Bombay High Court, Times Now, Republic TV 
ಸುದ್ದಿಗಳು

ಸುಶಾಂತ್ ಸಿಂಗ್‌ ಪ್ರಕರಣ: ರಿಪಬ್ಲಿಕ್ ಟಿವಿ‌, ಟೈಮ್ಸ್‌ ನೌ ವರದಿಗಾರಿಕೆಯಲ್ಲಿ ಕಾನೂನು ಉಲ್ಲಂಘನೆ: ಬಾಂಬೆ ಹೈಕೋರ್ಟ್‌

ರಿಪಬ್ಲಿಕ್ ಟಿವಿ ಮತ್ತು ಟೈಮ್ಸ್ ನೌ ಸುದ್ದಿವಾಹಿನಿಗಳು ಒಂದನ್ನೊಂದು ಮೀರಿಸಲು ಸತ್ಯ ಮತ್ತು ನ್ಯಾಯದ ಹೆಸರಿನಲ್ಲಿ ಸೋಗು ಹಾಕಿಕೊಂಡು ಅಪಪ್ರಚಾರ ನಡೆಸಿವೆ ಎಂದು ಬಾಂಬೆ ಹೈಕೋರ್ಟ್ ಹೇಳಿದೆ.

Bar & Bench

ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಸಾವಿನ ಪ್ರಕರಣದ ಕುರಿತು ರಿಪಬ್ಲಿಕ್‌ ಟಿವಿ ಮತ್ತು ಟೈಮ್ಸ್‌ ನೌ ವರದಿಗಾರಿಕೆಯು ಸಂವಿಧಾನದ ಅಡಿ ಸ್ಥಾಪಿತವಾಗಿರುವ ಕಾನೂನಿಗೆ ಅಗೌರವ ಸೂಚಿಸುವ ನಡೆಯಾಗಿದೆ ಎಂದು ಸೋಮವಾರ ಬಾಂಬೆ ಹೈಕೋರ್ಟ್‌ ಕಟುವಾಗಿ ಹೇಳಿದೆ.

ಸುಶಾಂತ್‌ ಸಾವಿನ ಕುರಿತಾದ ಕ್ರಿಮಿನಲ್‌ ತನಿಖೆಯ ಕುರಿತಾದ ವರದಿಗಾರಿಕೆಯಲ್ಲಿ ಎರಡೂ ಸುದ್ದಿವಾಹಿನಿಗಳು ಒಂದನ್ನೊಂದು ಮೀರಿಸಲು ಸತ್ಯ ಮತ್ತು ನ್ಯಾಯದ ಹೆಸರಿನಲ್ಲಿ ಸೋಗು ಹಾಕಿಕೊಂಡು ಅಪಪ್ರಚಾರ ನಡೆಸಿದವು ಎಂದು ಬಾಂಬೆ ಹೈಕೋರ್ಟ್‌ ಹೇಳಿದೆ.

“ನಟನ ಸಾವಿನ ಕುರಿತಾದ ವರದಿಗಳು/ಚರ್ಚೆಗಳು/ಸಂವಾದಗಳು/ ಸಂದರ್ಶನಗಳನ್ನು ಅಪಾರ ವೇಗದಲ್ಲಿ ನಡೆಸಿದ ಈ ಚಾನೆಲ್‌ಗಳು ಸಂವಿಧಾನದ ಅಡಿ ಸ್ಥಾಪಿತವಾದ ಕಾನೂನಿಗೆ ಅಗೌರವ ತೋರಿವೆ. ಈ ಟಿವಿ ಚಾನೆಲ್‌ಗಳು ತನಿಖಾಧಿಕಾರಿ, ಅಭಿಯೋಜಕರು ಮತ್ತು ನ್ಯಾಯಾಧೀಶರಾಗಿ ಕೆಲಸ ಮಾಡಿದ್ದು, ಸಾಂಕ್ರಾಮಿಕತೆಯ ಹಿನ್ನೆಲೆಯಲ್ಲಿ ಎಲ್ಲಾ ಅಂಗಗಳು ನಿಶ್ಚಲವಾಗಿರುವಾಗ ಅವುಗಳು ತೀರ್ಪುನ್ನೂ ಪ್ರಕಟಿಸಿಬಿಟ್ಟವು” ಎಂದು ನ್ಯಾಯಾಲಯ ಮಾರ್ಮಿಕವಾಗಿ ಈ ವಾಹಿನಿಗಳ ನಡೆಗೆ ಪೆಟ್ಟು ನೀಡಿದೆ.

ವದರಿಗಾರಿಕೆಯ ಸಂದರ್ಭದಲ್ಲಿ ಪ್ರಕರಣದಲ್ಲಿ ಸಿಲುಕಿರುವವರ ಹಕ್ಕುಗಳು, ಅಪರಾಧ ದಂಡ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಆದೇಶಗಳು ಸೇರಿದಂತೆ ಎಲ್ಲವನ್ನೂ ಟಿವಿ ಚಾನೆಲ್‌ಗಳು ಗಾಳಿಗೆ ತೂರಿವೆ ಎಂದು ನ್ಯಾಯಾಲಯ ಬೇಸರ ವ್ಯಕ್ತಪಡಿಸಿದೆ.

ಮುಖ್ಯ ನ್ಯಾಯಮೂರ್ತಿ ದೀಪಂಕರ್‌ ದತ್ತ ಮತ್ತು ನ್ಯಾಯಮೂರ್ತಿ ಜಿ ಎಸ್‌ ಕುಲಕರ್ಣಿ ಅವರಿದ್ದ ಪೀಠವು ಮುಂಬೈ ಪೊಲೀಸರಿಗೆ ಕ್ಲೀನ್‌ಚಿಟ್‌ ನೀಡಿದ್ದು, ಕಳೆದ ಆಗಸ್ಟ್‌ನಲ್ಲಿ ಆದೇಶಿಸಿದ್ದ ಸುಪ್ರೀಂ ಕೋರ್ಟ್‌ ತೀರ್ಪನ್ನು ಉಲ್ಲೇಖಿಸಿ ಪೊಲೀಸರು ತಪ್ಪೆಸಗಿದ್ದಾರೆ ಎಂದು ಹೇಳಲಾಗದು ಮತ್ತು ಮಾಧ್ಯಮಗಳ ಟೀಕೆಯು ಸತ್ಯಕ್ಕೆ ದೂರವಾದುದು ಎಂದು ಹೇಳಿದೆ.

ಪದೇಪದೇ ಪೊಲೀಸರನ್ನು ಟೀಕಿಸುವುದರಿಂದ ಅಧಿಕಾರಿಗಳ ಸ್ಥೈರ್ಯ ಕುಂದಲಿದ್ದು, ಇದರಿಂದ ಹಲವಾರು ವರ್ಷಗಳಿಂದ ಶ್ರಮಪಟ್ಟು ಕಟ್ಟಿಕೊಂಡ ಪೊಲೀಸ್‌ ಅಧಿಕಾರಿಗಳ ವರ್ಚಸ್ಸಿಗೆ ಧಕ್ಕೆಯಾಗುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ವರದಿಗಾರಿಕೆ ಮಾಡುವಾಗ ಭಾವೋದ್ರೇಕಗೊಳಿಸುವುದರಿಂದ ಅಂತರ ಕಾಯ್ದುಕೊಳ್ಳುವಂತೆ ರಿಪಬ್ಲಿಕ್‌ ಟಿವಿ ಮತ್ತು ಟೈಮ್ಸ್‌ ನೌ ಚಾನೆಲ್‌ಗಳಿಗೆ ನ್ಯಾಯಾಲಯ ಸೂಚಿಸಿದೆ. ಉಭಯ ಚಾನೆಲ್‌ಗಳ ವರದಿಗಾರಿಕೆಯು ನ್ಯಾಯಾಂಗ ನಿಂದನೆಯಾಗಿದ್ದು, ನ್ಯಾಯದಾನ ವ್ಯವಸ್ಥೆಯಲ್ಲಿ ಮಧ್ಯಪ್ರವೇಶ ಮಾಡಲಾಗಿದೆ ಎಂದು ಹೇಳಿದೆ. ಆದರೆ, ಅವುಗಳ ವಿರುದ್ಧ ನ್ಯಾಯಾಂಗ ನಿಂದನೆಯಡಿ ಕ್ರಮಕೈಗೊಳ್ಳುವುದರಿಂದ ಪೀಠವು ಹಿಂದೆ ಸರಿದಿದೆ.

ಸದರಿ ಚಾನೆಲ್‌ಗಳ ವಿವೇಚನಾರಹಿತ ವರದಿಗಾರಿಕೆಯಿಂದ ಆರೋಪಿ ನಟಿ ರಿಯಾ ಚಕ್ರವರ್ತಿ ಅನುಭವಿಸಿದ ಯಾತನೆಯ ಬಗ್ಗೆಯೂ ತೀರ್ಪಿನಲ್ಲಿ ಉಲ್ಲೇಖಿಸಿದ್ದು, ಸಾಂವಿಧಾನಿಕವಾಗಿ ಆಕೆಗೆ ದೊರೆತಿರುವ ಬದುಕುವ ಹಕ್ಕು ಮತ್ತು ಸಮಾನ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ನ್ಯಾಯಾಲಯ ಹೇಳಿದೆ.

ನಟಿಯನ್ನು (ರಿಯಾ ಚಕ್ರವರ್ತಿ) ವಿಲನ್‌ ರೀತಿಯಲ್ಲಿ ಬಿಂಬಿಸಲಾಗಿದೆ. ಆಕೆಯ ಮುಗ್ಧತೆಯನ್ನು ಮರೆಮಾಚಿ, ಮಾಧ್ಯಮಗಳು ಅಪರಾಧಿ ಎಂದು ಘೋಷಿಸಿವೆ.
ಸಿಜೆ ದೀಪಂಕರ್‌ ದತ್ತಾ ಮತ್ತು ನ್ಯಾ. ಜಿ ಎಸ್‌ ಕುಲಕರ್ಣಿ

ನಟ ಸುಶಾಂತ್‌ ಅವರನ್ನು ಕೊಲೆ ಮಾಡಿರುವ ಸಾಧ್ಯತೆ ಇದ್ದು, ಈ ವಿಚಾರದ ತನಿಖೆಯಲ್ಲಿ ಮುಂಬೈ ಪೊಲೀಸರನ್ನು ನಂಬಬಹುದೇ ಎಂಬ ಅನುಮಾನವನ್ನು ರಿಪಬ್ಲಿಕ್‌ ಟಿವಿ ಹುಟ್ಟುಹಾಕಿತ್ತು ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿದೆ. ಅದೇ ರೀತಿ ಟೈಮ್ಸ್‌ ನೌ, ಮುಂಬೈ ಪೊಲೀಸರು ತಮ್ಮ ಕರ್ತವ್ಯವನ್ನು ಸರಿಯಾಗಿ ನಿಭಾಯಿಸದೇ ಇರುವ ಹಿನ್ನೆಲೆಯಲ್ಲಿ ಸುಶಾಂತ್‌ಗೆ ನ್ಯಾಯಕೊಡಿಸುವ ಉದ್ದೇಶದಿಂದ ಮಾಧ್ಯಮ ತನ್ನ ಕೆಲಸ ಮಾಡಬೇಕಿದೆ ಎಂದು ಹೇಳಿಕೊಂಡಿದೆ ಎಂಬುದನ್ನು ಪೀಠದ ಗಮನಕ್ಕೆ ತರಲಾಗಿತ್ತು.

ಮಾಧ್ಯಮ ವಿಚಾರಣೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಗಳನ್ನು ಸಿಬಿಐ ತನಿಖೆಗೆ ಅಡ್ಡಿಪಡಿಸುವ ಪ್ರಯತ್ನ ಎಂದೂ ರಿಪಬ್ಲಿಕ್‌ ಮತ್ತು ಟೈಮ್ಸ್‌ ನೌ ಘೋಷಿಸಿದ್ದವು.