Darshan and Pavitra Gowda 
ಸುದ್ದಿಗಳು

ರೇಣುಕಾಸ್ವಾಮಿ ಕೊಲೆ ಪ್ರಕರಣ: ಡಿಜಿಟಲ್‌ ಸಾಕ್ಷ್ಯವನ್ನು ಸ್ವೀಕರಿಸಿದ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪವಿತ್ರಾ ಗೌಡ, ನಟ ದರ್ಶನ್‌ ಮತ್ತು ಪವನ್‌ ಪಾತ್ರ ಪ್ರಮುಖವಾಗಿ ಕೇಳಿಬಂದಿದ್ದು, ಆರೋಪ ಪಟ್ಟಿಯಲ್ಲಿನ ಸ್ವ ಇಚ್ಛಾ ಹೇಳಿಕೆಯ ವಿಸ್ತೃತ ವಿವರಗಳು ಬಹಿರಂಗಗೊಂಡಿವೆ.

Bar & Bench

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ಸೋಮವಾರ ಪ್ರಾಸಿಕ್ಯೂಷನ್‌ ಸಲ್ಲಿಸಿದ ಡಿಜಿಟಲ್‌ ಸಾಕ್ಷ್ಯವನ್ನು ಅಧಿಕೃತವಾಗಿ ಸ್ವೀಕರಿಸಿದ್ದು, ಅವುಗಳನ್ನು ಸುರಕ್ಷಿತವಾಗಿ ಕಸ್ಟಡಿಯಲ್ಲಿ ಇಡಲು ಆದೇಶಿಸಿದೆ.

ಪ್ರಕರಣದಲ್ಲಿನ ಎಲ್ಲಾ 17 ಆರೋಪಿಗಳ ನ್ಯಾಯಾಂಗ ಬಂಧನ ಇಂದು ಮುಗಿದ ಹಿನ್ನೆಲೆಯಲ್ಲಿ ಅವರನ್ನು ವಿಡಿಯೊ ಕಾನ್ಫರೆನ್ಸ್‌ ಮೂಲಕ ಬೆಂಗಳೂರಿನ 24ನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಎಸ್‌ ನಿರ್ಮಾಲಾ ಅವರ ಮುಂದೆ ಹಾಜರುಪಡಿಸಲಾಯಿತು.

ಪ್ರಕರಣದ ಮಾಹಿತಿ ಪಡೆದ ಮ್ಯಾಜಿಸ್ಟ್ರೇಟ್‌ ಅವರು ಎಲ್ಲಾ ಆರೋಪಿಗಳ ನ್ಯಾಯಾಂಗ ಬಂಧನವನ್ನು ಸೆಪ್ಟೆಂಬರ್‌ 12ರವರೆಗೆ ವಿಸ್ತರಿಸಿದ್ದಾರೆ. ಇದೇ ಸಂದರ್ಭದಲ್ಲಿ ಪ್ರಾಸಿಕ್ಯೂಷನ್‌ ಸಲ್ಲಿಸಿದ ಡಿಜಿಟಲ್‌ ಸಾಕ್ಷ್ಯಗಳನ್ನು ದಾಖಲೆಯಲ್ಲಿ ಸ್ವೀಕರಿಸಿ, ಅದನ್ನು ಸುರಕ್ಷಿತವಾಗಿ ಕಸ್ಟಡಿಯಲ್ಲಿಡುವಂತೆ ಆದೇಶಿಸಿದೆ. ಆರೋಪ ಪಟ್ಟಿಯ ಸಂಜ್ಞೇಯನ್ನು ಕೆಲ ದಿನಗಳ ಹಿಂದೆ ಪಡೆದಿದ್ದ ನ್ಯಾಯಾಲಯವು, ಪ್ರಕರಣದ ಅಪರಾಧ ಸಂಖ್ಯೆಯನ್ನು ನಿಗದಿಗೊಳಿಸಿದೆ.

ರೇಣುಕಾಸ್ವಾಮಿ ಕೊಲೆಯಲ್ಲಿ ಪ್ರಮುಖವಾಗಿ ಪವಿತ್ರಾಗೌಡ, ದರ್ಶನ್‌ ಮತ್ತು ಪವಿತ್ರಾಗೌಡ ಮನೆ ಕೆಲಸ ಮಾಡಿಕೊಂಡಿದ್ದ ಪುಟ್ಟಸ್ವಾಮಿ ಅಲಿಯಾಸ್‌ ಕೆ ಪವನ್‌ ಪಾತ್ರ ಪ್ರಮುಖವಾಗಿದೆ ಎಂಬುದು ಆರೋಪ ಪಟ್ಟಿಯಿಂದ ತಿಳಿದು ಬಂದಿದೆ. ತನಿಖಾಧಿಕಾರಿಯ ಮುಂದೆ ಪವಿತ್ರಗೌಡ, ದರ್ಶನ್‌ ಮತ್ತು ಪವನ್‌  ನೀಡಿರುವ ಸ್ವ ಇಚ್ಛಾ ಹೇಳಿಕೆಯ ವಿವರಗಳು ಬಹಿರಂಗಗೊಂಡಿದ್ದು, ಪ್ರಮುಖ ಅಂಶಗಳು ಹೀಗಿವೆ:

ಪವಿತ್ರಾ ಗೌಡ, ಮೊದಲನೇ ಆರೋಪಿ: ಸಿನಿಮಾ ಅವಕಾಶದ ವಿಚಾರದಲ್ಲಿ ನಟ ದರ್ಶನ್‌ ಸಂಪರ್ಕಕ್ಕೆ ಬಂದಿದ್ದು, ಆನಂತರ ಸ್ನೇಹ ಪ್ರೀತಿಯಾಗಿ ಮಾರ್ಪಟ್ಟಿದ್ದರಿಂದ ತಾನು ಮತ್ತು ದರ್ಶನ್‌ ಎಂಟು ವರ್ಷಗಳಿಂದ ಲೀವ್‌ ಇನ್‌ ಸಂಬಂಧ ಹೊಂದಿರುವುದಾಗಿ ಪವಿತ್ರಾ ಹೇಳಿಕೆ ನೀಡಿದ್ದಾರೆ.

ದರ್ಶನ್‌ ಅವರು ಈಚೆಗೆ ಆತ್ಮಹತ್ಯೆ ಮಾಡಿಕೊಂಡ ನಿರ್ಮಾಪಕ ಸೌಂದರ್ಯ ಜಗದೀಶ್‌ ಅವರಿಂದ 1.75 ಕೋಟಿ ರೂಪಾಯಿ ಪಡೆದು ಆರ್‌ ಆರ್‌ ನಗರದಲ್ಲಿ ತನಗೆ ಮನೆ ಖರೀದಿಸಿಕೊಟ್ಟಿದ್ದರು ಎಂದೂ ಆಕೆ ತಿಳಿಸಿದ್ದಾಳೆ. ದರ್ಶನ್‌ ಮನೆ ಕೆಲಸ ಮಾಡುತ್ತಿದ್ದ ಪವನ್‌ ಅವರು ದರ್ಶನ್‌ ಮೂಲಕ ಪರಿಚಿತವಾಗಿದ್ದು, ಆತ ತನ್ನ ಮನೆಯಲ್ಲಿಯೇ ಮನೆ ಕೆಲಸ ಮಾಡಿಕೊಂಡು ಇದ್ದನು ಎಂದು ಹೇಳಿದ್ದಾರೆ.

2013ರಲ್ಲಿ ವೈಯಕ್ತಿಕ ಹಾಗೂ ಮಾಡೆಲಿಂಗ್‌ ವಿಚಾರಕ್ಕೆ ತನ್ನದೇ ಆದ ಇನ್‌ಸ್ಟಾಗ್ರಾಂ ಖಾತೆ ಹೊಂದಿದ್ದು, ಗೌತಮ್‌ ಕೆ ಎಸ್‌ 1990 ಎಂಬ ಖಾತೆಯ ವ್ಯಕ್ತಿಯು ಅಶ್ಲೀಲ ಸಂದೇಶ ಕಳುಹಿಸುತ್ತಿದ್ದನು. ಈ ವಿಚಾರವನ್ನು ಪವನ್‌ಗೆ ತಿಳಿಸಿದ್ದು, ಆತನ ಗುರುತನ್ನು ಪವನ್‌ ಪತ್ತೆ ಮಾಡಿದ್ದನು. ರೇಣುಕಾಸ್ವಾಮಿಯನ್ನು ಪತ್ತೆ ಮಾಡಿ ಪಟ್ಟಣಗೆರೆ ಷೆಡ್‌ಗೆ ಕರೆದು ತಂದಿರುವ ವಿಚಾರವನ್ನು ತಿಳಿಸಿದ್ದ ಪವನ್‌, ದರ್ಶನ್‌ ಮತ್ತು ಗೆಳೆಯರು ನನ್ನನ್ನು ಅಲ್ಲಿಗೆ ಕರೆದೊಯ್ದು, ರೇಣುಕಾಸ್ವಾಮಿ ಬಗ್ಗೆ ಮಾಹಿತಿ ನೀಡಿದ್ದರು. ಇದರಿಂದ ಕುಪಿತಳಾದ ನಾನು ಆತನ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸಿದ್ದು, ಈತನನ್ನು ಬಿಡಬೇಡಿ ಸಾಯಿಸಿ ಎಂದು ಹೇಳಿದ್ದೆ. ಆನಂತರ ದರ್ಶನ್‌ ಅವರು ಆತನನ್ನು ನಾವು ನೋಡಿಕೊಳ್ಳುತ್ತೇವೆ ನೀನು ಮನೆಗೆ ಹೋಗು ಎಂದು ಹೇಳಿದ್ದರಿಂದ ನಾನು ಅಲ್ಲಿಂದ ವಾಪಸ್‌ ಆಗಿದ್ದೆ. ನಾನು ಅಲ್ಲಿದ್ದ ಸಂದರ್ಭದಲ್ಲಿ ದರ್ಶನ್‌ ಸೇರಿ ಅವರ ಗೆಳೆಯರು ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಿದ್ದರು ಎಂದು ಪವಿತ್ರಾಗೌಡ ಸ್ವಹೇಳಿಕೆಯಲ್ಲಿ ತಿಳಿಸಿದ್ದಾರೆ.

ನಟ ದರ್ಶನ್‌, ಎರಡನೇ ಆರೋಪಿ: ಗೆಳತಿ ಪವಿತ್ರಾಗೌಡಗೆ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ ರೇಣುಕಾಸ್ವಾಮಿ ಗುರುತು ಪತ್ತೆ ಮಾಡಿ, ಆತನನ್ನು ಪಟ್ಟಣಗೆರೆಯ ಷೆಡ್‌ಗೆ ಕರೆತಂದಿರುವ ವಿಚಾರ ಪವನ್‌ನಿಂದ ತಿಳಿಯಿತು. ಸ್ಟೋನಿ ಬ್ರೂಕ್‌ ರೆಸ್ಟೋರೆಂಟ್‌ನಲ್ಲಿ ಊಟ ಮುಗಿಸಿ ಷೆಡ್‌ಗೆ ಜೂನ್‌ 8ರಂದು ಪ್ರದೋಶ್‌, ವಿನಯ್‌ ಜೊತೆಗೆ ರಾಜರಾಜೇಶ್ವರಿ ನಗರದ ಮನೆಯಲ್ಲಿದ್ದ ಪವಿತ್ರಾ ಗೌಡಳನ್ನು ಕರೆದುಕೊಂಡು ಹೋಗಿದ್ದೆ. ಅಲ್ಲಿ ರೇಣುಕಾಸ್ವಾಮಿಯನ್ನು ಕಂಡಿದ್ದು, ಅಲ್ಲಿ ಆತನ ತಲೆ, ಎದೆ ಕುತ್ತಿಗೆಗೆ ಕೈಯಿಂದ ಹಲ್ಲೆ ಮಾಡಿದ್ದು, ಕಾಲಿನಿಂದ ಒದ್ದಿದ್ದೇನೆ. ಅಲ್ಲಿಯೇ ಇದ್ದ ಮರದ ಕಡ್ಡಿಯಿಂದ ಒಡೆದಿದ್ದೇನೆ. ಸ್ಕಾರ್ಪಿಯೊ ಕಾರಿನಲ್ಲಿ ಕುಳಿತಿದ್ದ ಪವಿತ್ರಾಳನ್ನು ಕರೆಸಿ ಆಕೆಯಿಂದ ರೇಣುಕಾಸ್ವಾಮಿಗೆ ಚಪ್ಪಲಿಯಿಂದ ಹೊಡೆಸಿದ್ದೆ. ಆನಂತರ ನಾನು ಮನೆಗೆ ಮರಳಿದ್ದೆ.

ಅಂದು ರಾತ್ರಿ ಒಂಭತ್ತು ಗಂಟೆಯ ವೇಳೆಗೆ ಪ್ರದೂಶ್‌, ವಿನಯ್‌, ನಾಗರಾಜ ಮತ್ತು ಲಕ್ಷ್ಮಣ ಮನೆಗೆ ಬಂದಿದ್ದು, ರೇಣುಕಾಸ್ವಾಮಿ ಸಾವನ್ನಪ್ಪಿರುವ ವಿಚಾರ ತಿಳಿಸಿದ್ದರು. ಈ ಘಟನೆಯನ್ನು ನಿಭಾಯಿಸುತ್ತೇವೆ ಎಂದು 30 ಲಕ್ಷ ರೂಪಾಯಿ ಪಡೆದಿದ್ದರು. ಅದರಂತೆ ಮನೆಯಲ್ಲಿದ್ದ ಹಣ ನೀಡಿದ್ದೆ. ಆನಂತರ ವಿನಯ್‌ ಬಂದು ಮತ್ತೆ 10 ಲಕ್ಷ ರೂಪಾಯಿ ಪಡೆದಿದ್ದರು.

ಮಾರನೆಯ ದಿನ ನಾನು ಶೂಟಿಂಗ್‌ಗೆ ಮೈಸೂರಿಗೆ ತೆರಳಿದ್ದೆ. ಜೂನ್‌ 10ರಂದು ಮೈಸೂರಿನ ರ‍್ಯಾಡಿಸನ್‌ ಬ್ಲೂ ಹೋಟೆಲ್‌ಗೆ ಪ್ರದೋಷ್‌, ನಾಗರಾಜು, ವಿನಯ್‌ ಬಂದಿದ್ದರು. ರೇಣುಕಾಸ್ವಾಮಿಗೆ ಧನರಾಜ್‌ ಕರೆಂಟ್‌ ಶಾಕ್‌ ನೀಡಿದ್ದು, ಪವನ್‌ ಹಲ್ಲೆ ಮಾಡಿದ್ದು, ನಂದೀಶ ಎತ್ತಿ ಕುಕ್ಕಿರುತ್ತಾನೆ. ಇಡೀ ಘಟನೆಯಲ್ಲಿ ಯಾರನ್ನಾದರೂ ಫಿಕ್ಸ್‌ ಮಾಡುತ್ತೇವೆ. ಇದಕ್ಕೆ ಇನ್ನೂ ಹೆಚ್ಚಿನ ಹಣ ಬೇಕಿರುತ್ತದೆ ಎಂದು ಹೇಳಿ ಹೊರಟು ಹೋಗಿದ್ದರು. ಜೂನ್‌ 11ರಂದು ಬೆಳಿಗ್ಗೆ ಗಂಟೆಗೆ ಪೊಲೀಸರು ನನ್ನನ್ನು ಬಂಧಿಸಿದ್ದರು ಎಂದು ಸ್ವ ಇಚ್ಛಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪುಟ್ಟಸ್ವಾಮಿ ಅಲಿಯಾಸ್‌ ಕೆ ಪವನ್‌, ಮೂರನೇ ಆರೋಪಿ: ಪವಿತ್ರಾಗೌಡಳ ಮನೆ ಕೆಲಸ ಮತ್ತು ಆಕೆಯ ವಾಹನ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ ಪವನ್‌, ಪವಿತ್ರಾಗೌಡಗೆ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ ರೇಣುಕಾಸ್ವಾಮಿಯ ವಿಳಾಸ ಪತ್ತೆ ಮಾಡಿ, ಆತನನ್ನು ಬೆಂಗಳೂರಿಗೆ ಬರುವಂತೆ ಮಾಡಿದ್ದ. ಗೌತಮ್‌ ಕೆ ಎಸ್‌ ಇನ್‌ಸ್ಟಾಗ್ರಾಮ್‌ ಖಾತೆಯು ರೇಣುಕಾಸ್ವಾಮಿಗೆ ಸೇರಿದ್ದಾಗಿದ್ದು, ಅದಕ್ಕೆ ಪವಿತ್ರಾ ಗೌಡ ಎಂದು ಹೇಳಿಕೊಂಡು ತನ್ನ ವೈಯಕ್ತಿಕ ನಂಬರ್‌ ಹಂಚಿಕೊಂಡು ಆತನ ಗುರುತು ಪತ್ತೆ ಮಾಡಿ, ಚಿತ್ರದುರ್ಗದ ದರ್ಶನ್‌ ಅಭಿಮಾನಿ ಬಳಗದ ಅಧ್ಯಕ್ಷ ರಾಘವೇಂದ್ರ ಮತ್ತು ಆತನ ಮೂವರು ಸ್ನೇಹಿತರ ಮೂಲಕ ರೇಣುಕಾಸ್ವಾಮಿಯನ್ನು ಪವನ್‌ ಪಟ್ಟಣಗೆರೆಯ ಷೆಡ್‌ಗೆ ಕರೆಸಿದ್ದ. ರೇಣುಕಾಸ್ವಾಮಿಯನ್ನು ಪಟ್ಟಣಗೆರೆಯ ಷೆಡ್‌ ಕಳುಹಿಸಲು ಪವನ್‌ ತನ್ನ ಸ್ನೇಹಿತರಾದ ಧನರಾಜ್‌ ಅಲಿಯಾಸ್‌ ರಾಜು ಹಾಗೂ ನಂದೀಶ್‌ ಮೂಲಕ ಲೋಕೇಶನ್‌ ಕಳುಹಿಸುತ್ತಾನೆ. ಆನಂತರ ಧನರಾಜ್‌ ಮತ್ತು ನಂದೀಶ್‌ ಷೆಡ್‌ಗೆ ತೆರಳುತ್ತಾರೆ.

ಈ ಮಾಹಿತಿಯನ್ನು ವಿನಯ್‌ಗೆ ತಿಳಿಸಲಾಗಿತ್ತು. ಸ್ಟೋನಿ ಬ್ರೂಕ್‌ನಲ್ಲಿ ದರ್ಶನ್‌ ಊಟ ಮಾಡುತ್ತಿದ್ದು, ನೀನೇ ಅವರಿಗೆ ವಿಚಾರ ತಿಳಿಸುವಂತೆ ಪವನ್‌ಗೆ ವಿನಯ್‌ ಸೂಚಿಸಿದ್ದನು. ಅದರಂತೆ ದರ್ಶನ್‌ಗೆ ಪವನ್‌ ವಿಚಾರ ತಿಳಿಸಿದ್ದು, ಆನಂತರ ದರ್ಶನ್‌, ವಿನಯ್‌, ಪ್ರದೋಶ್‌, ದರ್ಶನ್‌ ಅವರ ಮೈಸೂರಿನ ತೋಟ ನೋಡಿಕೊಳ್ಳುವ ನಾಗರಾಜ್‌ ಎಲ್ಲರೂ ಪವಿತ್ರಾಗೌಡ ಮನೆಗೆ ಬಂದು ಆಕೆಯನ್ನು ಕರೆದುಕೊಂಡು ಪಟ್ಟಣಗೆರೆ ಷೆಡ್‌ಗೆ ಬಂದಿದ್ದೆವು ಎಂದು ಪವನ್‌ ತಿಳಿಸಿದ್ದಾನೆ.

ಷೆಡ್‌ನಲ್ಲಿ ದರ್ಶನ್‌ ಸಹಿತ ಎಲ್ಲರೂ ರೇಣುಕಾಸ್ವಾಮಿಯ ಮೇಲೆ ಹಲ್ಲೆಗೈದಿದ್ದನ್ನು ಪವನ್ ವಿವರಿಸಿದ್ದಾನೆ. ಅಲ್ಲದೆ, ರೇಣುಕಾಸ್ವಾಮಿ ಆತನ ಮೊಬೈಲ್‌ ಬಳಸಿ ಇನ್‌ಸ್ಟಾಗ್ರಾಂ ಖಾತೆಯಿಂದ ನಟಿಯರೂ ಸೇರಿದಂತೆ ಹಲವು ಮಂದಿ ಮಹಿಳೆಯರಿಗೆ ಇದೇ ರೀತಿ ಅಶ್ಲೀಲ ಸಂದೇಶ ಕಳುಹಿಸಿರುವುದು ಗಮನಕ್ಕೆ ಬರುತ್ತದೆ. ಆಗ ದರ್ಶನ್‌ ಆತನ ಮರ್ಮಾಂಗಕ್ಕೆ ಒದ್ದು, ಎದೆಗೆ ಬಲವಾಗಿ ತುಳಿದಿದ್ದರು ಎಂದು ಪವನ್‌ ಸ್ವ ಹೇಳಿಕೆ ದಾಖಲಿಸಿದ್ದಾನೆ. ಅಲ್ಲದೆ, ತಾವೆಲ್ಲರೂ ಹೊರಟು ಬಂದ ನಂತರ ಪ್ರದೂಶ್‌, ವಿನಯ್‌, ನಾಗರಾಜ ಮತ್ತು ಲಕ್ಷ್ಮಣ ಅವರು ದರ್ಶನ್‌ ಮನೆಗೆ ಬಂದಿದ್ದು, ರೇಣುಕಾಸ್ವಾಮಿ ಸಾವನ್ನಪ್ಪಿರುವ ವಿಚಾರ ತಿಳಿಸಿದ್ದರು. ನನ್ನನ್ನು ಮತ್ತು ನಂದೀಶ್‌ನನ್ನು ಪೊಲೀಸರಿಗೆ ಸರೆಂಡರ್‌ ಆಗಲು ದರ್ಶನ್‌ ಸೂಚಿಸಿದ್ದಾರೆ ಎಂದು ವಿನಯ್‌ ಮತ್ತು ಪ್ರದೋಶ್‌ ಮೈಸೂರಿನಲ್ಲಿ ಶೂಟಿಂಗ್‌ಗೆ ತೆರಳಿದ್ದ ದರ್ಶನ್‌ರನ್ನು ಭೇಟಿಯಾಗಲು ತಾವೆಲ್ಲರೂ ಹೋಗಿದ್ದ ಸಂದರ್ಭದಲ್ಲಿ ತಿಳಿಸಿದರು. ಅದರಂತೆ ಪೊಲೀಸರ ಮುಂದೆ ಶರಣಾಗಲು ಒಪ್ಪಿದ್ದೆವು ಎಂದು ಪವನ್‌ ಸ್ವ ಇಚ್ಚಾ ಹೇಳಿಕೆ ನೀಡಿದ್ದಾನೆ