ಗೌತಮ್ ಅದಾನಿ ವಿರುದ್ಧ ಅಮೆರಿಕ ಸರ್ಕಾರ ಮಾಡಿರುವ ಆರೋಪಗಳೇನು?

ನೂರಾರು ಕೋಟಿ ಡಾಲರ್ ಸಂಗ್ರಹಿಸುವುದಕ್ಕಾಗಿ ಹೂಡಿಕೆದಾರರು ಮತ್ತು ಬ್ಯಾಂಕ್‌ಗಳಿಗೆ ಸುಳ್ಳು ಹೇಳಲೆಂದು ಭಾರತೀಯ ಸರ್ಕಾರಿ ಅಧಿಕಾರಿಗಳಿಗೆ $ 250 ದಶಲಕ್ಷಕ್ಕಿಂತಲೂ ಹೆಚ್ಚು ಲಂಚ ನೀಡುವ ಸಂಚು ನಡೆದಿತ್ತು ಎಂದು ಆರೋಪಪಟ್ಟಿ ತಿಳಿಸಿದೆ.
Gautam Adani
Gautam AdaniTwitter
Published on

ಅಮೆರಿಕದ ಹೂಡಿಕೆದಾರರು ಮತ್ತು ಜಾಗತಿಕ ಹಣಕಾಸು ಸಂಸ್ಥೆಗಳಿಂದ ಹಣ ಸಂಗ್ರಹಿಸಲು ವಂಚನೆಯ ಸಂಚು ರೂಪಿಸಿದ್ದಕ್ಕಾಗಿ ಅದಾನಿ ಸಮೂಹದ ಅಧ್ಯಕ್ಷ ಗೌತಮ್ ಅದಾನಿ ಹಾಗೂ ಇತರ ಏಳು ಜನರ ಮೇಲೆ ಅಮೆರಿಕ ಸರ್ಕಾರ  ಆರೋಪ ಮಾಡಿದೆ ಎಂದು ಅಮೆರಿಕ ಷೇರುಪೇಟೆ ನಿಯಂತ್ರಣ ಆಯೋಗ (ಎಸ್‌ಇಸಿ) ಬುಧವಾರ ಪ್ರಕಟಿಸಿದೆ.

ನೂರಾರು ಕೋಟಿ ಡಾಲರ್‌  ಸಂಗ್ರಹಿಸುವುದಕ್ಕಾಗಿ ಹೂಡಿಕೆದಾರರು ಮತ್ತು ಬ್ಯಾಂಕ್‌ಗಳಿಗೆ ಸುಳ್ಳು ಹೇಳಲೆಂದು ಭಾರತೀಯ ಸರ್ಕಾರಿ ಅಧಿಕಾರಿಗಳಿಗೆ $ 250 ದಶಲಕ್ಷಕ್ಕಿಂತಲೂ ಹೆಚ್ಚು ಲಂಚ ನೀಡುವ ಸಂಚು ನಡೆದಿತ್ತು ಎಂದು ಆರೋಪಿಸಲಾಗಿದೆ.

Also Read
ಅದಾನಿ ನೇತೃತ್ವದ ಒಕ್ಕೂಟದಿಂದ ಕೋಸ್ಟಲ್‌ ಎನರ್ಜೆನ್‌ ಸ್ವಾದೀನವನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿದ ಎನ್‌ಸಿಎಲ್‌ಎಟಿ

ನ್ಯೂಯಾರ್ಕ್ ಈಸ್ಟರ್ನ್ ಡಿಸ್ಟ್ರಿಕ್ಟ್‌ನ ಅಮೆರಿಕ ಸರ್ಕಾರದ ಅಟಾರ್ನಿ ಬ್ರಿಯಾನ್ ಪೀಸ್‌, ನ್ಯಾಯಾಂಗ ಇಲಾಖೆಯ ಕ್ರಿಮಿನಲ್ ವಿಭಾಗದ ಉಪ ಸಹಾಯಕ ಅಟಾರ್ನಿ ಜನರಲ್ ಲಿಸಾ ಎಚ್ ಮಿಲ್ಲರ್ ಮತ್ತು ತನಿಖಾ ಸಂಸ್ಥೆ ಎಫ್‌ಬಿಐನ  ನ್ಯೂಯಾರ್ಕ್ ಕ್ಷೇತ್ರ ಕಾರ್ಯಾಲಯದ ಸಹಾಯಕ ನಿರ್ದೇಶಕಿ  ಬಜೇಮ್ಸ್ ಇ ಡೆನ್ನೆಹಿ ಅವರು ಆರೋಪಗಳನ್ನು ಪ್ರಕಟಿಸಿದ್ದಾರೆ.

"ಆಪಾದಿಸಲಾದಂತೆ, ಪ್ರತಿವಾದಿಗಳು ಶತಕೋಟಿ ಡಾಲರ್ ಮೌಲ್ಯದ ಗುತ್ತಿಗೆ ಪಡೆಯಲು ಭಾರತೀಯ ಸರ್ಕಾರಿ ಅಧಿಕಾರಿಗಳಿಗೆ ಲಂಚ ನೀಡುವ ದೊಡ್ಡ ಸಂಚು ರೂಪಿಸಿದ್ದರು.  ಗೌತಮ್ ಎಸ್. ಅದಾನಿ, ಸಾಗರ್ ಆರ್. ಅದಾನಿ ಮತ್ತು ವಿನೀತ್ ಎಸ್. ಜೈನ್ ಅವರು ಅಮೆರಿಕದಿಂದ ಮತ್ತು ಅಂತಾರಾಷ್ಟ್ರೀಯ ಹೂಡಿಕೆದಾರರಿಂದ ಬಂಡವಾಳ ಸಂಗ್ರಹಿಸಲು ಸುಳ್ಳು ಹೇಳಿ ಲಂಚ ನೀಡಿಕೆಯ ಸಂಚಿನ ಕುರಿತ ಮಾಹಿತಿ ಮರೆಮಾಚಿದ್ದಾರೆ”ಎಂದು ಪೀಸ್ ತಿಳಿಸಿದ್ದಾರೆ.

ಮಿಲ್ಲರ್ ಅವರು “ದೇಶದ ಇಂಧನ ಪೂರೈಕೆ ಒಪ್ಪಂದವನ್ನು ದೊಡ್ಡ ಪ್ರಮಾಣದಲ್ಲಿ ಪಡೆಯುವುದಕ್ಕಾಗಿ ಭ್ರಷ್ಟಾಚಾರ ಮತ್ತು ವಂಚನೆ ಮೂಲಕ ಅಮೆರಿಕ ಹೂಡಿಕೆದಾರರ ಹಣ ಬಳಸಿಕೊಂಡು ಹಿರಿಯ ಅಧಿಕಾರಿಗಳು ಮತ್ತು ನಿರ್ದೇಶಕರು ಅಪರಾಧ ಎಸಗಿದ್ದಾರೆ. ಅಮೆರಿಕ ಕಾನೂನನ್ನು ಉಲ್ಲಂಘಿಸುವ ಭ್ರಷ್ಟ, ವಂಚನೆ ಮತ್ತು ತೊಂದರೆ ಉಂಟುಮಾಡುವಂತಹ ನಡೆ ಜಗತ್ತಿನಲ್ಲಿ ಎಲ್ಲೇ ನಡೆದಿದ್ದರೂ ಕೂಡ ಗಂಭೀರವಾಗಿ ವಿಚಾರಣೆ ನಡೆಸುವುದನ್ನು ಅಪರಾಧ ನಿಗ್ರಹ ದಳ ಮುಂದುವರೆಸುತ್ತದೆ” ಎಂದಿದ್ದಾರೆ.

Also Read
ಅದಾನಿ, ಅಂಬಾನಿಯಿಂದ ಕಾಂಗ್ರೆಸ್ ಕಪ್ಪುಹಣ ಪಡೆದ ಆರೋಪ: ಮೋದಿ ವಿರುದ್ಧದ ದೂರು ವಜಾಗೊಳಿಸಿದ ಲೋಕಪಾಲ್

ಲಂಚ ಪಡೆಯುವುದನ್ನು ನಿಗ್ರಹಿಸುವ ಕಾನೂನುಗಳನ್ನು ಉಲ್ಲಂಘಿಸಿದ್ದಕ್ಕಾಗಿ ಗೌತಮ್ ಅದಾನಿ, ಸಾಗರ್ ಅದಾನಿ ಮತ್ತು ವಿನೀತ್ ಜೈನ್ ಮಾತ್ರವಲ್ಲದೆ ನವೀಕರಿಸಬಹುದಾದ ಇಂಧನ ಕಂಪನಿಯ ಮಾಜಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಂಜಿತ್ ಗುಪ್ತಾ, ರೂಪೇಶ್ ಅಗರ್‌ವಾಲ್‌, ಸಿರಿಲ್ ಕ್ಯಾಬನೆಸ್, ಸೌರಭ್ ಅಗರ್‌ವಾಲ್‌  ಹಾಗೂ ಕೆನಡಾದ ಹೂಡಿಕೆ ಸಂಸ್ಥೆಯ ಮಾಜಿ ಉದ್ಯೋಗಿಗಳಾದ ದೀಪಕ್ ಮಲ್ಹೋತ್ರಾ ಅವರೂ ಸಂಚಿನಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ವಿಶ್ವದ ಅತಿದೊಡ್ಡ ಸೌರ ಇಂಧನ ಯೋಜನೆಗಳಲ್ಲೊಂದಕ್ಕೆ ಸಂಬಂಧಿಸಿದಂತೆ ಲಂಚದ ಸಂಚು ರೂಪಿಸಲಾಗಿತ್ತು ಎನ್ನಲಾಗಿದೆ.

ವಿದೇಶಿ ಭ್ರಷ್ಟಾಚಾರ ಕಾಯಿದೆ (FCPA) ಮತ್ತು ವಿದೇಶಿ ಸುಲಿಗೆ ತಡೆ ಕಾಯಿದೆ (FEPA) ಎಂಬ ಅಮೆರಿಕ ಕಾನೂನುಗಳಡಿ ಅದಾನಿ ಹಾಗೂ ಇತರ ಏಳು ಮಂದಿಯ ವಿರುದ್ಧ ಆರೋಪ ಮಾಡಲಾಗಿದೆ.  ಅಮೆರಿಕದ ಪ್ರಾಸಿಕ್ಯೂಟರ್‌ಗಳು ಆರೋಪಿಗಳ ವಿರುದ್ಧ ಐದು ಪ್ರಮುಖ ದೂರುಗಳನ್ನು ಪ್ರಸ್ತಾಪಿಸಿದ್ದಾರೆ:

ಆರೋಪ 1: ವಿದೇಶಿ ಭ್ರಷ್ಟಾಚಾರ ಕಾಯಿದೆಯನ್ನು ಉಲ್ಲಂಘಿಸಲಾಗಿದೆ

2020 ಮತ್ತು 2024ರ ನಡುವೆ, ರಂಜಿತ್ ಗುಪ್ತಾ, ಸಿರಿಲ್ ಕ್ಯಾಬನೆಸ್, ಸೌರಭ್ ಅಗರ್‌ವಾಲ್‌, ದೀಪಕ್ ಮಲ್ಹೋತ್ರಾ ಮತ್ತು ರೂಪೇಶ್ ಅಗರ್‌ವಾಲ್‌ ಅವರು ಇಂಧನ ಗುತ್ತಿಗೆ ಪಡೆಯುವುದಕ್ಕಾಗಿ ಭಾರತೀಯ ಅಧಿಕಾರಿಗಳಿಗೆ ಲಂಚ ನೀಡಲು ಸಂಚು ರೂಪಿಸಿದ್ದಾರೆ ಎಂದು ಪ್ರಾಸಿಕ್ಯೂಟರ್‌ಗಳು ಆರೋಪಿಸಿದ್ದಾರೆ. ಭಾರತೀಯ ಸರ್ಕಾರಿ ಸಂಸ್ಥೆಗಳು ತಮಗೆ ಅನುಕೂಲಕರವಾದ ತೀರ್ಮಾನ ಕೈಗೊಳ್ಳಲು  ಮಧ್ಯವರ್ತಿಗಳು ಮತ್ತು ನಕಲಿ ಕಂಪೆನಿಗಳನ್ನು ಬಳಸಿಕೊಂಡಿದ್ದರು.  ಪ್ರತಿವಾದಿಗಳ ಕಂಪನಿಗಳಿಗೆ ಅನುಚಿತ ಪ್ರಯೋಜನ ಮತ್ತು ಅವರ ಕಂಪೆನಿಗಳಿಗೆ ಲಾಭದಾಯಕ ಗುತ್ತಿಗೆ ನೀಡುವುದಕ್ಕಾಗಿ ಈ ಯೋಜನೆ ಭಾರತೀಯ ಅಧಿಕಾರಿಗಳು ತಮ್ಮ ಕರ್ತವ್ಯ ಉಲ್ಲಂಘಿಸುವಂತೆ ಮಾಡಲು ಹೊರಟಿತ್ತು.  

ದೋಷಾರೋಪಣೆಯಲ್ಲಿ ವಿವರಿಸಲಾದ ಅಪರಾಧಿಕ ಕೃತ್ಯಗಳು:

ಲಿಂಕ್ಡ್ ಎನರ್ಜಿ ಪ್ರಾಜೆಕ್ಟ್ ಅಡಿಯಲ್ಲಿ ವಿದ್ಯುತ್ ಖರೀದಿಸಲು ಸರ್ಕಾರಿ ಅಧಿಕಾರಿಗಳನ್ನು "ಪ್ರೇರೇಪಿಸುವ" ಯತ್ನ ಚರ್ಚಿಸುವುದಕ್ಕಾಗಿ ಎಲೆಕ್ಟ್ರಾನಿಕ್ ಸಂದೇಶಗಳ ವಿನಿಮಯ ನಡೆದಿದೆ.

ಪ್ರತಿವಾದಿಗಳು ಮತ್ತು ವಿದೇಶಿ ಅಧಿಕಾರಿಗಳ ನಡುವಿನ ಸಭೆಗಳಲ್ಲಿ ಲಂಚ ಮತ್ತು ಭ್ರಷ್ಟಾಚಾರದ ಯೋಜನೆಗಳ ಕುರಿತು ಮಾತುಕತೆ ನಡೆಸಲಾಗಿದೆ.

ಪಾವತಿ ಅಂತಿಮಗೊಳಿಸಲು ಸಾಂಕೇತಿಕ ಭಾಷೆ ಹಾಗೂ ತಪ್ಪುದಾರಿಗೆಳೆಯುವ ದಾಖಲೆಗಳ ಮೂಲಕ ವಹಿವಾಟುಗಳನ್ನು ಮರೆಮಾಚುವ ಪ್ರಯತ್ನಗಳು ನಡೆದಿವೆ.

ಆರೋಪ 2: ಷೇರು ವಂಚನೆಯ ಪಿತೂರಿ

ಹಣಕಾಸು ಮಾಹಿತಿ ತಿರುಚಿ ಗೌತಮ್‌ ಅದಾನಿ, ಸಾಗರ್‌ ಅದಾನಿ ಮತ್ತು ವಿನೀತ್‌ ಜೈನ್‌ ಸಂಚಿನ ಮೂಲಕ ಹೂಡಿಕೆದಾರರನ್ನು ವಂಚಿಸಲು ಮುಂದಾಗಿದ್ದರು ಎಂದು ಆರೋಪಿಸಲಾಗಿದೆ. ವಾಸ್ತವಾಂಶಗಳನ್ನು ಮರೆಮಾಚಿ ಅಮೆರಿಕದ ಹೂಡಿಕೆದಾರರನ್ನು ತಮ್ಮ ಬಾಂಡ್‌ ಕೊಡುಗೆಗಳ ಮೂಲಕ ಆಕರ್ಷಿಸುವುದು ಕಾರ್ಪೊರೇಟ್‌ ತೀರ್ಪುಗಳನ್ನು ಸುಳ್ಳು ಮಾಡುವಂತಹ ಮೋಸದ ಕ್ರಮಗಳನ್ನು ಬಳಸಿಕೊಳ್ಳಲು ಆರೋಪಿಗಳು ಮುಂದಾಗಿದ್ದರು.    

ಪ್ರಮುಖ ಆರೋಪಗಳು :

$ 750 ಮಿಲಿಯನ್‌ ದಶಲಕ್ಷ ಬಾಂಡ್ ವಿತರಣೆಗೆ ಸಂಬಂಧಿಸಿದ ತಪ್ಪುದಾರಿಗೆಳೆಯುವ ಹಣಕಾಸಿನ ದಾಖಲೆಗಳ ಅನುಮೋದನೆಯಾಗಿದೆ.

ಅಮೆರಿಕ ಹೂಡಿಕೆದಾರರಿಗೆ ಕೊಡುಗೆ ನೀಡುವ ಸಮಯದಲ್ಲಿ ಬಾಂಡ್ ಆದಾಯದ ಬಳಕೆಯ ತಪ್ಪು ನಿರೂಪಣೆ ಮಾಡಲಾಗಿದೆ.

ಆರೋಪ 3: ವಿದ್ಯುನ್ಮಾನ ವಂಚನೆ ಪಿತೂರಿ

ಸಾಲದಾತರು ಮತ್ತು ಹೂಡಿಕೆದಾರರಿಂದ ಸಾಲ ಮತ್ತು ಹೂಡಿಕೆಗಳನ್ನು ಪಡೆದುಕೊಳ್ಳಲು ಸುಳ್ಳು ಭರವಸೆ ಮತ್ತು ಮೋಸ ಮಾಡುವುದಕ್ಕಾಗಿ ಆರೋಪಿಗಳ ಮೇಲೆ ವಿದ್ಯುನ್ಮಾನ ಸಂಚು ರೂಪಿಸಿದ ಆರೋಪವಿದೆ. ಪ್ರಾಸಿಕ್ಯೂಟರ್‌ಗಳು ಷೇರುದಾರರನ್ನು ತಪ್ಪುದಾರಿಗೆಳೆಯಲು ಮತ್ತು ಅವರ ಇಂಧನ ವ್ಯವಹಾರಗಳಿಗೆ ಹಣಕಾಸಿನ ಪ್ರಯೋಜನಗಳನ್ನು ಪಡೆಯಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಾಸಿಕ್ಯೂಟರ್‌ಗಳು ಆರೋಪಿಸಿದ್ದಾರೆ.

ಆರೋಪ 4: 2021 ಬಾಂಡ್ ಕೊಡುಗೆಗೆ ಸಂಬಂಧಿಸಿದ ಷೇರು ವಂಚನೆ

ಗೌತಮ್ ಅದಾನಿ, ಸಾಗರ್ ಅದಾನಿ ಮತ್ತು ವಿನೀತ್ ಜೈನ್ ವಿರುದ್ಧ 2021ರ ಬಾಂಡ್ ಕೊಡುಗೆಗೆ ಸಂಬಂಧಿಸಿದ ಷೇರು ವಂಚನೆಯ ಆರೋಪ ಮಾಡಿದೆ ದೋಷಾರೋಪ ಪಟ್ಟಿ. ಅವರು ಮೋಸಗೊಳಿಸುವ ತಂತ್ರಗಳನ್ನು ಬಳಸಿ ನಿರ್ಣಾಯಕ ಹಣಕಾಸಿನ ವಿವರಗಳನ್ನು ಹೊರತುಪಡಿಸಿ ಉದ್ದೇಶಪೂರ್ವಕವಾಗಿ ಹೂಡಿಕೆದಾರರಿಗೆ ತಮ್ಮ ಬಾಂಡ್‌ಗಳತ್ತ ಸೆಳೆಯುವ ಸಂಚಿನಲ್ಲಿ ತೊಡಗಿದ್ದರು ಎಂದು ಆರೋಪಿಸಲಾಗಿದೆ,  

Also Read
ಅದಾನಿ-ಹಿಂಡೆನ್‌ಬರ್ಗ್ ತೀರ್ಪಿನ ವಿರುದ್ಧದ ಮರುಪರಿಶೀಲನಾ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

ಆರೋಪ 5: ನ್ಯಾಯಕ್ಕೆ ಅಡ್ಡಿಪಡಿಸುವ ಪಿತೂರಿ

ಅಮೆರಿಕ ಸರ್ಕಾರ  ನಡೆಸುತ್ತಿರುವ ತನಿಖೆಗಳನ್ನು ತಡೆಯಲು ಸಂಚು ರೂಪಿಸಿದ ಆರೋಪವನ್ನೂ  ಸಿರಿಲ್ ಕ್ಯಾಬನೆಸ್, ಸೌರಭ್ ಅಗರ್‌ವಾಲ್‌, ದೀಪಕ್ ಮಲ್ಹೋತ್ರಾ ಹಾಗೂ ರೂಪೇಶ್ ಅಗರ್‌ವಾಲ್‌ ವಿರುದ್ಧ ಹೊರಿಸಲಾಗಿದೆ. ಆರೋಪಿಗಳು ಲಂಚದ ಯೋಜನೆಯನ್ನು ಮುಚ್ಚಿಹಾಕುವುದಕ್ಕಾಗಿ ಸಾಕ್ಷ್ಯ ನಾಶಪಡಿಸಿದ್ದಾರೆ, ಸಾಕ್ಷಿಗಳನ್ನು ತಡೆಹಿಡಿದಿದ್ದಾರೆ ಮತ್ತು ತನಿಖಾಧಿಕಾರಿಗಳಿಗೆ ಸುಳ್ಳು ಹೇಳಿದ್ದಾರೆ ಎಂದು ಆರೋಪಿಸಲಾಗಿದೆ.

ಆರೋಪಿಗಳು ತನಿಖೆಗೆ ತಮ್ಮ ಪ್ರತಿಕ್ರಿಯೆ ಹೇಗಿರಬೇಕು ಎಂಬುದನ್ನು ಸಂಯೋಜಿಸಲೆಂದು ಮತ್ತು  ತನಿಖಾಧಿಕಾರಿಗಳನ್ನು ತಪ್ಪುದಾರಿಗೆಳೆಯುವ ತಂತ್ರಗಳನ್ನು ಚರ್ಚಿಸಲೆಂದು ಆರೋಪಿಗಳು ನಡೆಸಿರುವ ಸಭೆಗಳು ಮತ್ತು ವಿದ್ಯುನ್ಮಾನ ಸಂದೇಶಗಳನ್ನು ಪ್ರಾಸಿಕ್ಯೂಟರ್‌ಗಳು ಉಲ್ಲೇಖಿಸಿದ್ದಾರೆ.  

ಆರೋಪ ಸಾಬೀತಾದರೆ ಏನಾಗುತ್ತದೆ?

ಲಂಚ, ವಂಚನೆ ಮತ್ತು ನ್ಯಾಯಕ್ಕೆ ಅಡ್ಡಿಪಡಿಸುವ ಸಂಚಿನಂತಹ ಕ್ರಿಮಿನಲ್ ಚಟುವಟಿಕೆಯಿಂದ ಪಡೆದ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವಂತೆ ಆರೋಪಪಟ್ಟಿ ಕೋರಿದೆ.

ಪ್ರಕರಣದ ವಿಚಾರಣೆ ಆರಂಭವಾಗಲಿದ್ದು ಗೌತಮ್ ಅದಾನಿ ಮತ್ತಿತರರು ತಮ್ಮನ್ನು ಸಮರ್ಥಿಸಿಕೊಳ್ಳಬೇಕಾಗುತ್ತದೆ.

Kannada Bar & Bench
kannada.barandbench.com