ಸುದ್ದಿಗಳು

ನಿವೃತ್ತ ಡಿಜಿಪಿ ಓಂಪ್ರಕಾಶ್‌ ಕೊಲೆ: ಪತ್ನಿ ಪಲ್ಲವಿ ಏಳು ದಿನ ಸಿಸಿಬಿ ವಶಕ್ಕೆ

ಪ್ರಕರಣದಲ್ಲಿ 2ನೇ ಆರೋಪಿ ಆಗಿರುವ ಕೃತಿ ಅವರು ಮಾನಸಿಕವಾಗಿ ಸ್ಥಿರವಾಗಿದ್ಧಾರೆ. ಅವರನ್ನು ಪೊಲೀಸರು ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಳ್ಳಬಹುದು ಎಂಬುದಾಗಿ ನಿಮ್ಹಾನ್ಸ್‌ ವೈದ್ಯರು ವರದಿ ನೀಡಿದ್ದಾರೆ ಎನ್ನಲಾಗಿದೆ.

Siddesh M S

ನಿವೃತ್ತ ಪೊಲೀಸ್‌ ಮಹಾನಿರ್ದೇಶಕ ಓಂಪ್ರಕಾಶ್ ಅವರ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ನ್ಯಾಯಾಂಗ ಬಂಧನದಲ್ಲಿದ್ದ ಪತ್ನಿ ಪಲ್ಲವಿ ಅವರನ್ನು ಹೆಚ್ಚಿನ ವಿಚಾರಣೆಗಾಗಿ ಬೆಂಗಳೂರಿನ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಕಸ್ಟಡಿಗೆ 7 ದಿನಗಳ ಕಾಲ ನೀಡಿದ್ದಾರೆ. ಮತ್ತೊಂದೆಡೆ ಪುತ್ರಿ ಕೃತಿಯನ್ನು ವಿಚಾರಣೆಗೆ ಒಳಪಡಿಸಬಹುದು ಎಂದು ನಿಮ್ಹಾನ್ಸ್‌ ವೈದ್ಯರು ಪ್ರಮಾಣಿಕರಿಸಿದ್ದಾರೆ ಎನ್ನಲಾಗಿದೆ.

ಪ್ರಕರಣ ಸಂಬಂಧ ಎಚ್‌ಎಸ್‌ಆರ್ ಲೇಔಟ್ ಪೊಲೀಸರು ಏಪ್ರಿಲ್‌ 21ರಂದು ಪಲ್ಲವಿ ಅವರನ್ನು ಬಂಧಿಸಿದ್ದರು. ನ್ಯಾಯಾಲಯವು ಪಲ್ಲವಿ ಅವರನ್ನು ಮೇ 3ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿತ್ತು. ಈ ಮಧ್ಯೆ ಪ್ರಕರಣವನ್ನು ಸಿಸಿಬಿಗೆ ವರ್ಗಾವಣೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ವಶಕ್ಕೆ ನೀಡುವಂತೆ ಕೋರಿ ಸಿಸಿಬಿ ಪೊಲೀಸರು 39ನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಲತಾ ದೇವಿ ಅವರ ಪೀಠಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪಿಯನ್ನು ಏಳು ದಿನಗಳ ಕಾಲ ಸಿಸಿಬಿ ವಶಕ್ಕೆ ನೀಡಿ ಆದೇಶಿಸಿದೆ.

ಇನ್ನು ಇದೇ ಪ್ರಕರಣದಲ್ಲಿ 2ನೇ ಆರೋಪಿ ಆಗಿರುವ ಕೃತಿ ಅವರು ಮಾನಸಿಕವಾಗಿ ಸ್ಥಿರವಾಗಿದ್ಧಾರೆ. ಅವರನ್ನು ಪೊಲೀಸರು ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಳ್ಳಬಹುದು ಎಂಬುದಾಗಿ ನಿಮ್ಹಾನ್ಸ್‌ ವೈದ್ಯರು ವರದಿ ನೀಡಿದ್ದಾರೆ. ಹೀಗಾಗಿ, ಸದ್ಯ ಆಕೆಗೆ ನಿಮ್ಹಾನ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ.