Justices Sanjay Kishan Kaul and Subhash Reddy
Justices Sanjay Kishan Kaul and Subhash Reddy 
ಸುದ್ದಿಗಳು

ವಿಕಲಚೇತನರ ಮೀಸಲಾತಿ ಬಡ್ತಿಗೂ ಅನ್ವಯ: ಸುಪ್ರೀಂಕೋರ್ಟ್ ಮಹತ್ವದ ತೀರ್ಪು

Bar & Bench

ವಿಕಲಚೇತನರ ಹಕ್ಕುಗಳ (ಸಮಾನ ಅವಕಾಶಗಳು, ಹಕ್ಕುಗಳ ರಕ್ಷಣೆ ಮತ್ತು ಪೂರ್ಣಪ್ರಮಾಣದ ಭಾಗವಹಿಸುವಿಕೆ) ಕಾಯಿದೆ- 1995ರ ಪ್ರಕಾರ ವಿಕಲಚೇತನರಿಗೆ ನೀಡಿರುವ ಮೀಸಲಾತಿ ಅವರ ಬಡ್ತಿಗೂ ಅನ್ವಯವಾಗುತ್ತದೆ ಎಂದು ಸುಪ್ರೀಂಕೋರ್ಟ್‌ ಸೋಮವಾರ ಮಹತ್ವದ ತೀರ್ಪು ನೀಡಿದೆ. (ಕೇರಳ ಸರ್ಕಾರ ಮತ್ತು ಲೀಸಮ್ಮ ಜೋಸೆಫ್‌ ನಡುವಣ ಪ್ರಕರಣ).

ಮುಖ್ಯವಾಗಿ, ವಿಕಲಚೇತನ ವ್ಯಕ್ತಿಯನ್ನು ಪಿಡಬ್ಲ್ಯೂಡಿ (ಅಂಗವೈಕಲ್ಯ ಹೊಂದಿರುವ ವ್ಯಕ್ತಿ) ಕೋಟಾ ಅಡಿಯಲ್ಲಿ ನೇಮಕ ಮಾಡದಿದ್ದರೂ ಪಿಡಬ್ಲ್ಯೂಡಿ ಮೀಸಲಾತಿಯ ಲಾಭವನ್ನು ಕಲ್ಪಿಸುವ ಮೂಲಕ ಅವರಿಗೆ ಬಡ್ತಿ ನೀಡಬಹುದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಇದಲ್ಲದೆ, ಬಡ್ತಿಯಲ್ಲಿ ಮೀಸಲಾತಿ ಒದಗಿಸಲು ನಿಯಮಗಳು ಇಲ್ಲದಿದ್ದರೆ ವಿಕಲಚೇತನ ವ್ಯಕ್ತಿಯನ್ನು ಬಡ್ತಿ ಮೀಸಲಾತಿ ಪಡೆಯುವ ಹಕ್ಕಿನಿಂದ ತಪ್ಪಿಸಲಾಗದು, ಏಕೆಂದರೆ ಅದು ಕಾಯಿದೆಯಿಂದಲೇ ದತ್ತವಾಗಿದೆ ಎಂದು ನ್ಯಾಯಾಲಯದ ತೀರ್ಪು ವಿವರಿಸಿದೆ.

ಆ ಮೂಲಕ ಕೇರಳ ಹೈಕೋರ್ಟ್‌ ತೀರ್ಪಿನ ವಿರುದ್ಧ ಕೇರಳ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಆರ್ ಸುಭಾಷ್ ರೆಡ್ಡಿ ಅವರಿದ್ದ ವಿಭಾಗೀಯ ಪೀಠ ವಜಾಗೊಳಿಸಿತು. ಪಿಡಬ್ಲ್ಯೂಡಿ ಕೋಟಾದಡಿ ನೇಮಕವಾಗಿರದ ಆದರೆ ಅನುಕಂಪದ ಆಧಾರದಲ್ಲಿ ಕೆಲಸ ಪಡೆದಿದ್ದ ಮಹಿಳೆಗೆ ಪಿಡಬ್ಲ್ಯೂಡಿ ಕೋಟಾದಡಿ ಬಡ್ತಿ ನೀಡಬೇಕು ಎಂದು ಹೈಕೋರ್ಟ್‌ ತನ್ನ ತೀರ್ಪಿನಲ್ಲಿ ತಿಳಿಸಿತ್ತು.

ವಿಕಲಚೇತನರ ಹಕ್ಕುಗಳ ಕಾಯಿದೆ- 1995ರ ಕಾಯಿದೆಯಡಿ ದೊರಕಿಸಿಕೊಡಲಾದ ಬಡ್ತಿ ಹಕ್ಕಿನ ಅನ್ವಯ ಅರ್ಜಿ ಸಲ್ಲಿಸಲಾಗಿತ್ತು. ಮೀಸಲಾತಿಯನ್ನು ಬಡ್ತಿಗೆ ವಿಸ್ತರಿಸುವಾಗ ಸಿದ್ದರಾಜು ಮತ್ತು ಕರ್ನಾಟಕ ಸರ್ಕಾರ ನಡುವಣ ಪ್ರಕರಣದಲ್ಲಿ ನೀಡಲಾದ ತೀರ್ಪನ್ನು ಅರ್ಥೈಸಲು ಸಾಧ್ಯವಿಲ್ಲ ಎಂದು ಪ್ರಕರಣದ ಮೇಲ್ಮನವಿದಾರ ಕೇರಳ ಸರ್ಕಾರ ವಾದಿಸಿತ್ತು. ಪ್ರತಿವಾದಿಯಾಗಿರುವ ಮಹಿಳೆ ಪಿಡಬ್ಲ್ಯೂಡಿ ಕೋಟಾದಡಿ ನೇಮಕಾತಿಯಾಗಿಲ್ಲದ ಕಾರಣ ಅವರಿಗೆ ಆ ಕೋಟಾದಡಿ ಬಡ್ತಿ ಕಲ್ಪಿಸಲು ಸಾಧ್ಯವಿಲ್ಲ ಎಂಬುದು ಅದರ ವಾದವಾಗಿತ್ತು.

ವಿಚಾರಣೆ ವೇಳೆ ಸುಪ್ರೀಂಕೋರ್ಟ್‌ ವಿಕಲಚೇತನರ ಹಕ್ಕುಗಳ ಕಾಯಿದೆ- 1995ರ ಅಡಿ ಅಂಗವೈಕಲ್ಯ ಇರುವ ವ್ಯಕ್ತಿಗಳಿಗೆ ಬಡ್ತಿ ಮೀಸಲಾತಿ ಕಲ್ಪಿಸಬೇಕೆ? ಕಾಯಿದೆಯ ಸೆಕ್ಷನ್‌ 32ರ ಪ್ರಕಾರ ಹುದ್ದೆಗಳನ್ನು ಗುರುತಿಸುವುದರ ಮೇಲೆ ಸೆಕ್ಷನ್‌ 33 ಅವಲಂಬಿತವಾಗಿದೆಯೇ? ಮೀಸಲಾತಿ ನಿಯಮಗಳಲ್ಲಿ ಬಡ್ತಿ ಕುರಿತು ಅವಕಾಶ ಇಲ್ಲದಿದ್ದಲ್ಲಿ ಆ ಹಕ್ಕನ್ನು ನಿರಾಕರಿಸಬಹುದೇ? ಪಿಡಬ್ಲ್ಯೂಡಿ ಕೋಟಾದಡಿ ನೇಮಕವಾಗದ ಅಭ್ಯರ್ಥಿಗೆ ಕೂಡ ಪಿಡಬ್ಲ್ಯೂಡಿ ಕೋಟಾದಡಿ ಬಡ್ತಿ ಕಲ್ಪಿಸಬಹುದೇ ಎಂಬ ನಾಲ್ಕು ಪ್ರಶ್ನೆಗಳಿಗೆ ಉತ್ತರಿಸಿದೆ.

ನೌಕರನು ಅಂಗವಿಕಲ ವ್ಯಕ್ತಿಯಾಗಿರುವವರೆಗೆ ಬಡ್ತಿಯಲ್ಲಿ ಅವರನ್ನು ಪರಿಗಣಿಸಲು ಅವರ ನೇಮಕಾತಿಯ ಮೂಲಾಧಾರದಿಂದಾಗಿ (ಒಂದು ವೇಳೆ ನೇಮಕಾತಿಯ ವೇಳೆ ಪಿಡಲ್ಬ್ಯೂಡಿ ಮೀಸಲಾತಿ ಪರಿಗಣಿಸದೆ ಇದ್ದರೂ ಸಹ) ಯಾವುದೇ ವ್ಯತ್ಯಾಸ ಉಂಟಾಗುವುದಿಲ್ಲ ಎಂದ ಪೀಠ ಹಾಗೆ ಮಾಡಿದರೆ ಅದು ಸಂವಿಧಾನದ ಆದೇಶದ ಉಲ್ಲಂಘನೆಯಾಗುತ್ತದೆ ಎಂಬುದಾಗಿ ತಿಳಿಸಿತು. ಆ ಮೂಲಕ ಕೇರಳ ಹೈಕೋರ್ಟ್‌ ಆದೇಶವನ್ನು ಎತ್ತಿಹಿಡಿಯಿತು.