ: ಹೈಕೋರ್ಟ್ ಎಡತಾಕಿದ ವಿನಯ್‌ ಕುಲಕರ್ಣಿ; 30 ದಿನ ನೆಲೆಸಲು ಅನುಮತಿ ಕೋರಿಕೆ

ಬಿಜೆಪಿ ಮುಖಂಡ ಯೋಗೀಶ್‌ ಗೌಡ ಕೊಲೆ ಪ್ರಕರಣವನ್ನು ಕೇಂದ್ರೀಯ ತನಿಖಾ ದಳದ (ಸಿಬಿಐ) ತನಿಖೆಗೆ ವಹಿಸಿರುವ ರಾಜ್ಯ ಸರ್ಕಾರದ ಕ್ರಮವನ್ನೂ ವಿನಯ್‌ ಕುಲಕರ್ಣಿ ಪ್ರಶ್ನಿಸಿದ್ದಾರೆ. ಈ ಅರ್ಜಿಯಲ್ಲೂ ಸಿಬಿಐಗೆ ನೋಟಿಸ್‌ ಜಾರಿಯಾಗಿದೆ.
Vinay Kulkarni and Karnataka HC
Vinay Kulkarni and Karnataka HC

ಧಾರವಾಡ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿರುವ ವಿನಯ್‌ ಕುಲಕರ್ಣಿ ಅವರು 30 ದಿನಗಳ ಕಾಲ ಧಾರವಾಡದಲ್ಲಿ ನೆಲೆಸಲು ಅನುಮತಿಸುವಂತೆ ಕೋರಿರುವ ಮತ್ತು ಬಿಜೆಪಿ ಮುಖಂಡ ಯೋಗೀಶ್‌ ಗೌಡ ಕೊಲೆ ಪ್ರಕರಣವನ್ನು ಕೇಂದ್ರೀಯ ತನಿಖಾ ದಳದ (ಸಿಬಿಐ) ತನಿಖೆಗೆ ವಹಿಸಿರುವ ರಾಜ್ಯ ಸರ್ಕಾರದ ಕ್ರಮ ಪ್ರಶ್ನಿಸಿರುವ ಅರ್ಜಿಗಳಿಗೆ ಸಂಬಂಧಿಸಿದಂತೆ ಸಿಬಿಐಗೆ ಕರ್ನಾಟಕ ಹೈಕೋರ್ಟ್‌ ಗುರುವಾರ ನೋಟಿಸ್‌ ಜಾರಿ ಮಾಡಿದೆ.

ಮಾಜಿ ಸಚಿವ ವಿನಯ್‌ ಕುಲಕರ್ಣಿ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಕೆ ನಟರಾಜನ್‌ ಅವರ ನೇತೃತ್ವದ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಸಿ ಎಚ್‌ ಜಾಧವ್‌ ಅವರು “ವಿನಯ್‌ ಕುಲಕರ್ಣಿ ಅವರಿಗೆ ಧಾರವಾಡ ಪ್ರವೇಶ ನಿರ್ಬಂಧಿಸಿದೆ” ಎಂದರು.

ಆಗ ಪೀಠವು “(ಧಾರವಾಡ) ಪ್ರವೇಶ ನಿರ್ಬಂಧಿಸಿರುವವರು ಯಾರು?” ಎಂದಿತು. ಆಗ ಜಾಧವ್‌ ಅವರು “ಸುಪ್ರೀಂ ಕೋರ್ಟ್‌” ಎಂದರು. ಇದಕ್ಕೆ ಪೀಠವು “ಸುಪ್ರೀಂ ಕೋರ್ಟ್‌ ತಾನೆ, ಅಲ್ಲಿಗೆ ಹೋಗಿ. ವಿಚಾರಣಾಧೀನ ನ್ಯಾಯಾಲಯಕ್ಕೆ ಸುಪ್ರೀಂ ಕೋರ್ಟ್‌ ಆದೇಶ ಮಾಡಿದೆ. ನಮಗಲ್ಲ. ಈ ಮಧ್ಯೆ, ನಾವೇನೂ ಮಾಡಲಾಗದು. ನೀವುಂಟು, ಸುಪ್ರೀಂ ಕೋರ್ಟ್‌ ಉಂಟು ಮತ್ತು ವಿಚಾರಣಾಧೀನ ನ್ಯಾಯಾಲಯ ಉಂಟು. ಸುಪ್ರೀಂ ಕೋರ್ಟ್‌ ಆದೇಶ ಮಾಡಿರುವುದರಿಂದ ನೀವು ಅಲ್ಲಿಯೇ ಪ್ರಶ್ನಿಸಬೇಕು” ಎಂದು ಮೌಖಿಕವಾಗಿ ಹೇಳಿತು. ಅಂತಿಮವಾಗಿ ಪೀಠವು ಎರಡು ಅರ್ಜಿಗಳಿಗೆ ಸಂಬಂಧಿಸಿದಂತೆ ಸಿಬಿಐಗೆ ನೋಟಿಸ್‌ ಜಾರಿ ಮಾಡಿತು. ಪ್ರಕರಣದ ವಿಚಾರಣೆ ಶುಕ್ರವಾರ, ಏ.21ರಂದು ನಡೆಯಲಿದೆ.

ಬಿಜೆಪಿ ಮುಖಂಡ ಯೋಗೀಶ್‌ ಗೌಡ ಕೊಲೆ ಪ್ರಕರಣದಲ್ಲಿ ವಿನಯ್‌ ಕುಲಕರ್ಣಿ 15ನೇ ಆರೋಪಿಯಾಗಿದ್ದಾರೆ. ಈ ಪ್ರಕರಣದಲ್ಲಿ ನ್ಯಾಯಾಲಯದ ಅನುಮತಿ ಪಡಯದೇ ಧಾರವಾಡ ಜಿಲ್ಲೆ ಪ್ರವೇಶಿಸುವಂತಿಲ್ಲ ಎಂಬುದು ಸೇರಿ ನಾಲ್ಕು ಷರತ್ತುಗಳನ್ನು ಕುಲಕರ್ಣಿ ಅವರಿಗೆ ಜಾಮೀನು ಮಂಜೂರು ಮಾಡುವಾಗ ಸುಪ್ರೀಂ ಕೋರ್ಟ್‌ ವಿಧಿಸಿತ್ತು.

Also Read
ವಿನಯ್‌ ಕುಲಕರ್ಣಿಗೆ ಹಿನ್ನಡೆ: ಧಾರವಾಡ ಪ್ರವೇಶಕ್ಕಿರುವ ನಿರ್ಬಂಧವನ್ನು ತಾತ್ಕಾಲಿಕವಾಗಿ ಸಡಿಲಿಸಲು ಕೋರ್ಟ್ ತಿರಸ್ಕಾರ

ಈಗ ಚುನಾವಣೆಯ ಹಿನ್ನೆಲೆಯಲ್ಲಿ ಅಭ್ಯರ್ಥಿಯಾಗಿರುವುದರಿಂದ ಧಾರವಾಡ ಪ್ರವೇಶಿಸಲು ವಿನಯ್‌ ಕುಲಕರ್ಣಿ ನ್ಯಾಯಾಲಯದ ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಧಾರವಾಡದಲ್ಲಿರಲು 50 ದಿನ ಅನುಮತಿ ಕೋರಿದ್ದ ವಿನಯ್‌ ಕುಲಕರ್ಣಿ ಅವರ ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಈಚೆಗೆ ತಿರಸ್ಕರಿಸಿತ್ತು. ಹೀಗಾಗಿ, ವಿನಯ್‌ ಕುಲಕರ್ಣಿ ಹೈಕೋರ್ಟ್‌ ಕದತಟ್ಟಿದ್ದಾರೆ.

Kannada Bar & Bench
kannada.barandbench.com