ಅಮೆರಿಕದಲ್ಲಿ ವಾಣಿಜ್ಯ ಸ್ಪರ್ಧಾತ್ಮಕತೆ ಮತ್ತು ರಾಷ್ಟ್ರೀಯ ಭದ್ರತೆ ಹೆಚ್ಚಿಸುವ ಕ್ರಮವಾಗಿ, 1977ರಿಂದ ಜಾರಿಯಲ್ಲಿರುವ ವಿದೇಶಿ ಭ್ರಷ್ಟ ಆಚರಣೆಗಳ ಕಾಯಿದೆಯನ್ನು (ಎಫ್‌ಸಿಪಿಎ) ಅಮಾನತ್ತಿನಲ್ಲಿರಿಸುವ ಆದೇಶಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಜೆ ಟ್ರಂಪ್ ಫೆಬ್ರವರಿ 10ರಂದು ಸಹಿ ಹಾಕಿದ್ದಾರೆ.
ಇದರಿಂದಾಗಿ ಕಳೆದ ವರ್ಷ ಎಫ್‌ಸಿಪಿಎ ಅಡಿ ಆರೋಪಿತರಾಗಿದ್ದ ಅದಾನಿ ಸಮೂಹದ ಅಧ್ಯಕ್ಷ ಉದ್ಯಮಿ ಗೌತಮ್ ಅದಾನಿ ನಿರಾಳರಾದಂತಾಗಿದೆ.
ಸೌರ ಶಕ್ತಿ ಯೋಜನೆ ಗುತ್ತಿಗೆಗೆ ಸಂಬಂಧಿಸಿದಂತೆ ಅಮೆರಿಕದ ಹೂಡಿಕೆದಾರರು ಮತ್ತು ಜಾಗತಿಕ ಹಣಕಾಸು ಸಂಸ್ಥೆಗಳಿಂದ ಹಣ ಸಂಗ್ರಹಿಸಲು ವಂಚನೆಯ ಸಂಚು ರೂಪಿಸಿದ್ದಕ್ಕಾಗಿ ಅದಾನಿ ಸಮೂಹದ ಅಧ್ಯಕ್ಷ ಗೌತಮ್ ಅದಾನಿ, ಅವರ ಹತ್ತಿರದ ಸಂಬಂಧಿ ಸಾಗರ್ ಅದಾನಿ ಹಾಗೂ ಇತರ ಏಳು ಜನರ ಮೇಲೆ ಅಮೆರಿಕ ಸರ್ಕಾರ ದೋಷಾರೋಪ ನಿಗದಿಪಡಿಸಿತ್ತು. 2020ರಿಂದ 2024ರವರೆಗೆ ಭಾರತೀಯ ಸರ್ಕಾರಿ ಅಧಿಕಾರಿಗಳಿಗೆ $ 265 ದಶಲಕ್ಷದಷ್ಟು ಲಂಚ ನೀಡುವ ಸಂಚು ನಡೆಸಿದ್ದರು ಎಂದು ಅಮೆರಿಕದ ಅಧಿಕಾರಿಗಳು ದೂರಿದ್ದರು.
ವ್ಯವಹಾರ ಕುದುರಿಸಲು ಅಥವಾ ಉಳಿಸಲು ವಿದೇಶಿ ಅಧಿಕಾರಿಗಳಿಗೆ ಲಂಚ ನೀಡುವುದನ್ನು ಅಮೆರಿಕದ ಎಫ್‌ಸಿಪಿಎ ಕಾಯಿದೆ ನಿಷೇಧಿಸುತ್ತಿತ್ತು. ಲಂಚ ನೀಡುವುದು ವಿದೇಶಿ ನೆಲದಲ್ಲಿ ನಡೆದಿದ್ದರೂ ಅದು ಕಾಯಿದೆ ಪ್ರಕಾರ ಕಾನೂನುಬಾಹಿರ ಕೃತ್ಯ ಎನಿಸಿಕೊಳ್ಳುತ್ತಿತ್ತು.
ಅಮೆರಿಕದ ಶ್ವೇತಭವನ ಬಿಡುಗಡೆ ಮಾಡಿದ ಕಾರ್ಯನಿರ್ವಾಹಕ ಆದೇಶವು ಪರಿಷ್ಕೃತ ಜಾರಿ ಮಾರ್ಗಸೂಚಿಗಳನ್ನು ಹೊರಡಿಸುವವರೆಗೆ ಎಫ್‌ಸಿಪಿಎಗೆ ಸಂಬಂಧಿಸದಂತೆ ಕ್ರಮ ಕೈಗೊಳ್ಳದಂತೆ ತಿಳಿಸುತ್ತದೆ. ಅಲ್ಲದೆ ಹೊಸ ನಿಯಮಾವಳಿಗಳ ಅಡಿಯಲ್ಲಿ ಭವಿಷ್ಯದಲ್ಲಿ ತನಿಖೆ ನಡೆಸಲು ಹಾಗೂ ಜಾರಿ ಕ್ರಮಗಳನ್ನು ಕೈಗೊಳ್ಳಲು ಅಟಾರ್ನಿ ಜನರಲ್ ಅವರ ಒಪ್ಪಿಗೆಯ ಅಗತ್ಯವಿರಲಿದೆ.