ಟಿವಿ ಚರ್ಚಾ ಕಾರ್ಯಕ್ರಮವೊಂದರಲ್ಲಿ ನೀಡಿದ ಹೇಳಿಕೆ ಸಂಬಂಧ ದೇಶದ್ರೋಹ ಪ್ರಕರಣ ಎದುರಿಸುತ್ತಿದ್ದ ಲಕ್ಷದ್ವೀಪದ ಚಿತ್ರ ನಿರ್ಮಾಪಕಿ ಆಯಿಷಾ ಸುಲ್ತಾನಾ ಅವರಿಗೆ ಕೇರಳ ಹೈಕೋರ್ಟ್ ಶುಕ್ರವಾರ ಜಾಮೀನು ನೀಡಿದೆ.
ದ್ವೀಪದ ಸ್ಥಳೀಯರ ವಿರುದ್ಧ ಜೈವಿಕ ಅಸ್ತ್ರ ಪ್ರಯೋಗಿಸಲೆಂದೇ ಕೇಂದ್ರ ಸರ್ಕಾರ ನಡುಗಡ್ಡೆಗಳಲ್ಲಿ ಕೋವಿಡ್ ನಿರ್ಬಂಧ ಸಡಿಲಗೊಳಿಸಿದೆ ಎಂದು ಟೆಲಿವಿಷನ್ ನೇರಪ್ರಸಾರ ಕಾರ್ಯಕ್ರಮವೊಂದರಲ್ಲಿ ಆಯಿಷಾ ಹೇಳಿದ್ದರು. ದ್ವೀಪ ಸಮೂಹದಲ್ಲಿ ಕೋವಿಡ್ ನಿರ್ಬಂಧ ಸಡಿಲಿಸುವ ಕೇಂದ್ರ ಸರ್ಕಾರದ ನಿರ್ಧಾರ ನಡುಗಡ್ಡೆಗಳ ಸ್ಥಳೀಯರ ಮೇಲಿನ ಜೈವಿಕ ಅಸ್ತ್ರ ಪ್ರಯೋಗ ಎಂದು ಸುಲ್ತಾನಾ ಕಾರ್ಯಕ್ರಮದಲ್ಲಿ ತಿಳಿಸಿದ್ದರು.
ಆದರೆ ನ್ಯಾಯಮೂರ್ತಿ ಅಶೋಕ್ ಮೆನನ್ ನೇತೃತ್ವದ ಏಕಸದಸ್ಯ ಪೀಠ “ರಾಷ್ಟ್ರೀಯ ಹಿತಾಸಕ್ತಿಗೆ ಧಕ್ಕೆ ತರುವಂತಹ ಯಾವುದೇ ಆಪಾದನೆಗಳ ಸ್ಪಷ್ಟ ಸೂಚನೆ ಆಯಿಷಾ ಅವರ ಹೇಳಿಕೆಯಲ್ಲಿ ಇಲ್ಲ” ಎಂದು ತೀರ್ಪು ನೀಡಿತು.
ನ್ಯಾಯಾಲಯ ಹೇಳಿದ್ದೇನು?
ಐಪಿಸಿ ಸೆಕ್ಷನ್ 124 ಎ ಪ್ರಕಾರ ದೇಶದ್ರೋಹ ಅಪರಾಧ ನಿರೂಪಿಸುವ ನಿರ್ಣಾಯಕ ಅಂಶ ಎಂದರೆ ಭಾರತದಲ್ಲಿ ಕಾನೂನಾತ್ಮಕವಾಗಿ ಸ್ಥಾಪಿತವಾದ ಸರ್ಕಾರವನ್ನು ದ್ವೇಷ ಅಥವಾ ನಿಂದನೆಗೆ ಕಾರಣವಾಗುವಂತಹ ಕೃತ್ಯಗಳನ್ನು ರೂಪಿಸುವುದಾಗಿದೆ. ಈ ಪ್ರಕರಣದಲ್ಲಿ ಅರ್ಜಿದಾರರು ಭಾರತ ಸರ್ಕಾರದ ವಿರುದ್ಧ ಅಂತಹ ಕೃತ್ಯ ಎಸಗಿದ್ದಾರೆ ಎಂಬ ಬಗ್ಗೆ ಯಾವುದೇ ಸುಳಿವು ಇಲ್ಲ.
ಸುಲ್ತಾನಾ ತಮ್ಮ ಹೇಳಿಕೆಯಲ್ಲಿ ರಾಷ್ಟ್ರೀಯ ಹಿತಾಸಕ್ತಿಗೆ ಧಕ್ಕೆ ತರುವಂತಹ ಅಥವಾ ಯಾವುದೇ ವರ್ಗದ ವ್ಯಕ್ತಿಗಳನ್ನು ಮತ್ತೊಂದು ಗುಂಪಿನ ವ್ಯಕ್ತಿಗಳ ವಿರುದ್ಧ ಪ್ರಚೋದಿಸಿಲ್ಲ. ಹೀಗಾಗಿ ಐಪಿಸಿ ಸೆಕ್ಷನ್ 153-ಎ ಅಡಿ ಶಿಕ್ಷೆಗೆ ಒಳಪಡಿಸಬಹುದೇ ಎಂಬ ಅನುಮಾನವಿದೆ.
ಅರ್ಜಿದಾರರಿಗೆ ಯಾವುದೇ ಕ್ರಿಮಿನಲ್ ಹಿನ್ನೆಲೆ ಇಲ್ಲ. ಆಕೆ (ಆಯಿಷಾ) ಕಾನೂನಿನಿಂದ ಪಲಾಯಾನ ಮಾಡುವ ಸಾಧ್ಯತೆ ಇಲ್ಲ.
ಅರ್ಜಿದಾರರನ್ನು ಕಸ್ಟಡಿ ವಿಚಾರಣೆಗೆ ಒಳಪಡಿಸುವುದು ಮತ್ತು ಜೈಲಿನಲ್ಲಿರಿಸುವುದು ಕೋವಿಡ್ ಸಂದರ್ಭದ ಅಗತ್ಯವಲ್ಲ.
ಆಕೆ ಕಾನೂನಿನಿಂದ ತಪ್ಪಿಸಿಕೊಳ್ಳುತ್ತಾರೆ ಅಥವಾ ತನಿಖೆಗೆ ಸಹಕರಿಸುವುದಿಲ್ಲ ಎಂಬ ಆತಂಕವನ್ನು ಪ್ರಾಸಿಕ್ಯೂಷನ್ ವ್ಯಕ್ತಪಡಿಸಿಲ್ಲ.
ಅರ್ಜಿದಾರರು ರೂ 50,000 ಮೊತ್ತದ ಬಾಂಡ್ ಸಲ್ಲಿಸಬೇಕಿದ್ದು, ಇಬ್ಬರ ಶ್ಯೂರಿಟಿ ಅಗತ್ಯವಿದೆ.
ತೀರ್ಪು ನಿರೀಕ್ಷಣಾ ಜಾಮೀನಿಗೆ ಮಾತ್ರ ಸಂಬಂಧಿಸಿದ್ದು ಪ್ರಕರಣದ ಅರ್ಹತೆಯನ್ನು ನ್ಯಾಯಾಲಯ ನಿರ್ಧರಿಸುವುದಿಲ್ಲ.
ಲಕ್ಷದ್ವೀಪದಲ್ಲಿ ತಮ್ಮ ವಿರುದ್ಧ ಎಫ್‌ಐಆರ್ ದಾಖಲಿಸಿದ ಬಳಿಕ ಆಯಿಷಾ ನಿರೀಕ್ಷಣಾ ಜಾಮೀನು ಕೋರಿ ಈ ತಿಂಗಳ ಆರಂಭದಲ್ಲಿ ಕೇರಳ ಹೈಕೋರ್ಟ್ ಮೆಟ್ಟಿಲೇರಿದ್ದರು. ಹಿರಿಯ ನ್ಯಾಯವಾದಿ ಪಿ ವಿಜಯಭಾನು ಅವರು ಸುಲ್ತಾನಾ ಪರ ಹಾಜರಾಗಿದ್ದರೆ, ಸ್ಥಾಯಿ ವಕೀಲ ಎಸ್ ಮನು ಅವರು ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ್ದರು.