Justice R Devdas, Karnataka High Court 
ಸುದ್ದಿಗಳು

[ಎಎಬಿ ಚುನಾವಣೆ] ಒಬಿಸಿ, ಎಸ್‌ಸಿ, ಎಸ್‌ಟಿ ಮೀಸಲಾತಿ ಕೋರಿಕೆ: ಸುಪ್ರೀಂನಲ್ಲಿ ಪರಿಹಾರ ಪಡೆಯಿರಿ ಎಂದ ಹೈಕೋರ್ಟ್‌

ಚುನಾವಣೆ ನಡೆಸುವಂತೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಆದೇಶ ಮಾಡಿರುವುದರಿಂದ 27.01.2025ರ ಎಎಬಿ ನಿರ್ಣಯ ಸೇರಿದಂತೆ ಯಾವುದೇ ವಿಚಾರವಾಗಿ ಅಭಿಪ್ರಾಯ ವ್ಯಕ್ತಪಡಿಸುವುದಿಲ್ಲ ಎಂದ ಹೈಕೋರ್ಟ್.

Bar & Bench

ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ಬೆಂಗಳೂರು ವಕೀಲರ ಸಂಘದ ಚುನಾವಣೆ ನಡೆಯುತ್ತಿದ್ದು, ಹಿಂದುಳಿದ ವರ್ಗಗಳು ಮತ್ತು ಎಸ್‌ಸಿ/ಎಸ್‌ಟಿ ಸಮುದಾಯದ ವಕೀಲರಿಗೆ ಶೇ.50ರಷ್ಟು ಮೀಸಲಾತಿ ಹಾಗೂ ರೊಟೇಶನ್‌ ಆಧಾರದಲ್ಲಿ ಆಡಳಿತ ಮಂಡಳಿಯಲ್ಲಿ ಅವಕಾಶ ಕಲ್ಪಿಸಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಗಳಿಗೆ ಸಂಬಂಧಿಸಿದಂತೆ ಆದೇಶ ಮಾಡಲು ಈ ನ್ಯಾಯಾಲಯಕ್ಕೆ ಅಧಿಕಾರವಿಲ್ಲ ಎಂದು ಕರ್ನಾಟಕ ಹೈಕೋರ್ಟ್‌ ಶನಿವಾರ ಅರ್ಜಿಗಳನ್ನು ಇತ್ಯರ್ಥಪಡಿಸಿದೆ.

ಎಎಬಿ ಚುನಾವಣೆಯಲ್ಲಿ ಸ್ಪರ್ಧಿಸಲು ಎಸ್‌ಸಿ/ಎಸ್‌ಟಿ ಮತ್ತು ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸಲು ಕೋರಿ ಅಖಿಲ ಭಾರತ ಹಿಂದುಳಿದ ವರ್ಗಗಳ ವಕೀಲರ ಸಂಘ ಮತ್ತು ರಾಜ್ಯ ಎಸ್‌ಸಿ/ಎಸ್‌ಟಿ, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತ ವಕೀಲರ ಒಕ್ಕೂಟ ಸಲ್ಲಿಸಿದ್ದ ಅರ್ಜಿಗಳ ಸುದೀರ್ಘ ವಿಚಾರಣೆ ನಡೆಸಿ ನ್ಯಾಯಮೂರ್ತಿ ಆರ್‌ ದೇವದಾಸ್‌ ಅವರ ಏಕಸದಸ್ಯ ಪೀಠ ಆದೇಶ ಮಾಡಿತು.

“ಸುಪ್ರೀಂ ಕೋರ್ಟ್‌ ಸಂವಿಧಾನದ 142ನೇ ವಿಧಿಯಡಿ ಅಧಿಕಾರ ಬಳಿಸಿ ಎಎಬಿಯಲ್ಲಿ ಮಹಿಳಾ ವಕೀಲರಿಗೆ ಖಜಾಂಚಿ ಸ್ಥಾನ ಮೀಸಲಿರಿಸಿದ್ದು, ಉಪಾಧ್ಯಕ್ಷ ಮತ್ತು ನಾಲ್ಕು ಘಟಕಗಳಲ್ಲಿ ಹೆಚ್ಚುವರಿಯಾಗಿ 9 ಸದಸ್ಯರ ಸಂಖ್ಯೆ ಹೆಚ್ಚಳ ಮಾಡುವ ಸಂಬಂಧ ಆದೇಶ ಮಾಡಿದೆ. ಚುನಾವಣೆ ನಡೆಸುವಂತೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಆದೇಶ ಮಾಡಿರುವುದರಿಂದ ಎಎಬಿ ನಿರ್ಣಯ ಸೇರಿದಂತೆ ಯಾವುದೇ ವಿಚಾರವಾಗಿ ಅಭಿಪ್ರಾಯ ವ್ಯಕ್ತಪಡಿಸುವುದಿಲ್ಲ. ಅರ್ಜಿದಾರರು ಸುಪ್ರೀಂ ಕೋರ್ಟ್‌ನಲ್ಲಿ ತಮ್ಮ ಕೋರಿಕೆಗಳಿಗೆ ಪರಿಹಾರ ಪಡೆಯಬಹುದು” ಎಂದು ಆದೇಶಿಸಿತು.

ಇದಕ್ಕೂ ಮುನ್ನ, ಅರ್ಜಿದಾರರ ಪರವಾಗಿ ವಾದಿಸಿದ ಹಿರಿಯ ವಕೀಲ ಎಂ ಬಿ ನರಗುಂದ ಅವರು “2024ರ ಡಿಸೆಂಬರ್‌ 12ಕ್ಕೆ ಎಎಬಿ ಆಡಳಿತ ಮಂಡಳಿ ಅಧಿಕಾರ ಪೂರ್ಣಗೊಂಡಿತ್ತು. 2025ರ ಜನವರಿ 8ರಂದು ಹೈಕೋರ್ಟ್‌ನಲ್ಲಿ ನಿರ್ಣಯ ಕೈಗೊಳ್ಳುವ ಅಧಿಕಾರ ತಮಗೆ ಇಲ್ಲ ಎಂದು ಎಎಬಿ ಅಧ್ಯಕ್ಷರು (ವಿವೇಕ್‌ ಸುಬ್ಬಾರೆಡ್ಡಿ) ಹೈಕೋರ್ಟ್‌ಗೆ ತಿಳಿಸಿದ್ದರು. ಅದಾಗ್ಯೂ, 27.01.2025ರಂದು ಉಪಾಧ್ಯಕ್ಷ ಮತ್ತು ಹೆಚ್ಚುವರಿಯಾಗಿ ನಾಲ್ಕು ಘಟಕಗಳಿಂದ 9 ಸದಸ್ಯರ ಸಂಖ್ಯೆ ಹೆಚ್ಚಿಸಿ, ಖಜಾಂಚಿ ಹುದ್ದೆಗೆ ಸ್ಪರ್ಧಿಸಿದ್ದ ಪುರುಷ ವಕೀಲರು ಅಧ್ಯಕ್ಷ ಅಥವಾ ಉಪಾಧ್ಯಕ್ಷ ಹುದ್ದೆಗೆ ಒಂದು ಬಾರಿಗೆ ಸ್ಪರ್ಧಿಸಬಹುದು ಎಂಬ ನಿರ್ಣಯ ಮಾಡಿದ್ದಾರೆ. ಇದನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿ ಆದೇಶ ಪಡೆಯಲಾಗಿದೆ. ಇದೆಲ್ಲದರ ಮಧ್ಯೆ, ಎಸ್‌ಸಿ/ಎಸ್‌ಟಿ ಹಾಗೂ ಒಬಿಸಿ ವಕೀಲರಿಗೆ ಮೀಸಲಾತಿ ಕೋರಿ ಸಲ್ಲಿಸಿದ್ದ ಮನವಿಯ ಸಂಬಂಧ ಎಎಬಿ ವಿಶೇಷ ಸಭೆಯಲ್ಲಿ ಚರ್ಚೆಯನ್ನೇ ನಡೆಸಲಾಗಿಲ್ಲ. ಇದು ಸಂವಿಧಾನದ 14ನೇ ವಿಧಿ ಅಡಿ ಅರ್ಜಿದಾರರಿಗೆ ದೊರೆತಿರುವ ಹಕ್ಕಿನ ಉಲ್ಲಂಘನೆಯಾಗಿದೆ” ಎಂದು ಆಕ್ಷೇಪಿಸಿದರು.

ಅರ್ಜಿದಾರರ ಪರ ಮತ್ತೊಬ್ಬ ವಕೀಲ ಮಧುಕರ್‌ ದೇಶಪಾಂಡೆ ಅವರು “ಜನವರಿ 24ರಂದು ಸುಪ್ರೀಂ ಕೋರ್ಟ್‌ ಆದೇಶ ಮಾಡಿದ ಬಳಿಕ ಮಹಿಳಾ ವಕೀಲರಿಗೆ ಮೀಸಲಾತಿ ಕಲ್ಪಿಸುವ ನಿರ್ಣಯವನ್ನು ಎಎಬಿ ಜಾರಿಗೊಳಿಸಿದೆ. ಈ ನಿರ್ಣಯ ಜಾರಿಗೊಳಿಸುವುದಕ್ಕೂ ಮುನ್ನ ನಾವು ಮನವಿ ಸಲ್ಲಿಸಿದ್ದೇವೆ. ಮಹಿಳೆಯರ ವಿಚಾರದಲ್ಲಿ ಮೀಸಲಾತಿ ಒಪ್ಪಿಕೊಳ್ಳುವುದಾದರೆ ಎಸ್‌ಸಿ/ಎಸ್‌ಟಿ ವಕೀಲರಿಗೆ ಏಕೆ ಮೀಸಲಾತಿ ಕಲ್ಪಿಸಬಾರದು?” ಎಂದರು.

ಅರ್ಜಿದಾರರ ಪರ ಮತ್ತೊಬ್ಬ ವಕೀಲ ವೆಂಕಟೇಶ್‌ ಅವರು “ಎಎಬಿ ಸದಸ್ಯರಾಗಿರುವವರಲ್ಲಿ ಶೇ. 75ರಷ್ಟು ವಕೀಲರು ಎಸ್‌ಸಿ/ಎಸ್‌ಟಿ, ಒಬಿಸಿ ಸಮುದಾಯವರಾಗಿದ್ದಾರೆ. ಆದರೆ, ಎರಡು ಸೀಟುಗಳಿಗೆ ನಾವು ಮನವಿ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಸಾಮಾನ್ಯ ವರ್ಗದರ ಜೊತೆ ಸ್ಪರ್ಧಿಸುವ ಮಟ್ಟದಲ್ಲಿ ಎಸ್‌ಸಿ/ಎಸ್‌ಟಿ ಮತ್ತು ಒಬಿಸಿ ಸಮುದಾಯದ ವಕೀಲರು ಇಲ್ಲ. ಎಎಬಿ ಅಸ್ತಿತ್ವಕ್ಕೆ ಬಂದು 57 ವರ್ಷಗಳಾಗಿದ್ದು, ಇದುವರೆಗೆ ಎಸ್‌ಸಿ/ಎಸ್‌ಟಿ, ಒಬಿಸಿ ವರ್ಗದಿಂದ ಒಬ್ಬೇ ಒಬ್ಬರು ಆಡಳಿತ ಮಂಡಳಿ ಸದಸ್ಯರಾಗಿಲ್ಲ” ಎಂದು ಪೀಠದ ಗಮನಸೆಳೆದರು.

ಎಎಬಿ ಪ್ರಧಾನ ಕಾರ್ಯದರ್ಶಿ ಹಾಗೂ ಹಾಲಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಟಿ ಜಿ ರವಿ ಪರವಾಗಿ ವಾದಿಸಿದ ವಕೀಲ ಡಿ ಕುಮಾರ್‌ ಅವರು “ಪ್ರಧಾನ ಕಾರ್ಯದರ್ಶಿ ಮೀಸಲಾತಿ ನೀಡುವುದಕ್ಕೆ ವಿರೋಧಿಸಿಲ್ಲ. 27.01.2025ರಂದು ಎಎಬಿ ಅಧ್ಯಕ್ಷ ಮತ್ತು ಖಜಾಂಚಿ ಏಕಪಕ್ಷೀಯವಾಗಿ ನಿರ್ಣಯ ಪಾಸು ಮಾಡಿದ್ದಾರೆ. ಇದಕ್ಕೆ ರವಿ ವಿರೋಧಿಸಿದ್ದರು. ಹಾಲಿ ವಿಚಾರದಲ್ಲಿ ಹೈಕೋರ್ಟ್‌ ಮಾಡುವ ಆದೇಶಕ್ಕೆ ಬದ್ಧ” ಎಂದರು.

ಎಎಬಿ ಅಧ್ಯಕ್ಷ ವಿವೇಕ್‌ ಸುಬ್ಬಾರೆಡ್ಡಿ ಅನುಪಸ್ಥಿತಿಯಲ್ಲಿ ಬೇರೊಬ್ಬರು ವಕೀಲರು ನೋಟಿಸ್‌ ಜಾರಿ ಮಾಡಿ, ವಾದಿಸಲು ಅವಕಾಶ ನೀಡಬೇಕು ಎಂದು ಕೋರಿದರು. ಆದರೆ, ನ್ಯಾಯಾಲಯ ವಾದ-ಪ್ರತಿವಾದ ದಾಖಲಿಸಿ, ಅರ್ಜಿ ಇತ್ಯರ್ಥಪಡಿಸಿತು.

ಇದೆಲ್ಲದರ ಮಧ್ಯೆ, ಎಎಬಿ ಚುನಾವಣೆಯನ್ನು ಫೆಬ್ರವರಿ 16ಕ್ಕೆ ನಿಗದಿಯಾಗಿದ್ದು, ಉಮೇದುವಾರಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ಹಾಲಿ ಪ್ರಕರಣದಲ್ಲಿನ ಅರ್ಜಿದಾರರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದರೆ ಮತ್ತು ಸರ್ವೋಚ್ಚ ನ್ಯಾಯಾಲಯವು ಅರ್ಜಿದಾರರ ಕೋರಿಕೆ ಹಾಗೂ ಎಎಬಿಯ 27.01.2025ರ ಆಕ್ಷೇಪಾರ್ಹ ನಿರ್ಣಯವನ್ನು ಗಂಭೀರವಾಗಿ ಪರಿಗಣಿಸಿದರೆ ಚುನಾವಣೆಯು ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ.