ಮುಸ್ಲಿಮರು ಮತ್ತು ಕಾಶ್ಮೀರಿಗಳ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಮಾನಹಾನಿ ಹೇಳಿಕೆ ನೀಡಿದ ಆರೋಪ ಎದುರಿಸುತ್ತಿರುವ ಬಿಜೆಪಿ ನಾಯಕ ವಿಕ್ರಮ್ ರಂಧಾವಾ ಅವರಿಗೆ ಜಮ್ಮು ಮತ್ತು ಕಾಶ್ಮೀರ ನ್ಯಾಯಾಲಯವು ಮಂಗಳವಾರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಪೊಲೀಸರು ವಿಚಾರಣೆಗೆ ಕರೆದಾಗ ಹಾಜರಾಗಬೇಕು. ಪ್ರಕರಣದಲ್ಲಿನ ಸಾಕ್ಷಿಗಳಿಗೆ ಬೆದರಿಕೆ ಹಾಕಬಾರದು ಎಂಬ ಷರತ್ತುಗಳನ್ನು ವಿಧಿಸಿ ಜಮ್ಮುವಿನ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಅಶ್ವನಿ ಕುಮಾರ್ ಶರ್ಮಾ ಮಧ್ಯಂತರ ಜಾಮೀನು ನೀಡಿದ್ದಾರೆ.
“ಅರ್ಜಿದಾರರು ಬಂಧಿಸಲ್ಪಟ್ಟರೆ 25 ಸಾವಿರ ರೂಪಾಯಿ ಮೊತ್ತದ ಭದ್ರತಾ ಬಾಂಡ್ ಮತ್ತು ಅಷ್ಟೇ ಮೊತ್ತದ ವೈಯಕ್ತಿಕ ಬಾಂಡ್ ಅನ್ನು ಪಡೆದು ಜಮ್ಮುವಿನ ತ್ರಿಕೂಟ ಠಾಣೆಯ ಪೊಲೀಸರು ಅವರನ್ನು ಬಿಡುಗಡೆ ಮಾಡಬೇಕು. ಎನ್‌ಡಿಪಿಎಸ್ ಕಾಯಿದೆ, ಅರಣ್ಯ ಅಥವಾ ಶಸ್ತ್ರಾಸ್ತ್ರ ಕಾಯಿದೆ, ಯುಎಲ್‌ಎಪಿ ಕಾಯಿದೆ, ಎಸ್‌ಎಸಿ/ಎಸ್‌ಟಿ ಮೇಲಿನ ದೌರ್ಜನ್ಯ ನಿಯಂತ್ರಣ ಕಾಯಿದೆ ಮತ್ತು ಮಹಿಳೆಯ ಮೇಲಿನ ಅಪರಾಧಗಳಲ್ಲಿ ಭಾಗಿಯಾದರೆ ವಿಶೇಷ ನ್ಯಾಯಾಧೀಶರು ವಿಚಾರಣೆ ನಡೆಸಬಹುದಾದ ಅಥವಾ ಐದು ವರ್ಷ ಜೈಲು ಶಿಕ್ಷೆಯನ್ನು ಮೀರದ ಅಪರಾಧಗಳಲ್ಲಿ ಅವರು ಭಾಗಿಯಾಗಿರಬಾರದು” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.
ಮಾನಹಾನಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ರಂಧಾವಾ ಅವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳಾದ 295-ಎ (ಧಾರ್ಮಿಕ ಭಾವನೆಗಳಿಗೆ ಚ್ಯುತಿ ಉಂಟು), 505ರ (ವರ್ಗಗಳ ನಡುವೆ ದ್ವೇಷ ಬಿತ್ತುವುದು) ಅಡಿ ಪ್ರಕರಣ ದಾಖಲಿಸಲಾಗಿದೆ.
ಟಿ20 ಕ್ರಿಕೆಟ್ ವಿಶ್ವಕಪ್‌ನಲ್ಲಿ ಭಾರತ ತಂಡವು ಪಾಕಿಸ್ತಾನದ ವಿರುದ್ಧ ಸೋಲನುಭವಿಸಿದ ಹಿನ್ನೆಲೆಯಲ್ಲಿ ಮುಸ್ಲಿಮರ ವಿರುದ್ಧ ಮಾನಹಾನಿ ಹೇಳಿಕೆಯ ಜೊತೆಗೆ ಅವರನ್ನು ಜೀವಂತವಾಗಿ ಸುಲಿಯಲಾಗುವುದು ಎಂಬ ವಿಡಿಯೋ ಹಿನ್ನೆಲೆಯಲ್ಲಿ ರಂಧಾವಾ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
“ಜಮ್ಮುವಿನಲ್ಲಿ ಸುತ್ತಾಡುತ್ತಿದ್ದ ಬುರ್ಕಾ ಧರಿಸಿದ್ದ 22 ಅಥವಾ 23 ವರ್ಷದ ಬಾಲಕಿಯರು ಕಾಶ್ಮೀರಕ್ಕೆ ಬಂದು ಜಾಕೆಟ್‌ಗಳನ್ನು ಮೇಲಕ್ಕೆ ಎಸೆದು ಸಂಭ್ರಮಿಸುವುದರ ಜೊತೆಗೆ ಪಾಕಿಸ್ತಾನ ಪರವಾದ ಘೋಷಣೆಗಳನ್ನು ಕೂಗಿದ್ದಾರೆ. 21-22 ವಯೋಮಾನದ ಯುವತಿಯರು ಪಾಕಿಸ್ತಾನದ ಪರವಾಗಿ ಮಾತನಾಡಿದ್ದು, ಆ ದೇಶದ ಬಗ್ಗೆ ಅನುಕಂಪ ವ್ಯಕ್ತಪಡಿಸಿದ್ದಾರೆ… ತನಿಖಾ ಸಂಸ್ಥೆಗಳು ಒಳ್ಳೆಯ ಕೆಲಸ ಮಾಡುತ್ತಿವೆ. ಅವರು ಭಾರತದ ಸೋಲನ್ನು ಸಂಭ್ರಮಿಸುವುದನ್ನು ಸಾಮಾನ್ಯವಾಗಿ ಪರಿಗಣಿಸಿಲ್ಲ. ಆರಂಭದಿಂದಲೂ ನಾವು ಅವರ ಶೈಕ್ಷಣಿಕ ಪದವಿಯನ್ನು ರದ್ದುಪಡಿಸುವುದಲ್ಲದೇ ಅವರ ಪೌರತ್ವವನ್ನೂ ಹಿಂಪಡೆಯಬೇಕು ಎಂದು ಆಗ್ರಹಿಸುತ್ತಿದ್ದೇವೆ. ಅವರಿಗೆ ಚೆನ್ನಾಗಿ ಬಡಿದು ಜೀವಂತವಾಗಿ ಅವರನ್ನು ಸುಲಿಯಬೇಕು” ಎಂದು ರಂಧಾವಾ ಹೇಳಿದ್ದರು.
ರಂಧಾವಾ ಅವರ ಈ ಹೇಳಿಕೆಯನ್ನು ಆಧರಿಸಿ ವಿಭಿನ್ನ ಪೊಲೀಸ್ ಠಾಣೆಗಳಲ್ಲಿ ಹಲವು ದೂರುಗಳನ್ನು ದಾಖಲಿಸಲಾಗಿದೆ. ಈ ಮಧ್ಯೆ ಅವರನ್ನು ಬಿಜೆಪಿಯ ವಿವಿಧ ಹುದ್ದೆ ಮತ್ತು ಜವಾಬ್ದಾರಿಯಿಂದ ಕೆಳಗಿಳಿಸಲಾಗಿದೆ.