ನಿವೃತ್ತ ಪೊಲೀಸ್‌ ಮಹಾನಿರ್ದೇಶಕ ಓಂ ಪ್ರಕಾಶ್‌ ಹತ್ಯೆ: ಪತ್ನಿ ಪಲ್ಲವಿಗೆ ಮೇ 3ರವರೆಗೆ ನ್ಯಾಯಾಂಗ ಬಂಧನ

ಓಂ ಪ್ರಕಾಶ್‌ ಪುತ್ರ ಕಾರ್ತಿಕೇಶ್‌ ನೀಡಿದ ದೂರಿನ ಅನ್ವಯ ತಾಯಿ ಪಲ್ಲವಿ ಮತ್ತು ಕೃತಿ ವಿರುದ್ಧ ಬಿಎನ್‌ಎಸ್‌ ಸೆಕ್ಷನ್‌ 103(1) (ಕೊಲೆ) ಮತ್ತು 3(5) (ಸಮಾನ ಉದ್ದೇಶ) ಅಡಿ ಪ್ರಕರಣ ಎಚ್‌ಎಸ್‌ಆರ್‌ ಲೇಔಟ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Om Prakash
Om Prakash
Published on

ಕರ್ನಾಟಕದ ನಿವೃತ್ತ ಪೊಲೀಸ್‌ ಮಹಾನಿರ್ದೇಶಕ ಓಂ ಪ್ರಕಾಶ್‌ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿ ಪಲ್ಲವಿ ಅವರನ್ನು ಬೆಂಗಳೂರಿನ 39ನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ಮೇ 3ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿದೆ.

ಬೆಂಗಳೂರಿನ ಎಚ್‌ಎಸ್‌ಆರ್‌ ಲೇಔಟ್‌ ಪೊಲೀಸರು ಓಂ ಪ್ರಕಾಶ್‌ ಅವರ ಪತ್ನಿ ಪಲ್ಲವಿ ಅವರನ್ನು ಬಂಧಿಸಿ ಸೋಮವಾರ ತಡರಾತ್ರಿ 39ನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್‌ ಲತಾ ದೇವಿ ಅವರ ಮುಂದೆ ಹಾಜರುಪಡಿಸಿದರು.

ಘಟನೆಯ ಮಾಹಿತಿ ಪಡೆದ ಮ್ಯಾಜಿಸ್ಟ್ರೇಟ್‌ ಅವರು ಪಲ್ಲವಿ ಅವರನ್ನು ಮೇ 3ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿದರು. ಓಂ ಪ್ರಕಾಶ್‌ ಅವರ ಪುತ್ರಿ ಕೃತಿ ಅವರನ್ನು ಚಿಕಿತ್ಸೆಗಾಗಿ ನಿಮ್ಹಾನ್ಸ್‌ಗೆ ಸೇರ್ಪಡೆ ಮಾಡಲಾಗಿದೆ.

ಓಂ ಪ್ರಕಾಶ್‌ ಪುತ್ರ ಕಾರ್ತಿಕೇಶ್‌ ನೀಡಿದ ದೂರಿನ ಅನ್ವಯ ತಾಯಿ ಪಲ್ಲವಿ ಮತ್ತು ಕೃತಿ ವಿರುದ್ಧ ಬಿಎನ್‌ಎಸ್‌ ಸೆಕ್ಷನ್‌ 103(1) (ಕೊಲೆ) ಮತ್ತು 3(5) (ಏಕ ಉದ್ದೇಶ) ಅಡಿ ಪ್ರಕರಣ ಎಚ್‌ಎಸ್‌ಆರ್‌ ಲೇಔಟ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಎಫ್‌ಐಆರ್‌ನಲ್ಲಿ ಏನಿದೆ?

ಏಪ್ರಿಲ್‌ 20 ಕಾರ್ತಿಕೇಶ್‌ ಅವರು ನೀಡಿರುವ ದೂರಿನಲ್ಲಿ, ತಾಯಿ ಪಲ್ಲವಿ ಅವರು ತಂದೆ ಓಂ ಪ್ರಕಾಶ್‌ ಅವರಿಗೆ ವಾರದಿಂದ ಕೊಲೆ ಬೆದರಿಕೆ ಹಾಕುತ್ತಿದ್ದರು. ಹೀಗಾಗಿ ತಂದೆ ಓಂ ಪ್ರಕಾಶ್‌ ಅವರು ಸಹೋದರಿ ಸರಿತಾ ಕುಮಾರಿ ಅವರ ಮನೆಯಲ್ಲಿ ವಾಸವಿದ್ದರು. ಸಹೋದರಿ ಕೃತಿಯು ಎರಡು ದಿನಗಳ ಹಿಂದೆ ಸರಿತಾ ಕುಮಾರಿಯವರ ಮನೆಗೆ ತೆರಳಿ ತಂದೆಯವರನ್ನು ಪೀಡಿಸಿ ಮನೆಗೆ ಕರೆತಂದಿದ್ದರು. ತಾನು ದೊಮ್ಮಲೂರಿನ ಕರ್ನಾಟಕ ಗಾಲ್ಫ್‌ ಅಸೋಸಿಯೇಶನ್‌ನಲ್ಲಿ ಇದ್ದಾಗ ಪಕ್ಕದ ಮನೆಯ ಜಯಶ್ರೀ ಶ್ರೀಧರನ್‌ ಅವರು ತಂದೆ ಓಂ ಪ್ರಕಾಶ್‌ ಅವರ ದೇಹ ಕೆಳಗೆ ಬಿದ್ದಿದೆ ಎಂದು ಫೋನ್‌ ಮಾಡಿದ್ದರು. ತಕ್ಷಣ ಬಂದು ನೋಡಲಾಗಿ ತಂದೆಯವರು ರಕ್ತದ ಮಡುವಿನಲ್ಲಿ ಬಿದ್ದಿದ್ದರು.ದೇಹದ ಪಕ್ಕದಲ್ಲಿ ಹೊಡೆದಿರುವ ಬಾಟಲ್‌ ಮತ್ತು ಚಾಕು ಇದ್ದವು. ನಂತರ ಮೃತದೇಹವನ್ನು ಸೇಂಟ್‌ ಜಾನ್ಸ್‌ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಯಿತು. ತಾಯಿ ಪಲ್ಲವಿ ಮತ್ತು ಸಹೋದರಿ ಕೃತಿ ಅವರು ಖಿನ್ನತೆಯಿಂದ ಬಳಲುತ್ತಿದ್ದು, ಪ್ರತಿನಿತ್ಯ ತಂದೆಯೊಂದಿಗೆ ಜಗಳವಾಡುತ್ತಿದ್ದರು. ತಾಯಿ ಪಲ್ಲವಿ ಮತ್ತು ಸಹೋದರಿ ಕೃತಿ ಅವರು ಕೊಲೆ ಮಾಡಿರುವ ಶಂಕೆ ಇದೆ ಎಂದು ತಿಳಿಸಿದ್ದಾರೆ.

Kannada Bar & Bench
kannada.barandbench.com