Supreme Court 
ಸುದ್ದಿಗಳು

ನೂಪುರ್ ಕುರಿತ ಸುಪ್ರೀಂ ಅಭಿಪ್ರಾಯ ವಿರೋಧಿಸಿ ನಿವೃತ್ತ ನ್ಯಾಯಮೂರ್ತಿಗಳು, ಅಧಿಕಾರಿಗಳು, ಸೇನಾನಿಗಳಿಂದ ಬಹಿರಂಗ ಪತ್ರ

“ಸುಪ್ರೀಂ ಕೋರ್ಟ್‌ನ ಇಬ್ಬರು ನ್ಯಾಯಮೂರ್ತಿಗಳ ಇತ್ತೀಚಿನ ಅಭಿಪ್ರಾಯ ಲಕ್ಷ್ಮಣ ರೇಖೆಯನ್ನು ಮೀರಿದ್ದರಿಂದ ಬಹಿರಂಗ ಪತ್ರ ಬರೆಯುವ ಅನಿವಾರ್ಯತೆ ಎದುರಾಯಿತು” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

Bar & Bench

ಪ್ರವಾದಿ ಮುಹಮ್ಮದ್‌ ಕುರಿತು ರಾಷ್ಟ್ರೀಯ ಸುದ್ದಿ ವಾಹಿನಿಯೊಂದರಲ್ಲಿ ನೀಡಿದ ಹೇಳಿಕೆಗೆ ಸಂಬಂಧಿಸಿದಂತೆ ಬಿಜೆಪಿ ಮಾಜಿ ವಕ್ತಾರೆ ನೂಪುರ್‌ ಶರ್ಮಾ ವಿರುದ್ಧ ಜುಲೈ 1ರಂದು ಸುಪ್ರೀಂ ಕೋರ್ಟ್‌ ನೀಡಿದ ಪ್ರತಿಕೂಲ ಹೇಳಿಕೆಗಳನ್ನು ವಿರೋಧಿಸಿ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳು, ಅಧಿಕಾರಿಗಳು ಮತ್ತು ಸಶಸ್ತ್ರ ಪಡೆಗಳ ಅಧಿಕಾರಿಗಳು ಬಹಿರಂಗ ಪತ್ರ ಬರೆದಿದ್ದಾರೆ.

ಕಾನೂನು ಮತ್ತು ಪ್ರಜಾಪ್ರಭುತ್ವವನ್ನು ಉಳಿಸಿ ಬೆಳೆಸಬೇಕಾದರೆ ಸುಪ್ರೀಂ ಕೋರ್ಟ್‌ನ ಹೇಳಿಕೆಗಳು ನಿರ್ಲಕ್ಷಿಸುವುದಕ್ಕಿಂತಲೂ ಗಂಭೀರವಾಗಿವೆ ಎಂದು ವಿವಿಧ ಹೈಕೋರ್ಟ್‌ಗಳ 15 ನಿವೃತ್ತ ನ್ಯಾಯಮೂರ್ತಿಗಳು, 77 ನಿವೃತ್ತ ಅಧಿಕಾರಿಗಳು ಹಾಗೂ 25 ಸಶಸ್ತ್ರ ಪಡೆ ಯೋಧರು ಸಹಿ ಮಾಡಿರುವ ಬಹಿರಂಗ ಪತ್ರದಲ್ಲಿ ತಿಳಿಸಿದ್ದು ಅದನ್ನು ಹಿಂಪಡೆಯುವಂತೆ ಕೋರಿದ್ದಾರೆ.

ಮುಂಬೈ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಕ್ಷಿತಿಜ್‌ ವ್ಯಾಸ್‌, ಗುಜರಾತ್‌ ಹೈಕೋರ್ಟ್‌ ನ್ಯಾಯಮೂರ್ತಿ ಹಾಗೂ ಲೋಕಾಯುಕ್ತರಾಗಿದ್ದ ಎಸ್‌ ಎಂ ಸೋನಿ, ಗುವಾಹಟಿ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿದ್ದ ಕೆ ಶ್ರೀಧರ ರಾವ್‌ ಸಹಿತ 15 ನಿವೃತ್ತ ನ್ಯಾಯಮೂರ್ತಿಗಳು ಪತ್ರದಲ್ಲಿ ಸಹಿ ಮಾಡಿದ್ದಾರೆ.

ಅಲ್ಲದೆ, ಕರ್ನಾಟಕದಲ್ಲಿ ಸೇವೆ ಸಲ್ಲಿಸಿದ್ದ ನಿವೃತ್ತ ಡಿಜಿಪಿ ಪಿ ಕೆ ಗರ್ಗ್‌, ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮದನ್‌ ಗೋಪಾಲ್‌, ನಿವೃತ್ತ ಪ್ರಧಾನ ಕಾರ್ಯದರ್ಶಿ ಎಸ್‌ ಎಲ್‌ ಗಂಗಾಧರಪ್ಪ, ನಿವೃತ್ತ ಕಾರ್ಯದರ್ಶಿ ಎನ್‌ ಪ್ರಭಾಕರ್‌, ನಿವೃತ್ತ ಐಜಿಪಿ ಗೋಪಾಲ್‌ ಹೊಸೂರ್‌, ನಿವೃತ್ತ ಕಾರ್ಯದರ್ಶಿಗಳಾದ ಮುದ್ದು ಮೋಹನ್‌, ಎ ಕೆ ಮೋನಪ್ಪ, ರಮೇಶ್‌ ಝಳಕಿ, ನಿವೃತ್ತ ಮುಖ್ಯ ಅರಣ್ಯ ಸಂರಕ್ಷರಾದ ಕೃಷ್ಣನ್‌ ಸಿಂಗ್‌ ಸುಗರ, ಜಿ ವಿ ಸುಗೂರ್‌, ರಾಜು ಸಹಿತ ದೇಶದ ವಿವಿಧ ರಾಜ್ಯಗಳಲ್ಲಿ ಸೇವೆ ಸಲ್ಲಿಸಿದ್ದ 77 ನಿವೃತ್ತ ಅಧಿಕಾರಿಗಳು ಹಾಗೂ 25 ಸಶಸ್ತ್ರ ಪಡೆಯ ನಿವೃತ್ತ ಅಧಿಕಾರಿಗಳು ಪತ್ರಕ್ಕೆ ಸಹಿ ಮಾಡಿದ್ದಾರೆ

“ಸುಪ್ರೀಂ ಕೋರ್ಟ್‌ನ ಇಬ್ಬರು ನ್ಯಾಯಮೂರ್ತಿಗಳ ಇತ್ತೀಚಿನ ಅಭಿಪ್ರಾಯ ಲಕ್ಷ್ಮಣ ರೇಖೆಯನ್ನು ಮೀರಿದ್ದರಿಂದ ಬಹಿರಂಗ ಪತ್ರ ಬರೆಯುವ ಅನಿವಾರ್ಯತೆ ಎದುರಾಯಿತು” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ನೂಪುರ್‌ ಶರ್ಮಾ ಕುರಿತು ನ್ಯಾ. ಸೂರ್ಯ ಕಾಂತ್‌ ಮತ್ತು ಜೆ ಬಿ ಪರ್ದಿವಾಲಾ ಅವರಿದ್ದ ಪೀಠ “ದೇಶದಾದ್ಯಂತ ಭಾವನೆಗಳನ್ನು ಪ್ರಚೋದಿಸಿರುವ ರೀತಿಗೆ ಆಕೆ ಹೊಣೆಗಾರರಾಗಿದ್ದು, ರಾಷ್ಟ್ರದಾದ್ಯಂತ ಆಗುತ್ತಿರುವ ಬೆಳವಣಿಗೆಗಳಿಗೆ ಆಕೆಯೇ ಏಕಮಾತ್ರ ಜವಾಬ್ದಾರಿಯಾಗಿದ್ದಾರೆ. ಚರ್ಚೆಯಲ್ಲಿ ಆಕೆ ಹೇಗೆ ಪ್ರಚೋದನೆ ನೀಡಿದ್ದಾರೆ ಎಂಬುದನ್ನು ನಾವು ನೋಡಿದ್ದೇವೆ. ಇದೆಲ್ಲವನ್ನೂ ಹೇಳಿದ ನಂತರ ತಾನು ಓರ್ವ ವಕೀಲೆ ಎಂದು ಅವರು ಹೇಳಿದ್ದಾರೆ ಎಂಬುದನ್ನು ಕೇಳಿದೆವು. ಇದು ನಾಚಿಕೆಗೇಡು. ಆಕೆ ಇಡೀ ದೇಶದ ಕ್ಷಮೆ ಕೋರಬೇಕು” ಎಂದು ಹೇಳಿತ್ತು.

ನ್ಯಾಯಾಲಯ ಆದೇಶದ ಭಾಗವಾಗಿಲ್ಲದ ಇಂತಹ ಅವಲೋಕನಗಳನ್ನು ನ್ಯಾಯಾಂಗದ ಘನತೆಯ ವೇದಿಕೆಯ ಮೇಲೆ ಪವಿತ್ರವಾಗಿರಿಸಲು ಸಾಧ್ಯವಿಲ್ಲ, ಇದು ಹಿಂದೆಂದೂ ನಡೆದಿಲ್ಲ ಎಂದು ಪತ್ರದಲ್ಲಿ ಹೇಳಲಾಗಿದೆ.

"ಅರ್ಜಿಯಲ್ಲಿ ಪ್ರಸ್ತಾಪಿಸಿದ್ದ ವಿಷಯದೊಂದಿಗೆ ನ್ಯಾಯಶಾಸ್ತ್ರೀಯವಾಗಿ ಸಂಪರ್ಕ ಹೊಂದಿರದ ಈ ಅವಲೋಕನಗಳು ಹಿಂದೆಂದೂ ಕಂಡಿರದ ರೀತಿಯಲ್ಲಿ ನ್ಯಾಯ ವಿತರಣೆಯ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿವೆ” ಎಂದು ಅದರಲ್ಲಿ ವಿವರಿಸಲಾಗಿದೆ.

ಇದಲ್ಲದೆ, "ದೇಶದಲ್ಲಿ ಏನಾಗುತ್ತಿದೆ ಎಂಬುದಕ್ಕೆ ಶರ್ಮಾ ಏಕಾಂಗಿಯಾಗಿ ಜವಾಬ್ದಾರರು" ಎಂದು ನ್ಯಾಯಾಲಯವು ಅಭಿಪ್ರಾಯ ವ್ಯಕ್ತಪಡಿಸುವ ಮೂಲಕ, ಉದಯಪುರದಲ್ಲಿ ಹಾಡುಹಗಲೇ ನಡೆದ ಕೊಲೆಯನ್ನು ಹೆಚ್ಚುಕಡಿಮೆ ದೋಷಮುಕ್ತವಾಗಿಸುವ ಸಂಗತಿ ಕಂಡುಬಂದಿದೆ ಎಂದು ಪತ್ರ ದೂರಿದೆ.

ಸುಪ್ರೀಂ ಕೋರ್ಟ್‌ನ ಈ ನಡೆ ಯಾವುದೇ ಶ್ಲಾಘನೆಗೆ ಅರ್ಹವಲ್ಲ ಮತ್ತು ದೇಶದ ಅತ್ಯುನ್ನತ ನ್ಯಾಯಾಲಯದ ಪವಿತ್ರತೆ ಮತ್ತು ಗೌರವದ ಮೇಲೆ ಪರಿಣಾಮ ಬೀರಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಬಹಿರಂಗ ಪತ್ರವನ್ನು ಇಲ್ಲಿ ಓದಿ:

Open_Statement.pdf
Preview

ಸಹಿ ಹಾಕಿರುವವರ ವಿವರ:

List_of_Signatoriಿes.pdf
Preview