ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎರಡನೇ ಆರೋಪಿ ನಟ ದರ್ಶನ್ ಅವರ ನಿಯಮಿತ ಜಾಮೀನು ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ನವೆಂಬರ್ 21ಕ್ಕೆ ನಿಗದಿಪಡಿಸಿದೆ.
ಪ್ರಕರಣದ ಮೊದಲ ಆರೋಪಿ ಪವಿತ್ರಾ ಗೌಡ, 7ನೇ ಆರೋಪಿ ಅನುಕುಮಾರ್ ಅಲಿಯಾಸ್ ಅನು, 11ನೇ ಆರೋಪಿ ಆರ್ ನಾಗರಾಜು, 12ನೇ ಆರೋಪಿ ಎಂ ಲಕ್ಷ್ಮಣ್ ಪ್ರತ್ಯೇಕವಾಗಿ ಸಲ್ಲಿಸಿದ್ದ ಜಾಮೀನು ಅರ್ಜಿಗಳು ನ್ಯಾಯಮೂರ್ತಿ ಎಸ್ ವಿಶ್ವಜಿತ್ ಶೆಟ್ಟಿ ಅವರ ಏಕಸದಸ್ಯ ಪೀಠದ ಮುಂದೆ ಗುರುವಾರ ವಿಚಾರಣೆಗೆ ನಿಗದಿಯಾಗಿದ್ದವು.
ಅಂತೆಯೇ, ಬೆಳಗಿನ ಕಲಾಪದ ಅಂತ್ಯಕ್ಕೆ ಪ್ರಕರಣದ ವಿಶೇಷ ಸರ್ಕಾರಿ ಅಭಿಯೋಜಕ ಪಿ ಪ್ರಸನ್ನಕುಮಾರ್ ಅವರು "ಈ ಎಲ್ಲಾ ಅರ್ಜಿಗಳನ್ನೂ ಒಂದೇ ದಿನ ವಿಚಾರಣೆಗೆ ಕೈಗೆತ್ತಿಕೊಂಡರೆ ನ್ಯಾಯಾಲಯದ ಸಮಯಕ್ಕೂ ಅನುಕೂಲವಾಗುತ್ತದೆ. ಆದ್ದರಿಂದ, ಇವುಗಳ ಜೊತೆಗೇ ಮೊದಲ ಆರೋಪಿ ಪವಿತ್ರಾ ಗೌಡ ಮತ್ತು ದರ್ಶನ್ ಅವರ ನಿಯಮಿತ ಜಾಮೀನು ಅರ್ಜಿಗಳನ್ನು ಒಟ್ಟಿಗೇ ಒಂದೇ ದಿನ ವಿಚಾರಣೆಗೆ ನಿಗದಿಪಡಿಸಬೇಕು” ಎಂದು ಮನವಿ ಮಾಡಿದರು.
ಇದಕ್ಕೆ ಸಮ್ಮತಿ ವ್ಯಕ್ತಪಡಿಸಿದ ಪೀಠವು ಎಲ್ಲ ಅರ್ಜಿಗಳ ವಿಚಾರಣೆಯನ್ನು ನವೆಂಬರ್ 21ಕ್ಕೆ ಮುಂದೂಡಿತು. ಪವಿತ್ರಾ ಗೌಡ ಪರ ಹಿರಿಯ ವಕೀಲ ಟಾಮಿ ಸೆಬಾಸ್ಟಿಯನ್ ಮತ್ತು ಅನುಕುಮಾರ್ ಪರವಾಗಿ ವಕೀಲ ರಂಗನಾಥ ರೆಡ್ಡಿ ಹಾಜರಾಗಿದ್ದರು.