
ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತ ನಡೆಸಿದ ಆಪರೇಷನ್ ಸಿಂಧೂರ್ ಜೊತೆಗೆ ಕೇಳಿ ಬರುತ್ತಿರುವ ಹೆಸರು ಕರ್ನಲ್ ಸೋಫಿಯಾ ಕುರೇಷಿ ಅವರದ್ದು.
ಸೇನಾ ಕಾರ್ಯಾಚರಣೆ ಕುರಿತಂತೆ ಭಾರತೀಯ ಸಶಸ್ತ್ರ ಪಡೆಗಳು ಬುಧವಾರ ಪತ್ರಿಕಾಗೋಷ್ಠಿ ನಡೆಸಿದಾಗ ಕಾರ್ಯಾಚರಣೆಯ ವಿವರಗಳನ್ನು ನೀಡಿದವರು ಭೂಸೇನೆಯ ಕರ್ನಲ್ ಸೋಫಿಯಾ ಮತ್ತು ವಾಯುಪಡೆಯ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್.
ಕರ್ನಲ್ ಸೋಫಿಯಾ ಅವರನ್ನು ಈಗ ದೇಶವೇ ಶ್ಲಾಘಿಸುತ್ತಿದೆಯಾದರೂ ಸುಪ್ರೀಂ ಕೋರ್ಟ್ ಅವರ ಸಾಧನೆಗಳ ಕುರಿತು 2020ರಲ್ಲಿಯೇ ತನ್ನ ತೀರ್ಪೊಂದರಲ್ಲಿ ಮೆಚ್ಚುಗೆ ಸೂಚಿಸಿತ್ತು. ಸಶಸ್ತ್ರ ಪಡೆಗಳ ಮಹಿಳಾ ಅಧಿಕಾರಿಗಳಿಗೆ ಶಾಶ್ವತ ಕಮಿಷನ್ ನೀಡುವ ಮಹತ್ವದ ತೀರ್ಪಿನಲ್ಲಿ ಅದು ಅವರ ಗುಣಗಾನ ಮಾಡಿತ್ತು.
ಭಾರತೀಯ ಸೇನೆಯ ಮಹಿಳಾ ಅಧಿಕಾರಿಗಳು ಸೇನಾ ಪಡೆಗೆ ಕೀರ್ತಿ ತಂದಿದ್ದಾರೆ ಎಂದಿದ್ದ ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ (ಸುಪ್ರೀಂ ಕೋರ್ಟ್ ನಿಕಟಪೂರ್ವ ಮುಖ್ಯ ನ್ಯಾಯಮೂರ್ತಿ) ಮತ್ತು ಅಜಯ್ ರಾಸ್ತೋಗಿ ಅವರಿದ್ದ ಪೀಠ ಮಹಿಳಾ ಸಾಧಕಿಯರ ಹಲವು ಸಾಧನೆಗಳನ್ನು ತಿಳಿಸುವಾಗ ಸೋಫಿಯಾ ಅವರ ಹೆಸರನ್ನು ಪ್ರಸ್ತಾಪಿಸಿತ್ತು.
ಸೋಫಿಯಾ ಅವರು ಬಹುರಾಷ್ಟ್ರೀಯ ಸೇನಾ ಕವಾಯತು ನಡೆಸಿದಾಗ ಭಾರತೀಯ ಸೇನಾ ತುಕಡಿಯ ನೇತೃತ್ವ ವಹಿಸಿದ ಮೊದಲ ಮಹಿಳೆ. ಅವರು 2006 ರಲ್ಲಿ ಕಾಂಗೋದಲ್ಲಿ ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಯಲ್ಲಿಯೂ ಸೇವೆ ಸಲ್ಲಿಸಿದ್ದರು ಎಂದಿತ್ತು.
"ಲೆಫ್ಟಿನೆಂಟ್ ಕರ್ನಲ್ ಸೋಫಿಯಾ ಕುರೇಷಿ (ಆರ್ಮಿ ಸಿಗ್ನಲ್ ಕಾರ್ಪ್ಸ್) ಭಾರತ ಆಯೋಜಿಸಿದ್ದ 'ಎಕ್ಸರ್ಸೈಸ್ ಫೋರ್ಸ್ 18' ಎಂಬ ಬಹುರಾಷ್ಟ್ರೀಯ ಸಮರಾಭ್ಯಾಸದಲ್ಲಿ ಭಾರತೀಯ ಸೇನಾ ತುಕಡಿಯನ್ನು ಮುನ್ನಡೆಸಿದ ಮೊದಲ ಮಹಿಳೆ. ಅವರು 2006 ರಲ್ಲಿ ಕಾಂಗೋದಲ್ಲಿ ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಯಲ್ಲಿ ಸೇವೆ ಸಲ್ಲಿಸಿದ್ದಾರೆ, ಅಲ್ಲಿ ಅವರು ಇತರರೊಂದಿಗೆ ಆ ದೇಶಗಳಲ್ಲಿ ಕದನ ವಿರಾಮಗಳನ್ನು ಮೇಲ್ವಿಚಾರಣೆ ಮಾಡುವ ಮತ್ತು ಮಾನವೀಯ ಚಟುವಟಿಕೆಗಳಲ್ಲಿ ಸಹಾಯ ಮಾಡುವ ಉಸ್ತುವಾರಿ ವಹಿಸಿದ್ದರು. ಸಂಘರ್ಷ ಪೀಡಿತ ಪ್ರದೇಶಗಳಲ್ಲಿ ಶಾಂತಿಯನ್ನು ಖಾತರಿಪಡಿಸುವುದು ಅವರ ಕಾರ್ಯವಾಗಿತ್ತು" ಎಂದು ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಉಲ್ಲೇಖಿಸಿತ್ತು.
ಅದಾಗಿ ಒಂದು ವರ್ಷದ ಬಳಿಕ ತೀರ್ಪಿನನ್ವಯ ಹನ್ನೊಂದು ಮಹಿಳಾ ಸೇನಾ ಅಧಿಕಾರಿಗಳಿಗೆ ಶಾಶ್ವತ ಕಮಿಷನ್ ಸೌಲಭ್ಯ ನೀಡದ ಭಾರತೀಯ ಸೇನೆ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆಗೆ ಮುಂದಾಗುವುದಾಗಿ ಸುಪ್ರೀಂ ಕೋರ್ಟ್ ಎಚ್ಚರಿಸುತ್ತಿದ್ದಂತೆ ಹನ್ನೊಂದು ಮಂದಿ ಮಹಿಳಾ ಅಧಿಕಾರಿಗಳಿಗೆ ನಿವೃತ್ತಿಯವರೆಗೆ ಸೇವೆಯ ಅವಕಾಶ ಕಲ್ಪಿಸುವ ಶಾಶ್ವತ ಕಮಿಷನ್ ಸೌಲಭ್ಯ ಕಲ್ಪಿಸಲು ಸಿದ್ಧವೆಂದು ಸೇನೆ ಹೇಳಿತ್ತು.