Mukesh Ambani and Reliance Industries Limited 
ಸುದ್ದಿಗಳು

ಆಪರೇಷನ್ ಸಿಂಧೂರ್ ವಾಣಿಜ್ಯ ಚಿಹ್ನೆ ಕೋರಿಕೆ: ಅರ್ಜಿ ಹಿಂಪಡೆದ ರಿಲಯನ್ಸ್

ವರ್ಗೀಕರಣ 41ರ ಅಡಿಯಲ್ಲಿ ಮನರಂಜನಾ ಉದ್ದೇಶಗಳಿಗಾಗಿ ವಾಣಿಜ್ಯ ಚಿಹ್ನೆ ನೋಂದಾಯಿಸಲು ಅರ್ಜಿ ಸಲ್ಲಿಸಿದ್ದ ಒಂದು ದಿನದ ಬಳಿಕ ಅದನ್ನು ಹಿಂಪಡೆಯಲಾಗಿದೆ.

Bar & Bench

ಭಯೋತ್ಪಾದಕರ ನಿಗ್ರಹಕ್ಕಾಗಿ ನಡೆಸಿದ ಭಾರತೀಯ ಸೇನಾಕಾರ್ಯಾಚರಣೆಗೆ 'ಆಪರೇಷನ್‌ ಸಿಂಧೂರ್‌ʼ ಹೆಸರು ಘೋಷಿಸಿದ ಬಳಿಕ ಆ ಹೆಸರಿನ ಬಳಕೆಗೆ ಕೋರಿ  ತಾನು ಸಲ್ಲಿಸಿದ್ದ ಅರ್ಜಿಯನ್ನು ಭಾರತೀಯ ಉದ್ಯಮ ದೈತ್ಯ ರಿಲಯನ್ಸ್‌ನ ಘಟಕವಾದ ಜಿಯೋ ಸ್ಟುಡಿಯೋಸ್‌ ಹಿಂಪಡೆದಿದೆ. ಅರ್ಜಿ ಸಲ್ಲಿಸಿದ್ದ ಒಂದು ದಿನದ ಒಳಗೆ ಈ ಬೆಳವಣಿಗೆ ನಡೆದಿದೆ.

ಅರ್ಜಿ ಹಿಂಪಡೆಯುತ್ತಿರುವುದಾಗಿ ಕಂಟ್ರೋಲರ್‌ ಜನರಲ್‌ ಆಫ್‌ ಪೇಟೆಂಟ್ಸ್‌ ಡಿಸೈನ್‌ ಅಂಡ್‌ ಟ್ರೇಡ್‌ಮಾರ್ಕ್ಸ್‌ಗೆ ತಿಳಿಸಿರುವ ಅದು ಇದನ್ನು ಪರಿಗಣಿಸಿ ಅರ್ಜಿ ಹಿಂಪಡೆದಿರುವ ಕುರಿತು ಆದೇಶ ಹೊರಡಿಸುವಂತೆ ಮನವಿ ಮಾಡಿದೆ.

ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿಯೂ ಮಾಹಿತಿ ಹಂಚಿಕೊಂಡಿರುವ ರಿಲಯನ್ಸ್‌ ಸಂಸ್ಥೆಯ ಕಿರಿಯ ನೌಕರರೊಬ್ಬರು ಅಜಾಗರೂಕತೆಯಿಂದ ಅನುಮತಿ ಪಡೆಯದೇ ಅರ್ಜಿ ಸಲ್ಲಿಸಿದ್ದರು. ರಿಲಯನ್ಸ್‌ ಇಂಡಸ್ಟ್ರೀಸ್‌ಗೆ 'ಆಪರೇಷನ್‌ ಸಿಂಧೂರ್‌' ಹೆಸರನ್ನು ವಾಣಿಜ್ಯ ಚಿಹ್ನೆಯಾಗಿ ಬಳಸುವ ಉದ್ದೇಶವಿಲ್ಲ ಎಂದು ಸ್ಪಷ್ಟನೆ ನೀಡಿದೆ.

ಭಯೋತ್ಪಾದನೆಯ ವಿರುದ್ಧದ ಈ ಹೋರಾಟದಲ್ಲಿ ರಿಲಯನ್ಸ್ ನಮ್ಮ ಸರ್ಕಾರ ಮತ್ತು ಸಶಸ್ತ್ರ ಪಡೆಗಳಿಗೆ ಸಂಪೂರ್ಣ ಬೆಂಬಲವಾಗಿ ನಿಲ್ಲುತ್ತದೆ. 'ಭಾರತ ಮೊದಲು' ಎಂಬ ಧ್ಯೇಯವಾಕ್ಯಕ್ಕೆ ನಮ್ಮ ಬದ್ಧತೆ ಅಚಲವಾಗಿದೆ ಎಂದು ತಿಳಿಸಿದೆ.

ಭಯೋತ್ಪಾದಕರ ನಿಗ್ರಹಕ್ಕಾಗಿ ಭಾರತೀಯ ಸೇನಾಕಾರ್ಯಾಚರಣೆ 'ಆಪರೇಷನ್‌ ಸಿಂಧೂರ್‌ʼ ಹೆಸರು ಘೋಷಿಸಿದ ಕೆಲವೇ ಗಂಟೆಗಳಲ್ಲಿ ಆ ಹೆಸರಿನ ಬಳಕೆ ಕೋರಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮೊದಲ ವಾಣಿಜ್ಯ ಚಿಹ್ನೆ ಅರ್ಜಿಯನ್ನು ಕಂಟ್ರೋಲರ್‌ ಜನರಲ್‌ ಆಫ್‌ ಪೇಟೆಂಟ್ಸ್‌ ಡಿಸೈನ್‌ ಅಂಡ್‌ ಟ್ರೇಡ್‌ಮಾರ್ಕ್ಸ್‌ಗೆ ಸಲ್ಲಿಸಿತ್ತು.

ಸೇನಾ ಕಾರ್ಯಾಚರಣೆ ನಡೆದು 24 ಗಂಟೆ ಕಳೆಯುವುದರೊಳಗೆ ಆ ಹೆಸರಿನ ಕುರಿತಾದ ವಿಶೇಷ ಹಕ್ಕನ್ನು ತಮಗೆ ಮಾತ್ರವೇ ನೀಡುವಂತೆ ಕೋರಿ ಮೂರು ಅರ್ಜಿಗಳು ಸಲ್ಲಿಕೆಯಾಗಿದ್ದವು. ಮನರಂಜನೆ, ಶಿಕ್ಷಣ, ಸಾಂಸ್ಕೃತಿಕ ಮತ್ತು ಮಾಧ್ಯಮ ಸೇವೆಗಳನ್ನು ಒಳಗೊಂಡಿರುವ ವರ್ಗ 41ರ ಅಡಿಯಲ್ಲಿ ಹೆಸರಿನ ಹಕ್ಕುಬಳಕೆಗೆ ಮನವಿ ಮಾಡಲಾಗಿತ್ತು.

ಮೇ 7, 2025 ರಂದು ಬೆಳಿಗ್ಗೆ 10:42ರಿಂದ ಸಂಜೆ 6:27ರ ನಡುವೆ ರಿಲಯನ್ಸ್ ಸಂಸ್ಥೆ, ಮುಂಬೈ ನಿವಾಸಿ ಮುಖೇಶ್ ಚೆತ್ರಮ್ ಅಗರವಾಲ್, ಭಾರತೀಯ ವಾಯುಪಡೆಯ ನಿವೃತ್ತ ಅಧಿಕಾರಿ ಗ್ರೂಪ್ ಕ್ಯಾಪ್ಟನ್ ಕಮಲ್ ಸಿಂಗ್ ಒಬೆರ್‌ ಹಾಗೂ ದೆಹಲಿ ಮೂಲದ ವಕೀಲ ಅಲೋಕ್ ಕೊಠಾರಿ ಅರ್ಜಿ ಸಲ್ಲಿಸಿದ್ದರು. ಪ್ರತಿ ಅರ್ಜಿಯಲ್ಲಿಯೂ ಆ ಹೆಸರನ್ನು ವಾಣಿಜ್ಯ ಉದ್ದೇಶಗಳಿಗಾಗಿ ʼಬಳಸುವ ಪ್ರಸ್ತಾಪವಿದೆʼ ಎಂದು ಹೇಳಲಾಗಿತ್ತು.