ಪೆರೋಲ್‌ ವಿಸ್ತರಿಸುವಂತೆ ಕೋರಲು ಕೋವಿಡ್‌ ಸಕಾರಣವಲ್ಲ: ಕರ್ನಾಟಕ ಹೈಕೋರ್ಟ್‌

ಅಪರಾಧಿಯು ಕೋವಿಡ್‌ನಿಂದ ಬಳಲುತ್ತಿದ್ದು, ರೋಗದಿಂದ ಸಂಪೂರ್ಣವಾಗಿ ಗುಣಮುಖರಾಗಲು ಅವರಿಗೆ ಮತ್ತೊಮ್ಮೆ ಪೆರೋಲ್‌ ವಿಸ್ತರಿಸಬೇಕು ಎಂಬ ಅರ್ಜಿದಾರರ ವಾದವನ್ನು ಪುರಸ್ಕರಿಸಲಾಗದು ಎಂದ ಪೀಠ.
Justice Krishna S Dixit and Karnataka HC
Justice Krishna S Dixit and Karnataka HC

ಕೋವಿಡ್‌ನಿಂದ ಬಳಲುತ್ತಿರುವ ಮಾತ್ರಕ್ಕೆ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಅಪರಾಧಿಗೆ ಪೆರೋಲ್‌ ವಿಸ್ತರಿಸಲಾಗದು ಎಂದು ಈಚೆಗೆ ಕರ್ನಾಟಕ ಹೈಕೋರ್ಟ್‌ ಹೇಳಿದೆ.

ಮಾರ್ಚ್‌ 18ರಿಂದ ಪೆರೋಲ್‌ನಲ್ಲಿರುವ ರಿಶಿ ಕುಮಾರ್‌ ಅವರ ಮನವಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್‌ ದೀಕ್ಷಿತ್‌ ನೇತೃತ್ವದ ಪೀಠವು ವಜಾ ಮಾಡಿದೆ.

“ಅಪರಾಧಿಯು ಕೋವಿಡ್‌ನಿಂದ ಬಳಲುತ್ತಿದ್ದು, ರೋಗದಿಂದ ಸಂಪೂರ್ಣವಾಗಿ ಗುಣಮುಖರಾಗಲು ಅವರಿಗೆ ಮತ್ತೊಮ್ಮೆ ಪೆರೋಲ್‌ ವಿಸ್ತರಿಸಬೇಕು ಎಂಬ ಅರ್ಜಿದಾರರ ವಾದವನ್ನು ಪುರಸ್ಕರಿಸಲಾಗದು. ರೋಗಕ್ಕೆ ತುತ್ತಾಗಿರುವ, ಶಿಕ್ಷೆ ಅನುಭವಿಸುತ್ತಿರುವ ಅಪರಾಧಿಗೆ ಜೈಲು ಮತ್ತು ಇತರೆ ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಸೌಲಭ್ಯಗಳು ದೊರೆಯುತ್ತವೆ ಎಂದು ಹೆಚ್ಚುವರಿ ಸರ್ಕಾರಿ ವಕೀಲರು ಸಮರ್ಥಿಸಿದ್ದಾರೆ” ಎಂದು ಪೀಠ ಹೇಳಿದೆ.

ಜೈಲುಗಳು ತುಂಬಿದ್ದು, ತಮ್ಮ ಪ್ರಕರಣವನ್ನು ಸಹಾನುಭೂತಿಯಿಂದ ಪರಿಗಣಿಸಬೇಕು ಎಂಬ ಅರ್ಜಿದಾರರ ವಾದವನ್ನು ಪೀಠವು ಪುರಸ್ಕರಿಸಿಲ್ಲ. “ಈ ವಾದವು ಅತ್ಯಂತ ದುರ್ಬಲವಾಗಿದ್ದು, ಇದನ್ನು ಸಮರ್ಥಿಸಲು ಅಗತ್ಯವಾದ ದತ್ತಾಂಶವನ್ನು ನಮ್ಮ ಮುಂದೆ ಇಡಲಾಗಿಲ್ಲ. ಹೆಚ್ಚು ಜನಸಂಖ್ಯೆ ಹೊಂದಿರುವ ನಮ್ಮಂಥ ರಾಷ್ಟ್ರದ ಜೈಲುಗಳಲ್ಲಿ ಕೈದಿಗಳ ಸಂಖ್ಯೆ ಹೆಚ್ಚಿದೆ ಎಂಬುದು ಸಹಜವಾಗಿದೆ. ಇದು ಶಿಕ್ಷೆಯನ್ನು ಅನುಭವಿಸದಿರಲು ಸಕಾರಣವಲ್ಲ” ಎಂದು ಪೀಠ ಹೇಳಿದೆ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳಾದ 302,120ಬಿ, 324, 341, 427 ಮತ್ತು 34ರ ಅಡಿ ಅರ್ಜಿದಾರರು ಅಪರಾಧಿ ಎಂದು ಘೋಷಿಸಲ್ಪಟ್ಟಿದ್ದಾರೆ. ಒಂದು ತಿಂಗಳಿಗೆ ಅನ್ವಯವಾಗುವಂತೆ ಆರೋಪಿಯನ್ನು ಮಾರ್ಚ್‌ 19ರಂದು ಬಂಧೀಖಾನೆಯ ಪೊಲೀಸ್‌ ಮಹಾನಿರ್ದೇಶಕರು ಮತ್ತು ಕೇಂದ್ರೀಯ ಕಾರಾಗೃಹದ ಮುಖ್ಯ ಮೇಲ್ವಿಚಾರಕರ ಆದೇಶದ ಹಿನ್ನೆಲೆಯಲ್ಲಿ ಪೆರೋಲ್‌ ಮೇಲೆ ಬಿಡುಗಡೆ ಮಾಡಲಾಗಿತ್ತು.

ಆಗಸ್ಟ್‌ 5ರಂದು ಅಪರಾಧಿಗೆ ಪೆರೋಲ್‌ ವಿಸ್ತರಿಸಲಾಗಿತ್ತು. ಅಲ್ಲದೇ,ಆಗಸ್ಟ್‌ ೩೧ರಂದು ಎರಡನೇ ಬಾರಿಯೂ ಅಪರಾಧಿಯು ಪೆರೋಲ್‌ ವಿಸ್ತರಣೆಯ ಲಾಭ ಪಡೆದಿದ್ದು, ಅದು ಅಕ್ಟೋಬರ್‌ 5ಕ್ಕೆ ಅಂತ್ಯವಾಗಿತ್ತು. ಈ ನಡುವೆ ಅಪರಾಧಿಯು ಮೊದಲನೇ ಪ್ರತಿವಾದಿಗೆ ಎರಡು ತಿಂಗಳ ಕಾಲ ಪೆರೋಲ್‌ ವಿಸ್ತರಿಸುವಂತೆ ಸೆಪ್ಟೆಂಬರ್‌ 28ರಂದು ಮನವಿ ಮಾಡಿದ್ದರು. ಇದನ್ನು ಪುರಸ್ಕರಿಸದ ಹಿನ್ನೆಲೆಯಲ್ಲಿ ಅಪರಾಧಿಯು ಹೈಕೋರ್ಟ್‌ ಮೆಟ್ಟಿಲೇರಿದ್ದರು.

“ಅಪರಾಧಿಯನ್ನು ಪೆರೋಲ್‌ನ ಮೇಲೆ ಬಿಡುಗಡೆ ಮಾಡುವುದನ್ನು ಹಕ್ಕು ಎಂದು ಪ್ರತಿಪಾದಿಸಲಾಗದು ಎಂದು ಕ್ರಿಮಿನಲ್‌ ನ್ಯಾಯಶಾಸ್ತ್ರದಲ್ಲಿ ಸ್ಪಷ್ಟಪಡಿಸಲಾಗಿದೆ. ಅಪರಾಧಿಗೆ ವಿಧಿಸಲಾದ ಶಿಕ್ಷೆಯನ್ನು ಅಪರಾಧಿ ಸಂಪೂರ್ಣವಾಗಿ ಅನುಭವಿಸುತ್ತಾನೆ ಎಂಬ ಗಟ್ಟಿಯಾದ ಸಮರ್ಥನೀಯ ನಿರೀಕ್ಷೆ ಸಂತ್ರಸ್ತರು ಮತ್ತು ಸಮಾಜಕ್ಕೆ ಇರುತ್ತದೆ. ಜೀವಾವಧಿ ಶಿಕ್ಷೆಗೆ ಗುರಿಯಾಗಿರುವವರನ್ನು ಮಧ್ಯಂತರದಲ್ಲಿ ಪೆರೋಲ್‌ ಮೇಲೆ ಬಿಡುಗಡೆ ಮಾಡುವುದು ನ್ಯಾಯದಾನಕ್ಕೆ ಧಕ್ಕೆ ಉಂಟು ಮಾಡುತ್ತದೆ. ಇದು ಸರಿಯಾದ ದಿಕ್ಕಿನಲ್ಲಿ ಯೋಚಿಸುವ ಜನರು ಕ್ರಿಮಿನಲ್‌ ನ್ಯಾಯದಾನ ವ್ಯವಸ್ಥೆಯ ಮೇಲೆ ಇಟ್ಟಿರುವ ನಂಬಿಕೆಯನ್ನು ಅಲುಗಾಡಿಸಲಿದೆ. ನಾಗರಿಕ ಸಮಾಜದಲ್ಲಿ ಘಟಿಸಬೇಕಾದ ಸಹ್ಯ ವಿಚಾರ ಇದಲ್ಲ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

Also Read
ಮಕ್ಕಳ ಭಿಕ್ಷಾಟನೆ ನಿರ್ಮೂಲನೆ: ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಶಿಫಾರಸ್ಸುಗಳೇನು?

“ಜೈಲಿನಲ್ಲಿರುವವರಿಗೆ ಮಾನವೀಯ ನೆಲೆಯಲ್ಲಿ ತಾತ್ಕಾಲಿಕ ವಿರಾಮ ಕಲ್ಪಿಸುವುದಕ್ಕಾಗಿ ಪೆರೋಲ್‌ ನಿಬಂಧನೆಗಳನ್ನು ರೂಪಿಸಲಾಗಿದೆ. ಅಪರಾಧಿಯನ್ನು ಪೆರೋಲ್‌ನ ಮೇಲೆ ಬಿಡುಗಡೆ ಮಾಡುವುದು ಬಹುಮುಖ್ಯವಾಗಿ ತನ್ನ ವೈಯಕ್ತಿಕ ಮತ್ತು ಕೌಟುಂಬಿಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಮತ್ತು ನಾಗರಿಕ ಸಮಾಜದ ಜೊತೆ ಸಂಪರ್ಕ ನಿರ್ವಹಣೆ ಮಾಡಿಕೊಂಡು ಹೋಗಲು. ಆರೋಗ್ಯದ ದೃಷ್ಟಿಯಿಂದಲೂ ಪೆರೋಲ್‌ ನೀಡಲಾಗುತ್ತದೆ. ಪೆರೋಲ್‌ ಅನ್ನು ಹಕ್ಕು ಎನ್ನುವ ರೀತಿಯಲ್ಲಿ ಪ್ರತಿಪಾದಿಸಲಾಗದು. ಪದೇಪದೇ ಪೆರೋಲ್‌ ವಿಸ್ತರಿಸುವುದು ಕ್ರಿಮಿನಲ್ ನ್ಯಾಯ ವ್ಯವಸ್ಥೆಯ ಆಡಳಿತಕ್ಕೆ ಹಲವು ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಅಲ್ಲದೇ, ಅರ್ಜಿದಾರರು ಈಗಾಗಲೇ ಹಲವು ಬಾರಿ ಪೆರೋಲ್‌ ವಿಸ್ತರಣೆಯ ಲಾಭ ಪಡೆದಿದ್ದಾರೆ” ಎಂದು ಪೀಠ ಹೇಳಿದೆ.

ಹೀಗಾಗಿ, ಅಕ್ಟೋಬರ್‌ 11ರಂದು ಮಧ್ಯಾಹ್ನ 3.30ರ ಒಳಗೆ ಜೈಲಿಗೆ ಬಂದು ವರದಿ ಮಾಡಿಕೊಳ್ಳಬೇಕು. ಇಲ್ಲವಾದಲ್ಲಿ, ಬಂಧಿಸಿ ಜೈಲಿಗೆ ತಳ್ಳಲಾಗುವುದು ಎಂದು ಪೀಠವು ಆದೇಶದಲ್ಲಿ ಹೇಳಿದೆ. ಅರ್ಜಿದಾರ ರಿಷಿ ಕುಮಾರ್‌ ಪರ ವಕೀಲ ಮೌನೇಶ್‌ ಕುಮಾರ್‌ ಕೆ ಬಿ ಹಾಗೂ ಬಂಧೀಖಾನೆ ಇಲಾಖೆ ನಿರ್ದೇಶಕರು ಮತ್ತು ಕೇಂದ್ರೀಯ ಕಾರಾಗೃಹದ ಮುಖ್ಯ ಮೇಲ್ವಿಚಾರಕರ ಪರವಾಗಿ ವಕೀಲ ವಿನೋದ್‌ ಕುಮಾರ್‌ ಎಂ ವಾದಿಸಿದ್ದರು.

Attachment
PDF
Rishi Kumar versus State of Karnataka.pdf
Preview

Related Stories

No stories found.
Kannada Bar & Bench
kannada.barandbench.com