ಚಿತ್ರ ನಿರ್ಮಾಪಕ ಮುಕೇಶ್ ಭಟ್ ಅವರಿಗೆ ಮಹತ್ವದ ಪರಿಹಾರ ನೀಡಿರುವ ದೆಹಲಿ ಹೈಕೋರ್ಟ್ ನಿರ್ಮಾಣ ಟಿ-ಸಿರೀಸ್ ತನ್ನ ಚಿತ್ರಗಳಿಗೆ "ತು ಹಿ ಆಶಿಕಿ", "ತು ಹಿ ಆಶಿಕಿ ಹೈ" ಅಥವಾ "ಆಶಿಕಿ" ಎಂಬ ಪದ ಬಳಸದಂತೆ ನಿರ್ಬಂಧ ವಿಧಿಸಿದೆ [ವಿಶೇಶ್ ಫಿಲ್ಮ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಸೂಪರ್ ಕ್ಯಾಸೆಟ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ನಡುವಣ ಪ್ರಕರಣ] .
ಮಧ್ಯಂತರ ತಡೆಯಾಜ್ಞೆ ನೀಡಿರುವ ನ್ಯಾಯಮೂರ್ತಿ ಸಂಜೀವ್ ನರುಲಾ "ಆಶಿಕಿ" ಶೀರ್ಷಿಕೆ ಕೇವಲ ಬೇರೆ ಹೆಸರಾಗಿರದೆ 1990 ಮತ್ತು 2013ರಲ್ಲಿ ಬಿಡುಗಡೆಯಾದ ಎರಡು ಜನಮನ್ನಣೆ ಗಳಿಸಿದ ಯಶಸ್ವಿ ಚಲನಚಿತ್ರ ಸರಣಿಯ ಭಾಗವಾಗಿದೆ ಎಂದರು.
ಟಿ-ಸೀರೀಸ್ ನಿರ್ಮಿಸಿದ ಚಿತ್ರ ಮತ್ತು ಆಶಿಕಿ ಹೆಸರಿರುವ ಹಿಂದಿನ ಎರಡು ಚಲನಚಿತ್ರಗಳ ನಡುವೆ ಯಾವುದೇ ನೇರ ಸಂಬಂಧವಿಲ್ಲ ಎಂದು ಚಲನಚಿತ್ರ ಪ್ರೇಕ್ಷಕರಿಗೆ ಅರಿವಾಗುತ್ತದೆ ಎಂಬುದು ನಿಜವೇ ಆದರೂ, ಆರಂಭಿಕ ಗೊಂದಲ ಮೂಡುವ ಸಾಧ್ಯತೆಯಿದೆ ಎಂದು ನ್ಯಾಯಾಲಯ ಒತ್ತಿಹೇಳಿತು.
ವಾಣಿಜ್ಯ ಚಿಹ್ನೆ ಕಾನೂನು ಆರಂಭಿಕ ಗೊಂದಲದ ಸಂಭವನೀಯತೆಗೆ ಸಂಬಂಧಿಸಿದೆ. ಟಿ-ಸೀರೀಸ್ ಚಲನಚಿತ್ರ ಮತ್ತು ಜನಮಾನಸದಲ್ಲಿ ನೆಲೆಸಿರುವ ಆಶಿಕಿ ಫ್ರ್ಯಾಂಚೈಸ್ ನಡುವೆ ಸಂಬಂಧವಿದೆ ಎಂದು ಸಾರ್ವಜನಿಕರು ತಪ್ಪುದಾರಿಗೆಳೆಯಬಹುದು ಎಂದು ನ್ಯಾಯಾಲಯ ಹೇಳಿದೆ.
ಈ ಗೊಂದಲ ತಾತ್ಕಾಲಿಕವಾದದ್ದಾಗಿದ್ದರೂ ಆಶಿಕಿ ಬ್ರಾಂಡ್ ದುರ್ಬಲಗೊಳಿಸುವ ಮೂಲಕ ಆಶಿಕಿ ಫ್ರ್ಯಾಂಚೈಸ್‌ನ ವಿಶಿಷ್ಟತೆ ಕುಗ್ಗಿ ಗಮನಾರ್ಹ ಹಾನಿ ಉಂಟಾಗಬಹುದು. ಅಲ್ಲದೆ ಪ್ರೇಕ್ಷಕರನ್ನು ತಪ್ಪುದಾರಿಗೆಳೆದು, ಫಿರ್ಯಾದಿಯ ವಾಣಿಜ್ಯ ಚಿಹ್ನೆಯ ಹಕ್ಕು ಉಲ್ಲಂಘನೆಯಾಗುತ್ತದೆ ಎಂಬುದಾಗಿ ನ್ಯಾಯಾಲಯ ಹೇಳಿದೆ.
ತನ್ನ ಒಪ್ಪಿಗೆಯಿಲ್ಲದೆ ಆಶಿಕಿ 3 ಚಿತ್ರ ನಿರ್ಮಿಸಲು ಟಿ ಸೀರೀಸ್ ಯೋಜಿಸುತ್ತಿದೆ ಎಂದು ಆರೋಪಿಸಿ ಮುಖೇಶ್ ಭಟ್ ಮೊಕದ್ದಮೆ ಹೂಡಿದ್ದರು. ಟಿ-ಸಿರೀಸ್ ನಡೆ ಬೌದ್ಧಿಕ ಆಸ್ತಿ ಮತ್ತು ವ್ಯುತ್ಪನ್ನ ಹಕ್ಕಿನ ಉಲ್ಲಂಘನೆಯಾಗುತ್ತದೆ ಎಂದು ಅವರು ವಾದಿಸಿದ್ದರು.
ಭಟ್ ಮತ್ತು ಟಿ-ಸೀರೀಸ್ ಒಗ್ಗೂಡಿ 1990 ರಲ್ಲಿ ಆಶಿಕಿ ಮತ್ತು 2013 ರಲ್ಲಿ ಆಶಿಕಿ 2 ಚಿತ್ರ ನಿರ್ಮಿಸಿದ್ದರು. ಎರಡೂ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಯಶ ಕಂಡಿದ್ದವು. ಭಟ್ ಹಾಗೂ ಟಿ- ಸೀರೀಸ್ ಆಶಿಕಿ 3 ನಿರ್ಮಿಸುವ ಚರ್ಚೆಯಲ್ಲಿದ್ದರು.
ಮೊದಲೆರಡು ಚಿತ್ರಗಳಿಗೆ ಸಂಬಂಧಿಸಿದಂತೆ ತಮಗೂ ಟಿ ಸೀರಿಸ್‌ಗೂ ಜಂಟಿ ಮಾಲೀಕತ್ವ ಇರುವುದು ಮಾತ್ರವಲ್ಲದೆ 'ಆಶಿಕಿ 3' ಅಥವಾ 'ತು ಹಿ ಆಶಿಕಿ' ಸೇರಿದಂತೆ ಯಾವುದೇ ಸೀಕ್ವೆಲ್‌ಗಳಿಗೂ (ಮುಂದುವರಿದ ಸರಣಿ) ಅದೇ ಮಾಲೀಕತ್ವ ಅನ್ವಯಿಸುತ್ತದೆ. ಆದರೆ ಟಿ-ಸೀರಿಸ್ ಆಶಿಕಿ ಫ್ರಾಂಚೈಸಿಯನ್ನು ಕಸಿದುಕೊಂಡು ದುರುಪಯೋಗಕ್ಕೆ ಮುಂದಾಗಿದೆ. ಇದು ತಮ್ಮ ಹಕ್ಕು ಮತ್ತು ಜಂಟಿ ಮಾಲೀಕತ್ವದ ಉಲ್ಲಂಘನೆಯಾಗಿದೆ ಎಂಬುದು ಸಹ ಭಟ್ ಅವರ ವಾದವಾಗಿತ್ತು.