ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸ್ಯನಟ ಚಿಕ್ಕಣ್ಣ ಅವರು ಸಿಆರ್‌ಪಿಸಿ ಸೆಕ್ಷನ್ 164ರ ಅಡಿ ಬೆಂಗಳೂರಿನ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಶುಕ್ರವಾರ ಹೇಳಿಕೆ ದಾಖಲಿಸಿದ್ದಾರೆ.
ಬೆಂಗಳೂರಿನ ಹೆಚ್ಚುವರಿ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ವಿಶ್ವನಾಥ್ ಸಿ. ಗೌಡರ್ ಮುಂದೆ ಕಾಮಾಕ್ಷಿಪಾಳ್ಯ ಪೊಲೀಸರ ಜೊತೆ ಬಂದ ಚಿಕ್ಕಣ್ಣ ಕೊಲೆಗೂ ಮುನ್ನ ಅಂದರೆ ಜೂನ್ 8ರಂದು ನಡೆದಿರುವ ಘಟನೆಯ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ರೇಣುಕಾಸ್ವಾಮಿಯನ್ನು ನಟ ದರ್ಶನ್ ಬೆಂಬಲಿಗರು ಚಿತ್ರದುರ್ಗದಿಂದ ಅಪಹರಿಸಿ ಬೆಂಗಳೂರಿನ ಪಟ್ಟಣಗೆರೆ ಷೆಡ್ ಕರೆದೊಯ್ಯುವುದಕ್ಕೂ ಮುನ್ನ ಸ್ಟೋನಿಬ್ರೂಕ್ ರೆಸ್ಟರೆಂಟ್‌ನಲ್ಲಿ ದರ್ಶನ್, ಚಿಕ್ಕಣ್ಣ ಸೇರಿದಂತೆ ಹಲವು ಮಂದಿ ಪಾರ್ಟಿ ಮಾಡುತ್ತಿದ್ದರು ಎಂಬ ವಿಚಾರ ತನಿಖೆಯ ಸಂದರ್ಭದಲ್ಲಿ ಕಾಮಾಕ್ಷಿ ಪಾಳ್ಯ ಪೊಲೀಸರಿಗೆ ತಿಳಿದಿತ್ತು.
ಈ ಸಂಬಂಧ ಸಿಸಿಟಿವಿ ದೃಶ್ಯಾವಳಿ, ಡಿವಿಆರ್ ಪರಿಶೀಲಿಸಿದಾಗ ಚಿಕ್ಕಣ್ಣ ಅವರೂ ದರ್ಶನ್ ಜೊತೆಯಲ್ಲಿದ್ದುದು ಖಾತರಿಯಾಗಿತ್ತು. ಈ ಕುರಿತು ಚಿಕ್ಕಣ್ಣ ಅವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು. ಇದರ ಮುಂದುವರಿದ ಭಾಗವಾಗಿ ನ್ಯಾಯಾಲಯದಲ್ಲಿ ಚಿಕ್ಕಣ್ಣ ಹೇಳಿಕೆಯನ್ನು ದಾಖಲಿಸಲಾಗಿದೆ ಎನ್ನಲಾಗಿದೆ.
ಪ್ರಕರಣದ ಹಿನ್ನೆಲೆ: ರೇಣುಕಾಸ್ವಾಮಿ ಕೊಲೆ ಪ್ರಕರಣದ ಸಂಬಂಧ ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಪವಿತ್ರಾ ಗೌಡ, ದರ್ಶನ್ ಅಲಿಯಾಸ್ ಡಿ ಬಾಸ್, ಪುಟ್ಟಸ್ವಾಮಿ ಅಲಿಯಾಸ್ ಪವನ್, ರಾಘವೇಂದ್ರ, ನಂದೀಶ್, ಜಗದೀಶ್ ಅಲಿಯಾಸ್ ಜಗ್ಗ, ಅನುಕುಮಾರ್, ರವಿ ಶಂಕರ್ ಅಲಿಯಾಸ್ ರವಿ, ಧನರಾಜ್ ಡಿ ಅಲಿಯಾಸ್ ರಾಜು, ವಿನಯ್ ವಿ, ನಾಗರಾಜು, ಲಕ್ಷ್ಮಣ, ದೀಪಕ್, ಪ್ರದೂಷ್, ಕಾರ್ತಿಕ್ ಅಲಿಯಾಸ್ ಕಪ್ಪೆ, ಕೇಶವಮೂರ್ತಿ, ನಿಖಿಲ್ ನಾಯಕ್ ಆರೋಪಿಗಳಾಗಿದ್ದು, ಐಪಿಸಿ ಸೆಕ್ಷನ್‌ಗಳಾದ 302 (ಕೊಲೆ), 201 (ಸಾಕ್ಷ್ಯ ನಾಶ), 120 (ಬಿ) (ಕ್ರಿಮಿನಲ್ ಪಿತೂರಿ), 364 (ಅಪಹರಣ), 355 (ಕ್ರಿಮಿನಲ್ ಉದ್ದೇಶದಿಂದ), 384 (ಸುಲಿಗೆ), 143 (ಅಕ್ರಮ ಕೂಟ), 147 (ದೊಂಬಿ), 148 (ಮಾರಕಾಸ್ಟ್ರ ಬಳಕೆ) ಜೊತೆಗೆ 149 (ಏಕೈಕ ಉದ್ದೇಶದಿಂದ ಎಲ್ಲರೂ ಒಟ್ಟುಗೂಡಿ ಕೃತ್ಯ ಎಸಗಿರುವುದು) ಅಡಿ ಪ್ರಕರಣ ದಾಖಲಿಸಲಾಗಿದೆ. ದರ್ಶನ್ ಗೆಳತಿ ಪವಿತ್ರಾಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ್ದಕ್ಕಾಗಿ ಜೂನ್ 8ರಂದು ಚಿತ್ರದುರ್ಗದಿಂದ ದರ್ಶನ್ ಬೆಂಬಲಿಗರು ರೇಣುಕಾಸ್ವಾಮಿಯನ್ನು ಅಪಹರಿಸಿ ಕರೆತಂದು, ಬೆಂಗಳೂರಿನ ಪಟ್ಟಣಗೆರೆಯ ಷೆಡ್‌ನಲ್ಲಿ ಚಿತ್ರಹಿಂಸೆ ನೀಡಿ ಕೊಲೆ ಮಾಡಿದ್ದಾರೆ ಎಂಬುದು ಆರೋಪವಾಗಿದೆ.