UU Lalit and Vineet Saran
UU Lalit and Vineet Saran 
ಸುದ್ದಿಗಳು

ರೇರಾ ಕಾಯಿದೆಯು ಗ್ರಾಹಕ ಸಂರಕ್ಷಣಾ ಕಾಯಿದೆಯಡಿ ಪರಿಹಾರ ನಿರ್ಬಂಧಿಸುವುದಿಲ್ಲ: ಸುಪ್ರೀಂ ಕೋರ್ಟ್

Bar & Bench

ರಿಯಲ್‌ ಎಸ್ಟೇಟ್‌ (ನಿಯಂತ್ರಣ ಮತ್ತು ಅಭಿವೃದ್ಧಿ) ಕಾಯಿದೆ 2016, ಇದು ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ (ಎನ್‌ಸಿಡಿಆರ್‌ಸಿ) ಅಥವಾ ಗ್ರಾಹಕರ ವೇದಿಕೆಯು ಗ್ರಾಹಕ ರಕ್ಷಣಾ (ಸಿಪಿ) ಕಾಯಿದೆ ಅಡಿ ದೂರು ಪರಿಹಾರ ಮಾಡದಂತೆ ನಿರ್ಬಂಧಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ಸೋಮವಾರ ಆದೇಶಿಸಿದೆ (ಇಂಪೀರಿಯಲ್‌ ಸ್ಟ್ರಕ್ಚರ್ಸ್‌ ಲಿಮಿಟೆಡ್‌ ವರ್ಸಸ್‌ ಅನಿಲ್‌ ಪಟ್ನಿ ಹಾಗೂ ಮತ್ತೊಬ್ಬರು).

ನ್ಯಾಯಮೂರ್ತಿಗಳಾದ ಯು ಯು ಲಲಿತ್‌ ಮತ್ತು ವಿನೀತ್‌ ಶರಣ್‌ ಅವರಿದ್ದ ವಿಭಾಗೀಯ ಪೀಠವು ರಿಯಲ್‌ ಎಸ್ಟೇಟ್‌ ಹಂಚಿಕೆದಾರರು ರೇರಾ ಹೊರತುಪಡಿಸಿ ಎನ್‌ಸಿಡಿಆರ್‌ಸಿ ಸಂಪರ್ಕಿಸಬಹುದಾಗಿದ್ದು, ಸಿಪಿ ಕಾಯಿದೆ ಅಡಿ ಗ್ರಾಹಕರು ದೂರು ದಾಖಲಿಸದಂತೆ ರೇರಾ ತಡೆಯುವುದಿಲ್ಲ ಎಂದು ಹೇಳಿದೆ.

ಬಿಲ್ಡರ್‌- ಅಪಾರ್ಟ್‌ಮೆಂಟ್‌ ಕೊಳ್ಳುವವರ ನಡುವಿನ ಒಪ್ಪಂದವನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಬಿಲ್ಡರ್‌ ಸಂಸ್ಥೆ ಇಂಪಿರಿಯಾ ಸ್ಟ್ರಕ್ಚರ್ಸ್‌ ತನ್ನ ಗ್ರಾಹಕರಿಗೆ ಮಾರಾಟದ ಹಣಕ್ಕೆ ಬಡ್ಡಿ ಸೇರಿಸಿ ವಾಪಸು ಮಾಡುವಂತೆ 2018ರ ಸೆಪ್ಟೆಂಬರ್‌ನಲ್ಲಿ ಎನ್‌ಸಿಡಿಆರ್‌ಸಿ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ತೀರ್ಪು ನೀಡಿದೆ.

2011ರಲ್ಲಿ ಗುರುಗ್ರಾಂನಲ್ಲಿ ಬಿಲ್ಡರ್‌ ಅವರು ಗೃಹ ನಿರ್ಮಾಣ ಯೋಜನೆ ಕೈಗೆತ್ತಿಕೊಂಡಿದ್ದರು. ತಮ್ಮ ಅಪಾರ್ಟ್‌ಮೆಂಟ್‌ಗೆ ಬುಕಿಂಗ್‌ ಹಣ ಪಾವತಿಸಿದ ಗ್ರಾಹಕರು ಬಿಲ್ಡರ್‌-ಗ್ರಾಹಕರ ನಡುವಿನ ಒಪ್ಪಂದಕ್ಕೆ ಚಾಲನೆ ನೀಡಿದ್ದರು. ಗಣನೀಯ ಮೊತ್ತ ಪಾವತಿಸಿದ ನಂತರವೂ ಯೋಜನೆ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಅಪಾರ್ಟ್‌ಮೆಂಟ್‌ ಕೊಳ್ಳುವವರು 2017ರಲ್ಲಿ ಎನ್‌ಸಿಡಿಆರ್‌ಸಿ ಸಂಪರ್ಕಿಸಿದ್ದರು. 2017ರ ನವೆಂಬರ್‌ನಲ್ಲಿ ಯೋಜನೆಗೆ ರೇರಾ ಒಪ್ಪಿಗೆ ನೀಡಿತ್ತು.

ಇದನ್ನು ಆಧಾರವಾಗಿಟ್ಟುಕೊಂಡು ಬಿಲ್ಡರ್‌ ಎನ್‌ಸಿಡಿಆರ್‌ಸಿ ವ್ಯಾಪ್ತಿಯನ್ನು ಪ್ರಶ್ನಿಸಿದ್ದರು. ವಾಣಿಜ್ಯ ಕಾರಣಕ್ಕೆ ಅಪಾರ್ಟ್‌ಮೆಂಟ್‌ಗಳನ್ನು ಕಾದಿರಿಸಲಾಗಿದ್ದು, ಗ್ರಾಹಕ ರಕ್ಷಣಾ ಕಾಯಿದೆಯ ಸೆಕ್ಷನ್‌ 2(d) ಅಡಿ ಅಪಾರ್ಟ್‌ಮೆಂಟ್‌ ಕೊಳ್ಳುವವರು ಬರುವುದಿಲ್ಲ ಎಂದು ವಾದಿಸಿದ್ದರು.

ಪ್ರಕರಣದಲ್ಲಿ ಬಿಲ್ಡರ್‌ ದೋಷಿಯಾಗಿದ್ದು, ದೂರುದಾರರು ಠೇವಣಿಯಾಗಿಟ್ಟಿರುವ ದಿನಾಂಕದಿಂದ ಅವರು ಇಟ್ಟಿರುವ ಮೊತ್ತದ ಜೊತೆಗೆ ವಾರ್ಷಿಕ ಶೇ. 9 ಬಡ್ಡಿ ಹಾಗೂ 50,000 ಹಣವನ್ನು ಸೇರಿಸಿ ವಾಪಸ್‌ ಮಾಡುವಂತೆ ಎನ್‌ಸಿಡಿಆರ್‌ಸಿ ಆದೇಶಿಸಿತ್ತು.

ರೇರಾ ಕಾಯಿದೆಯ ಸೆಕ್ಷನ್‌ 79ರ ಅಡಿ ಸಿವಿಲ್‌ ನ್ಯಾಯಾಲಯಗಳ ವ್ಯಾಪ್ತಿಯನ್ನು ರೇರಾ ನಿರ್ಬಂಧಿಸುತ್ತದೆ ಎಂದು ಸುಪ್ರೀಂ ಕೋರ್ಟ್‌ ತೀರ್ಪಿನಲ್ಲಿ ಹೇಳಿದೆ.

"ರೇರಾ ಕಾಯಿದೆಯ ಸೆಕ್ಷನ್ 79 ಯಾವುದೇ ರೀತಿಯಲ್ಲಿಯೂ ಗ್ರಾಹಕ ರಕ್ಷಣಾ ಕಾಯಿದೆಯ ನಿಬಂಧನೆಗಳ ಅಡಿಯಲ್ಲಿ ಆಯೋಗ ಅಥವಾ ಗ್ರಾಹಕ ವೇದಿಕೆಯನ್ನು ದೂರು ಸ್ವೀಕರಿಸಿದಂತೆ ನಿರ್ಬಂಧಿಸುವುದಿಲ್ಲ.”
ಸುಪ್ರೀಂ ಕೋರ್ಟ್‌ ತೀರ್ಪು

ಹೀಗಾಗಿ, ಗ್ರಾಹಕ ರಕ್ಷಣಾ ಕಾಯಿದೆಯಡಿ ಸೂಕ್ತ ಪ್ರಕ್ರಿಯೆ ಪ್ರಾರಂಭಿಸಲು ಅಥವಾ ರೇರಾ ಕಾಯಿದೆ ಅಡಿ ಅರ್ಜಿಸಲ್ಲಿಸುವ ಆಯ್ಕೆಯನ್ನು ಹಂಚಿಕೆದಾರರ ಆಯ್ಕೆಅಥವಾ ವಿವೇಚನೆಗೆ ಬಿಡುವ ಸಂಸತ್ತಿನ ಉದ್ದೇಶ ಸ್ಪಷ್ಟವಾಗಿದೆ” ಎಂದು ಪೀಠ ಹೇಳಿದೆ.